More

    ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದೆ ಹಿರಿಜೀವ

    -ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

    ಇಳಿವಯಸ್ಸಿನಲ್ಲಿ ನೆಮ್ಮದಿಯಿಂದ ಕಾಲಕಳೆಯಬೇಕಾದ ವೃದ್ಧರೊಬ್ಬರು ತಮ್ಮ ಜಮೀನಿನ ಹಕ್ಕುಪತ್ರಕ್ಕಾಗಿ ಸರ್ಕಾರಿ ಇಲಾಖೆ ಅಧಿಕಾರಿಗಳ ಬಳಿ ಅಲೆದಾಡುವ ಸ್ಥಿತಿ ಎದುರಾಗಿದೆ. ಕೃಷಿ ಭೂಮಿ ಮಾರಾಟ ಮಾಡಿ ಪಟ್ಟಣ ಅರಸಿಕೊಂಡು ಹೋಗುವ ಕೃಷಿಕರ ಮಧ್ಯೆ ಕೃಷಿಯನ್ನೇ ನಂಬಿ ಅದರ ಅಭಿವೃದ್ಧಿಗೆ ಯಾವುದೇ ಸೌಲಭ್ಯ ಪಡೆಯಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಧರ್ಣಪ್ಪ ಗೌಡ ಅವರು 1960ರಿಂದ ಪಟ್ರಮೆ ಗ್ರಾಮದ ಸರ್ಕಾರಿ ಜಾಗದಲ್ಲಿ ಅಕ್ರಮ ಸ್ವಾಧೀನತೆಯೊಂದಿಗೆ ಕೃಷಿ ಮಾಡಿಕೊಂಡು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದರು. ಕೆಲವರ್ಷ ಬಳಿಕ ಅರಣ್ಯ ಇಲಾಖೆ ಜಾಗವನ್ನು ಗೇರು ಅಭಿವೃದ್ಧಿ ನಿಗಮಕ್ಕೆ ನೀಡಿ ಗೇರು ತೋಟ ಅಭಿವೃದ್ಧಿಪಡಿಸುವ ಯೋಜನೆ ಕೈಗೊಂಡಿತ್ತು. ಆ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಸರ್ಕಾರದ ಆದೇಶದ ಮೇರೆಗೆ ಅರಣ್ಯ ಪ್ರದೇಶದ ಅಕ್ರಮ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾಯ್ದೆ ಜಾರಿಗೆ ಬಂದಿತ್ತು. ಕಾಡು ಕಡಿಯುತ್ತಿದ್ದಂತೆ ಭೀಕರ ಮಂಗನ ಕಾಯಿಲೆ ಗ್ರಾಮಕ್ಕೆ ವಕ್ಕರಿಸಿತ್ತು. ಪಟ್ರಮೆಯಲ್ಲಿ ಬಹಳಷ್ಟು ಮಂದಿ ಮಂಗನ ಕಾಯಿಲೆಗೆ ತುತ್ತಾಗಿದ್ದರು. ಹಾಗಾಗಿ ಕಾಡು ಕಡಿಯುವ ಪ್ರಕ್ರಿಯೆಗೆ ತಡೆ ಬಿತ್ತು. ಇದರಿಂದ ಅರಣ್ಯ ಎಂದಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದ ಕೆಲವರು ಅಲ್ಲಿಯೇ ಉಳಿಯುವಂತಾಗಿತ್ತು.

    ಕೃಷಿಕರು ತಾವು ಕೃಷಿ ಮಾಡುತ್ತಿದ್ದ ಜಮೀನನ್ನು ತಮಗೆ ಬಿಟ್ಟುಕೊಡುವಂತೆ ಹಠ ಹಿಡಿದು ಅದು ಸಂಘರ್ಷಕ್ಕೆ ಕಾರಣವಾಗಿ 1993ರಲ್ಲಿ ವಿಶೇಷ ಅಧಿಕಾರಿಗಳ ನೇಮಕದ ಮೂಲಕ ಅಲ್ಲಿನ 65 ಕೃಷಿಕರ ಜಮೀನು, ಅರಣ್ಯದಿಂದ ಬೇರ್ಪಟ್ಟು ರೈತರ ಸ್ವಾಧೀನಕ್ಕೆ ಒಳಪಟ್ಟಿತು. ಅದರಲ್ಲಿ ಧರ್ಣಪ್ಪ ಗೌಡರ ಜಮೀನು ಕೂಡ ಸೇರಿದ್ದು, ಆ ಬಗ್ಗೆ ದಾಖಲೆ ಕೂಡ ಹೊಂದಿದ್ದಾರೆ.

    4.70 ಎಕರೆ ಬದಲು 2.70 ಎಕರೆ

    ಧರ್ಣಪ್ಪ ಗೌಡರು ಸರ್ಕಾರಿ ಸೌಲಭ್ಯ ಪಡೆಯಬೇಕಿದ್ದರೆ ಜಮೀನಿನ ಹಕ್ಕುಪತ್ರ ಬೇಕು. ಹಕ್ಕುಪತ್ರ ನೀಡುವಂತೆ ಕಂದಾಯ ಇಲಾಖೆಗೆ ಮನವಿ ನೀಡಿದ್ದರು. ಆ ಅರ್ಜಿ 25 ವರ್ಷಗಳ ನಂತರ 2016ರಲ್ಲಿ ಪರಿಶೀಲನೆಗೆ ಬಂದು ಅವರ 4.70 ಎಕರೆ ಜಾಗದ ಬದಲು 2.70 ಎಕರೆ ಜಾಗದ ಹಕ್ಕುಪತ್ರವನ್ನು ಇಲಾಖೆ ನೀಡಿತು. ಅದಕ್ಕೊಪ್ಪದ ಧರ್ಣಪ್ಪ ಗೌಡರು ಆ ಹಕ್ಕುಪತ್ರ ಪಡೆಯಲು ನಿರಾಕರಿಸಿದ್ದರು.

    ಶಾಸಕರ ಗಮನ ಸೆಳೆದ ಪ್ರಕರಣ

    ಧರ್ಣಪ್ಪ ಗೌಡ ಅವರು ಆಗಿನ ಶಾಸಕರಾಗಿದ್ದ ವಸಂತ ಬಂಗೇರ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಶಾಸಕರು ಅಂದಿನ ತಾಲೂಕು ದಂಡಾಧಿಕಾರಿಯವರಿಗೆ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದ್ದರು. ಈ ಪ್ರಕಾರ ದಂಡಾಧಿಕಾರಿಯವರು ಅರ್ಜಿಯನ್ನು ಸಂಪೂರ್ಣ ಮರುಪರಿಶೀಲನೆಗೆ ಆದೇಶಿಸಿದ್ದರು. ಅರಣ್ಯ ಇಲಾಖೆ ಅಭಿಪ್ರಾಯ ತಿಳಿಸುವಂತೆ ಕೋರಿ ಕಡತವನ್ನು ಅರಣ್ಯ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ 7 ವರ್ಷ ಕಳೆದರೂ ಅರಣ್ಯ ಇಲಾಖೆ ಉತ್ತರ ನೀಡದೆ ಕಡತವನ್ನು ತಾಲೂಕು ಕಚೇರಿಗೆ ಹಿಂದಿರುಗಿಸಿದೆ.

    45ರ ಹರೆಯದಲ್ಲಿ ಅರ್ಜಿ ಕೊಟ್ಟ ಧರ್ಣಪ್ಪ ಗೌಡ ಅವರಿಗೆ ಈಗ ಪ್ರಾಯ 75 ಆದರೂ ಇನ್ನೂ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ಕೃಷಿಗಾಗಿ ಸಾಲ, ಸರ್ಕಾರಿ ಸವಲತ್ತು ಅಥವಾ ಜಮೀನನ್ನು ಮಾರುವುದಕ್ಕಾಗಲಿ ಸಾಧ್ಯವಾಗದೆ ಕಂಗಾಲಾಗಿ ಕುಳಿತಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹಕ್ಕು ಪತ್ರ ನೀಡುವಂತೆ ಧರ್ಣಪ್ಪ ಗೌಡ ಆಗ್ರಹಿಸುತ್ತಿದ್ದಾರೆ.

    ಕಂದಾಯ, ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ಹೀಗೆ ಮಾಡದಿದ್ದರೂ, ಎರಡೂ ಇಲಾಖೆಗಳು ನಿರ್ಲಕ್ಷೃ ವಹಿಸಿರುವುದು ಸತ್ಯ. ಅಕ್ರಮ- ಸಕ್ರಮ ಹಕ್ಕುಪತ್ರಕ್ಕೆ ಕಡತವನ್ನು ಅರಣ್ಯ ಇಲಾಖೆಗೆ ಕಳುಹಿಸಿದ್ದು ಸರಿಯಲ್ಲ. ಅರಣ್ಯ ಇಲಾಖೆಗೆ ಕಡತವನ್ನು ತುರ್ತಾಗಿ ವಿಲೇವಾರಿ ಮಾಡದೆ ಏಳೆಂಟು ವರ್ಷ ಸತಾಯಿಸಿ, ಯಾವುದೇ ತೀರ್ಮಾನವಿಲ್ಲದೆ ಕಂದಾಯ ಇಲಾಖೆಗೆ ಮರಳಿಸಿದ್ದೂ ಸರಿಯಲ್ಲ. ಇನ್ನಾದರೂ ಕಂದಾಯ ಇಲಾಖೆ ಹಕ್ಕುಪತ್ರ ಕೊಡಿಸುವ ಕೆಲಸ ಮಾಡಬೇಕಿದೆ.
    -ಶ್ಯಾಮರಾಜ್ ಬಿ., ಮಾಜಿ ಸದಸ್ಯ, ಪಟ್ರಮೆ ಗ್ರಾಪಂ

    ನನ್ನ ಈ ಇಳಿ ವಯಸ್ಸಿನಲ್ಲಿ ಜಮೀನಿನಲ್ಲಿ ಬೆಳೆದ ಕೃಷಿಯನ್ನು ಅನುಭವಿಸುವ ಬದಲು ಹಕ್ಕುಪತ್ರಕ್ಕಾಗಿ ಎಲ್ಲ ಕಚೇರಿಗಳಿಗೂ ಅಲೆದಾಡುವ ಸ್ಥಿತಿ ಬಂದಿದೆ. ದಿನೇ ದಿನೆ ಆರೋಗ್ಯ ಕ್ಷೀಣಿಸುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಗೆ ನಾನು ಪರದಾಡುವ ಸ್ಥಿತಿ ಬಂದಿದ್ದು, ಸರ್ಕಾರಿ ಸೌಲಭ್ಯಗಳಿಂದ ವಂಚಿತನಾಗುವಂತಾಗಿದೆ.
    -ಧರ್ಣಪ್ಪ ಗೌಡ, ಕೃಷಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts