More

    ಪ್ರಕೃತಿಸಹಜ ಹೊಸ ವರ್ಷ ಯಾವುದು?; ಆಚರಣೆಗೆ ಯಾವುದು ಸೂಕ್ತ?

    ಪ್ರಕೃತಿಸಹಜ ಹೊಸ ವರ್ಷ ಯಾವುದು?; ಆಚರಣೆಗೆ ಯಾವುದು ಸೂಕ್ತ?| ನಾಗರಾಜ ಜಿ.,
    ಸಂಸ್ಕೃತಿ ಚಿಂತಕರು,
    ಅಷ್ಟಾಂಗಯೋಗ ವಿಜ್ಞಾನಮಂದಿರಂ

    ಇದೀಗ 2022 ಕಳೆದು 2023 ಬರುತ್ತಲಿದೆ ಮತ್ತು ಎಲ್ಲೆಡೆ ಹರ್ಷ ಸಂಭ್ರಮಗಳಿಂದ ಕೂಡಿ ನವೀನ ಸಂಕಲ್ಪಗಳನ್ನು ಮಾಡಿ, ನವೀನ ಯೋಜನೆಗಳನ್ನು ಹಾಕಿಕೊಂಡು ಹೊಸ ವರ್ಷವನ್ನು ಎದುರುಗೊಳ್ಳುವುದು ಬಹುತೇಕ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಬರುವುದು ಸಹಜ:
    1. ಹೊಸವರ್ಷದಲ್ಲಿ ಹೊಸತು ಏನು? ಪರಿಸರದಲ್ಲಿ ದಿನನಿತ್ಯದಲ್ಲಿ ಇಲ್ಲದ ಒಂದು ಬದಲಾವಣೆ ಏನಾದರೂ ಉಂಟೇ?
    2. ನಮ್ಮಲ್ಲಿ ಹೊಸತನವನ್ನು ತುಂಬಿಕೊಳ್ಳುವುದಕ್ಕೆ ಯುಕ್ತವಾದ ಕಾಲ ಯಾವುದು ವರ್ಷದಲ್ಲಿ? ನಾವು ಆಚರಿಸುವ ಹೊಸವರ್ಷವು ನಮ್ಮಲ್ಲಿ ಹೊಸತನವನ್ನು ತಂದುಕೊಳ್ಳಲಿಕ್ಕೆ ಅನುಕೂಲವಾಗಿದೆಯೇ?
    3. ಹೊಸವರ್ಷಕ್ಕೆ ಇಟ್ಟುಕೊಳ್ಳಬೇಕಾದ ಆಚರಣೆಗಳು ಯಾವುವು?

    ಈ ನಿಟ್ಟಿನಲ್ಲಿ ಭಾರತೀಯ ಹೊಸವರ್ಷದ ಆಚರಣೆಗೂ ಪಾಶ್ಚಾತ್ಯ ಹೊಸವರ್ಷದ ಆಚರಣೆಗೂ ಇರುವ ವ್ಯತ್ಯಾಸಗಳನ್ನು ಗಮನಿಸುವುದು ಉಚಿತ.

    ಈಗ ಜಾಗತಿಕವಾಗಿ ವ್ಯವಹಾರಕ್ಕಾಗಿ ಬಳಸುತ್ತಿರುವ ಪಾಶ್ಚಾತ್ಯರ ಕಾಲಸೂಚಿಯನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಎನ್ನುತ್ತಾರೆ. ಇದು ದೀರ್ಘಕಾಲದಲ್ಲಿ ಬಹಳ ಮಾರ್ಪಾಡುಗಳನ್ನು ಹೊಂದುತ್ತ ಈ ರೂಪದಲ್ಲಿ ಬಂದು ನಿಂತಿದೆ. ಮೊದಲು ಇವರು ಅನುಸರಿಸುತ್ತಿದ್ದ ರೋಮನ್ ಕ್ಯಾಲೆಂಡರ್​​ನಲ್ಲಿ ವರ್ಷಕ್ಕೆ ಮಾರ್ಚ್​ನಿಂದ ಆರಂಭವಾಗಿ ಡಿಸೆಂಬರ್​​ನಲ್ಲಿ ಅಂತ್ಯವಾಗುವ ಹತ್ತೇ ತಿಂಗಳುಗಳಿದ್ದವು. ಮಾರ್ಚ್ ತಿಂಗಳಿಂದ ಆರಂಭವಾಗಿ ಹತ್ತು ತಿಂಗಳುಗಳಿದ್ದುದರಿಂದ ಸೆಪ್ಟಂಬರ್ (ಸಂಸ್ಕೃತದ ಸಪ್ತ ಎನ್ನುವ ಸಂಖ್ಯಾವಾಚಕವಾದ) ಏಳನೇ ತಿಂಗಳಾಗಿದ್ದು, ಡಿಸೆಂಬರ್ (ಸಂಸ್ಕೃತದ ದಶ ಎನುವ ಪದದಿಂದ ಹುಟ್ಟಿದ) ಹತ್ತನೇ ಸಂಖ್ಯೆಯ ತಿಂಗಳಾಗಿತ್ತು.

    ಅನಂತರ ನುಮಾ ಪೊಂಪಿಲಿಯಸ್ ಎನ್ನುವ ರಾಜ ಜನವರಿ ಮತ್ತು ಫೆಬ್ರವರಿ ಎನ್ನುವ ಇನ್ನೆರಡು ತಿಂಗಳುಗಳನ್ನು ಸೇರಿಸಿದ. ಮೊದಲು ಜನವರಿ ವರ್ಷಾರಂಭದಲ್ಲಿ ಇದ್ದು ಫೆಬ್ರವರಿ ವರ್ಷದ ಕೊನೆಯಲ್ಲಿ ಬರುತ್ತಿತ್ತು. ಆ ನಂತರ ಫೆಬ್ರವರಿಯನ್ನು ಎರಡನೇ ತಿಂಗಳಾಗಿ ಮಾಡಿ ಡಿಸೆಂಬರ್ ಅನ್ನು ವರ್ಷಾಂತ್ಯವಾಗಿ ಮಾಡಲಾಯಿತು. ಕೊನೆಗೆ ಗ್ರೆಗೋರಿ ಎನ್ನುವ ಪೋಪ್ ಕ್ರಿ.ಶ. 1582ರಲ್ಲಿ ತಂದ ಮಾರ್ಪಾಡಿನಿಂದಾಗಿ ಇಲ್ಲಿಯವರೆವಿಗೂ ಪಾಶ್ಚಾತ್ಯ ಕಾಲಮಾನವು ಗ್ರೆಗೋರಿಯನ್ ಕ್ಯಾಲೆಂಡರ್ ಎಂದು ಕರೆಯಲ್ಪಡುತ್ತದೆ.

    ಒಟ್ಟಾರೆ ವರ್ಷಾಂತ್ಯವು ಅನೇಕ ಮಾರ್ಪಾಡುಗಳನ್ನು ಹೊಂದಿ, ಡಿಸೆಂಬರ್ 31ರ ವರ್ಷಾಂತ್ಯವಾಗಲೀ, ಜನವರಿ 1 ಎನ್ನುವ ವರ್ಷಾರಂಭವಾಗಲೀ ಯಾವುದೇ ವಿಶೇಷವಾದ ಖಗೋಳದ ಸ್ಥಿತಿಯನ್ನು ಸೂಚಿಸುವುದಿಲ್ಲ. ಆದುದರಿಂದ ಪರಿಸರದ ದೃಷ್ಟಿಯಿಂದಲೂ ಹೊಸತನವನ್ನು ತುಂಬಿಕೊಳ್ಳಲಿಕ್ಕೆ ಯಾವುದೇ ವಿಶೇಷತೆಯನ್ನು ಹೊಂದಿಲ್ಲ ಈ ಗ್ರೆಗೋರಿಯನ್ ಹೊಸವರ್ಷ.

    ಇನ್ನು ಮದ್ಯಪಾನ, ಜನಜಂಗುಳಿ, ಗಲಾಟೆಯಿಂದ ಕೂಡಿರುವ ಇಂದಿನ ಹೊಸವರ್ಷಾಚರಣೆ ನಮ್ಮಲ್ಲಿ ನವೀನತೆಯನ್ನು ತಂದುಕೊಳ್ಳುವ ನವೀನ ಸಂಕಲ್ಪ ಯೋಜನೆಗಳ ಚಿಂತನೆ ಅನುಷ್ಠಾನಗಳಿಗೆ ಪೋಷಕ ಎಂದು ಹೇಳಲಾಗುವುದಿಲ್ಲ.

    ಈ ವಿಷಯದಲ್ಲಿ ಮಹರ್ಷಿಗಳ ಚಿಂತನೆ ಹೇಗಿತ್ತು ಎಂದು ಗಮನಿಸಬೇಕು. ಸೌರ ಕಾಲಮಾನ (ಸೂರ್ಯನ ಗತಿಯನ್ನು ಅನುಸರಿಸುವ ಕ್ಯಾಲೆಂಡರ್)ದಲ್ಲಿ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವ ಸಂಕ್ರಮಣ ದಿನವನ್ನು ಯುಗಾದಿಯೆಂದೂ, ಚಾಂದ್ರ ಕಾಲಮಾನ (ಚಂದ್ರನ ಗತಿಯನ್ನು ಅನುಸರಿಸುವ ಕ್ಯಾಲೆಂಡರ್) ನಲ್ಲಿ ವಸಂತ ಋತುವು ಆರಂಭವಾಗುವ ಚೈತ್ರಮಾಸದ ಪ್ರಥಮ ತಿಥಿಯನ್ನು ಯುಗಾದಿಯೆಂದು ಪರಿಗಣಿಸುತ್ತಾರೆ. ಖಗೋಳ ಅಥವಾ ಹೊರ ಪರಿಸರದ ದೃಷ್ಟಿಯಿಂದ ಪ್ರತಿವರ್ಷವೂ ಈ ವರ್ಷಾರಂಭಕ್ಕೆ ಒಂದು ವಿಶೇಷತೆ ಇದೆ.

    ವಸಂತ ಋತು ಆರಂಭವಾದಾಗ ವೃಕ್ಷಗಳೆಲ್ಲ ಹಳೆಯ ಎಲೆಗಳನ್ನು ಉದುರಿಸಿ ಹೊಸಚಿಗುರುಗಳಿಂದ ಕೂಡಿ ನವೋಲ್ಲಾಸವನ್ನು ತುಂಬುವಂತೆ ಕಂಗೊಳಿಸುತ್ತಿರುತ್ತದೆ. ಹೊರ ಪ್ರಕೃತಿಯೇ ನವೀನತೆಯನ್ನು ತುಂಬಿಕೊಂಡಿರುವ ವಾತಾವರಣವು ನಮ್ಮ ನವಸಂಕಲ್ಪ ನವಯೋಜನೆಗಳಿಗೆ ಪೋಷಕವಾಗಿರುತ್ತದೆ. ಅಂದರೆ ಖಗೋಳದ ಸ್ಥಿತಿಯ ದೃಷ್ಟಿಯಿಂದ, ಹೊರ ಪರಿಸರದ ದೃಷ್ಟಿಯಿಂದ ಯುಗಾದಿಯು ಹೊಸವರ್ಷಾರಂಭದ ಆಚರಣೆಗೆ ಸೂಕ್ತ ಕಾಲವಾಗಿದೆ.

    ಇನ್ನು ಆಚರಣೆ ದೃಷ್ಟಿಯಿಂದ ನೋಡಿದರೆ ಅಂದು ತೈಲಾಭ್ಯಂಗ (ಎಣ್ಣೆ ಸ್ನಾನ), ಮಾವು ಬೇವುಗಳಿಂದ ತಳಿರು ತೋರಣಗಳಿಂದ ಮಾಡುವ ಮನೆಯ ಸಿಂಗಾರ, ಹೊಸ ಬಟ್ಟೆಯನ್ನು ಹಾಕಿಕೊಳ್ಳುವುದು, ಬಲೀಂದ್ರ ಪೂಜೆ ಇತ್ಯಾದಿ ದೇವತಾರಾಧನೆ, ಪಂಚಾಂಗ ಪೂಜೆ ಮತ್ತು ಪಂಚಾಂಗ ಶ್ರವಣಗಳು ನಾವು ಹೊಸ ವರ್ಷಕ್ಕೆ ಕಾಲಿಡುವುದಕ್ಕೆ ಪೋಷಕವಾಗಿರುತ್ತವೆ.

    ಗತಿಸಿದ ವರ್ಷದ ಸಿಂಹಾವಲೋಕನ ಮಾಡಿ ಹೊಸವರ್ಷದಲ್ಲಿ ನವೀನ ಸಂಕಲ್ಪ, ಯೋಜನೆಗಳನ್ನು ಮಾಡಿಕೊಳ್ಳುವುದಕ್ಕೆ ಒಂದು ಸಾವಧಾನತೆ ಹಾಗೂ ಪ್ರಸನ್ನತೆ ಬೇಕಾಗುತ್ತದೆ. ಅಂದು ಮಾಡುವ ಅಭ್ಯಂಗ, ಪೂಜೆ ಮೊದಲಾದವು ಈ ಪ್ರಸನ್ನತೆಯನ್ನು ತಂದುಕೊಡುತ್ತದೆ. ಹಾಗೆಯೇ ತಳಿರು ತೋರಣಗಳು, ಹೊಸ ಬಟ್ಟೆಯ ಧರಿಸುವಿಕೆಯು ನವೋಲ್ಲಾಸವನ್ನು ತುಂಬಿಕೊಳ್ಳುವುದಕ್ಕೆ ಪೋಷಕವಾಗಿರುತ್ತದೆ. ಆ ದಿನ ಮಾಡುವ ಪಂಚಾಂಗ ಶ್ರವಣವು ವರ್ಷದ ಸಾಧಕ ಬಾಧಕ ಫಲಗಳನ್ನು ತಿಳಿದು ವಾರ್ಷಿಕ ಯೋಜನೆಗಳನ್ನು ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

    ಶ್ರೀರಂಗ ಮಹಾಗುರುಗಳು ನಾಡೀ ಶಾಸ್ತ್ರದ ದೃಷ್ಟಿಯಿಂದಲೂ ಭಾರತೀಯ ಹಬ್ಬ ಹರಿದಿನಗಳಲ್ಲಿ ನಮ್ಮಲ್ಲಿ ವಿಶೇಷವಾದ ನಾಡೀಗತಿಗಳು ಉಂಟಾಗುತ್ತದೆಯೆಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದರು. ಅಂದರೆ, ಈ ಯುಗಾದಿ ದಿನಗಳಲ್ಲಿ ನಮ್ಮ ದೇಹದಲ್ಲೂ ಒಂದು ವಿಶೇಷವಾದ ಸ್ಥಿತಿಯು ಉಂಟಾಗಿರುತ್ತದೆ. ಹೀಗೆ ಮಹರ್ಷಿಗಳು ತಂದಿರುವ ಯುಗಾದಿಯ ಕಾಲ ಮತ್ತು ಆಚರಣೆಗಳು ಅನೇಕ ಪ್ರಕಾರಗಳಿಂದ ನವೋಲ್ಲಾಸಭರಿತರಾಗಿ ನವೀನತೆಯನ್ನು ತಂದುಕೊಂಡು ಹೊಸವರ್ಷಾರಂಭ ಮಾಡುವುದಕ್ಕೆ ಅತ್ಯಂತ ಸೂಕ್ತವಾಗಿದೆ.

    ಇಂದಿನ ಗ್ರೆಗೋರಿಯನ್ ಹೊಸವರ್ಷಾಚರಣೆಯಲ್ಲಿ ಕಾಲದ ದೃಷ್ಟಿಯಿಂದ ವಿಶೇಷತೆಯೇನೂ ಇಲ್ಲದಿದ್ದರೂ ಹೊಸ ವರ್ಷದ ಬಗ್ಗೆ ಮಹರ್ಷಿ ಸಂಸ್ಕೃತಿಯ ನೋಟವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು, ಅದರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಆಚರಿಸಬಹುದು. ಅಂದರೆ, ನವೋಲ್ಲಾಸಕ್ಕೆ, ನವ ಸಂಕಲ್ಪಕ್ಕೆ ಪೋಷಕವಲ್ಲದ ಪಾನ ಕೂಟ, ಗಲಾಟೆಗಳ ಬದಲು ಸಾವಧಾನತೆ, ಪ್ರಸನ್ನತೆಗಳನ್ನು ತಂದುಕೊಡುವ ದೇವತಾರಾಧನೆ, ದೇವಸ್ಥಾನಗಳ ಯಾತ್ರೆ ಮುಂತಾದ ಆಚರಣೆಗಳನ್ನಿಟ್ಟುಕೊಂಡು ನವ ಸಂಕಲ್ಪ, ನವ ಯೋಜನೆಗಳಲ್ಲಿ ತೊಡಗುವುದು ಹೆಚ್ಚುಸೂಕ್ತ .
    ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

    ಮುವಾಯ್​ಥಾಯ್‌ನಲ್ಲಿ ಶೌರ್ಯ ಮೆರೆದ ಕನ್ನಡಿಗ ಸೂರ್ಯ; ಥಾಯ್ಲೆಂಡ್​ನಲ್ಲಿ ಸೆಣಸಿ ಮಿಂಚಿದ ಸ್ಯಾಂಡಲ್‌ವುಡ್ ನಟನ‌ ಪುತ್ರ

    5 ಕೊಲೆ ಮಾಡಿದ್ದವ 28 ವರ್ಷಗಳ ಬಳಿಕ ಸಿಕ್ಕಿಬಿದ್ದ!; 3 ತಿಂಗಳಿಂದ 5 ವರ್ಷದೊಳಗಿನ 4 ಮಕ್ಕಳನ್ನು ಹತ್ಯೆ ಮಾಡಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts