More

    ಕಾಣೆಯಾದ ಪತಿ ಸಿಕ್ಕಾಗ ಆದದ್ದೇನು?

    ಕಾಣೆಯಾದ ಪತಿ ಸಿಕ್ಕಾಗ ಆದದ್ದೇನು? ಆಸಿಫ್ (28) ಪಟ್ಟಣವೊಂದರಲ್ಲಿ ಪತ್ನಿ ನಾಜನೀನ್ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ವಂತಮನೆಯಲ್ಲಿ ವಾಸಿಸುತ್ತಿದ್ದ. ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಗೆಳೆಯನೊಬ್ಬ ಆನ್​ಲೈನ್ ಜೂಜಿನ ಪರಿಚಯ ಮಾಡಿಕೊಟ್ಟ. ಆರಂಭದಲ್ಲಿಯೇ ಭಾರಿ ಪ್ರಮಾಣದ ಹಣವನ್ನು ಗೆದ್ದ ಕಾರಣ ಆಸಿಫ್ ಕಾಲಕ್ರಮೇಣ ಜೂಜಾಟದ ದಾಸನಾದ. ಈ ಚಟ ಎಷ್ಟು ತೀವ್ರವಾಯಿತೆಂದರೆ ಆತ ಜೂಜಿಗೆ ಹಣ ಹೊಂದಿಸಲು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಅಡವಿಡತೊಡಗಿದ. ಕಡೆಗೆ ತನ್ನ ಮನೆಯನ್ನೂ 30 ಲಕ್ಷ ರೂಪಾಯಿಗೆ ಅಡವಿಟ್ಟು ಆ ಹಣವನ್ನೂ ಸೋತ.

    ಪತ್ನಿ ಮತ್ತು ಮಕ್ಕಳ ಗೋಳನ್ನು ನೋಡಿಯೂ ಬುದ್ಧಿ ಕಲಿಯದ ಆಸಿಫ್ ಒಂದಲ್ಲ ಒಂದು ದಿನ ತಾನು ಶ್ರೀಮಂತನಾಗುವೆನೆಂದು ಕನಸುಕಾಣುತ್ತ ಲೋನ್​ಆಪ್​ಗಳ ಮೂಲಕ ಸಾಲ ಪಡೆದು ಜೂಜಾಟ ಮುಂದುವರಿಸಿದ. ಸಾಲವನ್ನು ತೀರಿಸದಾದಾಗ ಆಪ್ ಕಂಪನಿಗಳ ರೌಡಿಗಳು ಅವನನ್ನು ಕಂಡಕಂಡಲ್ಲಿ ನಿಲ್ಲಿಸಿ ಕೊಲೆಬೆದರಿಕೆ ಹಾಕತೊಡಗಿದರು. ಅವರ ಒತ್ತಡ ತಾಳಲಾರದ ಆಸಿಫ್ 2015ರಲ್ಲಿ ಯಾರಿಗೂ ಹೇಳದೇ ಪರಾರಿಯಾದ. ಒಂದು ವಾರ ಅವನಿಗಾಗಿ ಕಾದ ನಾಜನೀನ್ ಪೊಲೀಸ್ ಠಾಣೆಗೆ ಹೋಗಿ ದೂರಿತ್ತಳು. ಪೊಲೀಸರು ದೂರನ್ನು ದಾಖಲಿಸಿ ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿಯಿತ್ತರು. ಮೂರು ತಿಂಗಳ ತನಿಖೆ ಬಳಿಕ ಆಸಿಫ್ ಪತ್ತೆಯಾಗಲಿಲ್ಲವೆಂದು ಕಡತವನ್ನು ಮುಚ್ಚಿದರು. ಮುಂದೆ ನಾಜನೀನ್ ಮಕ್ಕಳೊಡನೆ ತನ್ನ ಅಣ್ಣನಿದ್ದ ಊರಿಗೆ ಹೋಗಿ ಅವನ ಆಶ್ರಯವನ್ನು ಪಡೆದು ಬೇರೆಯವರ ಮನೆಕೆಲಸಗಳನ್ನು ಮಾಡಿಕೊಂಡು ಜೀವನ ನಿರ್ವಹಿಸತೊಡಗಿದಳು. ಏಳು ವರ್ಷಗಳಾದರೂ ಆಸಿಫ್ ಪತ್ತೆಯಾಗದಿದ್ದಾಗ ಅವನು ಸತ್ತನೆಂದು ಎಲ್ಲರೂ ಭಾವಿದರು.

    2022ರ ಒಂದು ದಿನ ನಾಜನೀನ್ ಮೊಬೈಲ್​ಫೋನ್​ನಲ್ಲಿ ವಿಡಿಯೋಗಳನ್ನು ನೋಡುತ್ತಿದ್ದಾಗ ಸಿನಿಮಾ ಹಾಡೊಂದಕ್ಕೆ ತೃತೀಯಲಿಂಗಿಗಳು ಮಾಡುತ್ತಿದ್ದ ಸಮೂಹನೃತ್ಯವೊಂದು ಅವಳಿಗೆ ಕಂಡಿತು. ಆ ನೃತ್ಯದಲ್ಲಿ ನರ್ತಿಸುತ್ತಿದ್ದ ನೀಲಿಸೀರೆ ತೊಟ್ಟ ತೃತೀಯಲಿಂಗಿಯೊಬ್ಬಳು ನೋಡಲು ನಾಪತ್ತೆಯಾದ ಆಸಿಫ್​ನ ಪಡಿಯಚ್ಚಿನಂತೆ ಕಾಣುತ್ತಿದ್ದಳು. ನಾಜನೀನ್ ವಿಡಿಯೋದ ಆ ನಿರ್ದಿಷ್ಟ ಭಾಗವನ್ನು ಸುಮಾರು ಹತ್ತು ಬಾರಿ ವೀಕ್ಷಿಸಿದಳು. ಮೈಮಾಟ, ಹಾವಭಾವ, ಮುಖಭಾವದಲ್ಲಿ ನೀಲಿಸೀರೆಯವಳು ತನ್ನ ಗಂಡನಲ್ಲದೆ ಬೇರಾರೂ ಅಲ್ಲ ಎಂದು ಅವಳಿಗನಿಸಿತು. ಮಾರನೆಯ ದಿನ ಆಕೆ ತನ್ನ ಸೋದರನಿಗೆ ಅದೇ ವಿಡಿಯೋ ತೋರಿಸಿದಳು. ‘ನಿನ್ನ ಗಂಡ ಸತ್ತು ಬಹಳ ದಿನಗಳಾಗಿವೆ. ಇನ್ನೂ ನೀನವನ ಹಂಬಲ ಬಿಟ್ಟಿಲ್ಲ. ಈ ವಿಡಿಯೋದಲ್ಲಿರುವ ತೃತೀಯಲಿಂಗಿ ನಿನ್ನ ಗಂಡನಲ್ಲ’ ಎಂದು ಆತ ತಾತ್ಸಾರದಿಂದ ಹೇಳಿದ.

    ನಾಜನೀನ್ ತಾವು ಈ ಮೊದಲು ವಾಸವಿದ್ದ ಊರಿಗೆ ಹೋದಳು. ಮೈದುನನ ಮನೆಗೆ ಹೋಗಿ ಅವನಿಗೆ ಆ ವಿಡಿಯೋ ತೋರಿಸಿದಳು. ಆತ ನೀಲಿಸೀರೆಯಾಕೆ ನೋಡಲು ಆಸಿಫ್​ನಂತೆ ಇರುವುದು ಸತ್ಯ ಎಂದ. ಆದರೂ ಅದನ್ನು ಇನ್ನೊಬ್ಬರಿಂದ ಪುಷ್ಟೀಕರಿಸಬೇಕೆಂದು ನಾಜನೀನ್​ಗೆ ಹೇಳಿ ಅವಳನ್ನು ಸೋದರಮಾವನ ಮನೆಗೆ ಕರೆದೊಯ್ದ. ಆತನೂ ನಾಜನೀನ್​ಳ ಅನುಮಾನವನ್ನು ಸಮರ್ಥಿಸಿ ಪೊಲೀಸರಿಗೆ ಈ ವಿಷಯ ತಿಳಿಸಬೇಕೆಂದು ಸೂಚಿಸಿದ. ಆಗ ನಾಜನೀನ್ ತಾನು ದೂರಿತ್ತಿದ್ದ ಪೊಲೀಸ್ ಠಾಣೆಗೆ ಮೈದುನನ ಜತೆಗೆ ಹೋಗಿ ತಾನು ಈ ಹಿಂದೆ ದಾಖಲಿಸಿದ್ದ ಕಾಣೆಯಾದ ವ್ಯಕ್ತಿ ಪ್ರಕರಣದ ಮರುತನಿಖೆ ಮಾಡಲು ಕೋರಿದಳು. ಪೊಲೀಸ್ ಠಾಣೆಯಲ್ಲಿ ಆಕೆಯ ಅಹವಾಲನ್ನು ಯಾರೂ ಕಿವಿಗೆ ಹಾಕಿಕೊಳ್ಳದೆ ಆಕೆಯನ್ನು ಮುಂದೆ ಸಾಗಹಾಕಿದರು. ಛಲಬಿಡದ ನಾಜನೀನ್ ತನ್ನ ಪರಿಚಯದ ರಾಜಕಾರಣಿಯೊಬ್ಬರ ಸಹಾಯದಿಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂರ್ಪಸಿದಳು. ಹೇಗಾದರೂ ಮಾಡಿ ಪ್ರಕರಣದ ಮರುತನಿಖೆ ಮಾಡಿ ಗಂಡನನ್ನು ಹುಡುಕಿಕೊಡುವಂತೆ ದುಂಬಾಲು ಬಿದ್ದಳು.

    ಹಿರಿಯ ಅಧಿಕಾರಿಯ ಸೂಚನೆಯಂತೆ ಪ್ರಕರಣಕ್ಕೆ ಮರುಜೀವ ಬಂದಿತು. ಪ್ರಕರಣದ ತನಿಖಾಧಿಕಾರಿ ಆಸಿಫ್ ಕಾಣೆಯಾಗಿದ್ದ ಪ್ರಕರಣದ ಕಡತದಲ್ಲಿದ್ದ ಆಸಿಫ್​ನ ಫೋಟೋವನ್ನು ವಿಡಿಯೋದಲ್ಲಿದ್ದ ನೀಲಿಸೀರೆಯ ತೃತೀಯಲಿಂಗಿಯ ಜತೆ ಹೋಲಿಸಿ ನೋಡಿದರು. ಅವರಿಗೂ ಇಬ್ಬರ ಮುಖದಲ್ಲಿ ಹೋಲಿಕೆಯಿದ್ದದ್ದು ಕಂಡಿತು. ಆಗವರು ಸದರಿ ವಿಡಿಯೋವನ್ನು ಯಾರು ಯೂಟ್ಯೂಬ್​ಗೆ ಅಪ್​ಲೋಡ್ ಮಾಡಿದರೆಂದು ಪರಿಶೀಲಿಸಿದಾಗ ಡಾಲಿ ಎನ್ನುವ ತೃತೀಯಲಿಂಗಿ ಅದನ್ನು ಅಪ್​ಲೋಡ್ ಮಾಡಿರುವಳೆಂದು ತಿಳಿಯಿತು. ಆನಂತರ ತನಿಖಾಧಿಕಾರಿ ತಮ್ಮ ಪಟ್ಟಣದಲ್ಲಿರುವ ತೃತೀಯಲಿಂಗಿಗಳಿಗೆ ಆ ವಿಡಿಯೋ ತೋರಿಸಿ ಅದನ್ನು ತಯಾರಿಸಿದ ಡಾಲಿ ಯಾರೆಂದು ವಿಚಾರಿಸಿದರು. ಅವರಲ್ಲೊಬ್ಬಳು, ‘ಡಾಲಿ ಎನ್ನುವವಳು ನಮ್ಮ ಜನಾಂಗದ ಲೀಡರ್, ಆದರೆ ಅವಳು ಎಲ್ಲಿರುತ್ತಾಳೆ ಎಂದು ಗೊತ್ತಿಲ್ಲ’ ಎಂದಳು. ಇನ್ನೊಬ್ಬಳು, ‘ಈ ಸಮಾರಂಭ ಪಕ್ಕದ ಜಿಲ್ಲೆಯಲ್ಲಿ ನಡೆದದ್ದು, ಅಲ್ಲಿ ಕೇಳಿ’ ಎಂದಳು.

    ಆ ಮಾಹಿತಿ ಮೇರೆಗೆ ತನಿಖಾಧಿಕಾರಿ ನೆರೆಯ ಜಿಲ್ಲೆಗೆ ಹೋಗಿ ಅಲ್ಲಿನ ತೃತೀಯಲಿಂಗಿಗಳನ್ನು ಭೇಟಿ ಮಾಡಿದರು. ಅವರ ಸಹಾಯದಿಂದ ಡಾಲಿಯನ್ನು ಪತ್ತೆ ಮಾಡಿದರು. ತಾನು ತೃತೀಯಲಿಂಗಿಗಳ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಡಾಲಿ, ತಾನೇ ಆ ವಿಡಿಯೋ ಮಾಡಿದ್ದು ಎಂದಳು. ಆದರೆ ನೀಲಿಸೀರೆಯ ತೃತೀಯಲಿಂಗಿ ಯಾರೆಂದು ತನಗೆ ತಿಳಿದಿಲ್ಲ. ಆದರೆ, ‘ನೀವೊಮ್ಮೆ ಈ ಬಗ್ಗೆ ತೃತೀಯಲಿಂಗಿ ಶಮಾಳನ್ನು ವಿಚಾರಿಸಿ’ ಎಂದು ಹೇಳಿ ಆಕೆಯ ವಿಳಾಸ ಕೊಟ್ಟಳು.

    ಶಮಾಳನ್ನು ಸಂರ್ಪಸಿದಾಗ ಆಕೆಯೂ ನೀಲಿಸೀರೆಯಾಕೆ ಯಾರೆಂದು ತನಗೆ ಗೊತ್ತಿಲ್ಲವೆಂದು ಹೇಳಿ ಆ ನೃತ್ಯದಲ್ಲಿ ನರ್ತಿಸಿದ್ದ ಮುಮ್ತಾಜ್ ಎನ್ನುವವಳನ್ನು ಸಂರ್ಪಸಲು ಹೇಳಿ ಅವಳ ವಿವರ ನೀಡಿದಳು. ಮುಮ್ತಾಜ್ ಆ ಜಿಲ್ಲೆಯ ಇನ್ನೊಂದು ತಾಲ್ಲೂಕಿನಲ್ಲಿದ್ದಳು. ಅವಳನ್ನು ಪೊಲೀಸರು ಭೇಟಿಯಾದಾಗ, ಆಕೆ ನೀಲಿಸೀರೆಯವಳನ್ನು ತನ್ನ ಜತೆಯೇ ವಾಸಿಸುತ್ತಿರುವ ಹೇಮಾ ಎಂದು ತಿಳಿಸಿ ಪೊಲೀಸರನ್ನು ತನ್ನ ಮನೆಗೆ ಕರೆದೊಯ್ದು ಹೇಮಾಳನ್ನು ಪರಿಚಯಿಸಿದಳು. ಪೊಲೀಸರನ್ನು ನೋಡಿದ ಕೂಡಲೇ ವಿಚಲಿತಳಾದ ಹೇಮಾ, ಯಾವ ಪ್ರಶ್ನೆಗಳಿಗೂ ಸೂಕ್ತ ಉತ್ತರ ಕೊಡಲಿಲ್ಲ. ತಾನು ಪೂರ್ವದಲ್ಲಿ ಆಸಿಫ್​ನಾಗಿರಲಿಲ್ಲ, ಪೊಲೀಸರು ತಪ್ಪು ತಿಳಿವಳಿಕೆ ಹೊಂದಿದ್ದಾರೆಂದೂ ವಾದಿಸಿದಳು. ಆದರೆ ಪೊಲೀಸರು ಅವಳ ಮಾತುಗಳನ್ನು ನಂಬಲಿಲ್ಲ. ಆಗವರು ಮುಮ್ತಾಜ್​ಳನ್ನು ಸಹಾಯಕ್ಕೆ ಬರಬೇಕೆಂದು ವಿನಂತಿಸಿ ಅವಳ ಸಹಾಯದಿಂದ ಹೇಮಾಳನ್ನು ಠಾಣೆಗೆ ಕರೆತಂದರು.

    ಹೇಮಾ ಠಾಣೆಗೆ ಬಂದ ನಂತರ ತನಿಖಾಧಿಕಾರಿ ನಾಜನೀನ್ ಮತ್ತವಳ ಮಕ್ಕಳಲ್ಲದೆ ಆಸಿಫ್​ನ ಸೋದರ ಮತ್ತಿತರರನ್ನು ಠಾಣೆಗೆ ಕರೆಸಿದರು. ಅವರೆಲ್ಲರೂ ಹೇಮಾಳನ್ನು ನೋಡಿದೊಡನೆ ‘ಈಕೆಯೇ ನಮ್ಮ ಆಸಿಫ್’ ಎಂದು ಗುರುತಿಸಿದರು. ತನ್ನ ಪೂರ್ವಜೀವನದ ಮಡದಿಮಕ್ಕಳು ಮತ್ತು ಸಂಬಂಧಿಕರನ್ನು ನೋಡಿದ ಕೂಡಲೇ ಹೇಮಾ ದುಃಖ ತಾಳಲಾರದೆ ಬಿಕ್ಕಿಬಿಕ್ಕಿ ಅಳತೊಡಗಿದಳು. ಅವರೆಲ್ಲರಿಂದಲೂ ತಾನು ದೂರವಾದದ್ದಕ್ಕೆ ಅವರ ಕ್ಷಮೆ ಕೇಳಿದಳು. ಅದೇ ಊರಿನಲ್ಲಿದ್ದ ಈ ಹಿಂದಿನ ಆಸಿಫ್ ತಾನೇ ಎಂದು ಒಪ್ಪಿದಳು. ನಂತರ ಪೊಲೀಸರ ಮುಂದೆ ಹೀಗೆ ಹೇಳಿದಳು:

    ‘ಸಾಲಗಾರರ ಕಾಟ ಹೆಚ್ಚಾದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ರೈಲುಹಳಿಗಳ ಬಳಿ ಹೋದೆ. ಎರಡು ಗಂಟೆ ಕಾದರೂ ಯಾವ ರೈಲೂ ಬಾರದಾದಾಗ ನಿಲ್ದಾಣಕ್ಕೆ ಹೋದೆ. ಅಲ್ಲಿ ತೃತೀಯಲಿಂಗಿಗಳ ಗುಂಪೊಂದು ಪ್ಲಾಟ್​ಫಾರ್ವಿುನ ಮೇಲೆ ಕುಳಿತಿತ್ತು. ಆ ಗುಂಪಿನಲ್ಲಿದ್ದವಳೊಬ್ಬಳು ನನ್ನ ಬಳಿಗೆ ಬಂದು, ನಿನಗೆ ಯಾವುದೋ ಚಿಂತೆ ಕಾಡುತ್ತಿದೆ, ಎಲ್ಲ ಚಿಂತೆಗಳಿಗೂ ಪರಿಹಾರವಿದೆ, ನೀನೇನನ್ನು ಮಾಡಬೇಕೆಂದಿದ್ದೀಯೋ ಅದನ್ನು ಮಾಡಬೇಡ ಎಂದಳು. ನನ್ನ ಮನದಲ್ಲಿ ಇದ್ದದ್ದನ್ನು ಊಹಿಸಿದ್ದ ಆಕೆಯ ಮಾತುಗಳನ್ನು ಕೇಳಿ ನನಗೆ ಷಾಕ್ ಆಯಿತು. ಅವಳು ಅಪರಿಚಿತಳಾದರೂ ಅವಳ ಮುಂದೆ ಮನಬಿಚ್ಚಿ ಎಲ್ಲ ಸಮಸ್ಯೆಗಳನ್ನೂ ಹೇಳಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲೆಂದೇ ರೈಲುನಿಲ್ದಾಣಕ್ಕೆ ಬಂದಿದ್ದಾಗಿ ತಿಳಿಸಿದೆ. ಆಗ ರೇಷ್ಮಾ ಎಂದು ಪರಿಚಯಿಸಿಕೊಂಡ ಆಕೆ ನನ್ನನ್ನು ತಮ್ಮೊಡನೆ ಬರಲು ಹೇಳಿ ರೈಲಿನಲ್ಲಿ ನನ್ನನ್ನು ತನ್ನ ಮನೆಗೆ ಕರೆದೊಯ್ದಳು.

    ವಾರವೊಂದರ ನಂತರ, ನಿನ್ನನ್ನು ನಾನು ಕೂಲಂಕಷವಾಗಿ ಗಮನಿಸಿರುವೆ. ನಿನ್ನಲ್ಲಿ ಹೆಣ್ಣಿನ ಗುಣಗಳಿವೆ. ನಿನಗೇನಾದರೂ ಹೆಣ್ಣಾಗಬೇಕೆಂಬ ಮನಸ್ಸಾಗಿತ್ತೇ? ಎಂದು ರೇಷ್ಮಾ ಕೇಳಿದಳು. ಅವಳ ಪ್ರಶ್ನೆ ಕೇಳಿ ನಾನು ಹೌಹಾರಿದೆ. ಹೌದು, ನನಗೆ ಈ ಹಿಂದೆ ಹೆಣ್ಣಾಗಬೇಕೆಂಬ ಬಯಕೆ ಹಲವಾರು ಬಾರಿ ಬಂದಿದ್ದು ನಿಜ, ಆದರೆ ಸಮಾಜಕ್ಕೆ ಹೆದರಿ ಆ ಆಸೆಯನ್ನು ಅದುಮಿ ಹಿಡಿದೆ ಎಂದೆ. ಹಾಗೆ ಮಾಡಬೇಡ, ನೀನು ಲಿಂಗಪರಿವರ್ತನೆ ಮಾಡಿಸಿಕೋ, ನಮ್ಮಂತೆ ಆಗಿ ನಮ್ಮೊಡನೆಯೇ ಇರು, ಎಂದಳು. ನಾನು ಅವಳ ಸಲಹೆಗೆ ಒಪ್ಪಿದೆ. ರೇಷ್ಮಾ ನನ್ನನ್ನು ಮುಂದಿನ ವಾರವೇ ಕೇರಳದ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನ್ನ ಲಿಂಗಪರಿವರ್ತನೆ ಮಾಡಿಸಿದಳು. ಅಂದಿನಿಂದ ನಾನು ತೃತೀಯಲಿಂಗಿಯಾಗಿರುವೆ. ನನ್ನ ಈಗಿನ ಜೀವನ ಚೆನ್ನಾಗಿದೆ. ನನಗೆ ನನ್ನ ಪೂರ್ವಜೀವನಕ್ಕೆ ಮರಳಲು ಇಷ್ಟವಿಲ್ಲ’.

    ಅವನ ಮಾತುಗಳನ್ನು ಕೇಳಿದ ನಾಜನೀನ್​ನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಿತು. ‘ನನ್ನ ಗಂಡನಾಗಿದ್ದ ಆಸಿಫ್ ಜೀವದಿಂದಿರುವುನ್ನು ನೋಡಿ ನನಗೆ ಸಮಾಧಾನವಾಗಿದೆ. ಈಗ ಆತ ಹೇಮಾಳಾಗಿದ್ದು ನಮ್ಮೊಡನೆ ಇರಲು ಬಂದರೆ ಅವಳಿಗೂ ಸುಖವಿರುವುದಿಲ್ಲ, ನಮಗೂ ಮುಜುಗರ ಉಂಟಾಗುತ್ತದೆ. ಅವಳು ಹೇಮಾಳಾಗಿಯೇ ಎಲ್ಲಿದ್ದರೂ ಸುಖವಾಗಿರಲಿ ಎಂದು ಅಲ್ಲಾನಲ್ಲಿ ಪ್ರಾರ್ಥನೆ ಮಾಡುತ್ತೇನೆ’ ಎನ್ನುತ್ತ ಮಕ್ಕಳನ್ನು ಕರೆದುಕೊಂಡು ಠಾಣೆಯಿಂದ ಹೊರನಡೆದಳು.

    ವಿಧಿ ಯಾರ್ಯಾರಿಗೆ ಏನನ್ನು ಮಾಡುತ್ತದೆ ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿಯೇ ಡಿ.ವಿ.ಜಿಯವರು ಜೀವನವನ್ನು ಇಸ್ಪೀಟ್ ಎಲೆಗಳಾಟಕ್ಕೆ ಹೋಲಿಸಿ ಹೀಗೆನ್ನುತ್ತಾರೆ: ‘ಎಲೆಕಟ್ಟನಾಗಾಗ ಕಲಿಸಿಕೊಡುವುದೆ ಸೃಷ್ಟಿ, ಬಳಿಕೆಲೆಯ ಗತಿಯೆಂತೊ ಎಲ್ಲಿ ಸೇರುವುದೋ, ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ ಅಲೆಯುವೆವು ನಾವಂತು ಮಂಕುತಿಮ್ಮ’.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

     

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts