More

    ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ಏನೆಂದು ಬರೆಯಲಾಗಿದೆ ಗೊತ್ತೇ?

    ಬೆಂಗಳೂರು: ಐಪಿಎಲ್ ಎಂಬ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಟೂರ್ನಿಯಲ್ಲಿ ಆಡುವ ಆಟಗಾರರು, ಕೋಚ್‌ಗಳು, ಅಧಿಕಾರಿಗಳು, ಫ್ರಾಂಚೈಸಿ ಮಾಲೀಕರು ಮತ್ತು ಟೂರ್ನಿ ಆಯೋಜಿಸುವ ಬಿಸಿಸಿಐ ಆಡಳಿತಾಧಿಕಾರಿಗಳು ಕೋಟಿ ಕೋಟಿ ಲೆಕ್ಕದಲ್ಲಿ ಹಣ ಸಂಪಾದಿಸುತ್ತಾರೆ. ಆದರೆ ಇಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿರುವುದು ಕ್ರಿಕೆಟ್ ಮತ್ತು ಅದರ ಗೆಲುವಿನಿಂದ ಸಿಗುವ ಪ್ರಶಸ್ತಿ. ಐಪಿಎಲ್ 13ನೇ ಆವೃತ್ತಿ ಇದೀಗ ಲೀಗ್ ಹಂತ ಮುಕ್ತಾಯಗೊಳಿಸಿ ಪ್ಲೇಆಫ್​ ಹಂತ ತಲುಪಿದ್ದು, ಮಿರುಗುವ ಟ್ರೋಫಿ ವಿಶೇಷ ಆಕರ್ಷಣೆ ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್​, ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್​ ಪೈಕಿ ಒಂದು ತಂಡ ಈ ಬಾರಿ ಟ್ರೋಫಿಗೆ ಮುತ್ತಿಕ್ಕುವುದು ಖಚಿತವಾಗಿದೆ. 1983ರಲ್ಲಿ ಭಾರತ ಜಯಿಸಿದ ಏಕದಿನ ವಿಶ್ವಕಪ್ ಟ್ರೋಫಿಯನ್ನೇ ಬಹುತೇಕ ಹೋಲುವ ಈ ಚಿನ್ನದ ಹೊಳಪಿ ಟ್ರೋಫಿ ಮೇಲೆ ಸಂಸ್ಕೃತದಲ್ಲಿ ಏನೋ ಬರೆದಿದೆ. ಅದು ಏನು ಗೊತ್ತೇ?

    ಐಪಿಎಲ್ ಟ್ರೋಫಿ ಮೇಲೆ ಬರೆದಿರುವ ಸಂಸ್ಕೃತದ ಶ್ಲೋಕ ಇಡೀ ಟೂರ್ನಿಯ ಧ್ಯೇಯವನ್ನೇ ಪ್ರತಿಬಿಂಬಿಸುವಂತಿದೆ. ‘ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ’ ಎಂದು ಐಪಿಎಲ್ ಟ್ರೋಫಿಯ ಮೇಲೆ ಭಾರತದ ನಕ್ಷೆಯ ಪಕ್ಕದಲ್ಲಿ ಸಂಸ್ಕೃತದಲ್ಲಿ ಬರೆಯಲಾಗಿದೆ. ‘ಪ್ರತಿಭೆಗೆ ಅವಕಾಶ ಸಿಗುವ ವೇದಿಕೆ’ ಎಂಬುದು ಇದರ ಅರ್ಥ.

    ಈ ಒಂದು ವಾಕ್ಯದಲ್ಲಿ ಐಪಿಎಲ್ ಟೂರ್ನಿಯ ಮಹತ್ವವನ್ನು ಸಾರಲಾಗುತ್ತಿದೆ. ಯಾಕೆಂದರೆ ಐಪಿಎಲ್ ಟೂರ್ನಿ ಈಗ ದೇಶದ ಪ್ರತಿಭಾನ್ವಿತ ಕ್ರಿಕೆಟಿಗರಿಗೊಂದು ಉತ್ತಮ ವೇದಿಕೆಯಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಮಿಂಚಿದರೆ ರಾಷ್ಟ್ರೀಯ ತಂಡದ ಬಾಗಿಲು ಕೂಡ ತೆರೆಯುತ್ತದೆ ಎಂಬುದು ಈಗಾಗಲೆ ಸಾಬೀತಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇದನ್ನು ಸಾಬೀತುಪಡಿಸಿದ್ದಾರೆ.

    ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ವರ್ಷವಿಡೀ ಆಡಿ ಮಿಂಚಿದರೂ ಕೆಲವೊಮ್ಮೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವುದಿಲ್ಲ. ಆದರೆ ಐಪಿಎಲ್ ಟೂರ್ನಿಯಲ್ಲಿ ಒಂದೇ ಪಂದ್ಯದಲ್ಲೂ ಅಪೂರ್ವ ಆಟವಾಡಿ ಎಲ್ಲರ ಗಮನ ಸೆಳೆದರೆ ರಾಷ್ಟ್ರೀಯ ತಂಡದ ಅವಕಾಶ ತೆರೆದ ದೃಷ್ಟಾಂತಗಳಿವೆ.

    ಸದ್ಯ ಐಪಿಎಲ್ ಟೂರ್ನಿಯಲ್ಲಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ಯಜುವೇಂದ್ರ ಚಾಹಲ್ ಮುಂತಾದವರು ಈ ಹಿಂದೆ ದೇಶೀಯ ಕ್ರಿಕೆಟ್ ಟೂರ್ನಿಗಿಂತ ಹೆಚ್ಚಾಗಿ ಐಪಿಎಲ್ ಟೂರ್ನಿಯ ಗಮನಾರ್ಹ ನಿರ್ವಹಣೆಯ ಮೂಲಕವೇ ರಾಷ್ಟ್ರೀಯ ತಂಡದ ಕದ ತಟ್ಟಿದವರು. ಹೀಗಾಗಿ ಐಪಿಎಲ್ ಟ್ರೋಫಿ ಮೇಲೆ ಬರೆದಿರುವ ಸಂಸ್ಕೃತದ ವಾಕ್ಯ ಪ್ರತಿ ವರ್ಷ ನಿಜವಾಗುತ್ತಲೇ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts