More

    ಏಷ್ಯಾಕಪ್​ ಟೂರ್ನಿಗೆ ಪಾಕಿಸ್ತಾನಕ್ಕೆ ಹೋಗ್ತೀರಾ? ರೋಹಿತ್​ ಶರ್ಮ ಕೊಟ್ಟ ಉತ್ತರ ಹೀಗಿತ್ತು…

    ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸುವುದಿಲ್ಲ. ಹೀಗಾಗಿ ಟೂರ್ನಿ ಸ್ಥಳಾಂತರಿಸಲಾಗುವುದು ಎಂಬ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಹೇಳಿಕೆ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಈ ಕುರಿತು ಕೇಳಲಾದ ಪ್ರಶ್ನೆಗೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

    ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​ ಶರ್ಮಾ, ನಾವೀಗ ವಿಶ್ವಕಪ್ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇವೆ. ಸದ್ಯಕ್ಕೆ ಇದುವೇ ನಮ್ಮ ಪ್ರಾಮುಖ್ಯತೆಯಾಗಿದೆ. ಮುಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಚಿಂತೆಯಿಲ್ಲ. ಆ ಬಗ್ಗೆ ಯೋಚಿಸುವ ಅಗತ್ಯವೂ ಇಲ್ಲ. ಅದರ ಬಗ್ಗೆ ಬಿಸಿಸಿಐ ನಿರ್ಧಾರ ಮಾಡುತ್ತದೆ. ನಾವು ನಾಳೆ ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯದ ಮೇಲಷ್ಟೇ ಗಮನ ಹರಿಸಿದ್ದೇವೆ ಎಂದು ರೋಹಿತ್​ ತಿಳಿಸಿದರು.

    ಮುಂಬೈನಲ್ಲಿ ಕಳೆದ ಮಂಗಳವಾರ ನಡೆದ ಬಿಸಿಸಿಐ ಎಜಿಎಂ ಬಳಿಕ ಮಾತನಾಡಿದ, ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸುವುದಿಲ್ಲ. ಹೀಗಾಗಿ ಟೂರ್ನಿ ಸ್ಥಳಾಂತರಿಸಲಾಗುವುದು ಎಂದಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಸ ತಗಾದೆ ತೆಗೆದಿದೆ. ಈ ವಿಚಾರದ ಚರ್ಚೆಗೆ ತುರ್ತಾಗಿ ಎಸಿಸಿ ಸಭೆ ಕರೆಯಬೇಕೆಂದು ಮನವಿ ಸಲ್ಲಿಸಿದೆ. ಅಲ್ಲದೆ, 2023ರ ವಿಶ್ವಕಪ್ ಸಹಿತ ಭಾರತದಲ್ಲಿ ನಿಗದಿಯಾಗಿರುವ ಮುಂಬರುವ ಎಲ್ಲ ಐಸಿಸಿ ಟೂರ್ನಿಗಳಿಂದ ಹಿಂದೆ ಸರಿಯುವ ಬಗ್ಗೆಯೂ ಪರೋಕ್ಷ ಬೆದರಿಕೆ ಒಡ್ಡಿದೆ.

    ರೋಹಿತ್​ ಪಡೆ ನಾಳೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದ್ದು, ನಾಳಿನ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಹೈವೋಲ್ಟೇಜ್​ ಪಂದ್ಯಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಲಿದ್ದಾರೆ.

    ಪಾಕ್​ ಪಂದ್ಯದ ಬಳಿಕ ಅ.27ರಂದು ನೆದರ್ಲೆಂಡ್​ ವಿರುದ್ಧ ಭಾರತ ಎರಡನೇ ಪಂದ್ಯವನ್ನು ಆಡಲಿದೆ. ನ.2ರಂದು ಬಾಂಗ್ಲಾದೇಶ ಮತ್ತು ನ.6ರಂದು ಜಿಂಬಾಬ್ವೆ ವಿರುದ್ಧ ಭಾರತ ಸೂಪರ್​ 12 ಹಂತದಲ್ಲಿ ಕಾದಾಡಲಿದೆ. (ಏಜೆನ್ಸೀಸ್​)

    ಭಾರತ ಕ್ರಿಕೆಟ್​ಗೆ ನೀಡಿರುವ ಕೊಡುಗೆಗಳನ್ನು ನಿರ್ಲಕ್ಷಿಸುವಂತಿಲ್ಲ: ಪಾಕ್​ಗೆ ಕೇಂದ್ರ ಕ್ರೀಡಾ ಸಚಿವರ ತಿರುಗೇಟು

    ರೋಜ್​ಗಾರ್​ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ: 75 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ

    ಹೇರ್​ ಪ್ರಾಡಕ್ಟ್​ನಿಂದ ಗರ್ಭಾಶಯದ ಕ್ಯಾನ್ಸರ್​: ಖಾಸಗಿ ಕಂಪನಿ ವಿರುದ್ಧ ದಾವೆ ಹೂಡಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts