More

    Web Exclusive | ವಿಲೇವಾರಿಯಾಗದ 61 ಸಾವಿರ ಸಕಾಲ ಅರ್ಜಿ; ಜನಸಾಮಾನ್ಯರಿಗೆ ತಪ್ಪದ ಕಚೇರಿ ಅಲೆದಾಟ

    | ಜಗದೀಶ ಹೊಂಬಳಿ ಬೆಳಗಾವಿ

    ವಿಳಂಬ ಮಾಡದೆ ಸಾರ್ವಜನಿಕ ಅರ್ಜಿಗಳ ವಿಲೇವಾರಿ ಮಾಡಲು ಸರ್ಕಾರ ‘ಸಕಾಲ ಯೋಜನೆ’ ಆರಂಭಿಸಿದೆ. ಆದರೆ, ರಾಜ್ಯಾದ್ಯಂತ ಸಕಾಲದಡಿ ವಿವಿಧ ಇಲಾಖೆಗಳಿಗೆ ಬಂದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಧೂಳು ತಿನ್ನುತ್ತಿವೆ. ಹೀಗಾಗಿ ಜನಸಾಮಾನ್ಯರು ಕಚೇರಿ ಅಲೆಯುವಂತಾಗಿದೆ.

    ಕಂದಾಯ ಇಲಾಖೆ, ನಗರಾಭಿವೃದ್ಧಿ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್, ಆಹಾರ ಮತ್ತು ನಾಗರಿಕ ಸರಬರಾಜು, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ವಿುಕ ಇಲಾಖೆ, ಅಂಗವಿಕಲರ ಕಲ್ಯಾಣಾಭಿವೃದ್ಧಿ ಇಲಾಖೆ ಸೇರಿ ರಾಜ್ಯದ ವಿವಿಧ ಇಲಾಖೆಗಳಲ್ಲಿ 61,109 ಅರ್ಜಿಗಳ ವಿಲೇವಾರಿ ಬಾಕಿ ಉಳಿದಿವೆ. ಕಂದಾಯ ಇಲಾಖೆಯಲ್ಲಿ ಅತಿ ಹೆಚ್ಚು 16,481 ಅರ್ಜಿ ಬಾಕಿ ಉಳಿದಿದೆ. ಬೆಳಗಾವಿ ಜಿಲ್ಲೆಯಲ್ಲಿ 7,476 ಅರ್ಜಿಗಳು ಹಲವು ತಿಂಗಳಿಂದ ವಿಲೇವಾರಿಯಾಗಿಲ್ಲ. ಬೆಳಗಾವಿ ತಾಲೂಕಿನಲ್ಲಿ ಹೆಚ್ಚು ಅರ್ಜಿ ಬಾಕಿ ಇವೆ. ಉಳಿದಂತೆ ಮೂಡಲಗಿ, ರಾಯಬಾಗ, ನಿಪ್ಪಾಣಿಯಲ್ಲಿ ಅರ್ಜಿಗಳ ವಿಲೇವಾರಿ ಸ್ವಲ್ಪ ವಿಳಂಬವಾಗುತ್ತಿದೆ.

    ಆನ್​ಲೈನ್ ವ್ಯವಸ್ಥೆಯಲ್ಲೂ ವಿಳಂಬ

    ‘ಇಂದು-ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪಲ್ಲ’ ಎನ್ನುವುದು ಸಕಾಲ ಯೋಜನೆಯ ಘೋಷವಾಕ್ಯವಾಗಿದೆ. ಆದರೆ, ಸಕಾಲದಡಿ ಸಲ್ಲಿಕೆಯಾದ ಬಹಳಷ್ಟು ಅರ್ಜಿಗಳು ವರ್ಷ ಕಳೆದರೂ ವಿಲೇವಾರಿಯಾಗುತ್ತಿಲ್ಲ. ಸಕಾಲ ಸೇವೆಯ ಎಲ್ಲ ಪ್ರಕ್ರಿಯೆಯೂ ಆನ್​ಲೈನ್ ಮೂಲಕವೇ ನಿರ್ವಹಿಸಲಾಗುತ್ತಿದೆ. ಆದರೂ ಅರ್ಜಿ ವಿಲೇವಾರಿ ವಿಳಂಬವಾಗುತ್ತಿವೆ. ಪ್ರಮುಖವಾಗಿ ಸಾರಿಗೆ ಇಲಾಖೆಯಲ್ಲಿ 11,151, ನಗರಾಭಿವೃದ್ಧಿ ಇಲಾಖೆ 6,248, ಉನ್ನತ ಶಿಕ್ಷಣ ಇಲಾಖೆಯಲ್ಲಿ 4,662, ವಿದ್ಯುತ್ ಸರಬರಾಜು ಇಲಾಖೆಯಲ್ಲಿ 4,214 ಸಕಾಲ ಅರ್ಜಿ ಬಾಕಿ ಉಳಿದಿವೆ.

    ಕ್ರಮಕ್ಕೆ ಒತ್ತಾಯ

    ಸಕಾಲದಡಿ 98 ಇಲಾಖೆ ಸೇರಿಸಲಾಗಿದೆ. ವಿವಿಧ ಇಲಾಖೆಗಳ ಕಚೇರಿಯ ಕೇಸ್ ವರ್ಕರ್​ಗಳು ರಜೆ ಮಾಡಿದರೆ ಅಥವಾ ಹುದ್ದೆ ಖಾಲಿ ಇದ್ದರೆ, ಸಿಬ್ಬಂದಿ ಕೊರತೆಯಿಂದಾಗಿ ಅರ್ಜಿ ವಿಲೇವಾರಿ ಬಾಕಿ ಉಳಿಯುತ್ತದೆ. ಅಲ್ಲದೆ, ಸಕಾಲ ಸೇವೆ ಸಂಪೂರ್ಣ ಗಣಕೀಕೃತವಾಗಿದ್ದರಿಂದ ಸರ್ವರ್ ಸಮಸ್ಯೆಯಿಂದಲೂ ವಿಲೇವಾರಿಗೆ ವಿಳಂಬವಾಗುತ್ತದೆ ಎನ್ನುವುದು ಅಧಿಕಾರಿಗಳ ಸಬೂಬು. ಅದೇನೇ ಇದ್ದರೂ ಸಕಾಲ ಅಕಾಲವಾಗದಂತೆ ಸೇವೆ ನೀಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎನ್ನುತ್ತಾರೆ ಅರ್ಜಿ ಸಲ್ಲಿಸಿರುವ ಸಾರ್ವಜನಿಕರು.

    ಅರ್ಜಿ ಬಾಕಿ ಇರುವ ಜಿಲ್ಲಾವಾರು ಮಾಹಿತಿ

    ಬೆಂಗಳೂರು 14,186, ಬೆಂಗಳೂರು ಗ್ರಾಮಾಂತರ 1,003, ಹಾಸನ 3,278, ಮಂಡ್ಯ 3,154, ಮೈಸೂರು 4,405, ಬೀದರ 2,492, ವಿಜಯಪುರ 2,400, ಬಾಗಲಕೋಟೆ 2,038, ತುಮಕೂರು 1,780, ಚಿತ್ರದುರ್ಗ 1,769, ಶಿವಮೊಗ್ಗ 1,734, ಬಳ್ಳಾರಿ 1,471, ಕಲಬುರ್ಗಿ 1,392, ಧಾರವಾಡ 1,238, ದಕ್ಷಿಣ ಕನ್ನಡ 1,211, ಚಿಕ್ಕಮಗಳೂರು 1,157, ಹಾವೇರಿ 1,154, ಚಿಕ್ಕಬಳ್ಳಾಪುರ 1,055, ರಾಯಚೂರು 1,040, ಕೊಪ್ಪಳ 893, ರಾಮನಗರ 733, ಚಾಮರಾಜನಗರ 854, ಯಾದಗಿರಿ 604, ಉಡುಪಿ 592, ಉತ್ತರ ಕನ್ನಡ 475, ಕೊಡಗು 460, ಕೋಲಾರ 433, ಗದಗ 367, ದಾವಣಗೆರೆ ಜಿಲ್ಲೆಯಲ್ಲಿ 339 ಅರ್ಜಿ ಬಾಕಿ ಉಳಿದಿವೆ.

    ಸಕಾಲದಡಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಸರಿಯಾಗಿಯೇ ಆಗುತ್ತಿವೆ. ಅರ್ಜಿ ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

    | ಅಶೋಕ ದುಡಗುಂಟಿ ಅಪರ ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts