More

    ಧೋನಿ ನಿವೃತ್ತಿ ಹೊಂದಿದ ದಿನವೇ ವಿದಾಯ ಹೇಳಿದ್ದಕ್ಕೆ ಕಾರಣ ವಿವರಿಸಿದ ಸುರೇಶ್ ರೈನಾ

    ನವದೆಹಲಿ: ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ದಿನದ ಸಂಜೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಎಂದಿನಂತೆ ಇರಲಿಲ್ಲ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ಬಹುದೊಡ್ಡ ಆಘಾತ ನೀಡಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಅವರ ಸಹ-ಆಟಗಾರ ಸುರೇಶ್ ರೈನಾ ಕೂಡ ನಿವೃತ್ತಿ ಪ್ರಕಟಿಸಿ ಮತ್ತಷ್ಟು ಅಚ್ಚರಿ ಹುಟ್ಟಿಸಿದ್ದರು. ಆ ರೀತಿ ಧೋನಿ ನಿವೃತ್ತಿ ಪ್ರಕಟಿಸಿದ ದಿನವೇ ತಾವೂ ವಿದಾಯ ಪ್ರಕಟಿಸಿದ್ದಕ್ಕೆ ಸುರೇಶ್ ರೈನಾ ಇದೀಗ ಸೂಕ್ತ ಕಾರಣಗಳನ್ನು ವಿವರಿಸಿದ್ದಾರೆ.

    ಧೋನಿ ಜತೆಯಲ್ಲೇ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಶಿಬಿರದಲ್ಲಿದ್ದ ಸುರೇಶ್ ರೈನಾ ಕೂಡ ನಿವೃತ್ತಿ ಹೇಳಿದ್ದು ದಿಢೀರ್ ನಿರ್ಧಾರ ಎಂದೇ ಹೆಚ್ಚಿನವರು ಭಾವಿಸಿದ್ದರು. ಆದರೆ ಉತ್ತರ ಪ್ರದೇಶದ 34 ವರ್ಷದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅದೊಂದು ಗಡಿಬಿಡಿಯ ನಿರ್ಧಾರ ಆಗಿರಲಿಲ್ಲ. ಅಲ್ಲದೆ ಧೋನಿ ಜತೆಗೂಡಿಯೇ ಆ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಒಂದು ವರ್ಷ ಪೂರ್ಣ

    ‘ಧೋನಿ ಮತ್ತು ನಾನು ಆಗಸ್ಟ್ 15ರಂದು ವಿದಾಯ ಪ್ರಕಟಿಸಲು ಮೊದಲೇ ನಿರ್ಧರಿಸಿದ್ದೆವು. ಧೋನಿ ಅವರ ಜೆರ್ಸಿ ನಂಬರ್ 7 ಆಗಿದ್ದರೆ, ನನ್ನ ನಂಬರ್ 3. ಅವೆರಡೂ ಜತೆಯಾದಾಗ 73. ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತು 73 ವರ್ಷ ಪೂರ್ಣಗೊಂಡಿತ್ತು. ಹೀಗಾಗಿ ನಮಗೆ ನಿವೃತ್ತಿ ಹೇಳಲು ಅದಕ್ಕಿಂತ ಉತ್ತಮ ದಿನ ಬೇರೆ ಇರಲಿಲ್ಲ. ಧೋನಿ 2004ರ ಡಿಸೆಂಬರ್ 23ರಂದು (ಬಾಂಗ್ಲಾದೇಶ ವಿರುದ್ಧ) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರೆ, ನಾನು 2005ರ ಜುಲೈ 30ರಂದು (ಶ್ರೀಲಂಕಾ ವಿರುದ್ಧ) ಪದಾರ್ಪಣೆ ಮಾಡಿದ್ದೆ. ನಾವಿಬ್ಬರು ಬಹುತೇಕ ಒಂದೇ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಾರಂಭಿಸಿದ್ದೆವು. ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ಜತೆಯಾಗಿ ಆಡುತ್ತಿದ್ದೇವೆ. ಹೀಗಾಗಿ ನಾವಿಬ್ಬರೂ ಜತೆಯಾಗಿ ನಿವೃತ್ತಿ ಹೇಳುವುದು ಸೂಕ್ತವೆನಿಸಿತು’ ಎಂದು ರೈನಾ ವಿವರಿಸಿದ್ದಾರೆ.

    ಧೋನಿ ಗೈರಲ್ಲಿ ಕೆಲ ಬಾರಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶವನ್ನೂ ಪಡೆದುಕೊಂಡಿದ್ದ ಸುರೇಶ್ ರೈನಾ ಒಟ್ಟು 18 ಟೆಸ್ಟ್‌ಗಳಲ್ಲಿ 768 ರನ್, 226 ಏಕದಿನಗಳಲ್ಲಿ 5,615 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 1605 ರನ್ ಬಾರಿಸಿದ್ದಾರೆ. ಭಾರತ ಪರ ಮೂರೂ ಮಾದರಿಯಲ್ಲಿ ಶತಕ ಸಿಡಿಸಿದ ಮೊದಲಿಗರೆಂಬ ಹೆಗ್ಗಳಿಕೆಯೂ ಅವರದಾಗಿದೆ. ಅಲ್ಲದೆ ಟೆಸ್ಟ್ ಪದಾರ್ಪಣೆಯ ಪಂದ್ಯದಲ್ಲಿ ಶತಕ ಸಿಡಿಸಿದ ಅಪರೂಪದ ಬ್ಯಾಟ್ಸ್‌ಮನ್‌ಗಳಲ್ಲೂ ಒಬ್ಬರಾಗಿದ್ದಾರೆ.

    ಜಮೈಕಾ ಅಥ್ಲೀಟ್ ಚಿನ್ನದ ಪದಕ ಗೆಲುವಿಗೆ ನೆರವಾದ ಒಲಿಂಪಿಕ್ಸ್ ಸ್ವಯಂಸೇವಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts