More

    ಶಾಸಕರಿಗೆ ಅಟೆಂಡೆನ್ಸ್ ಕಂಪಲ್ಸರಿ ಏಕಿಲ್ಲ?

    ಶಾಸಕರಿಗೆ ಅಟೆಂಡೆನ್ಸ್ ಕಂಪಲ್ಸರಿ ಏಕಿಲ್ಲ?ಸಂಸತ್ತಿನಲ್ಲಿನ ನಡವಳಿಕೆಯ ನಿಯಮಾವಳಿಗಳು ರೂಪುಗೊಂಡಿರುವ ಸಂದರ್ಭ ಆದರ್ಶಪ್ರಾಯವಾಗಿತ್ತು. ಆಗೆಲ್ಲ 140 ದಿನಗಳ ಕಾಲ ಅಧಿವೇಶನ ನಡೆಯುತ್ತಿತ್ತು. ಈಗ ಅಧಿವೇಶನಗಳು ನಡೆಯೋದೇ 60 ದಿನ. ಇದರಿಂದ ಸಮರ್ಪಕ ಚರ್ಚೆ ಮತ್ತು ಫಲಿತಾಂಶ ನಿರೀಕ್ಷಿಸಲು ಸಾಧ್ಯವೆ?

    ಇತ್ತೀಚೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ವಿಶಿಷ್ಟವಾದ ಕಾರ್ಯಕ್ರಮ ನಡೆಯಿತು. ಸಂಸದೀಯ ವ್ಯವಸ್ಥೆಗಳನ್ನು ಸುಧಾರಿಸುವ ಕುರಿತಂತೆ ಒಂದು ಸಂವಾದ ಅದು. ಕಳೆದ ಒಂದು ದಶಕದಿಂದೀಚೆಗೆ ಸಂಸದೀಯ ವ್ಯವಸ್ಥೆ ಹದಗೆಡುತ್ತಿರುವುದನ್ನು ಇಡಿಯ ರಾಷ್ಟ್ರ ಗಮನಿಸುತ್ತಲೇ ಬಂದಿದೆ. ಸದನದಲ್ಲಿ ಕುಳಿತು ಮೊಬೈಲ್ ನೋಡುವ, ಅದರಲ್ಲೂ ಅಶ್ಲೀಲ ದೃಶ್ಯಗಳನ್ನು ಚಪ್ಪರಿಸಿ ಸವಿಯುವ, ಬಟ್ಟೆ ಹರಿದುಕೊಳ್ಳುವ, ಸಭಾಪತಿಗಳ ಸ್ಥಾನದವರೆಗೂ ನುಗ್ಗುವ, ಮನಸೋ ಇಚ್ಛೆ ಅರಚಾಡುವ, ಬೇಕಾದಾಗ ಸಭಾತ್ಯಾಗ ಮಾಡಿ ಹೊರಟೇಬಿಡುವ ಈ ಪ್ರಕ್ರಿಯೆಗಳನ್ನೆಲ್ಲ ಸಮಾಜ ಹತ್ತಿರದಿಂದ ಗಮನಿಸುತ್ತಿದೆ, ಬೇಸತ್ತಿದೆ ಕೂಡ. ನಮ್ಮಿಂದ ಆಯ್ಕೆಯಾಗಿರುವ ವ್ಯಕ್ತಿ ಈ ರೀತಿ ಪುಂಡ-ಪೋಕರಿಗಳಂತೆ ವರ್ತಿಸುವುದನ್ನು ಸಹಿಸುವುದಾದರೂ ಹೇಗೆ? ಒಂದೋ ಆಯ್ಕೆ ಮಾಡಿದ ನಾವು ಸರಿಯಿಲ್ಲ ಅಥವಾ ಇವರನ್ನು ತಿದ್ದಬೇಕಾದ ವ್ಯವಸ್ಥೆಯೇ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಚರ್ಚೆಯನ್ನು ಏರ್ಪಡಿಸಿ, ಮಂಥನ ನಡೆಸಿ, ಸಿಕ್ಕ ನವನೀತದಿಂದ ಸುಧಾರಣೆಯ ಘಮ ಹರಡಿಸಲು ಸಭಾಪತಿಗಳಾದ ಕಾಗೇರಿಯವರು ಮತ್ತು ಹೊರಟ್ಟಿಯವರು ವಿಶೇಷ ಪ್ರಯತ್ನ ಮಾಡಿದ್ದರು. ಒಂದೆಡೆ ಅನೇಕ ವರ್ಷಗಳಿಂದ ಈ ಸಂಸದೀಯ ಚಟುವಟಿಕೆಗಳ ಪಾತ್ರವಾಗಿದ್ದ ಶಾಸಕರಿದ್ದರೆ ಮತ್ತೊಂದೆಡೆ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಸಮಾಜದ ಗಣ್ಯರನೇಕರು ನೆರೆದಿದ್ದರು. ಚರ್ಚೆ ರಂಗೇರಿತ್ತು. ಒಳಗಿನವರು ತಮ್ಮ ಅಳಲು ತೋಡಿಕೊಂಡರೆ, ಹೊರಗಿನವರು ಮುಟ್ಟಿ ನೋಡಿಕೊಳ್ಳುವಷ್ಟು ಆರೋಪಗಳನ್ನು ಮಾಡಿದರು. ಮಾಧ್ಯಮ ಪ್ರಮುಖರಂತೂ ಸದನ ಕುತೂಹಲಕರ ವಿಚಾರಗಳನ್ನು ರ್ಚಚಿಸುತ್ತಿಲ್ಲವೆಂಬುದನ್ನು ಮುಲಾಜಿಲ್ಲದೇ ಬಿಚ್ಚಿಟ್ಟರು.

    ಇಷ್ಟಕ್ಕೂ ವ್ಯವಸ್ಥೆ ಹಾಳಾಗಿರುವುದು ನಿಜವಾ? ಉತ್ತರ ಬಲು ಕಷ್ಟ. ‘ಹಿಂದಿನ ಕಾಲ ಚೆನ್ನಾಗಿತ್ತು, ಇಂದಿನದ್ದು ಹಾಳಾಗಿದೆ’ ಎಂಬುದು ಯಾವ ಕಾಲದಲ್ಲೂ ಇರುವಂತಹ ಮಾತುಗಳೇ. ಇನ್ನೊಂದೈವತ್ತು ವರ್ಷ ಕಳೆದರೆ ಇವತ್ತಿನ ಕಾಲಘಟ್ಟ ಚೆನ್ನಾಗಿತ್ತೆಂದು ಅಂದಿನ ಪೀಳಿಗೆಯವರು ಹೇಳಿದರೆ ನಾವು ಅಚ್ಚರಿ ಪಡಬೇಕಾಗಿಲ್ಲ. ಆದರೆ ನಿರಂತರವಾಗಿ ಕುಸಿಯುತ್ತಿರುವ ವ್ಯವಸ್ಥೆಯ ನಂತರವೂ ಎಲ್ಲವೂ ಇಷ್ಟು ಸುಸೂತ್ರವಾಗಿಯೇ ನಡೆಯುತ್ತಿದೆಯಲ್ಲ ಹೇಗೆ? ಒಂದೋ ವ್ಯವಸ್ಥೆಯ ಬಗ್ಗೆ ಆತಂಕ ಅನವಶ್ಯಕವಿರಬೇಕು ಅಥವಾ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿರಬೇಕು. ಹಾಗೊಂದು ತಮಾಷೆಯ ಮಾತಿದೆಯಲ್ಲ, ಸಿಂಗಾಪುರದ ಪ್ರಧಾನಿ ಭಾರತಕ್ಕೆ ಬಂದಾಗ ಬಿಹಾರವನ್ನು ಹತ್ತು ವರ್ಷಗಳಲ್ಲಿ ಸಿಂಗಾಪುರ್ ಮಾಡಿ ತೋರಿಸಬಲ್ಲೆ ಎಂದಿದ್ದರಂತೆ; ಅದಕ್ಕೆ ಪ್ರತಿಯಾಗಿ ಲಾಲೂ ಸಾಹೇಬರು ಮೂರು ತಿಂಗಳು ಸಿಂಗಾಪುರ ಬಿಟ್ಟುಕೊಟ್ಟರೆ ಅದನ್ನು ಬಿಹಾರ ಮಾಡುತ್ತೇನೆ ಎಂದಿದ್ದರಂತೆ. ಮಾತು ತಮಾಷೆಯದ್ದೆನಿಸಿದರೂ ಕಳೆದ ಏಳು ದಶಕಗಳಲ್ಲಿ ಸಂಸದೀಯ ವ್ಯವಸ್ಥೆ ಹೊಸ ಸ್ವರೂಪ ಪಡೆದುಕೊಳ್ಳದೇ ಹಳೆಯದನ್ನು ಉಳಿಸಿಕೊಳ್ಳಲಾಗದೇ ತೊಳಲಾಡುತ್ತಿರುವುದಂತೂ ಕಣ್ಣಿಗೆ ರಾಚುತ್ತಿದೆ. ಈ ಅಭಿಪ್ರಾಯವನ್ನು ಬಲು ಸಮರ್ಥವಾಗಿ ವ್ಯಕ್ತಪಡಿಸಿದ್ದು ಮಾಜಿ ಶಾಸಕರಾದ ಪಿ.ಜಿ.ಆರ್ ಸಿಂಧ್ಯ. ವ್ಯವಸ್ಥೆ ಪೂರ್ಣ ಹದಗೆಟ್ಟಿಲ್ಲವೆಂಬುದು ಅವರ ಸಮಾಧಾನಕ್ಕೆ ಕಾರಣವಾಗಿತ್ತಾದರೂ ಅದನ್ನು ಸುಧಾರಿಸಬೇಕೆನ್ನುವ ನಿಟ್ಟಿನಲ್ಲಿ ಅವರ ಚಿಂತನೆ ಇದ್ದದ್ದಂತೂ ಸತ್ಯ. ಪಕ್ಷದ ದೃಷ್ಟಿಯಿಂದ, ಸ್ವ-ಹಿತಾಸಕ್ತಿಯಿಂದ ಆಲೋಚಿಸುವ ಮಂದಿ ಸದನದಲ್ಲಿ ಇದ್ದೇ ಇರುತ್ತಾರೆ. ಸಂವಿಧಾನ ರಚನೆಯ ಹಿನ್ನೆಲೆಯ ಚರ್ಚೆಯ ಸಂದರ್ಭದಲ್ಲಿ ‘ಭಾಗವಹಿಸುವವರು ಸಂಸತ್ತಿನಲ್ಲಿ ನಡೆಸಿದಂತೆ ಸ್ವಂತ ಹಿತಾಸಕ್ತಿಗೋ ಪಕ್ಷದ ಹಿತಾಸಕ್ತಿಗೋ ಮಾತನಾಡದೇ ರಾಷ್ಟ್ರದ ಒಳಿತಿಗಾಗಿ ಚರ್ಚೆ ನಡೆಸಬೇಕು’ ಎಂದು ಅಂಬೇಡ್ಕರ್ ಹೇಳಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಈ ನಾನು, ನನ್ನ ಮಕ್ಕಳು, ನನ್ನ ಪರಿವಾರ ಎಂಬ ಕಲ್ಪನೆ ಸ್ವಾತಂತ್ರ್ಯದ ಹೊಸ್ತಿಲಲ್ಲೇ ಶುರುವಾಯ್ತು. ನೆಹರೂ ಪ್ರಧಾನಿಯಾಗಿದ್ದಾಗ ಯಾವ ಸಂವೈಧಾನಿಕ ಅಧಿಕಾರವಿಲ್ಲದಿದ್ದರೂ ಇಂದಿರಾ ಬಲು ಪ್ರಭಾವಿಯೇ ಆಗಿದ್ದರು. ಚೀನಾದೊಂದಿಗಿನ ಯುದ್ಧದ ಹೊತ್ತಿನಲ್ಲಿ ಮಾಣಿಕ್​ಷಾಗೆ ಅವರ ತಯಾರಿಯಂತೆ ಮುನ್ನುಗ್ಗಲು ಆದೇಶ ಕೊಟ್ಟಿದ್ದು ಆಕೆಯೇ. ಆಗ ಅಂಥದ್ದೊಂದು ಕದನಕ್ಕೆ ನೆಹರು ಧೈರ್ಯ ಮಾಡಿರಲಿಲ್ಲ. ಒಳಿತು-ಕೆಡುಕುಗಳು ಬೇರೆ. ಆದರೆ ಪರಿವಾರವೇ ರಾಜಕೀಯ ನಿರ್ಣಯಗಳಲ್ಲಿ ಸೇರಿಕೊಳ್ಳುವ ಪ್ರಕ್ರಿಯೆಗೆ ಅಂದೇ ಬೀಜಾವಾಪವಾಗಿತ್ತು. ಇಂದಿನದ್ದು ಅದರ ವೈಭವ ರೂಪವಷ್ಟೇ. ಪುಣ್ಯ, ಭಾರತದ ಪ್ರಧಾನಮಂತ್ರಿಗೆ ಮದುವೆಯಾಗಿಲ್ಲ.

    ಸಂಸತ್ತಿನಲ್ಲಿನ ನಡವಳಿಕೆಯ ನಿಯಮಾವಳಿಗಳು ರೂಪುಗೊಂಡಿರುವ ಸಂದರ್ಭ ಆದರ್ಶಪ್ರಾಯವಾಗಿತ್ತು. ಆ ದಿನಗಳಲ್ಲಿ 140 ದಿನಗಳ ಕಾಲ ಅಧಿವೇಶನ ನಡೆಯುತ್ತಿತ್ತು. ಬಹುಪಾಲು ಸಂಸದರು ರಾಷ್ಟ್ರೀಯತೆಯ ಪ್ರಬಲ ಭಾವನೆಯಿಂದ ಬಂದವರು. ಅಲ್ಲಿ ನಡೆಯುವ ಚರ್ಚೆ ಟಿವಿಗಳಲ್ಲಿ ನೇರಪ್ರಸಾರವೂ ಕಾಣುತ್ತಿರಲಿಲ್ಲ. ಪ್ರಮುಖವಾದ ಸಂಗತಿಗಳು ಮರುದಿನ ಪತ್ರಿಕೆಯಲ್ಲಿ ಬಂದಾಗಲಷ್ಟೇ ಗೊತ್ತಾಗುತ್ತಿದ್ದುದು. ಈಗ ಹಾಗಿಲ್ಲ. ಅಧಿವೇಶನಗಳು ನಡೆಯೋದೇ 60 ದಿನ. ಅದೂ ಸಾಕಷ್ಟು ಹಗ್ಗ-ಜಗ್ಗಾಟಗಳ ನಂತರ. ಇನ್ನು ಬಹುಪಾಲು ರಾಜಕಾರಣಿಗಳು ಸ್ವಂತ ಉದ್ದಿಮೆಯನ್ನಿಟ್ಟುಕೊಂಡು ಅದರ ಹಿಂದೆ ಬಿದ್ದವರು ಅಥವಾ ರಾಜಕಾರಣವನ್ನೇ ಉದ್ಯಮವಾಗಿಸಿಕೊಂಡವರು. ಇವರುಗಳಿಗೆ ಸದನಕ್ಕೆ ಬಂದು ಹೋಗಲು ಪುರಸೊತ್ತು ಸಿಗುತ್ತದೆ ಎನ್ನುವುದೇ ನಮ್ಮ-ನಿಮ್ಮೆಲ್ಲರ ಪುಣ್ಯ. ಇಂಥವರುಗಳೇ ಸೇರಿ ಅಂಬೇಡ್ಕರರ ಚಿಂತನೆಯ ಆಶಯಕ್ಕೆ ಕೊಡಲಿ ಪೆಟ್ಟು ಕೊಟ್ಟಿರೋದು. ಅಧ್ಯಕ್ಷೀಯ ಮಾದರಿಯ ಕಲ್ಪನೆಯನ್ನು ಬದಿಗೆ ಸರಿಸಿ ಅವರು ಈ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಇದು ಪ್ರತಿನಿತ್ಯ ನಾಯಕನನ್ನು ಪ್ರಶ್ನಿಸುವ, ಅವನನ್ನು ಉತ್ತರದಾಯಿಯಾಗಿಸುವ ಕೆಲಸ ಮಾಡುತ್ತಿರುತ್ತದೆ ಎಂದು ಹೇಳಿದ್ದರು. ಆದರೆ ವರ್ಷಕ್ಕೆ 60 ದಿನ ನಡೆಯುವ ಸದನದ ಸಭೆಗಳಲ್ಲಿ ಹದಿನೈದಿಪ್ಪತ್ತು ದಿನವೂ ಭಾಗವಹಿಸದ ಶಾಸಕರು ಯಾವ ಪ್ರಶ್ನೆ ಕೇಳಬಲ್ಲರು ಮತ್ತು ಯಾವ ರೀತಿ ಅಂಬೇಡ್ಕರರ ಮನದಿಂಗಿತವನ್ನು ಪೂರೈಸಬಲ್ಲರು ಹೇಳಿ! ಎಲ್ಲಕ್ಕೂ ಕೆಟ್ಟ ಸಂಗತಿ ಎಂದರೆ, ಪ್ರಸ್ತಾವನೆಯಾಗಿ ಮಾತನಾಡಿದ ಕಾಗೇರಿಯವರು ‘ಸಭಾಧ್ಯಕ್ಷರು, ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರು ಸದನಕ್ಕೆ ಬಂದು ಕುಳಿತಿದ್ದಾಗಲೂ ಅಗತ್ಯವಿದ್ದಷ್ಟು ಸದಸ್ಯರ ಸಂಖ್ಯೆ ಇಲ್ಲದೇ ಪ್ರಕ್ರಿಯೆ ಆರಂಭಿಸಲು ಸಾಕಷ್ಟು ಹೊತ್ತು ಕಾದ ಉದಾಹರಣೆಗಳಿವೆ’ ಎಂದದ್ದು. ಸಮಯದ ಪಾಲನೆ ಅತ್ಯಂತ ಮಹತ್ವದ್ದು ಎಂದು ಸಮಾಜಕ್ಕೆ ತಿಳಿಹೇಳಬೇಕಾದ ಆಯಕಟ್ಟಿನ ಜಾಗದಲ್ಲಿರುವ ಈ ಮಂದಿಯೇ ಹೀಗಾದರೆ ಇನ್ನು ಅವರನ್ನು ಅನುಸರಿಸುವವರ ಪಾಡೇನು? ನಿಯಮಗಳು ಆರಂಭವಾಗಬೇಕಾಗಿರೋದೇ ಅಲ್ಲಿಂದ. ತಜ್ಞರ ಪ್ರಕಾರ ಕನಿಷ್ಠಪಕ್ಷ 120 ದಿನಗಳ ಸದನ ನಡೆಯಬೇಕು. ಆಗಲೇ ರಾಜ್ಯ-ರಾಷ್ಟ್ರ ಹಿತದ ಚರ್ಚೆ ವಿಸ್ತಾರವಾಗಿ ಮಾಡಲು ಸಾಧ್ಯ. ಇಂತಹ ಚರ್ಚೆಯಲ್ಲಿ ಭಾಗವಹಿಸದೇ ಕ್ಷೇತ್ರದಲ್ಲೂ ಇರದ ವ್ಯಕ್ತಿಗೆ ಏನು ಮಾಡಬೇಕು ಹೇಳಿ? ನಿಸ್ಸಂಶಯವಾಗಿ ಶಿಕ್ಷೆಯಾಗಬೇಕು. ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿಗೆ ಹೇಗೆ ಹಾಜರಾತಿ ನಿರಾಕರಿಸಲಾಗುವುದೋ ಹಾಗೆಯೇ ತಡವಾಗಿ ಬಂದ ಶಾಸಕರಿಗೆ ಅಂದಿನ ಹಾಜರಾತಿಯನ್ನು ನಿರಾಕರಿಸಬೇಕಷ್ಟೇ. ಅದರಿಂದೇನು ಪ್ರಯೋಜನ ಎಂದು ಎಲ್ಲರೂ ಕೇಳುತ್ತಾರೆ. ಬಲುಸ್ಪಷ್ಟ. ಹೇಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇಕಡಾ 70ರಷ್ಟು ಹಾಜರಾತಿ ಇಲ್ಲದಿದ್ದರೆ ಪರೀಕ್ಷೆ ಬರೆಯಲು ಅನುಮತಿ ಇಲ್ಲವೋ ಹಾಗೆಯೇ ಈ ಶಾಸಕರುಗಳಿಗೂ ಮುಂದಿನ ಚುನಾವಣೆಗೆ ನಿಲ್ಲಲು ಅನುಮತಿ ಕೊಡಬಾರದಷ್ಟೇ. ಅಷ್ಟೇ ಅಲ್ಲ, ಕ್ಷೇತ್ರಕ್ಕೆ ಸಿಗಬೇಕಾದ ಅನುದಾನ ಅವರ ಹಾಜರಾತಿಗೆ ತಕ್ಕಷ್ಟೇ ಇರಬೇಕು ಎಂಬುದನ್ನು ನಿಯಮವಾಗಿ ಪರಿವರ್ತಿಸಿಬಿಟ್ಟರೆ ಚರ್ಚೆಗಳು ಸುಸೂತ್ರವಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿಗಳು ಮತ್ತು ಶಾಸಕರು ಒಂದೇನಾ ಎಂದು ಕೇಳಬೇಡಿ. ಶಾಸಕರು ವಿದ್ಯಾರ್ಥಿಗಳಿಗಿಂತ ಹೆಚ್ಚು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರಿಗೆ ಹಾಜರಾತಿ ನಿರ್ಣಯಿಸುವಾಗ ವಿದ್ಯಾರ್ಥಿಗಳಿಗೆ ಮಾಡಿದಂತೆ ಶೇಕಡಾ 70ಕ್ಕೆ ತಡೆಯದೇ ಇನ್ನೂ ಸ್ವಲ್ಪ ಹೆಚ್ಚಿಟ್ಟರೆ ಒಳಿತು. ಹೀಗೆ ಹೇಳಲು ಕಾರಣವಿದೆ. ಈಗ ಸದನಕ್ಕೆ ಬರುವ ಬಹುತೇಕ ಶಾಸಕರು ಕೆಲವು ನಿಮಿಷಗಳ ಕಾಲವಷ್ಟೇ ಇದ್ದು, ಒಂದಷ್ಟು ಗಲಾಟೆ ಮಾಡಿ ಕಾಣೆಯಾಗಿಬಿಡುತ್ತಾರೆ. ಕನಿಷ್ಠ 120 ದಿನಗಳ ಕಾಲ ಸದನದಲ್ಲಿ ಕುಳಿತುಕೊಳ್ಳಬೇಕು ಎಂದಾದಾಗ ಈ ರೀತಿ ವರ್ತನೆ ಮಾಡಲು ಮನಸ್ಸಾಗುವುದಿಲ್ಲ. ತಾಳ್ಮೆ ರೂಢಿಯಾಗುತ್ತದೆ. ನಾಲ್ಕು ವರ್ಷಗಳ ಕಾಲ ಇಂಜಿನಿಯರಿಂಗ್ ಕಲಿಯುವ ವಿದ್ಯಾರ್ಥಿ ನಿರಂತರ ಪರೀಕ್ಷೆಗಳನ್ನು ಬರೆದು ಗೋಣು ಬಗ್ಗಿಸಿ ಕೂರುವುದನ್ನು ಅಭ್ಯಾಸ ಮಾಡಿಟ್ಟುಕೊಂಡಿರುತ್ತಾನಲ್ಲ, ಕಂಪನಿಗಳು ಅಂಥವನನ್ನೇ ಬಲುಪ್ರೀತಿಯಿಂದ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಹೇಳಿದ್ದನ್ನೆಲ್ಲಾ ಗೋಣು ಬಗ್ಗಿಸಿ ಮಾಡುತ್ತಾನೆ ಅಂತ. ನಾಲ್ಕು ವರ್ಷಗಳ ತರಬೇತಿಯ ಪ್ರಭಾವ ಅದು. ಹೀಗೆ ಪಟ್ಟಾಗಿ ಕುಳಿತುಕೊಳ್ಳುವುದನ್ನು ರೂಢಿಮಾಡಿಕೊಳ್ಳುವ ಶಾಸಕ ಅನವಶ್ಯಕ ಕೂಗಾಟ, ಅರಚಾಟಗಳಿಂದ ದೂರವಿರುತ್ತಾನೆ.

    ಹಾಗಂತ ಶಾಸಕರಿಗೆ ಸಮಸ್ಯೆಯೇ ಇಲ್ಲವೆಂದಲ್ಲ. ಕ್ಷೇತ್ರದಲ್ಲಿ ಯಾವ ಮದುವೆಗೂ ಆತನಿರಬೇಕು, ಯಾರು ಸತ್ತರೂ ಆತ ಹಾಜರಾಗಬೇಕು. ಬರಲಿಲ್ಲವೆಂದರೆ ಜನ ಪ್ರತೀಕಾರ ತೆಗೆದುಕೊಳ್ಳುವುದು ಚುನಾವಣೆಯ ಹೊತ್ತಲ್ಲೇ. ಇದಕ್ಕೆ ಹೆದರಿ ಶಾಸಕರುಗಳೆಲ್ಲ ಅವಡುಗಚ್ಚಿ ಕುಳಿತಿರುತ್ತಾರೆ. ಚಿತ್ರದುರ್ಗದ ಸಂಸದರಾಗಿದ್ದ ಜನಾರ್ದನ ಸ್ವಾಮಿ ಮರು ಆಯ್ಕೆ ಆಗದಿರುವುದಕ್ಕೆ ಬಲುದೊಡ್ಡ ಕಾರಣ ಇದೇ ಎಂದು ಹೇಳಲಾಗುತ್ತದೆ. ಅವರು ದುರ್ಗವನ್ನು ಬದಲಾಯಿಸುವ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಆದರೆ ಸತ್ತಾಗ, ಹುಟ್ಟಿದಾಗ ಬರಲಿಲ್ಲವೆಂಬುದು ಅವರ ಪಾಲಿಗೆ ಕಂಟಕವಾಗಿಹೋಯ್ತು. ಬಹುಶಃ ಈ ಕುರಿತ ಜಾಗೃತಿ ನಮಗೂ ಬೇಕು. ಹಾಗಂತ ಇದನ್ನೇ ತೋರಿಸಿ ಪ್ರಜಾಪ್ರತಿನಿಧಿಗಳು ಜಾರಿಕೊಳ್ಳುವಂತಿಲ್ಲ. ವಿಧಾನಸೌಧ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಬರುವ ಗಂಜಿಕೇಂದ್ರವಲ್ಲ. ಅದು ಭವಿಷ್ಯದ ಪೀಳಿಗೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುವ ಸಮರ್ಥ ವೇದಿಕೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳದೇ ಹೋದರೆ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.

    ಸಭೆಯಲ್ಲಿ ವಿಚಾರ ಮಂಡಿಸಿದ ಕೆಲವರು ರಾಜಕಾರಣಿಗಳಿಗೆ ಶಿಕ್ಷಣದ ಮಿತಿಯನ್ನು ನಿಗದಿ ಪಡಿಸುವ ಮಾತುಗಳನ್ನಾಡಿದರು. ಶಿಕ್ಷಣ ಪಡೆದವ ಭ್ರಷ್ಟನಾಗಲಾರ, ದುಷ್ಟನಾಗಲಾರ ಎಂಬ ಸಹಜ ಭ್ರಮೆ ಅದು. ಅಚ್ಚರಿ ಎಂದರೆ ರಾಜಕಾರಣಿಗಳಿಗಿಂತಲೂ ಒಂದು ಮುಷ್ಟಿ ಹೆಚ್ಚು ಭ್ರಷ್ಟರಾಗಿರುವ ಅಧಿಕಾರಿಗಳೆಲ್ಲ ಅಪಾರ ಶಿಕ್ಷಣ ಪಡೆದವರೇ. ಕೆಲವೊಮ್ಮೆ ಶ್ರೇಷ್ಠ ಸಂಸದೀಯ ಪಟುವಾಗಿ ಗುರುತಿಸಲ್ಪಟ್ಟ ಅನೇಕರು ಶಾಲಾಶಿಕ್ಷಣವನ್ನೇ ಪಡೆದವರಲ್ಲ. ಶಾಲೆಗೇ ಹೋಗದ ರೈತನಿಗಿರುವ ಕೃಷಿ ವಿಚಾರದ ಜ್ಞಾನವನ್ನು ಅಳೆಯಲು ಮಾನದಂಡವಿದೆಯೇನು? ಬುಡಕಟ್ಟು ಜನಾಂಗದವರ ಕುರಿತಂತೆ ತಿಳಿದುಕೊಂಡಿರುವ ವ್ಯಕ್ತಿ ಶಾಲೆಗೆ ಹೋಗಿಲ್ಲವೆಂದ ಮಾತ್ರಕ್ಕೆ ಸಾಮಾನ್ಯನಾಗಿಬಿಡುತ್ತಾನೇನು? ಹಾಗೆಯೇ ರಾಜಕಾರಣಿಗಳು ಓದುವುದಿಲ್ಲ ಎಂಬ ಆರೋಪಗಳೂ ಕೇಳಿ ಬಂದವು. ನಾನು ಓದಿಕೊಂಡಿರುವುದನ್ನೇ ಇತರರೂ ಓದಿಕೊಳ್ಳಬೇಕೆಂಬುದನ್ನು ನಿರೀಕ್ಷಿಸುವುದು ತಪ್ಪಾದೀತು. ಓದದೆಯೂ ಅಧಿಕಾರಿಗಳ ಮೂಲಕ ಎಲ್ಲವನ್ನೂ ಅರಿತು ಹಿಡಿತ ಸಾಧಿಸಿ ವ್ಯವಸ್ಥೆಯನ್ನು ನೆಟ್ಟಗೆ ಮಾಡಬಲ್ಲ ತಾಕತ್ತುಳ್ಳವರು ಈಗಲೂ ಇದ್ದಾರೆ. ಆದರೆ ಕೊನೆಯ ಪಕ್ಷ ತನ್ನ ಮಂತ್ರಿಗಿರಿಗೆ ಸಂಬಂಧಪಟ್ಟ ವಿಚಾರವನ್ನಾದರೂ ಪೂರ್ಣ ತಿಳಿದುಕೊಳ್ಳುವ ಪ್ರಯತ್ನ ಮಾಡದೇ ಹೋದರೆ ಅಪರಾಧವಾದೀತು. ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಲ್ಲಿ ಸೋತರೆ ಅಥವಾ ಪದೇ-ಪದೇ ಸೂಕ್ತವಾದ ಉತ್ತರ ಕೊಡಲಾಗದೇ ಹೆಣಗಾಡಿದರೆ ಅಂಥವರನ್ನು ಮಂತ್ರಿಗಿರಿಯಿಂದಲೇ ಕೆಳಗಿಳಿಸುವ ನಿರ್ಣಯವೂ ಬರಬೇಕು. ಆಗ ಮಾತ್ರ ಮಂತ್ರಿ ಪದವಿಗಾಗಿ ಕಾದಾಟ ನಡೆಯುವುದು ಕಡಿಮೆಯಾಗಬಹುದೇನೋ! ಮಾಳವಿಕಾ ಮಾತನಾಡಿ ‘ಹೆಚ್ಚು-ಹೆಚ್ಚು ಹೆಣ್ಣುಮಕ್ಕಳು ಶಾಸಕರಾಗಿ ಬಂದರೆ ಸದನ ಅಚ್ಚುಕಟ್ಟಾಗಿರುತ್ತದೆ’ ಎಂದು ಹೇಳಿ ‘ಹೆಣ್ಣುಮಕ್ಕಳು ಬಟ್ಟೆಯಂತೂ ಹರಿದುಕೊಳ್ಳುವುದಿಲ್ಲ’ ಎಂಬ ಉದಾಹರಣೆಯನ್ನೇನೋ ಕೊಟ್ಟರು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಿರುವಾಗ ಸಂಸದೆ ರೇಣುಕಾ ಚೌಧರಿ ವಿಕಾರವಾಗಿ ನಕ್ಕು ಶೂರ್ಪನಖಿ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದನ್ನೂ ಮರೆಯುವಂತಿಲ್ಲ.

    ಒಟ್ಟಿನಲ್ಲಿ ಪವಿತ್ರಸ್ಥಾನದಲ್ಲಿ ಕುಳಿತ ಈ ಮಂದಿ ತಮ್ಮ-ತಮ್ಮ ಹೊಣೆಗಾರಿಕೆಯನ್ನು ಅರಿಯಬೇಕಾಗಿದೆ. ಜೊತೆಗೆ ರಾಜಕಾರಣವೊಂದೇ ಸರ್ವರೋಗಕ್ಕೂ ಪರಿಹಾರ ಎಂದು ಭಾವಿಸಿರುವ ಜನತೆಯ ಆಲೋಚನೆಯೂ ಬದಲಾಗಬೇಕಾಗಿದೆ. ರಾಜಕಾರಣಿಗಳನ್ನು ದೇವರಂತೆ ಕಾಣುವ, ಅಗತ್ಯಕ್ಕಿಂತ ಹೆಚ್ಚು ಗೌರವವನ್ನು ಕೊಡುವ ಪರಿಪಾಠವನ್ನು ಜನ ಬದಲಾಯಿಸಿಕೊಂಡರೆ ಎಲ್ಲ ಸಮಸ್ಯೆಗಳೂ ತನ್​ತಾನೇ ಪರಿಹಾರವಾಗುತ್ತವೆ. ಹೀಗಾಗಿ ದೊಡ್ಡಮಟ್ಟದ ಪರಿಹಾರ ಜನರ ಕೈಲಿದೆ ಎನ್ನುವುದು ಮೇಲ್ನೋಟಕ್ಕೆ ಅರಿವಾಗುವಂತಿದೆ. ಎಸ್.ವಿ ಪರಮೇಶ್ವರ ಭಟ್ಟರ ಮಾತನ್ನು ಉಲ್ಲೇಖಿಸಿದ ಶತಾವಧಾನಿ ಗಣೇಶರು ‘ಮೆಟ್ಟಿಲನ್ನು ಮೇಲಿನಿಂದ ಸ್ವಚ್ಛಗೊಳಿಸುತ್ತೇವೆಯೇ ಹೊರತು, ಕೆಳಗಿನಿಂದಲ್ಲ’ ಎಂದಿದ್ದು ಅಲ್ಲಿದ್ದ ಎಲ್ಲರನ್ನೂ ತಟ್ಟಿ ಎಬ್ಬಿಸಿದಂತಿತ್ತು.

    ಹೌದಲ್ಲವೇ? ಮೇಲಿನದ್ದು ಸರಿಹೋದರೆ, ಕೆಳಗಿನದ್ದು ಸಹಜವಾಗಿಯೇ ಸ್ವಚ್ಛವಾಗುತ್ತದೆ. ಪರಿಣಾಮ ಏನಾಗುವುದೋ ಗೊತ್ತಿಲ್ಲ. ಆದರೆ ಚರ್ಚೆಯನ್ನಾದರೂ ಆರಂಭಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆಗಳನ್ನು ಹೇಳಲೇಬೇಕು.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts