More

    ಬಾಂಗ್ಲಾದೇಶ ಪ್ರವಾಸಕ್ಕೆ ವೆಸ್ಟ್‌ಇಂಡೀಸ್ ಕ್ರಿಕೆಟಿಗರ ಹಿಂದೇಟು..!

    ಅಂಟಿಗುವಾ: ಕರೊನಾ ವೈರಸ್ ಭೀತಿಯಿಂದಾಗಿ 2020ರಲ್ಲಿ ಇಡೀ ಜಾಗತಿಕ ಕ್ರೀಡಾಲೋಕವೇ ತತ್ತರಿಸಿತು. ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳು ಕೂಡ ಪುನಾರಂಭಗೊಳ್ಳುತ್ತಿವೆ. ಕಳೆದ ನಾಲ್ಕು ತಿಂಗಳಿಂದ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ಆಯೋಜನೆಗೊಂಡಿವೆ. ಕ್ರಿಕೆಟ್ ಚಟುವಟಿಕೆ ಸರಾಗವಾಗಿ ಸಾಗುತ್ತಿವೆ ಎನ್ನುವಷ್ಟರಲ್ಲೇ ವೆಸ್ಟ್ ಇಂಡೀಸ್ ಆಟಗಾರರು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ. ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್, ಏಕದಿನ ತಂಡದ ನಾಯಕ ಕೈರಾನ್ ಪೊಲ್ಲಾರ್ಡ್, ಡರೇನ್ ಬ್ರಾವೊ ಸೇರಿದಂತೆ 12 ಆಟಗಾರರು ಕರೊನಾ ವೈರಸ್ ಭೀತಿ ಹಾಗೂ ವೈಯಕ್ತಿಕ ಕಾರಣ ನೀಡಿ ಬಾಂಗ್ಲಾ ಪ್ರವಾಸದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

    ಇದನ್ನೂ ಓದಿ: ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಗೊಂಡ ರವೀಂದ್ರ ಜಡೇಜಾ, 

    ಮುಂಬರುವ ಬಾಂಗ್ಲಾದೇಶ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ತಂಡ 2 ಟೆಸ್ಟ್, 3 ಏಕದಿನ ಪಂದ್ಯಗಳ ಸರಣಿ ಆಡಬೇಕಿದೆ. ಇದಕ್ಕಾಗಿ ಕ್ರಿಕೆಟ್ ಮಂಗಳವಾರ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಆದರೆ, 12 ಮಂದಿ ಆಟಗಾರರು ವೈಯಕ್ತಿಕ ಹಾಗೂ ಕೋವಿಡ್-19ರ ಭಯದಿಂದ ಪ್ರವಾಸದಿಂದ ಹಿಂದೆ ಉಳಿಯಲು ನಿರ್ಧರಿಸಿದ್ದಾರೆ. ಅವರೆಂದರೆ, ಜೇಸನ್ ಹೋಲ್ಡರ್, ಕೈರಾನ್ ಪೊಲ್ಲಾರ್ಡ್, ಡರೇನ್ ಬ್ರಾವೊ, ಶಮರ ಬ್ರೂಕ್ಸ್, ರೋಸ್ಟನ್ ಚೇಸ್, ಶೆಲ್ಡನ್ ಕಟ್ರೆಲ್, ಏವಿನ್ ಲೆವಿಸ್, ಶೈ ಹೋಪ್, ಶಿಮ್ರೋನ್ ಹೆಟ್ಮೆಯರ್, ನಿಕೋಲಸ್ ಪೂರನ್, ಫ್ಯಾಬಿಯನ್ ಅಲೆನ್ ಹಾಗೂ ಶೇನ್ ಡೋವ್ರಿಚ್ ಪ್ರವಾಸದಿಂದ ಹೊರಗುಳಿಯುತ್ತಿರುವ ಆಟಗಾರರು ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ಕ್ರೇಗ್ ಬ್ರಾಥ್‌ವೇಟ್ ಹಾಗೂ ಜರ್ಮೈನ್ ಬ್ಲಾಕ್‌ವುಡ್ ಟೆಸ್ಟ್ ತಂಡದ ನಾಯಕ ಹಾಗೂ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಏಕದಿನ ತಂಡಕ್ಕೆ ಜೇಸನ್ ಮೊಹಮದ್ ನಾಯಕನಾಗಿ ಹಾಗೂ ಸುನೀಲ್ ಅಂಬ್ರಿಸ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ವೆಸ್ಟ್ ಇಂಡೀಸ್ ತಂಡ ಜನವರಿ 10 ರಂದು ಢಾಕಾಗೆ ಬರಲಿದ್ದು ಫೆಬ್ರವರಿ 15 ರವರೆಗೆ ಉಳಿಯಲಿದೆ. ಚಿತ್ತಗಾಂಗ್ ಹಾಗೂ ಢಾಕಾದಲ್ಲಿ ಪಂದ್ಯಗಳು ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts