More

    ದೇವರಲ್ಲಿ ಏನು ಕೇಳಬೇಕು?: ಮನೋಲ್ಲಾಸ

    ದೇವರಲ್ಲಿ ಏನು ಕೇಳಬೇಕು?: ಮನೋಲ್ಲಾಸ| ರಾಜಗೋಪಾಲನ್​ ಕೆ.ಎಸ್.

    ಬಹುಜನ ಆಸ್ತಿಕರಿಗೆ ದೇವರನ್ನು ಏನಾದರೂ ಕೇಳಬೇಕಾದ ಪ್ರಸಂಗ ಒದಗಿಬರುತ್ತದೆ. ‘ಸಂಕಟ ಬಂದಾಗ ವೆಂಕಟರಮಣ’ ಎಂಬ ಮಾತು ಪ್ರಸಿದ್ಧವಾದದ್ದೇ. ಆದರೆ ಏನನ್ನು ಹೇಗೆ ಕೇಳಬೇಕೆಂಬುದು ಅವರ ಬುದ್ಧಿಮತ್ತೆಯನ್ನು ಅವಲಂಬಿಸಿರುತ್ತದೆ. ತಾಯಿಯಾದವಳು ಮಗುವನ್ನು ಕೈ ಹಿಡಿದು ರಸ್ತೆಯಲ್ಲಿ ಜೋಪಾನವಾಗಿ ಕರೆದೊಯ್ಯುತ್ತಿರುವಾಗ, ಮಗುವಿಗೆ ತಾಯಿಯ ಕೈ ಬಿಡಿಸಿಕೊಂಡು ರಸ್ತೆಯಲ್ಲಿ ಓಡಿಬಿಡಬೇಕೆಂಬ ಆತುರವಿರುತ್ತದೆ. ಮಗುವಿನ ಹಿತಚಿಂತಕಳಾದ ತಾಯಿ ಇದಕ್ಕೆ ಅವಕಾಶವನ್ನೇ ನೀಡಳು. ಅದೇ ಬೆಳೆದ ಮಗುವೊಂದು ಯಾರೊಡನೆಯೂ ಬೆರೆಯದೇ ಮನೆಯಲ್ಲೇ ಇದ್ದುಬಿಟ್ಟರೆ ತಾಯಿಗೆ ಚಿಂತೆ ಕಾಡುತ್ತದೆ. ನಾಲ್ಕು ಜನರೊಡನೆ ಬೆರೆತು ಆಟವಾಡುವುದು ಮಗುವಿನ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಒಳ್ಳೆಯದೆಂದು ಆಕೆ ಬಲ್ಲಳು. ಆದ್ದರಿಂದ ಬೆಳೆದ ಮಗುವನ್ನು, ‘ಹೋಗು, ಸ್ವಲ್ಪ ಆಟವಾಡಿಕೊಂಡು ಬಾ’ ಎಂದು ಹೊರದಬ್ಬುತ್ತಾಳೆ. ಮಗು ಎಳೆಯ ವಯಸ್ಸಿನವನಾಗಿದ್ದಾಗ ಕೈಯನ್ನು ಬಿಗಿಯಾಗಿ ಹಿಡಿದವಳೂ ಅವಳೇ; ಈಗ ಹೊರದಬ್ಬುವವಳೂ ಅವಳೇ. ಮಗು ಬೆಳೆದು ದೊಡ್ಡವನಾದಾಗಷ್ಟೆ ಅವನಿಗೆ ಅರಿವಾಗುವುದು-ತಾಯಿ ತನ್ನ ಹಿತವನ್ನು ಕಾಯ್ದಳೆಂದು!

    ಕಷ್ಟಕ್ಕೆ ಸಿಲುಕಿದಾಗ, ಮನುಷ್ಯ ತನಗೆ ಆ ಕ್ಷಣಕ್ಕೆ ಯಾವುದು ಪ್ರಿಯವೆನ್ನಿಸುತ್ತದೆಯೋ ಅದನ್ನು ಬೇಕು ಎಂದು ದೇವರನ್ನು ಕೇಳುವುದು ಸಹಜವೇ. ಆದರೆ ತನಗೆ ನಿಜವಾಗಿಯೂ ಹಿತ ಯಾವುದು ಎಂಬ ವಿವೇಚನಾಶಕ್ತಿ ಕೆಲವೊಮ್ಮೆ ಅವನಿಗಿಲ್ಲದೇ ಹೋಗಬಹುದು. ಕೆಲ ರೋಗಿಗಳು ವೈದ್ಯರ ಬಳಿಗೆ ಹೋಗುತ್ತಾರೆ. ವೈದ್ಯರೇ, ‘ನಿಮಗೆ ಮಾತ್ರೆ ಕೊಡುತ್ತೇನೆ’ ಎಂದರೂ, ಕೇಳದೆ, ‘ನನಗೊಂದು ಇಂಜೆಕ್ಷನ್ ಚುಚ್ಚಿಬಿಡಿ, ಆಗಲೇ ಸಮಾಧಾನ’ ಎನ್ನುತ್ತಾರೆ. ರೋಗದ ವಿಚಾರದಲ್ಲಿ ತಾತ್ಕಾಲಿಕ ಶಮನಕ್ಕಿಂತ ರೋಗದ ಸಮೂಲನಾಶವೇ ಒಳ್ಳೆಯದಲ್ಲವೇ? ವಾಂತಿಯ ತೊಂದರೆ ಬಾಧಿಸುತ್ತಿರುವಾಗ, ಉಪಶಮನಕ್ಕಾಗಿ ಬಾಯಿಯನ್ನೇ ಹೊಲಿದುಬಿಡಿ ಎಂದರೆ ಅಪಾಯ! ‘ನನಗೇನು ಒಳ್ಳೆಯದೋ ಅದನ್ನೇ ಮಾಡಿ’ ಎಂದು ವೈದ್ಯರಿಗೇ ಒಪ್ಪಿಸಿಕೊಳ್ಳಬೇಕು. ಕೆಲವೊಮ್ಮೆ ವಮನ ಚೆನ್ನಾಗಿ ಆಗಿ, ದೋಷಗಳೆಲ್ಲ ಹೊರಹೋಗುವಂತೆ ಚಿಕಿತ್ಸೆ ಮಾಡಬಹುದು. ಕೆಲವೊಮ್ಮೆ ಕ್ರಮೇಣ ವಮನವು ನಿಲ್ಲುವಂತೆಯೂ ಚಿಕಿತ್ಸೆ ನೀಡಬಹುದು. ರೋಗಿಯ ಹಿತದೃಷ್ಟಿಯಿಂದ ಏನು ಮಾಡಬೇಕೆಂಬುದನ್ನು ಪರಿಣತ ವೈದ್ಯನು ತಾನೇ ನಿರ್ಧರಿಸಬಲ್ಲ!

    ದೇವರ ಬಳಿಯೂ ಅಷ್ಟೆ. ‘ನಮಗೆ ಯಾವುದು ನಿಜಕ್ಕೂ ಒಳ್ಳೆಯದೋ ಅದನ್ನೇ ಮಾಡಪ್ಪ’ ಎಂದು ದೇವರಲ್ಲಿ ಪ್ರಾರ್ಥಿಸುವುದು ಒಳ್ಳೆಯದು. ಶ್ರೀರಂಗಮಹಾಗುರುಗಳು ಈ ಶ್ಲೋಕವನ್ನು ಉದ್ಧರಿಸುತ್ತಿದ್ದರು-

    ಕ್ವಾಹಮತ್ಯಂತ ದುರ್ಬುದ್ಧಿಃ ಕ್ವಚಾತ್ಮಹಿತ ವೀಕ್ಷಣಂ

    ಯದ್ಧಿತಂ ಮಮ ದೇವೇಶ ತದಾಜ್ಞಾಪಯ ಮಾಧವ

    (ಮಾಧವ! ಅತ್ಯಂತ ದುರ್ಬುದ್ಧಿಯುಳ್ಳ ನಾನು ನನ್ನ ಹಿತವನ್ನು ಹೇಗೆ ತಾನೇ ತಿಳಿದೇನು? ಆದ್ದರಿಂದ ನನ್ನ ಹಿತ ಯಾವುದೋ ಅದನ್ನು ನೀನೇ ಅಪ್ಪಣೆ ಕೊಡಿಸು). ಯಾರು ಹೀಗೆ ದೈವಕ್ಕೆ ಒಪ್ಪಿಸಿಕೊಂಡು ಕೆಲಸ ಮಾಡುತ್ತಾರೋ ಅವರು ಹಗುರವಾಗುತ್ತಾರೆ. ಕಿಂಚಿತ್ತೂ ಆತಂಕವಿಲ್ಲದೆ ಕೆಲಸವನ್ನು ಚೆನ್ನಾಗಿಯೇ ಮಾಡುತ್ತಾರೆ. ‘ದೇವರೇ ನನಗೆ ಇದನ್ನೇ ಕೊಡು’ ಎನ್ನುವುದಕ್ಕಿಂತ ‘ಭಗವಂತ, ನನಗೇನು ಹಿತವೋ ಅದನ್ನೇ ಮಾಡು; ನನಗೆ ಒಳ್ಳೆಯ ಬುದ್ಧಿಯನ್ನು ಕೊಡು’ ಎಂದು ಕೇಳುವುದೇ ಸೂಕ್ತವಲ್ಲವೇ?

    (ಲೇಖಕರು ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts