More

    ಭಾರತವನ್ನು ಲಾಕ್​ಡೌನ್ ಮಾಡಿದ ಮೋದಿಯವರನ್ನು ದೂಷಿಸಿ, ಚೀನಾವನ್ನು ಹೊಗಳಿದ ಇಮ್ರಾನ್​ ಖಾನ್​; ಪಾಕ್​ನಲ್ಲಿ ಯುವಕರೇ ಕರೊನಾ ವಿರುದ್ಧ ಹೋರಾಡ್ತಾರಂತೆ..!

    ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ಸುಮಾರು 1700 ಮಂದಿ ಕರೊನಾ ಸೋಂಕಿತರು ಇದ್ದು, ಇಲ್ಲಿಯವರೆಗೆ 18 ಜನ ಮೃತಪಟ್ಟಿದ್ದಾರೆ. ಆದರೂ ಅಲ್ಲಿಯ ಪ್ರಧಾನಿ ಇಮ್ರಾನ್​ ಖಾನ್​ ಲಾಕ್​ಡೌನ್​ ಮಾಡುವ ನಿರ್ಣಯವನ್ನು ಕೈಗೊಂಡಿಲ್ಲ. ಅಷ್ಟೇ ಅಲ್ಲ, ಭಾರತವನ್ನು ಲಾಕ್​ಡೌನ್​ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಿದ್ದಾರೆ. ವುಹಾನ್​ನಲ್ಲಿ ಕರೊನಾ ವೈರಸ್​ ನವೆಂಬರ್​​ನಲ್ಲಿಯೇ ಪತ್ತೆಯಾದರೂ ಅದನ್ನು ಮುಚ್ಚಿಟ್ಟು ಇಡೀ ಜಗತ್ತಿಗೇ ಹರಡುವಂತೆ ಮಾಡಿದ ಚೀನಾವನ್ನು ಹೊಗಳಿದ್ದಾರೆ.

    ಸೋಮವಾರ ತಮ್ಮ ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್​, ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಲಾಕ್​ಡೌನ್​ ಘೋಷಣೆ ಮಾಡಿದ್ದಾರೆ. ಬಳಿಕ ದೇಶದ ಜನರ ಕ್ಷಮೆ ಕೇಳಿದರೂ ಪ್ರಯೋಜನವಿಲ್ಲ. ಯಾಕೆಂದರೆ ಲಾಕ್​ಡೌನ್​ನಿಂದಾಗಿ ಅನೇಕರು ಕಷ್ಟಪಡುವಂತಾಗಿದೆ ಎಂದಿದ್ದಾರೆ. ಅಲ್ಲದೆ, ಲಾಕ್​ಡೌನ್​ ಮಾಡಿದಾಕ್ಷಣ ವೈರಸ್​ ಪ್ರಸರಣ ನಿಲ್ಲುತ್ತದೆ ಎಂದು ನನಗೆ ನಂಬಿಕೆಯಿಲ್ಲ ಎಂದು ಇಮ್ರಾನ್ ಖಾನ್​ ತಿಳಿಸಿದ್ದಾರೆ.

    ಆದರೆ, ವುಹಾನ್​ನಲ್ಲಿ ಲಾಕ್​ಡೌನ್​ ಮಾಡಿ ಕರೊನಾ ವೈರಸ್​ ನಿಯಂತ್ರಣ ಮಾಡಿದ ಚೀನಾದ ಕ್ರಮವನ್ನು ಶ್ಲಾಘಿಸಿದ್ದಾರೆ.
    ಕರೊನಾ ವೈರಸ್​ ವಿರುದ್ಧ ಹೋರಾಡಲು ಪಾಕಿಸ್ತಾನ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ ಇಮ್ರಾನ್​, ಪಾಕಿಸ್ತಾನ ಅಮೆರಿಕದಷ್ಟು ಸಿರಿವಂತ ದೇಶವಲ್ಲ. ನಮ್ಮ ಮೊದಲ ಶಕ್ತಿಯೆಂದರೆ ನಾವು ಇಮಾನ್​ (ದೈವಿಶಕ್ತಿ)ನಲ್ಲಿ ಇಟ್ಟ ನಂಬಿಕೆ. ಎರಡನೇ ಬಹುದೊಡ್ಡ ಶಕ್ತಿಯೆಂದರೆ ಯುವಜನತೆ. ಕರೊನಾ ವೈರಸ್​ ವಿರುದ್ಧ ಹೋರಾಡಲು ನಾವು ಇದೇ ಎರಡು ಬಲಪ್ರಯೋಗ ಮಾಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿರುವ ಯುವಜನರು ಕರೊನಾ ವಿರುದ್ಧ ಹೋರಾಡಲು ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

    ಕರೊನಾ ವೈರಸ್​ ಬಗ್ಗೆ ನಿಖರ ಡಾಟಾ ನೀಡಲು ಇನ್ನೂ ಒಂದು ವಾರ ಸಮಯ ಬೇಕು ಎಂದು ಹೇಳಿದ ಪ್ರಧಾನಿ ಇಮ್ರಾನ್​, ವೃದ್ಧರು ಮತ್ತು ಈಗಾಗಲೇ ಬೇರೆ ಕಾಯಿಲೆಗಳನ್ನು ಹೊಂದಿರುವವರಿಗೆ ಬಹುಬೇಗನೇ ಕರೊನಾ ವೈರಸ್​ ಸೋಂಕು ತಗುಲುತ್ತಿದೆ. ಅವರದಲ್ಲಿ ಶೇ.4-5ಜನರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಕಾಣುತ್ತಿದೆ. ಉಳಿದವರಿಗೆ ಅಷ್ಟೊಂದು ಗಂಭೀರ ಪ್ರಮಾಣದಲ್ಲಿ ಅಟ್ಯಾಕ್ ಆಗುತ್ತಿಲ್ಲ ಎಂದಿದ್ದಾರೆ.

    ಕರೊನಾ ವಿರುದ್ಧ ಹೋರಾಟಕ್ಕೆ ಪಾಕ್​ನಲ್ಲಿ ಪರಿಹಾರ ನಿಧಿ ತೆರೆಯಲಾಗಿದೆ. ಅಕೌಂಟ್​ ಡಿಟೇಲ್​ಗಳೆಲ್ಲ ಮೊಬೈಲ್​ನಲ್ಲೇ ಸಿಗುತ್ತವೆ. ಅದು ಇನ್ನೆರಡು ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

    ಹಳ್ಳಿಗಳಲ್ಲಿ ಇರುವವರು ತಮಗೆ ರೇಷನ್​ ಅಗತ್ಯ ಇದ್ದರೆ ಒಂದೆಡೆ ನೋಂದಾಯಿಸಬೇಕು. ಹಾಗೇ ಯಾರಾದರೂ ನೆರವು ನೀಡಲು ಇಚ್ಛಿಸಿದರೆ ಅಂಥವರು ಇನ್ನೊಂದು ಕಡೆ ರಿಜಿಸ್ಟರ್ ಮಾಡಬೇಕು ಎಂದು ಹೇಳಿರುವ ಇಮ್ರಾನ್​ ಖಾನ್​, ಇದಕ್ಕಾಗಿ ಸರ್ಕಾರಿ ವೆಬ್​ಸೈಟ್​, ಹೆಲ್ಪ್​ಲೈನ್​ಗಳನ್ನು ತೆರೆಯಲಾಗಿದೆಯಾ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಸಿಲ್ಲ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts