More

    ಕಾರ್ಮಿಕರಿಗೆ ಶನಿವಾರದ ಇಕ್ಕಟ್ಟು, ದಿನಗೂಲಿ ನೌಕರರ ಪೇಚಾಟ

    ಮಂಗಳೂರು: ಶನಿವಾರ… ಮನೆಯಲ್ಲಿ ಪುಟ್ಟ ಮಕ್ಕಳು ಕೆಲಸಕ್ಕೆ ಹೋದ ತಮ್ಮ ತಂದೆ, ತಾಯಿ ಏನಾದರೂ ತಿಂಡಿ ತರುವರೋ ಎಂದು ಕಾತರದಿಂದ ಕಾಯುವ ದಿನ. ವಾರದ ದಿನಸಿ ತರಲು ಹಣ ಹೊಂದಿಸಲು ಹೆಣಗಾಡುವ, ಆರು ದಿನ ತಾವು ಮಾಡಿದ ಕೆಲಸದ ವೇತನ ಪಡೆಯುವ ದಿನ. ಆದರೆ ವೀಕೆಂಡ್ ಕರ್ಫ್ಯೂ ಘೋಷಣೆಯಾಗಿದ್ದರಿಂದ ಶನಿವಾರದ ಖುಷಿ ಹಲವರಲ್ಲಿ ಮಾಯವಾಗುತ್ತಿದೆ.

    ಕರೊನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ರಾತ್ರಿ ಕರ್ಫ್ಯೂ ಜತೆಗೆ ಶನಿವಾರ, ಭಾನುವಾರ ಎರಡು ದಿನ ಪೂರ್ತಿ ಲಾಕ್‌ಡೌನ್ ಘೋಷಿಸಿದೆ. ಇದರಿಂದ ಪರೋಕ್ಷವಾಗಿ ವಾರದ ವೇತನ ಪಡೆಯುವ ಕಾರ್ಮಿಕರಿಗೆ ಹೊಡೆತ ಬಿದ್ದಂತಾಗಿದೆ. ಕಾರ್ಮಿಕರು ಒಂದು ದಿನದ ಕೆಲಸ ಕಳೆದುಕೊಳ್ಳುವ ಜತೆಗೆ ಆ ದಿನದ ವೇತನದಿಂದ ನೆಚ್ಚಿಕೊಂಡಿರುವ ಯಾವುದಾದರೂ ಖರೀದಿ, ಸಾಲ ಇತ್ಯಾದಿಗಳಿಗೆ ಹೆಣಗಾಡಬೇಕಾದ ಸ್ಥಿತಿ ಬರಲಿದೆ. ಇದೇ ವೇಳೆ ಗುತ್ತಿಗೆದಾರರೂ ಕಷ್ಟಕ್ಕೆ ಸಿಲುಕಲಿದ್ದು ಕಾರ್ಮಿಕರು ಒಂದು ದಿನ ಕೆಲಸ ಮಾಡದೆ ಹೋದರೆ ಆ ದಿನದ ನಷ್ಟದ ಪಾಲು ತಾವೇ ಹೊರಬೇಕಾಗುತ್ತದೆ.

    ರಾಜ್ಯ ಸರ್ಕಾರದ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಇದರಿಂದ ಕಾರ್ಮಿಕರಿಗೆ ಅನುಕೂಲವಾಗಿದ್ದರೂ ಶನಿವಾರ ಮತ್ತು ಭಾನುವಾರ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ರಜೆ ಅನಿವಾರ್ಯ.

    ವಾರಾಂತ್ಯ ಕರ್ಫ್ಯೂ ಹೇರಿದ್ದರೂ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ದುರಸ್ತಿ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ಕಾರ್ಮಿಕರು ಗಮ್ಯ ಸ್ಥಾನಕ್ಕೆ ಹೋಗುವುದು ಹೇಗೆ? ವಾರಾಂತ್ಯ ಕರ್ಫ್ಯೂ ಎಂದ ಮೇಲೆ ಬಸ್ ಸಂಚಾರ ಬಹುತೇಕ ಬಂದ್ ಆಗುತ್ತದೆ. ಇತರೆ ಖಾಸಗಿ ವಾಹನಗಳೂ ಸಾಗುವಂತಿಲ್ಲ. ಹೀಗಾದರೆ ದಿನಗೂಲಿ ನೌಕರರು ಕೆಲಸಕ್ಕೆ ಹೋಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಬಸ್ ಇಲ್ಲದ ಕಾರಣ ಗಮ್ಯ ಸ್ಥಾನಕ್ಕೆ ಬಾಡಿಗೆ ವಾಹನಗಳಲ್ಲಿ ಕರೆದುಕೊಂಡು ಬರಬೇಕು. ಬಾಡಿಗೆ ವಾಹನದಲ್ಲೂ ಹೆಚ್ಚುವರಿ ಕಾರ್ಮಿಕರನ್ನು ಹಾಕುವಂತಿಲ್ಲ. ಹೆಚ್ಚು ಕಾರ್ಮಿಕರು ಸೇರುವುದಕ್ಕೆ ನಿರ್ಬಂಧವೂ ಇರುವುದರಿಂದ ಸೀಮಿತ ಸಂಖ್ಯೆಯಲ್ಲಿ ಕಾಮಗಾರಿ ನಡೆಸುವುದು ಅನಿವಾರ್ಯ. ಶಾಲಾ ಕಾಲೇಜುಗಳಿಗೆ ರಜೆ, ಇತರ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಅವಕಾಶ ಇರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾದರೆ ಅನೇಕ ಮಾರ್ಗಗಳಲ್ಲಿ ಬಸ್ ಸಂಚಾರವೂ ಕಡಿಮೆಯಾಗಲಿದೆ.

    ಸಂಬಳ ಪಾವತಿ ಸಮಸ್ಯೆ: ಪ್ರತಿ ಶನಿವಾರ ಕಟ್ಟಡ ಮತ್ತು ನಿರ್ಮಾಣ ಕಾಮಗಾರಿ ಕೈಗೊಳ್ಳುವ ಕಾರ್ಮಿಕರಿಗೆ ಸಂಬಳ ನೀಡುವ ಪದ್ಧತಿ ಇದ್ದು, ಗುತ್ತಿಗೆದಾರರು ಶುಕ್ರವಾರವೇ ಹಣ ಪಾವತಿಸಬೇಕಿದೆ. ಬ್ಯಾಂಕ್ ಖಾತೆ ಹೊಂದಿರುವವರಿಗೆ ಸಂಬಳ ಹಣ ನೇರ ಖಾತೆಗೆ ಜಮೆ ಮಾಡಲು ಕೆಲವು ಗುತ್ತಿಗೆದಾರರು ಚಿಂತನೆ ನಡೆಸುತ್ತಿದ್ದಾರೆ. ಗೋಡಂಬಿ ಕಾರ್ಖಾನೆಗೆ ತೆರಳುವವರು, ಬೀಡಿ ಕಟ್ಟುವವರು, ವಾರದ ಸಂಬಳದ ಮೇಲೆ ಅವಲಂಬಿತವಾಗಿರುವ ಇತರೆ ಕೆಲವರು ಈ ಬಾರಿ ಶನಿವಾರದ ದಿನ ಕೆಲಸಕ್ಕೆ ಹೋಗಲಾಗದೆ ಚಡಪಡಿಸುವಂತಾಗಿದೆ.

    ಮೆಸ್ಕಾಂ ಕೆಲಸಗಾರರ ಪಾಡು: ಒಂದೆಡೆ ಗಾಳಿ, ಮಳೆ, ಸಿಡಿಲಿಗೆ ಅಲ್ಲಲ್ಲಿ ತುಂಡಾಗುವ ತಂತಿಗಳು, ಕಂಬಗಳು, ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳು ಆಗುತ್ತಲೇ ಇವೆ. ಪ್ರತಿದಿನ ರಾತ್ರಿ 9ರಿಂದ ಕರ್ಫ್ಯೂ ವಿಧಿಸಿದರೆ ಅಥವಾ ಶನಿವಾರ ದಿನಪೂರ್ತಿ ಕರ್ಫ್ಯೂ ಹಾಕಿದರೆ ಮೆಸ್ಕಾಂ ಕೆಲಸಗಾರರು ದೊಡ್ಡ ಪ್ರಮಾಣದಲ್ಲಿ ಕಷ್ಟಪಡಬೇಕಾಗುತ್ತದೆ. ರಾತ್ರಿ 9 ಗಂಟೆ ನಂತರ ಮಳೆಯಿಂದ ವಿದ್ಯುತ್ ವ್ಯತ್ಯಯವಾದರೆ ಅದನ್ನು ಸರಿಪಡಿಸಲು ಕೆಲಸಗಾರರು ತೆರಳಿದರೆ ಅಲ್ಲಲ್ಲಿ ತಡೆದು ನಿಲ್ಲಿಸುವ ಪೊಲೀಸರು ಒಂದು ಕಡೆಯಾದರೆ, ಶನಿವಾರ ದಿನವಿಡೀ ಕರ್ಫ್ಯೂ ಹೇರಿದರೆ ಕಾರ್ಮಿಕರು ಚಹಾ ಕುಡಿಯಲು, ಊಟ ಮಾಡಲು ಎಲ್ಲಿಗೆ ಹೋಗಬೇಕು? ವಿದ್ಯುತ್ ಎಲ್ಲರಿಗೂ ಬೇಕು, ಆದರೆ ಅದಕ್ಕೆ ದುಡಿಯುವ ಕೆಲಸಗಾರರ ಬಗ್ಗೆ ಯಾರೂ ಗಮನಿಸುವುದಿಲ್ಲ ಎಂದು ಗುತ್ತಿಗೆದಾರರೊಬ್ಬರು ಗಮನ ಸೆಳೆದಿದ್ದಾರೆ.

    ಸರ್ಕಾರ ಅರೆಬರೆ ಲಾಕ್‌ಡೌನ್, ಕರ್ಫ್ಯೂ ಮಾಡಿ ಜನರಿಗೆ ತೊಂದರೆ ಕೊಡುವ ಬದಲು ಅಗತ್ಯ ವಸ್ತುಗಳೂ ಸೇರಿಸಿ ಪೂರ್ತಿ ಲಾಕ್‌ಡೌನ್ ಘೋಷಿಸಲಿ. ಈಗಿನಂತೆ ದಿನಕ್ಕೊಂದು ನಿಯಮ ತಂದರೆ ದಿನಗೂಲಿ ಕಾರ್ಮಿಕರು ಏನು ಮಾಡಬೇಕು? ಹೋಟೆಲ್‌ನಲ್ಲಿ ಊಟ, ತಿಂಡಿಗೆಂದು ಮರುದಿನಕ್ಕೆ ವಸ್ತುಗಳನ್ನು ತರಬೇಕೋ ಬೇಡವೋ ಎಂದು ರಾತ್ರಿ ತನಕವೂ ಸ್ಪಷ್ಟತೆ ಇರುವುದಿಲ್ಲ. ಕೆಲಸದ ಸ್ಥಳಕ್ಕೆ ತೆರಳಲು ಬಸ್ ಇಲ್ಲದಿದ್ದರೆ ಆ ದಿನದ ದುಡಿಮೆ, ಸಂಬಳ ಇಲ್ಲದಂತಾಗುತ್ತದೆ. ಇದರಿಂದ ಇಡೀ ಕುಟುಂಬವೇ ಕಷ್ಟ ಅನುಭವಿಸಬೇಕು.

    ಪ್ರಶಾಂತ್ ಮೇಗಿನಹಿತ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts