More

    ವಸೂಲಿ ಮಾಡದಿದ್ದರೆ ಸಾಲ ಏಕೆ ಕೊಡ್ತಿರಿ?

    ಬೆಳಗಾವಿ: ರಾಜ್ಯದಲ್ಲಿ ಸಹಕಾರಿ ರಂಗ ಬೆಳೆಯಬೇಕಾದರೆ ರಾಜಕೀಯ ಹಾಗೂ ಜಾತಿಯ ಹಂಗಿಲ್ಲದೆ ಸಾಲ ನೀಡಿ ವಸೂಲಿ ಮಾಡುವ ಬದ್ಧತೆ ಎಲ್ಲರಲ್ಲೂ ಬರಬೇಕು. ತಮ್ಮವರು ಎಂಬ ಕಾರಣಕ್ಕೆ ಅಕ್ರಮ ಸಾಲ ನೀಡುವುದು ನಿಂತಾಗ ಮಾತ್ರ ಸಹಕಾರಿ ರಂಗದ ಅಭ್ಯುದಯ ಸಾಧ್ಯ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಪ್ರತಿಪಾದಿಸಿದರು.

    ಇಲ್ಲಿನ ಆಟೋನಗರದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ನಿರ್ಮಿಸಿರುವ ಬೆಳಗಾವಿ ಪ್ರಾಂತೀಯ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ 2 ಲಕ್ಷ ಸಾಲ ಪಡೆದ ಬಡವರ ಮನೆ ಮುಂದೆ ಡಂಗುರ ಸಾರಿ ಸಾಲ ವಸೂಲಿ ಮಾಡುತ್ತೀರಿ. ಆದರೆ, 250 ಕೋಟಿ ರೂ.ಗೂ ಅಧಿಕ ಸಾಲ ಪಡೆದು ಮರುಪಾವತಿಸದ ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳನ್ನು ಕೇಳುವುದೇ ಇಲ್ಲ. ವಸೂಲಿ ಮಾಡುವ ತಾಕತ್ತು ಇಲ್ಲವಾದರೆ ಮತ್ತೇಕೆ ಸಾಲ ನೀಡುತ್ತೀರಿ ಎಂದು ಸಹಕಾರಿ ಸಂಸ್ಥೆಗಳ ವಿರುದ್ಧ ಸಚಿವ ಸೋಮೇಶಖರ ಗುಡುಗಿದರು. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ರೈತರಿಂದ ಹೆಚ್ಚಿನ ಠೇವಣಿ ಪಡೆದು ವಂಚಿಸಲಾಗುತ್ತಿದೆ. 5 ಸಾವಿರಕ್ಕೂ ಅಧಿಕ ಸಹಕಾರಿಗಳ ಪೈಕಿ 20-30 ಸಂಸ್ಥೆಗಳು ಮಾಡುವ ಅವ್ಯವಹಾರದಿಂದ ಇಡಿ ಸಹಕಾರಿ ಕ್ಷೇತ್ರಕ್ಕೆ ಕಳಂಕ ಬರುತ್ತಿದೆ. ಅಕ್ರಮ ವ್ಯವಾಹಾರ ನಡೆಸುವ ಸಂಸ್ಥೆಗಳಿಗೆ ಕಾನೂನಾತ್ಮಕ ಕಡಿವಾಣ ಹಾಕುವುದಕ್ಕೆ ಸರ್ಕಾರ ಕಠಿಣ ಕಾನೂನು ರೂಪಿಸುತ್ತಿದೆ. ಗ್ರಾಹಕರ ವಿಶ್ವಾಸಾರ್ಹತೆಗೆ ತಕ್ಕಂತೆ ನಡೆದುಕೊಳ್ಳದೆ ವಂಚಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳೂ ಅಪರಾಧಿಗಳಾಗಲಿದ್ದಾರೆ ಎಂದರು.

    100 ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರದ ಅಭ್ಯುದಯಕ್ಕೆ ಪೂರಕವಾಗಿ ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಕಟ್ಟಡ ಸೌಲಭ್ಯ ಒದಗಿಸಲಾಗುತ್ತದೆ. ಎಲ್ಲ ರೈತರಿಗೂ ಸಾಲ ನೀಡುವುದಕ್ಕೆ ಅವಕಾಶ ನೀಡುವುದರ ಜತೆಗೆ ಕಾನೂನು ಮತ್ತಷ್ಟು ಬಿಗಿಗೊಳಿಸಿ ಸಹಕಾರಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ದೇಶದಲ್ಲಿ ಈವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿ ಆಗಿರುವ ಅರ್ಧದಷ್ಟು ಸಹಕಾರಿ ಬ್ಯಾಂಕ್‌ಗಳು ನಷ್ಟ ಅನುಭವಿಸಿಲ್ಲ. ಆದರೆ, ಬೆರಳೆಣಿಕೆಯಷ್ಟು ವಂಚನೆ ಪ್ರಕರಣಗಳಲ್ಲಿ ಕ್ರಮ ಜರುಗಿಸದಿರುವುದರಿಂದ ಜನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಹಕಾರಿಯ ನಿಯಮಾವಳಿಗಳಲ್ಲಿನ ಲೋಪ ಸರಿಪಡಿಸಿ, ಕಾನೂನು ಮತ್ತಷ್ಟು ಬಿಗಿಗೊಳಿಸುವ ಅವಶ್ಯಕತೆ ಇದೆ ಎಂದರು.

    ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಸಹಕಾರ ನೀಡಬೇಕೇ ಹೊರತು, ಹಸ್ತಕ್ಷೇಪ ಮಾಡಕೂಡದು. ಮಹತ್ವಾಕಾಂಕ್ಷಿಯ ಈ ಸಹಕಾರಿ ಚಳವಳಿ ಮುಂದುವರಿಸಲು ಸರ್ಕಾರ ದಿಟ್ಟ ನಿಲುವು ತಾಳಬೇಕಿದೆ ಎಂದ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಸಹಕಾರಿ ಉಳಿದಿರುವುದೇ ಬೆಳಗಾವಿ ಜಿಲ್ಲೆಯಲ್ಲಿ. ಈ ಜಿಲ್ಲೆಯಲ್ಲಿಯೇ ಪ್ರಾಂತೀಯ ಕಚೇರಿ ಆರಂಭಿಸುತ್ತಿರುವುದು ಸ್ವಾಗತಾರ್ಹ ಎಂದರು. ಅದಕ್ಕೂ ಮುನ್ನ ಕಲಬುರಗಿಯ ವಿಭಾಗೀಯ ಪ್ರಾಂತೀಯ ಕಚೇರಿಯನ್ನು ವರ್ಚುವಲ್ ವೇದಿಕೆ ಮೂಲಕ ಸಚಿವ ಸೋಮಶೇಖರ ಉದ್ಘಾಟಿಸಿದರು. ರಾಜ್ಯ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಜಗದೀಶ ಕವಟಗಿಮಠ, ಆರ್‌ಎಸ್‌ಎಸ್‌ನ ಅರವಿಂದರಾವ್ ದೇಶಪಾಂಡೆ, ಗಂಗಾಧರ ಜಾಂತಿಕರ ಇದ್ದರು.

    ವಿಶೇಷ ವಿಧೇಯಕಗಳು ಅತ್ಯಗತ್ಯ

    ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ದಶಕಗಳಿಂದ ನಡೆಯುತ್ತಿರುವ ಸಹಕಾರಿ ರಂಗಕ್ಕೆ ಈಗಾಗಲೇ ಎದುರಾಗಿರುವ ಸಮಸ್ಯೆ, ಸವಾಲುಗಳನ್ನು ಮೆಟ್ಟಿ ಮುಂದುವರಿಯುವುದಕ್ಕಾಗಿ ವಿಶೇಷ ವಿಧೇಯಕಗಳನ್ನು ಅನುಷ್ಠಾನಗೊಳಿಸಬೇಕಿದೆ. ಸಹಕಾರಿ ಕ್ಷೇತ್ರದಲ್ಲಿ ವ್ಯಾಜ್ಯಗಳ ತ್ವರಿತ ವಿಲೇವಾರಿಗಾಗಿ ಬೆಳಗಾವಿಯಲ್ಲಿ ಆರಂಭಿಸುವ ಸಹಕಾರಿ ನ್ಯಾಯಾಲಯವು ಸಹಕಾರಿ ಕ್ಷೇತ್ರದ ಅಭ್ಯುದಯಕ್ಕೆ ಶ್ರಮಿಸಲಿದೆ. ಸಹಕಾರಿ ಆಡಳಿತಕ್ಕೆ ಚುರುಕು ಮುಟ್ಟಿಸಲಿದೆ ಎಂಬ ಆಶಾಭಾವ ಸಹಕಾರಿಗಳಲ್ಲಿ ಮೂಡಿದೆ ಎಂದು ಅಭಿಪ್ರಾಯಪಟ್ಟರು. ಕೇವಲ ಹಣ ಇದ್ದವರು ಮಾತ್ರವಲ್ಲ. ಸಾಮಾಜಿಕ ಬದ್ಧತೆ ಇದ್ದವರಿಂದಲೇ ಸೌಹಾರ್ದ ಸಹಕಾರಿ ಸಂಸ್ಥೆ ಕಟ್ಟಲು ಸಾಧ್ಯ. ಸಮಾಜದಲ್ಲಿನ ಅರ್ಹರಿಗೆ ಹಾಗೂ ಅಗತ್ಯವಿರುವವರಿಗಾಗಿ ಸಹಕಾರಿಗಳನ್ನು ನಡೆಸುವ ಮನೋಭಾವ ಬೇಕು. ಪರಸ್ಪರ ಹೊಣೆಗಾರಿಕೆ ಹಂಚಿಕೊಂಡು, ಮಿತಿ ಹಾಕಿಕೊಳ್ಳುವುದರ ಮೂಲಕ ನಷ್ಟದ ಸಾಧ್ಯತೆ ಕಡಿತಗೊಳಿಸಿ ಸಹಕಾರಿಗಳ ಹಿತಾಸಕ್ತಿ ಕಾಪಾಡಬೇಕಿದೆ ಎಂದು ಹೇಳಿದರು.

    ಕ್ಷೀರ ಸಮೃದ್ಧಿ ಬ್ಯಾಂಕ್ ವಿಲೀನವಿಲ್ಲ!

    ನಿಯೋಜಿತ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಅನ್ನು ಡಿಸಿಸಿ ಬ್ಯಾಂಕ್ ಜತೆಗೆ ಯಾವುದೇ ಕಾರಣಕ್ಕೂ ಕಾರಣಕ್ಕೂ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಅವುಗಳೆರಡೂ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸುವುದರಿಂದ ಸಹಕಾರಿ ಬೆಳವಣಿಗೆಗೆ ಅನುಕೂಲವಾಗಲಿದ್ದು, ಶೀಘ್ರದಲ್ಲೇ ಕ್ಷೀರ ಸಮೃದ್ಧಿ ಬ್ಯಾಂಕ್‌ಅನ್ನು ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ ಉದ್ಘಾಟಿಸಲಿದ್ದಾರೆ ಎಂದು ಸಚಿವ ಸೋಮಶೇಖರ ಹೇಳಿದರು. ಗ್ರಾಹಕರಿಗೆ ಠೇವಣಿ ಹಿಂದಿರುಗಿಸದೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಸಹಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts