More

    ಬೆಂಗಳೂರಿನಲ್ಲಿ ಡೋರ್​ ಡೆಲಿವರಿ ಡನ್ಜೋವನ್ನೂ ಬಿಡಲಿಲ್ಲ ಇಬ್ಬರು ಖದೀಮರು!- ಡೆಲಿವರಿ ಬಾಯ್​ಗಳ ಸೋಗಿನಲ್ಲಿ ಇವರು ಮಾಡಿದ್ದೇನು?

    ಬೆಂಗಳೂರು: ಕರೊನಾ ಲಾಕ್​ಡೌನ್ ಚಾಲ್ತಿಯಲ್ಲಿರುವ ಕಾರಣ ಮನೆಮನೆಗೆ ಅಗತ್ಯವಸ್ತುಗಳನ್ನು ತಲುಪಿಸುವ ಡನ್ಜೋ ಕಂಪನಿಯನ್ನೂ ಬಿಡಲಿಲ್ಲ ಈ ಇಬ್ಬರು ಖದೀಮರು. ಡೆಲಿವರಿ ಬಾಯ್​ಗಳ ಸೋಗಿನಲ್ಲಿ ಅವರು ಮಾಡಿದ ಕೃತ್ಯ ನೋಡಿದರೆ ಯಾರಿಗೇ ಆದರೂ ಸಿಟ್ಟುಬಂದೀತು. ಖಚಿತ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದಾಗಿ ಖದೀಮರ ಕಳ್ಳ ವ್ಯವಹಾರ ಬಯಲಾಗಿದೆ. ಅವರೂ ಈಗ ಪೊಲೀಸರ ಅತಿಥಿಗಳು!

    ಬೆಂಗಳೂರಿನ ಸಾರಕ್ಕಿ ಸರ್ಕಲ್ ಸಮೀಪ ಬಸಪ್ಪ ಗಾರ್ಡನ್​ ಆರನೆ ಮುಖ್ಯರಸ್ತೆಯ ಅಂಗಡಿ ಒಂದರ ಸಮೀಪ ಇಬ್ಬರು ಡನ್ಜೋ ಸಂಸ್ಥೆಯ ಡೆಲಿವರಿ ಬ್ಯಾಗ್ ಹಿಡಿದು ನಿಂತಿದ್ದರು. ಒಂದು ದ್ವಿಚಕ್ರ ವಾಹನವೂ ಜತೆಗಿತ್ತು. ಕಳ್ಳ ವ್ಯವಹಾರಕ್ಕಾಗಿ ಅವರು ಅಲ್ಲಿ ಇರುವ ವಿಚಾರ ಸಿಸಿಬಿ ಪೊಲೀಸರಿಗೆ ತಲುಪಿತ್ತು. ಡನ್ಜೋ ಡೆಲಿವರಿ ಬಾಯ್​ಗಳ ಸೋಗಿನಲ್ಲಿದ್ದ ಖದೀಮರ ಬಳಿಕ ಖರೀದಿದಾರರ ಸೋಗಿನಲ್ಲಿ ಸಿಸಿಬಿ ಪೊಲೀಸರು ಆಗಮಿಸಿದರು.

    ವ್ಯವಹಾರ ಶುರುವಾಗಿ, ಡೀಲ್ ಕೂಡ ಆಯಿತು. ಡೆಲಿವರಿ ಬಾಯ್​ಗಳ ಸೋಗಿನಲ್ಲಿದ್ದ ಖದೀಮರು ಬ್ಯಾಗ್​ನಿಂದ ಎರಡು ತಲೆಯ ಹಾವನ್ನು ಹೊರತೆಗೆದರು. ಅಷ್ಟೇ ಮುಂದಿನ ಪರಿಸ್ಥಿತಿ ಅರಿವಾಗುವ ಹೊತ್ತಿಗೆ ಪೊಲೀಸರ ಸೆರೆಯಲ್ಲಿದ್ದರು. ಅವರಿಂದ ದ್ವಿಚಕ್ರವಾಹನ, ಹಾವು, 3 ಮೊಬೈಲ್​ಗಳು ಮತ್ತು ಸಂಬಂಧಿತ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಕಗ್ಗಲಿಪುರ ವಲಯ ಅರಣ್ಯ ಅಧಿಕಾರಿ(ಆರ್.ಎಫ್.ಓ)ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ ಹಾವಿನ ಮೌಲ್ಯ 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಲ್ಲಿ, ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ವಿರೂಪಾಕ್ಷಪ್ಪ ಡಿ.ಟಿ ನೇತೃತ್ವದಲ್ಲಿ ಎಸ್​ಐ ರವಿಪಾಟೀಲ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಉಡುಪಿ, ಮಂಗಳೂರಿನಲ್ಲಿ ನಾಳೆ ನೋಡೋದಕ್ಕೆ ನಿಮ್ಮ ನೆರಳೂ ಸಿಗದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts