More

    ದುಶ್ಚಟಕ್ಕೆ ದಾಸರಾದರೆ ಸುಂದರ ಭವಿಷ್ಯಕ್ಕೆ ಹಾನಿ

    ಜಗಳೂರು: ಭೂಮಿಯಲ್ಲಿ ಅಲ್ಪಕಾಲ ಬದುಕುವ ಮನುಷ್ಯ ತನ್ನ ದುಶ್ಚಟಗಳಿಗೆ ಬಲಿಯಾಗಿ ಸುಂದರವಾದ ಭವಿಷ್ಯ ನಾಶ ಮಾಡಿಕೊಳ್ಳುತ್ತಿದ್ದಾನೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ವಿಷಾದಿಸಿದರು.

    ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇವರು ಕೊಟ್ಟ ಸುಂದರ ಶರೀರವನ್ನು ದುಶ್ಚಟಗಳಿಗೆ ದಾಸರಾಗಿ ಕಲುಷಿತ ಮಾಡಿಕೊಳ್ಳಬಾರದು. ಬಾಲ್ಯವಸ್ಥೆಯಲ್ಲಿ ಪಾಲಕರು ಮತ್ತು ಅಕ್ಷರ ಜ್ಞಾನ ನೀಡಿದ ಗುರುಗಳು ನೀಡುವ ಉಪದೇಶಗಳನ್ನು ಸ್ವೀಕರಿಸಿ ಸಮಾಜದಲ್ಲಿ ಸಂಸ್ಕಾರವಂತರಾಗಿ ಬಾಳಬೇಕು ಎಂದು ಸಲಹೆ ನೀಡಿದರು.

    ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಡ್ರಗ್ಸ್‌ನಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

    ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಆರೋಗ್ಯ ಹದಗೆಡಿಸುತ್ತಿದೆ. ಇದರಿಂದ ನಾನಾ ಮಂದಿ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದರು.

    ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ದೇಶ ಮುನ್ನಡೆಸುವ ಯುವ ಸಮೂಹ ಆರೋಗ್ಯವಂತರಾಗಿರಬೇಕು ಎನ್ನುವುದು ಈ ಜಾಗೃತಿ ಉದ್ದೇಶ. ಗುಣಮಟ್ಟದ ಆಹಾರ ಸೇವಿಸಿದರೆ ಯಾವುದೇ ದುಶ್ಚಟಗಳು ಮನಸ್ಸಿಗೆ ಬರುವುದಿಲ್ಲ.

    ಮೊಬೈಲ್ ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್‌ಗಳಿಂದ ಸಂಬಂಧ, ಸ್ನೇಹ ದೂರವಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಮೊಬೈಲ್‌ಗಳಿಂದ ದೂರವಿರಬೇಕು ಎಂದರು.

    ಸಿಪಿಐ ಶ್ರೀನಿವಾಸ್ ಮಾತನಾಡಿ, 1989ರ ಜೂನ್ 26ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಮಾದಕವಸ್ತು ನಿಷೇಧ ದಿನ ಆಚರಿಸಲಾಯಿತು.

    ಅಂದಿನಿಂದ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನ ಆಚರಿಸಲಾಗುತ್ತದೆ. ತಾಲೂಕಿನಲ್ಲಿ ಗಾಂಜಾಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ಕಂಡ ಬಂದಿದೆ ಎಂದರು.

    ತಹಸೀಲ್ದಾರ್ ಸಂತೋಷ್‌ಕುಮಾರ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಬಿ. ಮಹೇಶ್ವರಪ್ಪ, ಪಿಎಸ್‌ಐ ಸಾಗರ್, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ. ಹಾಲಪ್ಪ, ಪ್ರಾಂಶುಪಾಲ ಜಗದೀಶ್, ಕ.ಕಾ.ನಿ. ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ ಮತ್ತಿತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts