More

    ಸಂಸತ್​ ಸ್ಥಾನದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ನೈತಿಕ ಸಮಿತಿ ವಿರುದ್ಧ ಗುಡುಗಿದ ಮಹುವಾ

    ನವದೆಹಲಿ: ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ನೈತಿಕ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಲೋಕಸಭಾ ಸದಸ್ಯೆ ಸ್ಥಾನದಿಂದ ತೃಣಮೂಲ ಕಾಂಗ್ರೆಸ್​ ನಾಯಕಿ ಮಹುವಾ ಮೊಯಿತ್ರಾರನ್ನು ಉಚ್ಚಾಟಿಸಲಾಗಿದ್ದು, ಇದರಿಂದ ಆಕ್ರೊಶಗೊಂಡಿರುವ ಮಹುವಾ, ನೈತಿಕ ಸಮಿತಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

    ಉಚ್ಚಾಟನೆಗೊಂಡ ಬೆನ್ನಲ್ಲೇ ಸಂಸತ್ತಿನ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹುವಾ, ನೈತಿಕ ಸಮಿತಿಯು ಆಡಳಿತ ಪಕ್ಷದ ವಿರೋಧಿಗಳನ್ನು ಹೊಡೆದುರುಳಿಸುವ ಅಸ್ತ್ರವಾಗುತ್ತಿದೆ ಎಂದು ಕಿಡಿಕಾಡಿದರು. ಅಲ್ಲದೆ, ನೈತಿಕ ಸಮಿತಿ ಮತ್ತು ಅದರ ವರದಿಯು, ಪುಸ್ತಕದಲ್ಲಿರುವ ಎಲ್ಲ ನಿಯಮಗಳನ್ನು ಮುರಿದಿದೆ ಎಂದು ಆರೋಪ ಮಾಡಿದರು.

    ಈ ಲೋಕಸಭೆಯು ಸಂಸದೀಯ ಸಮಿತಿಯು ಆಯುಧೀಕರಣವಾಗಿರುವುದನ್ನು ಕಂಡಿದೆ. ಸದಸ್ಯರಿಗೆ ನೈತಿಕ ದಿಕ್ಸೂಚಿಯಾಗಿ ಸ್ಥಾಪಿಸಲಾಗಿರುವ ಸಮಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ವಿರೋಧವನ್ನು ದಮನ ಮಾಡುವ ಮತ್ತೊಂದು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ನೈತಿಕ ಸಮಿತಿಯ ವರದಿಯು ಕೇವಲ ಇಬ್ಬರು ಖಾಸಗಿ ವ್ಯಕ್ತಿಗಳನ್ನು ಆಧರಿಸಿದೆ ಮತ್ತು ಅವರಿಬ್ಬರ ಆವೃತಿಗಳು ವಸ್ತು ಪರಿಭಾಷೆಯಲ್ಲಿ ಪರಸ್ಪರ ವಿರುದ್ಧವಾಗಿವೆ ಎಂದು ಮಹುವಾ ಆರೋಪ ಮಾಡಿದ್ದಾರೆ.

    ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿದ ವಕೀಲ ಜೈ ಅನಂತ್ ದೇಹದ್ರಾಯ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಹುವಾ, ಕೆಟ್ಟ ಉದ್ದೇಶಗಳಿಗಾಗಿ ನೈತಿಕ ಸಮಿತಿಯ ಮುಂದೆ ಸಾಮಾನ್ಯ ನಾಗರಿಕರಂತೆ “ಮಾರುವೇಷ” ತೊಟ್ಟಿದ್ದಾರೆ ಎಂದು ದೂರಿದರು. ಇಬ್ಬರು ಖಾಸಗಿ ವ್ಯಕ್ತಿಗಳನ್ನು ಅಡ್ಡ ಪರೀಕ್ಷೇ ಮಾಡಲು ನನಗೆ ಅವಕಾಶವಿರಲಿಲ್ಲ. ನೈತಿಕ ಸಮಿತಿಯು ನನ್ನನ್ನು ನೇಣಿಗೇರಿಸಿದೆ. ಉದ್ಯಮಿ ದರ್ಶನ್ ಹಿರಾನಂದಾನಿ ಮೌಖಿಕವಾಗಿಯೂ ಸಾಕ್ಷಿ ಹೇಳಲಿಲ್ಲ ಮತ್ತು ಯಾವುದೇ ನಗದು ಅಥವಾ ಉಡುಗೊರೆಗಳನ್ನು ಪಡೆದಿರುವುದಕ್ಕೆ ಪುರಾವೆಗಳಿಲ್ಲ ಎಂದು ಮಹುವಾ ಹೇಳಿದರು.

    ಸಂಸದರು ಸೇತುವೆಗಳಿದ್ದಂತೆ. ಅವರು ಜನರ ಸಮಸ್ಯೆಗಳನ್ನು ಸಂಸತ್ತಿಗೆ ತಂದು ಅದನ್ನು ಪ್ರಸ್ತಾಪಿಸುತ್ತಾರೆ. ಆದರೆ, “ಕಾಂಗರೂ ನ್ಯಾಯಾಲಯವು ಯಾವುದೇ ಪುರಾವೆಗಳಿಲ್ಲದೆ ನನ್ನನ್ನು ಶಿಕ್ಷಿಸಿದೆ ಎಂದು ಮಹುವಾ ನೈತಿಕ ಸಮತಿಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

    ನನ್ನ ಬಾಯಿ ಮುಚ್ಚಿಸುವ ಮೂಲಕ ಅದಾನಿ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಮೋದಿ ಸರ್ಕಾರ ಭಾವಿಸಿದ್ದರೆ, ಈ ಕಾಂಗರೂ ನ್ಯಾಯಾಲಯವು ಅದನ್ನು ಇಡೀ ಭಾರತಕ್ಕೆ ತೋರಿಸಿದೆ ಎಂದು ಹೇಳುತ್ತೇನೆ. ನೀವು ನನ್ನ ವಿರುದ್ಧ ಆತುರವಾಗಿ ಬಳಸಿದ ಕ್ರಮ ಮತ್ತು ನ್ಯಾಯಾಂಗ ದುರುಪಯೋಗವು ಅದಾನಿ ನಿಮಗೆ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಅಲ್ಲದೆ, ನಾಳೆ ನನ್ನ ಮನೆಗೆ ಸಿಬಿಐ ಅಧಿಕಾರಿಗಳನ್ನು ಕಳಹಿಸಿದರು ಅಚ್ಚರಿಪಡಬೇಕಿಲ್ಲ ಮತ್ತು ಮುಂದಿನ ಆರು ತಿಂಗಳು ನನಗೆ ಕಿರುಕುಳ ನೀಡಲುಬಹುದು ಎಂದರು.

    ಏನಿದು ಪ್ರಕರಣ?
    ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಿನಿ ಬಳಿ ಮಹುವಾ ಮೊಯಿತ್ರಾ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಮತ್ತು ಲೋಕಸಭೆಯ ಲಾಗಿನ್ ಐಡಿಗಳನ್ನು ಸಹ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಅವರು ಗಂಭೀರ ಆರೋಪ ಮಾಡಿದ್ದರು. ಮಹುವಾ ಮತ್ತು ಹಿರಾನಂದನಿ ನಡುವೆ ಲಂಚ ವಿನಿಮಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿದ್ದ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಸಭೆಯ ನೈತಿಕ ಸಮಿತಿ ತನಿಖೆ ಆರಂಭಿಸಿತು. ಮಹುವಾಗೆ ಸಮನ್ಸ್​ ನೀಡಿ ವಿಚಾರಣೆ ನಡೆಸಿತು.

    ನೈತಿಕ ಸಮಿತಿಯು ಈ ಸಂಪೂರ್ಣ ವಿಷಯದ ಬಗ್ಗೆ ಸುಮಾರು 500 ಪುಟಗಳ ವಿವರವಾದ ವರದಿಯನ್ನು ಸಿದ್ಧಪಡಿಸಿತು. ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿಯು ಅವರ ನಡವಳಿಕೆಯನ್ನು ಆಕ್ಷೇಪಾರ್ಹ ಮತ್ತು ಅನೈತಿಕ ಎಂದು ಬಣ್ಣಿಸಿದೆ. ಇದನ್ನು ಆಧರಿಸಿ ಸಮಿತಿಯು ತನ್ನ ವರದಿಯಲ್ಲಿ ಮಹುವಾ ಅವರ ಸಂಸತ್ ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡಿತು.(ಏಜೆನ್ಸೀಸ್​)

    ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts