More

    6 ವರ್ಷದ ಹಿಂದಿನ ನಕಲಿ ಮಿ. ಬೀನ್ ಪ್ರಕರಣ: ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಜಿಂಬಾಬ್ವೆ!

    ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಜಿಂಬಾಬ್ವೆ ತಂಡ ಗುರುವಾರ ಪಾಕಿಸ್ತಾನ ವಿರುದ್ಧ 1 ರನ್​ನಿಂದ ರೋಚಕ ಗೆಲುವು ದಾಖಲಿಸಿತು. ಆದರೆ ಈ ಗೆಲುವಿನ ಬಳಿಕ ಇದಕ್ಕೆ ಕಾರಣರಾದ ಜಿಂಬಾಬ್ವೆ ಆಟಗಾರರಿಗೆ ಬದಲಾಗಿ ಮಿಸ್ಟರ್ ಬೀನ್ ಹೆಸರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡಿಂಗ್​ನಲ್ಲಿತ್ತು. ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ಸೇಡು ತೀರಿಸಿಕೊಂಡಿದೆ ಎಂದೂ ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸುತ್ತಿದ್ದರು. 6 ವರ್ಷಗಳ ಹಳೆಯ ನಕಲಿ ಮಿ. ಬೀನ್ ಪ್ರಕರಣವೇ ಇದಕ್ಕೆ ಮೂಲ ಕಾರಣವಾಗಿತ್ತು!

    ಪಂದ್ಯಕ್ಕೆ ಮುನ್ನ ಪಾಕ್ ಕ್ರಿಕೆಟ್ ಮಂಡಳಿ ಆಟಗಾರರ ಅಭ್ಯಾಸದ ಚಿತ್ರಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಜಿಂಬಾಬ್ವೆಯ ಪ್ರಜೆಯೊಬ್ಬ, ಜಿಂಬಾಬ್ವೆಯವರಾಗಿ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನಮಗೊಮ್ಮೆ ಅಸಲಿಗೆ ಬದಲಾಗಿ ನಕಲಿ ಮಿ. ಬೀನ್ ನೀಡಿದ್ದಿರಿ. ನಾವದಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ಮಳೆಯಿಂದಷ್ಟೇ ನಿಮ್ಮನ್ನು ಕಾಪಾಡಲು ಸಾಧ್ಯ ಎಂದು ಟ್ವೀಟಿಸಿದ್ದ. ಜತೆಗೆ ಅಂದು ಹೇಗೆ ಪಾಕ್ ಮೋಸ ಮಾಡಿತ್ತು ಎಂದೂ ವಿವರಿಸಿದ್ದ. ಹೀಗಾಗಿ ಪಂದ್ಯದ ಬಳಿಕ ಎಲ್ಲ ಕ್ರಿಕೆಟ್ ಪ್ರೇಮಿಗಳು, ಅಂದಿನ ನಕಲಿ ಮಿ. ಬೀನ್ ಮೋಸಕ್ಕೆ ಜಿಂಬಾಬ್ವೆ ಈ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಿದೆ ಎಂದೇ ಬಣ್ಣಿಸಿದರು. ಜತೆಗೆ ನಕಲಿ ಮಿ. ಬೀನ್ ಪ್ರಕರಣವನ್ನು ನೆನಪಿಸಿ, ಪಾಕ್ ಕ್ರಿಕೆಟ್ ತಂಡವನ್ನು ಹಲವು ಬಗೆಯ ಮೀಮ್ಸ್​ಗಳ ಮೂಲಕ ಟ್ರೋಲ್ ಮಾಡಲಾಯಿತು.

    ಏನಿದು ನಕಲಿ ಮಿ. ಬೀನ್?
    ಅಸಲಿ ಮಿ. ಬೀನ್ ಖ್ಯಾತಿಯ ಬ್ರಿಟನ್ ನಟ ರೋವನ್ ಅಟ್ಕಿನ್​ಸನ್ ರೂಪದಲ್ಲಿ ಅವರನ್ನೇ ಹೋಲುವ ಪಾಕಿಸ್ತಾನದ ಹಾಸ್ಯ ಕಲಾವಿದ ಆಸಿಫ್ ಮುಹಮ್ಮದ್, 2016ರಲ್ಲಿ ಜಿಂಬಾಬ್ವೆಗೆ ಹೋಗಿದ್ದರು. ಅವರು ನಿಜವಾದ ಮಿ. ಬೀನ್ ಎಂದೇ ಭಾವಿಸಿದ್ದ ಜಿಂಬಾಬ್ವೆ ಜನರು ಅಪಾರ ಪ್ರೀತಿ ತೋರಿದ್ದರು. ಸರ್ಕಾರವೇ ಆಯೋಜಿಸಿದ್ದ ಕೃಷಿ ಕಾರ್ಯಕ್ರಮದಲ್ಲಿ ಅಸಲಿ ಮಿ. ಬೀನ್​ನಂತೆ ಭಾಗವಹಿಸಿದ್ದ ಈ ನಕಲಿ ಮಿ. ಬೀನ್​ಗೆ ಸಕಲ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು. ಈ ಭೇಟಿಯ ವಿಡಿಯೋ-ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕವಷ್ಟೇ ಇದು ಅಸಲಿ ಮಿ. ಬೀನ್ ಅಲ್ಲ, ನಾವು ಮೋಸ ಹೋಗಿದ್ದೇವೆ ಎಂದು ಜಿಂಬಾಬ್ವೆ ಜನರಿಗೆ ಗೊತ್ತಾಗಿತ್ತು!

    ಅಧ್ಯಕ್ಷ-ಪ್ರಧಾನಿ ಟ್ವೀಟ್!
    ನಕಲಿ ಮಿ. ಬೀನ್ ಪ್ರಕರಣದ ಬಗ್ಗೆ ಉಭಯ ದೇಶಗಳ ಅಭಿಮಾನಿಗಳಷ್ಟೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಉಭಯ ದೇಶಗಳ ಮುಖ್ಯಸ್ಥರೂ ಪಂದ್ಯದ ಬಳಿಕ ಮಿ. ಬೀನ್ ಹೆಸರು ಉಲ್ಲೇಖಿಸಿಯೇ ಟ್ವೀಟಿಸಿದ್ದಾರೆ. ಗೆಲುವಿಗೆ ಅಭಿನಂದಿಸಿ ಟ್ವೀಟ್ ಮಾಡಿದ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್​ಸನ್ ನಂಗಗ್ವಾ, ಮುಂದಿನ ಬಾರಿ ನಿಜವಾದ ಮಿ. ಬೀನ್​ಅನ್ನು ಕಳುಹಿಸಿ ಎಂದು ತಮಾಷೆಯಾಗಿ ಪಾಕ್ ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಟ್ವೀಟಿಸಿದ್ದು, ನಮ್ಮ ಬಳಿ ನಿಜವಾದ ಮಿ. ಬೀನ್ ಇಲ್ಲದೆ ಇರಬಹುದು. ಆದರೆ ನಿಜವಾದ ಕ್ರಿಕೆಟ್ ಸ್ಪೂರ್ತಿ ಇದೆ. ನಾವು ಪಾಕಿಸ್ತಾನೀಯರು ಪುಟಿದೆದ್ದು ಬರುವ ತಮಾಷೆಯ ಹವ್ಯಾಸ ಹೊಂದಿದ್ದೇವೆ. ಅಧ್ಯಕ್ಷರೇ, ಅಭಿನಂದನೆಗಳು, ನಿಮ್ಮ ತಂಡ ನಿಜಕ್ಕೂ ಇಂದು ಅತ್ಯುತ್ತಮ ಆಟವಾಡಿತು ಎಂದಿದ್ದಾರೆ.

    ಜಿಂಬಾಬ್ವೆ ಎದುರು ಪಾಕ್​ ತಂಡಕ್ಕೆ ಸೋಲು! ಹತಾಶೆಯಿಂದ​ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಅಖ್ತರ್​

    ಯುವಿ ದಾಖಲೆ ಮುರಿದಿದ್ದರ ಬಗ್ಗೆ ನಿಮಗೆ ಏನನಿಸುತ್ತೆ? ರೋಹಿತ್​ ಶರ್ಮ ಕೊಟ್ಟ ಉತ್ತರ ಹೀಗಿತ್ತು…

    ನೆದರ್ಲೆಂಡ್ ವಿರುದ್ಧ ಭಾರತಕ್ಕೆ ನಿರೀಕ್ಷಿತ ಗೆಲುವು; ಬೌಲಿಂಗ್​ನಲ್ಲಿ ಮಿಂಚಿದ ಭುವನೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts