

ಜಿನೇವಾ: ಸಾರ್ವಜನಿಕವಾಗಿ ಓಡಾಡುವಾಗ ಮೂರು ಪದರದ ಮಾಸ್ಕ್ ಧರಿಸಿ. ಆ ಮೂಲಕ ಕರೊನಾ COVID19 ವೈರಸ್ ಸೋಂಕು ತಡೆಗಟ್ಟಬಹುದು. ಮೂರು ಪದರದ ಬಟ್ಟೆಯ ಅಥವಾ ವೈದ್ಯಕೀಯೇತರ ಮಾಸ್ಕ್ಗಳನ್ನು ಧರಿಸುವುದಕ್ಕೆ ಆದ್ಯತೆ ನೀಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ತಿಳಿಸಿದೆ.
ಆರೋಗ್ಯ ಸಮಸ್ಯೆ ಹೊಂದಿರುವಂಥ 60 ವರ್ಷ ಮೇಲ್ಪಟ್ಟವರು ಅಥವಾ 60 ವರ್ಷ ಮೇಲ್ಪಟ್ಟವರು ಸಾಮಾಜಿಕ ಅಂತರವನ್ನು ಎಲ್ಲಿ ಕಾಪಾಡಲಾಗುತ್ತಿಲ್ಲವೋ ಅಲ್ಲಿ ಕಡ್ಡಾಯವಾಗಿ ವೈದ್ಯಕೀಯ ಮಾಸ್ಕ್ ಧರಿಸಬೇಕು. ಉಳಿದವರೆಲ್ಲರೂ ಮೂರು ಪದರದ ಬಟ್ಟೆಯ ಮಾಸ್ಕ್ ಧರಿಸುವುದು ಕಡ್ಡಾಯ. ಸಂಭಾವ್ಯ ಅಪಾಯಕಾರಿ ಸೋಂಕಿನ ಕಣಗಳು ಶರೀರ ಪ್ರವೇಶಿಸದಂತೆ ತಡೆಯಲು ಇದು ಸಹಕಾರಿ ಎಂದು ಡಬ್ಲ್ಯುಎಚ್ಒ ಹೇಳಿದೆ.
ಎಲ್ಲ ಸರ್ಕಾರಗಳೂ ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾಸ್ಕ್ ಧರಿಸಲು ಪ್ರೇರೇಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉದಾಹರಣೆಗೆ ಬಸ್ ಮುಂತಾದ ಸಾರಿಗೆ ವ್ಯವಸ್ಥೆಯಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಮತ್ತು ಇತರೆ ಜನದಟ್ಟಣೆ ಇರುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟದ ಮಾತು. ಹೀಗಾಗಿ ಅಂಥ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದರಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯ. ಈ ಸಂಬಂಧಿತ ಅಧ್ಯಯನ ಪ್ರಕಾರವೇ ಈಗ ಮೂರು ಪದರದ ಮಾಸ್ಕ್ ಧರಿಸುವ ಶಿಫಾರಸು ಮಾಡುತ್ತಿರುವುದು ಎಂದು ಡಬ್ಲ್ಯುಎಚ್ಒ ಸ್ಪಷ್ಟವಾಗಿ ಹೇಳಿದೆ.
ಭಾರತ, ಸಿಂಗಾಪುರ, ಫ್ರಾನ್ಸ್, ಸ್ಪೇನ್, ಜರ್ಮನಿ, ಅರ್ಜೆಂಟೀನಾ ಮತ್ತು ಇತರೆ ದೇಶಗಳಲ್ಲಿ ಈಗಾಗಲೇ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗ ಮೂರು ಪದರದ ಮಾಸ್ಕ್ ಧರಿಸುವುದನ್ನು ಪ್ರೇರೇಪಿಸಬೇಕಾಗಿದೆ. (ಏಜೆನ್ಸೀಸ್)