More

  ವ್ಯಾಪಾರಿಗಳ ಕಳವಳಕ್ಕೆ ರೈತರೇಕೆ ದನಿಯಾಗಬೇಕು?

  ವ್ಯಾಪಾರಿಗಳ ಕಳವಳಕ್ಕೆ ರೈತರೇಕೆ ದನಿಯಾಗಬೇಕು?ಕೇಂದ್ರ ಸರ್ಕಾರ ಈಗ ಜಾರಿ ಮಾಡಿರುವ ಕೃಷಿ ಸುಧಾರಣಾ ಕಾನೂನು ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಹೆಚ್ಚೆಚ್ಚು ಖರೀದಿದಾರರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ ಮತ್ತು ಕೃಷಿಕರ ಶೋಷಣೆಯ ಪ್ರಮಾಣವನ್ನೂ ತಗ್ಗಿಸಲಿದೆ. 1980ರ ದಶಕದಿಂದ ಹಿಡಿದು ಇಲ್ಲಿಯವರೆಗೆ, ಬಹುಪಾಲು ತಜ್ಞರು, ತಜ್ಞ ಸಮಿತಿಗಳು ಪ್ರತಿಪಾದಿಸುತ್ತಿದ್ದ ಸುಧಾರಣ ಪ್ರೇರಿತ ಅಂಶಗಳನ್ನೇ ಹೊಸ ಕಾನೂನಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

  ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೃಷಿ ಕಾನೂನುಗಳ ಕುರಿತು ಅವಲೋಕಿಸುವ ಪ್ರಯತ್ನ ಮಾಡುತ್ತೇನೆ. 1950ರ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ) ಕಾಯ್ದೆ ಭಾರತೀಯ ರೈತರನ್ನು ಸ್ಥಳೀಯ ವ್ಯಾಪಾರಿಗಳ ಏಕಸ್ವಾಮ್ಯದಿಂದ ಮುಕ್ತಗೊಳಿಸಿತು ಮತ್ತು ನಿಸ್ಸಂದೇಹವಾಗಿ ಇದು ಸಾಕಷ್ಟು ಪ್ರಯೋಜನಗಳನ್ನೂ ಹೊತ್ತು ತಂದಿತು. ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆಯನ್ನೂ ರಚನೆ ಮಾಡಿತು. ವಾಸ್ತವದಲ್ಲಿ, ಕೃಷಿ ಮಾರುಕಟ್ಟೆಯ ಪ್ರತಿ ವ್ಯಾಪಾರಿ ಕೂಡ ರೈತ ಸಮುದಾಯದೊಂದಿಗೆ ದೃಢ ಸಂಬಂಧ ಬೆಳೆಸಿರುತ್ತಾನೆ. ಈ ವ್ಯಾಪಾರಿಗಳು ರೈತರಿಗೆ ಅನೇಕ ಸಂದರ್ಭಗಳಲ್ಲಿ ಸಾಲ, ನೆರವನ್ನು ನೀಡುತ್ತಾರೆ. ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಇದೇ ವ್ಯಾಪಾರಿಯ ಮೂಲಕ ಮಾರಾಟ ಮಾಡುತ್ತಾರೆ ಮತ್ತು ಸಾಲಗಳನ್ನು ಬೆಳೆಗಳ ಮಾರಾಟದ ಮೂಲಕ ಹೊಂದಿಸಿಕೊಳ್ಳುತ್ತಾರೆ.

  ಇದನ್ನೂ ಓದಿ: 21 ವರ್ಷಕ್ಕೇ ಮೇಯರ್​ ಪಟ್ಟಕ್ಕೆ ಕೇರಳದ ಯುವತಿ? ಫಡ್ನವಿಸ್​ ದಾಖಲೆ ಮುರಿಯಲಿದ್ದಾರೆಯೇ ಕಮ್ಯುನಿಷ್ಟರ ಯುವ ನಾಯಕಿ?

  ಮಂಡಿ ವ್ಯಾಪಾರ ವ್ಯವಸ್ಥೆಯು ಆಹಾರ ಧಾನ್ಯಗಳನ್ನು ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ (ಎಂಎಸ್​ಪಿ) ಬೆಲೆಗೆ ಅನುಗುಣವಾಗಿ ಮಾರಾಟ ಮಾಡಲು ಇರುವಂತಹ ಒಂದು ವ್ಯವಸ್ಥೆ. ಆದರೆ, ರೈತರು ಎಂಎಸ್​ಪಿ ಕೇಂದ್ರಗಳಿಗೆ ನೇರ ಮಾರಾಟ ಮಾಡುವುದು ವಾಸ್ತವಿಕವಾಗಿ ಅಸಾಧ್ಯ. ಇದರಿಂದಾಗಿ, ಎಂಎಸ್​ಪಿಗಿಂತಲೂ ಕಡಿಮೆ ನಿವ್ವಳ ಬೆಲೆಗೇ ರೈತ ತನ್ನ ಉತ್ಪನ್ನ ಮಾರಾಟ ಮಾಡುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಇಲ್ಲಿ ವ್ಯಾಪಾರಿಗಳಿಗೆ ದಕ್ಕುವ ‘ಕಮಿಷನ್’ ಅಧಿಕೃತವಾಗಿ ಯಾವ ಲೆಕ್ಕಪತ್ರದಲ್ಲೂ ದಾಖಲಾಗುವುದಿಲ್ಲ. ಆದರೂ, ಹಿಂದಿನ ಕಾಲದಲ್ಲಿದ್ದ ದಲ್ಲಾಳಿಗಳ ಶೋಷಣೆಗಳಿಗೆ ಹೋಲಿಸಿದರೆ, ಈ ನಿರ್ದಿಷ್ಟ ವ್ಯಾಪಾರಿಗಳು ಮತ್ತು ನಿರ್ದಿಷ್ಟ ರೈತ ಸಮೂಹದ ನಡುವೆ ಏರ್ಪಟ್ಟ ವ್ಯಾಪಾರೀ ಸಂಬಂಧದಲ್ಲಿನ ಶೋಷಣೆಯ ಪ್ರಮಾಣ ಕೊಂಚ ಕಡಿಮೆ ಎನ್ನಬಹುದು.

  ಇದೇನೆ ಇರಲಿ, ಕೇಂದ್ರ ಸರ್ಕಾರ ಈಗ ಜಾರಿ ಮಾಡಿರುವ ಕೃಷಿ ಸುಧಾರಣಾ ಕಾನೂನು ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಗೆ ಹೆಚ್ಚೆಚ್ಚು ಖರೀದಿದಾರರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ ಮತ್ತು ಕೃಷಿಕರ ಶೋಷಣೆಯ ಪ್ರಮಾಣವನ್ನೂ ತಗ್ಗಿಸಲಿದೆ. 1980ರ ದಶಕದಿಂದ ಹಿಡಿದು ಇಲ್ಲಿಯವರೆಗೆ, ಬಹುಪಾಲು ತಜ್ಞರು, ತಜ್ಞ ಸಮಿತಿಗಳು ಹಾಗೂ ಸಂವಾದಗಳಲ್ಲಿ ಒಮ್ಮತದಿಂದ ಪ್ರತಿಪಾದಿಸುತ್ತಿದ್ದ ಸುಧಾರಣ ಪ್ರೇರಿತ ಅಂಶಗಳನ್ನೇ ಹೊಸ ಕಾನೂನಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದನ್ನು ಗಮನಿಸಬೇಕು. ಈ ಕಾನೂನಿನ ತರ್ಕ ಅರ್ಥ ಮಾಡಿಕೊಳ್ಳುವುದು ಸುಲಭ : ರೈತ ತನ್ನ ಉತ್ಪನ್ನಗಳಿಗೆ ಓರ್ವ ಖರೀದಿದಾರನನ್ನು ಹೊಂದಿದ್ದರೆ, ಶೋಷಣೆ ಎದುರಿಸುವುದು ಅನಿವಾರ್ಯ. ಹೆಚ್ಚೆಚ್ಚು ಖರೀದಿದಾರರಿದ್ದ ಸಂದರ್ಭದಲ್ಲಿ ಆತ ಶೋಷಣೆಗೊಳಪಡುವ ಸಾಧ್ಯತೆ ತೀರಾ ಕಡಿಮೆ. ಅದನ್ನೂ ಮೀರಿ, ಅನಿಯಮಿತ ಸಂಖ್ಯೆಯ ಖರೀದಿದಾರರಿದ್ದಲ್ಲಿ, ಆತ ತನ್ನ ಕೃಷಿ ಉತ್ಪನ್ನವನ್ನು ಉತ್ತಮ ಬೆಲೆ ನೀಡುವಾತನಿಗೆ ಮಾರಾಟ ಮಾಡಬಹುದು ಮತ್ತು ಒಳ್ಳೆಯ ಆದಾಯ ಗಳಿಸಬಹುದು. ಇದು ರೈತಹಿತದ ಅತ್ಯುತ್ತಮ ಮಾರ್ಗ. ಹಾಗಿದ್ದರೂ, ಈ ತರ್ಕಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ.

  ಹಾಗೆ ನೋಡಿದರೆ, ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳ ಒತ್ತಡ ಹಾಗೂ ಲಾಬಿಗಳಿಂದಾಗಿಯೇ ಎಪಿಎಂಸಿ ಕಾನೂನುಗಳಲ್ಲಿ ಸುಧಾರಣೆ ತರಲು ಇಲ್ಲಿಯವರೆಗೆ ಯಾವ ಸರ್ಕಾರಕ್ಕೂ ಸಾಧ್ಯವಾಗಲಿಲ್ಲ. 2004ರಲ್ಲಿ ರಾಜಸ್ಥಾನ ಸರ್ಕಾರದ ಸಚಿವ ಸಂಪುಟ ಇದೇ ಮಾದರಿಯ ಸುಧಾರಣಾ ಕಾನೂನಿಗೆ ಅನುಮೋದನೆ ನೀಡಿತ್ತು. ಆದರೆ, ಅಲ್ಲಿನ ವ್ಯಾಪಾರೀ ವರ್ಗವು ತೀವ್ರ ಪ್ರತಿಭಟನೆ, ಧರಣಿ ನಡೆಸಿದ ಪರಿಣಾಮ ಎಪಿಎಂಸಿ ಸುಧಾರಣಾ ಕಾನೂನು ಜಾರಿಗೆ ತರುವ ಚಿಂತನೆಯನ್ನೇ ಸರ್ಕಾರ ಕೈಬಿಡಬೇಕಾಯಿತು.

  ಇದನ್ನೂ ಓದಿ: ಪೊಲೀಸರಿಗೆ ಕ್ರಿಸ್‌ಮಸ್ ಬಂಪರ್ ಕೊಡುಗೆ; ಚುನಾವಣೆ ಗೌರವಧನ ಪರಿಷ್ಕೃತ

  ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ತಿದ್ದುಪಡಿ ತರುವುದಕ್ಕೆ ವ್ಯಾಪಾರಿಗಳು ವಿರೋಧ ಮಾಡುತ್ತಿರುವುದನ್ನು ಅವರ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬಹುದು. ಆದರೆ, ರೈತರು ಏತಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ? ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕೃಷಿ ಮಾರುಕಟ್ಟೆಗಳಾಚೆಗೂ ಹೆಚ್ಚೆಚ್ಚು ವೇದಿಕೆ ನಿರ್ವಣವಾಗುವುದನ್ನು ಅವರೇಕೆ ವಿರೋಧಿಸುತ್ತಿದ್ದಾರೆ? ರೈತರ ಮೇಲೆ ಬಲವಂತವಾಗಿ ಹೇರುವಂತಹ ಯಾವುದೇ ಅಂಶಗಳು ಕಾನೂನಲ್ಲಿ ಇಲ್ಲದಿದ್ದರೂ ಈ ಪರಿಯ ಪ್ರತಿರೋಧವೇಕೆ?

  ಈ ಮೂರು ಕೃಷಿ ಕಾನೂನುಗಳು ಯಾವೆಲ್ಲಾ ಬದಲಾವಣೆಗಳನ್ನು ತರುತ್ತವೆ ಎನ್ನುವುದನ್ನು ನಾವು ಅವಲೋಕಿಸೋಣ. ನೂತನ ‘ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, 2020’ರಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯ ಹೊರಗೂ ಮಾರಾಟ ಮಾಡುವ ಸ್ವಾತಂತ್ರ್ಯ ಪಡೆದಿದ್ದಾರೆ. ಅಲ್ಲದೆ, ಮಾರುಕಟ್ಟೆ ಪರವಾನಗಿ ಇಲ್ಲದೆಯೇ ಖರೀದಿದಾರ ಕೃಷಿ ಭೂಮಿಯಿರುವ ಸ್ಥಳಕ್ಕೇ ಹೋಗಿ ಉತ್ಪನ್ನಗಳನ್ನು ಖರೀದಿಸಬಹುದು. ಹಾಗಂತ, ಮಾರುಕಟ್ಟೆಯಲ್ಲೇ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ರೈತನ ಸ್ವಾತಂತ್ರ್ಯವನ್ನೇನೂ ಹೊಸ ಕಾನೂನು ಕಿತ್ತುಕೊಂಡಿಲ್ಲ. ಹಾಗಿದ್ದರೂ, ಈ ಸುಧಾರಣಾ ಕಾನೂನಿಂದಾಗಿ ‘ಮಾರುಕಟ್ಟೆ ವ್ಯವಸ್ಥೆ ಮತ್ತು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಸರ್ಕಾರಿ ಕ್ರಮ’ ನಿಧಾನವಾಗಿ ಕಣ್ಮರೆಯಾಗಲಿದೆ ಎನ್ನುವುದು ಕೆಲವು ರೈತರ ಆತಂಕ. ರೈತರಲ್ಲಿ ಇಂಥದ್ದೊಂದು ತಪ್ಪು ಅಭಿಪ್ರಾಯ ಮೂಡಲು ಕಾರಣವೇನು? ಯಾವುದೇ ರಾಜಕೀಯ ಪಕ್ಷ/ಸರ್ಕಾರ, ಮಾರುಕಟ್ಟೆ ಅಥವಾ ಕನಿಷ್ಠ ಬೆಂಬಲ ಬೆಲೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾದರೆ ಅಥವಾ ಒತ್ತಡ ಹೇರಿದರೆ, ಅದನ್ನು ‘ರಾಜಕೀಯ ಅತ್ಮಹತ್ಯೆ’ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ, ಎಂಎಸ್​ಪಿ ಮತ್ತು ಮಾರುಕಟ್ಟೆ ವ್ಯವಸ್ಥೆ ಮುಂದುವರಿಕೆಗೆ ರೈತರು ಬಯಸುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಸಿದ್ಧವಾದಂತಿದೆ. ಅಲ್ಲದೆ, ಕಾನೂನಿನಲ್ಲಿನ ತಿದ್ದುಪಡಿಗಳ ಜತೆಗೆ ಖಾಸಗಿ ಮಂಡಿಗಳಿಗೆ ‘ಮಂಡಿ ಶುಲ್ಕ’ ವಿಧಿಸಲೂ ಸರ್ಕಾರ ಒಪ್ಪಿಕೊಂಡಂತಿದೆ.

  ಇದನ್ನೂ ಓದಿ: ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

  ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020ರ ಮೂಲಕ ಸರ್ಕಾರ ಮತ್ತೊಂದು ಮಹತ್ವದ ಸುಧಾರಣೆಗೆ ನಾಂದಿ ಹಾಡಿದೆ. ಅದು ಗುತ್ತಿಗೆ ಕೃಷಿಗೆ ಸಂಬಂಧಿಸಿದ್ದು. ಎಂಎಸ್​ಪಿಯಲ್ಲಿ ಮಾರಾಟವಾಗುವ ಆಹಾರ ಧಾನ್ಯಗಳಿಗಿಂತ ಹೆಚ್ಚಿನ ಆದಾಯ ತರುವ ತರಕಾರಿಗಳು ಮತ್ತು ಹಣ್ಣುಗಳಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಇದು ರೈತನಿಗೆ ನೆರವಾಗಲಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದ ಮತ್ತು ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಾದ ಸಂದರ್ಭದಲ್ಲೂ ‘ಗುತ್ತಿಗೆ’ ಬೆಲೆ ನಿಗದಿಯಿಂದಾಗಿ ರೈತ ತನ್ನ ಉತ್ಪನ್ನವನ್ನು ಒಪ್ಪಂದವಾಗಿದ್ದ ಬೆಲೆಗೇ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇಲ್ಲಿಯೂ, ರೈತರ ಮೇಲೆ ಹೇರುವ ಯಾವುದೇ ಕ್ರಮಗಳಿಲ್ಲ. ಎಂಎಸ್​ಪಿಯಲ್ಲಿ ಮಾರಾಟ ಮಾಡುವ ಬೆಳೆಗಳನ್ನು ಬಿತ್ತನೆ ಮಾಡಬಹುದು ಅಥವಾ ಯಾವುದೇ ಒಪ್ಪಂದ ಮಾಡಿಕೊಳ್ಳದೆ, ಎಂಎಸ್​ಪಿ ಅಲ್ಲದ ಬೆಳೆಗಳನ್ನೂ ಆತ ಬೆಳೆಯಬಹುದು. ಮಾರುಕಟ್ಟೆಯಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲು ಆತನಿಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಹಾಗಾದರೆ, ಈ ಹೆಚ್ಚುವರಿ ಆಯ್ಕೆಗಳ ಬಗ್ಗೆಯೇ ಏಕೆ ಪ್ರತಿಭಟನೆ ವ್ಯಕ್ತವಾಗುತ್ತಿದೆ? ಈ ಕಾನೂನಿನಲ್ಲಿರುವ ಸುರಕ್ಷತಾ ಕ್ರಮಗಳು (ವಿವಾದ, ವಂಚನೆಗೊಳಪಟ್ಟಾಗ ಪರಿಹಾರ ಕಂಡುಕೊಳ್ಳುವ ನ್ಯಾಯಿಕ ವ್ಯವಸ್ಥೆ) ರೈತರಿಗೆ ಸಹ್ಯವೆನಿಸದಿದ್ದಲ್ಲಿ, ಅಲ್ಲಿ ಅಗತ್ಯ ತಿದ್ದುಪಡಿಗೆ ಸರ್ಕಾರಕ್ಕೆ ಸಲಹೆ ನೀಡಬಹುದು. ಹಾಗಂತ, ಇಡೀ ಕಾನೂನನ್ನೇ ಹಿಂಪಡೆದುಕೊಳ್ಳಿ ಎನ್ನುತ್ತಿರುವುದು ನಿಜಕ್ಕೂ ಅರ್ಥವಾಗದ ವಿಷಯ.

  ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆಗಳ ಸಂಗ್ರಹ ಇತ್ಯಾದಿಗಳನ್ನು ಯುದ್ಧ, ಕ್ಷಾಮ, ನೈಸರ್ಗಿಕ ವಿಪತ್ತು ಅಥವಾ ಭಾರೀ ಬೆಲೆ ಏರಿಕೆಯಂತಹ ಅತಿರೇಕದ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ನಿಯಂತ್ರಿಸಬಹುದು ಎಂದು ‘ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020’ ಹೇಳುತ್ತದೆ. ಅಗತ್ಯ ಸರಕುಗಳ ಕಾಯ್ದೆಯು ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಖರೀದಿಗೆ ಅವಕಾಶ ಮಾಡಿಕೊಡುವ ಮೂಲಕ ಗ್ರಾಹಕ ಹಿತಾಸಕ್ತಿಗಳನ್ನು (ಮುಖ್ಯವಾಗಿ, ಅತಿ ಶೋಷಣೆಗೆ ಒಳಪಟ್ಟ ನಗರಗಳ ಮಧ್ಯಮ ವರ್ಗವನ್ನು) ಕಾಪಾಡುತ್ತಾ ಬಂದಿದೆ. ಹಾಗೆ ನೋಡಿದರೆ, ಶೀತಲೀಕರಣ ಘಟಕ, ಗೋದಾಮುಗಳಲ್ಲಿನ ಹೂಡಿಕೆಯನ್ನು ಉತ್ತೇಜಿಸದ ಅಗತ್ಯ ಸರಕುಗಳ ಕಾಯ್ದೆಯು ರೈತ ಹಿತಾಸಕ್ತಿಯನ್ನು ಕಾಪಾಡುತ್ತಿರಲಿಲ್ಲ. ವಾಸ್ತವದಲ್ಲಿ, ಉತ್ತಮ ಪೂರೈಕೆ/ಮಾರುಕಟ್ಟೆ ಸರಪಳಿಗಳು ರೈತನಿಗೆ ಹೆಚ್ಚಿನ ಬೆಲೆ/ಆದಾಯ ತಂದುಕೊಡುವ ಸಾಮರ್ಥ್ಯ ಹೊಂದಿವೆ. ಹೀಗಾಗಿ, ವಾಸ್ತವಿಕವಾಗಿ ರೈತರು ಈಗ ಯಾವ ಕಾನೂನನ್ನು ವಿರೋಧಿಸುತ್ತಿದ್ದಾರೋ, ‘ಆ ಕಾನೂನನ್ನು ಮೊದಲು ಈ ದೇಶದಲ್ಲಿ ಜಾರಿಗೊಳಿಸಿ, ನಮ್ಮ ಹಿತಾಸಕ್ತಿ ಕಾಪಾಡಿ’ ಎಂದು ದಶಕಗಳ ಹಿಂದೆಯೇ ಪ್ರತಿಭಟನೆ ನಡೆಸಬೇಕಿತ್ತು!

  ಇದನ್ನೂ ಓದಿ: ಫಲಿತಾಂಶ ನೋಡಲು ಅಭ್ಯರ್ಥಿಯೇ ಇಲ್ಲ; ಗ್ರಾಮ ಪಂಚಾಯತ್ ಚುನಾವಣೆ ಸುತ್ತಮುತ್ತ ಅಭ್ಯರ್ಥಿಗಳಿಬ್ಬರ ಸಾವು!

  2004ರಲ್ಲಿ ರಾಜಸ್ಥಾನದ ವ್ಯಾಪಾರಿಗಳು ನಡೆಸಿದ್ದ ಪ್ರತಿಭಟನೆ ಮತ್ತು ಇಂದಿನ ಪ್ರತಿಭಟನೆಯಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಕೃಷಿ ಉತ್ಪನ್ನಗಳನ್ನು ಮಂಡಿಗಳಿಂದಾಚೆ ಮಾರಾಟ ಮಾಡುವಂತಹ ಹೆಚ್ಚುವರಿ ಆಯ್ಕೆಗಳು ಮತ್ತು ಗುತ್ತಿಗೆ ಕೃಷಿಯಂತಹ ಸುಧಾರಣಾ ಕ್ರಮಗಳು ವ್ಯಾಪಾರಿಗಳ ನಿದ್ದೆಗೆಡಿಸಿವೆ. ಆಶ್ಚರ್ಯಕರ ಸಂಗತಿ ಏನೆಂದರೆ – ವ್ಯಾಪಾರಿ, ದಲ್ಲಾಳಿಗಳ ಕಳವಳದ ಧ್ವನಿಯಾಗಿ ರೈತರು ಕಿರುಚುತ್ತಿರುವುದು! ಎಲ್ಲಕ್ಕಿಂತ ಮುಖ್ಯವಾಗಿ, ಇಂಥದ್ದೊಂದು ಸುಧಾರಣೆ ತುರ್ತಾಗಿ ಆಗಬೇಕೆಂದು ಹಿಂದೆಲ್ಲಾ ಪ್ರತಿಪಾದಿಸಿದ್ದ ಬುದ್ಧಿಜೀವಿಗಳು ಮತ್ತು ಕೃಷಿ ತಜ್ಞರು ಈಗ ಮೌನದಿಂದಿರುವುದು. ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಆಧರಿಸಿ, ಸುಧಾರಣಾ ಕ್ರಮವೊಂದಕ್ಕೆ ನಮ್ಮ ಸಮ್ಮತಿ/ಅಸಮ್ಮತಿಯನ್ನು ವ್ಯಕ್ತಪಡಿಸುವ ಚಾಳಿಯನ್ನು ಇನ್ನಾದರೂ ಬಿಡಬೇಕು.

  ಕಾನೂನಿಗೆ ವಿರೋಧವಷ್ಟೇ ಅಲ್ಲ, ಅದನ್ನೂ ಮೀರಿ ಮತ್ತಿನ್ನೇನೋ ವಿಷಯ ಈ ಪ್ರತಿಭಟನೆ ಹಿಂದಿದ್ದಂತಿದೆ. ರಾಜಕೀಯ ಪಿತೂರಿಯ ಭಾಗವಾಗಿ ಅಮಾಯಕ ರೈತರ ದಾರಿ ತಪ್ಪಿಸಲಾಗುತ್ತಿದೆ ಎಂಬ ವಾದವೇನೋ ಇದೆ. ಆದರೆ, ಕೆಲವು ರಾಜ್ಯಗಳಲ್ಲಿ ಎಂಎಸ್​ಪಿ ಯೋಜನೆ ಕಾರ್ಯನಿರ್ವಹಿಸುವ ರೀತಿ ಮತ್ತು ಅಂತಹ ರಾಜ್ಯಗಳಲ್ಲಿ ಕೃಷಿಕರು-ವ್ಯಾಪಾರಿಗಳ ನಡುವಿನ ದೊಡ್ಡ ಸಂಬಂಧಗಳಿಗೆ ಸುಧಾರಣಾ ಕಾನೂನು ಅಡ್ಡಿಯಾಗಬಹುದೇನೋ ಎಂಬ ಆತಂಕ ಈ ಪರಿಯ ಪ್ರತಿರೋಧಕ್ಕೆ ಪ್ರಮುಖ ಕಾರಣವಿದ್ದಂತಿದೆ.

  (ಲೇಖಕರು ಭಾರತದ ಮಾಜಿ ನಿಯಂತ್ರಕರು ಮತ್ತು ಮಹಾಲೇಖಪಾಲರು )

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts