More

    ಪ್ರಲ್ಹಾದ ಜೋಶಿ ಲೇಖನ; ಒಗ್ಗಟ್ಟಿನಿಂದ ಕರೊನಾ ಮಹಾಮಾರಿ ಎದುರಿಸಬೇಕಿದೆ

    ಪ್ರಲ್ಹಾದ ಜೋಶಿ ಲೇಖನ; ಒಗ್ಗಟ್ಟಿನಿಂದ ಕರೊನಾ ಮಹಾಮಾರಿ ಎದುರಿಸಬೇಕಿದೆ

    ಜಗತ್ತಿನಾದ್ಯಂತ 1918ರಲ್ಲಿ ಹರಡಿದ ಸ್ಪ್ಯಾನಿಷ್ ಫ್ಲೂ ಮಹಾಮಾರಿ ನಂತರ ಈಗ 21ನೇ ಶತಮಾನದಲ್ಲಿ ಇಡೀ ವಿಶ್ವವನ್ನೇ ಕರೊನಾ ಮಹಾಮಾರಿ ತಲ್ಲಣಗೊಳಿಸುತ್ತಿದೆ. ಚೀನಾದಲ್ಲಿ ಹುಟ್ಟಿಕೊಂಡಿರುವ ಈ ವೈರಸ್ 2020ರ ಜನವರಿಯಲ್ಲಿ ಭಾರತವನ್ನು ಪ್ರವೇಶಿಸಿತು. ಜಗತ್ತಿನ ಇತರ ರಾಷ್ಟ್ರಗಳು ಯಾವ ರೀತಿ ಒಟ್ಟಾಗಿ ಈ ಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ಸಾಮೂಹಿಕ ಪ್ರಯತ್ನ ನಡೆಸಿದವು ಎಂಬುದರ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಹಾಗೂ ದೂರದರ್ಶಿತ್ವ ನಾಯಕತ್ವದಲ್ಲಿ ಭಾರತ ಸರ್ಕಾರ ಕೈಗೊಂಡ ಯುದ್ಧೋಪಾದಿ ಕ್ರಮಗಳ ಪರಿಣಾಮವಾಗಿ ಜಗತ್ತಿನ ಇತರ ದೇಶಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ವಿರೋಧ ಪಕ್ಷಗಳು ಭಾರತದ ಕೋವಿಡ್ ಸಂಖ್ಯೆಯನ್ನು ಉತ್ತರ ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸುತ್ತಿವೆ. ಆದರೆ ಭಾರತದ ಜನಸಂಖ್ಯೆ ಯುರೋಪ್ ಹಾಗೂ ಉತ್ತರ ಅಮೆರಿಕದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು. ಆದ್ದರಿಂದ ನಮ್ಮ ದೇಶದ ಒಟ್ಟು ಕೋವಿಡ್ ಪ್ರಕರಣಗಳು ಹಾಗೂ ಕೋವಿಡ್ ಸಂಬಂಧಿತ ಸಾವು (ಶೇ. 1.11) ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೋಲಿಸಿದಲ್ಲಿ ಭಾರತ ವಿಶ್ವದಲ್ಲಿ 110ನೇ ಸ್ಥಾನದಲ್ಲಿದೆ.

    ಕರೊನಾ ಸೋಂಕಿನ ಆಪತ್ಕಾಲದಲ್ಲೂ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ನಾಯಕರು ಕೀಳು ರಾಜಕೀಯ ಮಾಡುತ್ತಿರುವುದು ವಿಪರ್ಯಾಸಕರ. ದೇಶಕ್ಕೆ ಆಪತ್ತು ಎದುರಾದಾಗ ಸರ್ಕಾರದೊಂದಿಗೆ ಬೆಂಬಲವಾಗಿ ನಿಂತು ದೇಶವನ್ನು ರಕ್ಷಿಸುವ ಮಾದರಿ ವಿರೋಧ ಪಕ್ಷಗಳಂತೆ ವರ್ತಿಸುವ ಬದಲು ಮೋದಿ ಸರ್ಕಾರ ಏನೇ ಮಾಡಿದರೂ ಅದನ್ನು ವಿರೋಧಿಸುತ್ತಿರುವುದು ಅವುಗಳ ದಯನೀಯ ಸ್ಥಿತಿಯ ಸಂಕೇತ. 1965 ಹಾಗೂ 1971ರ ಯುದ್ಧ ಸನ್ನಿವೇಶದಲ್ಲಿ ಭಾರತೀಯ ಜನಸಂಘವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿತು. ಅಂದಿನ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದಲ್ಲದೆ ದೇಶದ ಸಾರ್ವಭೌಮತ್ವದ ಪ್ರಶ್ನೆ ಬಂದಾಗ ವಿರೋಧ ಪಕ್ಷಗಳ ನಡವಳಿಕೆ ಹೇಗಿರಬೇಕೆಂಬುದಕ್ಕೆ ಭಾರತೀಯ ಜನಸಂಘ ಅಂದು ತೋರಿದ ಪ್ರೌಢಿಮೆ ಇಂದಿಗೂ ಒಂದು ಮಾದರಿ. ವಿಜ್ಞಾನಿ ಡಾ. ಜೋನಸ್ ಸಾಲ್ಕ್ ಪೊಲಿಯೋ ವ್ಯಾಕ್ಸಿನ್ ಕಂಡುಹಿಡಿದದ್ದು 1955ರಲ್ಲಿ, ಆದರೆ ಭಾರತಕ್ಕೆ ಬಂದಿದ್ದು 23 ವರ್ಷಗಳ ನಂತರ ಅಂದರೆ 1978ರಲ್ಲಿ. ಆದರೆ, ಈಗಿನ ಸನ್ನಿವೇಶದಲ್ಲಿ ಭಾರತ ‘ವ್ಯಾಕ್ಸಿನ್ ಮೈತ್ರಿ’ ಯೋಜನೆಯಡಿ ‘ಸರ್ವೆಸಂತು ನಿರಾಮಯಃ’ ಎಂಬ ಧ್ಯೇಯದೊಂದಿಗೆ ಲಸಿಕೆ ತಯಾರಾದ ಕೂಡಲೇ 95 ದೇಶಗಳಿಗೆ 6.50 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಿ ವಿಶ್ವಕ್ಕೆ ತನ್ನ ಪ್ರಬುದ್ಧತೆ ತೋರಿಸಿದೆ.

    ಪ್ರಧಾನಿ ಮೋದಿ ವ್ಯಾಕ್ಸಿನ್ ಅವಶ್ಯಕತೆ ಬಗ್ಗೆ ಹೇಳಿದಾಗ ಅದನ್ನು ಪ್ರತಿಪಕ್ಷದವರು ಅನುಮಾನದಿಂದ ನೋಡಿದರು, ನಂತರ ವ್ಯಾಕ್ಸಿನ್ ಏಕೆ ವಿಳಂಬವೆಂದರು. ದಾಖಲೆ ಅವಧಿಯಲ್ಲಿ ಮೋದಿ ವಿಶ್ವದ ದೊಡ್ಡ ಸಾರ್ವತ್ರಿಕ ಲಸಿಕಾ ಅಭಿಯಾನ ದೇಶದ ಮುಂದೆ ತಂದಾಗ ಲಸಿಕೆ ಮೂರು ಹಂತಗಳಲ್ಲಿ ಪರೀಕ್ಷೆಯಾಗಿಲ್ಲ ಎಂದು ಅದರ ಕ್ಷಮತೆ ಬಗ್ಗೆ ಅಪಪ್ರಚಾರ ಮಾಡಿದರು. ಅಪಪ್ರಚಾರ ಎಷ್ಟು ಕೀಳುಮಟ್ಟಕ್ಕೆ ಹೋಯಿತೆಂದರೆ ಉತ್ತರ ಪ್ರದೇಶದ ಅಖಿಲೇಶ ಯಾದವ್, ‘ಅದು ಬಿಜೆಪಿ ವ್ಯಾಕ್ಸಿನ್’ ಎಂದು ಗೇಲಿ ಮಾಡಿದರು, ಇವರ ಅಪಪ್ರಚಾರಕ್ಕೆ ಉತ್ತರವಾಗಿ- ‘ಕೋವ್ಯಾಕ್ಸಿನ್ ವಿಶ್ವದ ಅತ್ಯುತ್ತಮ ವ್ಯಾಕ್ಸಿನ್​ಗಳಲ್ಲಿ ಒಂದಾಗಿದೆ ಮತ್ತು ಇದು ಕರೊನಾದ ಎಲ್ಲ 617 ಮ್ಯೂಟಂಟ್ ವೈರಸ್​ಗಳಿಗೆ ಪರಿಣಾಮಕಾರಿಯಾಗಿದೆ’ ಎಂದು ಅಮೆರಿಕದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಅಲರ್ಜಿ ಆಂಡ್ ಇನ್​ಫೆಕ್ಷಿ ಯಸ್ ಡಿಸೀಸಸ್ ಸಂಸ್ಥೆಯ ನಿರ್ದೇಶಕರಾದ ಆಂಥೋನಿ ಫೌಚಿ ಹೇಳಿದ್ದಾರೆ.

    ಪ್ರತಿಪಕ್ಷಗಳ ಅಪಪ್ರಚಾರ ಇಷ್ಟಕ್ಕೆ ನಿಲ್ಲಲಿಲ್ಲ. ‘ಎರಡನೇ ಅಲೆಯ ತೀವ್ರತೆ ಬಗ್ಗೆ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಯಾವುದೇ ಅರಿವೇ ಇರಲಿಲ್ಲ, ಅವರ ನಿರ್ಲಕ್ಷ್ಯದಿಂದ ರಾಜ್ಯಗಳಿಗೆ ಈ ಮಾಹಿತಿ ದೊರೆಯದೇ ದೇಶ ಗಂಡಾಂತರಕ್ಕೆ ಒಳಗಾಯಿತು’ ಎಂಬ ವಿರೋಧಿಗಳ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಮೋದಿಯವರು ಮಾರ್ಚ್ 17 ಹಾಗೂ 21ರಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಕೋವಿಡ್ ಪರಿಶೀಲನಾ ಸಭೆ ವೇಳೆ ಸಕಾಲದ ಎಚ್ಚರಿಕೆ ನೀಡಿದ್ದಾರೆಂಬುದು ವಸ್ತುಸ್ಥಿತಿ.

    ಕೇಂದ್ರ ಸರ್ಕಾರ ಕರೊನಾ ಎರಡನೇ ಅಲೆಯ ಕ್ಲಿಷ್ಟಕರ ಪರಿಸ್ಥಿತಿ ಯಲ್ಲೂ ದೇಶದ ಜನರ ಆರೋಗ್ಯ ರಕ್ಷಣೆಗೆ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ‘ಅಮೆರಿಕದಲ್ಲಿ ಈಗಾಗಲೇ ಶೇಕಡ 47ರಷ್ಟು ವ್ಯಾಕ್ಸಿನ್ ಹಾಕಲಾಗಿದೆ. ಮೋದಿ ನೇತೃತ್ವದ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ?’ ಎಂದು ಪ್ರಶ್ನಿಸುತ್ತಿರುವವರು ಅರ್ಥ ಮಾಡಿಕೊಳ್ಳ ಬೇಕಾಗಿರುವುದು ಅಲ್ಲಿನ ಜನಸಂಖ್ಯೆ ಎಷ್ಟೆಂಬುದನ್ನು. ನಮ್ಮ ದೇಶದ 4ನೇ ಒಂದು ಭಾಗಕ್ಕಿಂತ ಕಡಿಮೆ ಜನಸಂಖ್ಯೆಯ ಅಮೆರಿಕಕ್ಕೂ ಲಸಿಕೆಯ ಸಮಸ್ಯೆ ಇಲ್ಲವೆಂದಿಲ್ಲ, ಇಂತಹುದರಲ್ಲಿ ಕರೊನಾ ಭಾರತ ಪ್ರವೇಶಿಸಿದ ಒಂದು ವರ್ಷದ ಅವಧಿಯೊಳಗೆ ನಮ್ಮ ದೇಶದಲ್ಲಿಯೇ ಲಸಿಕೆ ತಯಾರಿಸಿ ಈಗಾಗಲೇ 19 ಕೋಟಿ ಜನರಿಗೆ ಲಸಿಕೆ ಹಾಕಿರುವುದು ಸಾಮಾನ್ಯ ಮಾತೇನಲ್ಲ. ವಿರೋಧ ಪಕ್ಷಗಳು ಲಸಿಕೆ ಬಗ್ಗೆ ಅಪಪ್ರಚಾರ ಮಾಡದೇ ಸರ್ಕಾರದೊಂದಿಗೆ ಕೈಜೋಡಿಸಿದ್ದರೆ ಇಷ್ಟೊತ್ತಿಗೆ ಕನಿಷ್ಠ 35 ಕೋಟಿ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತಿತ್ತು. ಮತ್ತು ಎರಡನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಿ ಸಾವು-ನೋವುಗಳನ್ನು ತಪ್ಪಿಸಬಹುದಾಗಿತ್ತು. ಆದರೆ ನಿರ್ಣಾಯಕ ಸಮಯದಲ್ಲಿ ಬೇಡಿಕೆ ಕಡಿಮೆಯಾಗಿದ್ದರಿಂದ ಕಂಪನಿಗಳು ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸಬೇಕಾಯಿತು.

    ಎರಡನೇ ಅಲೆ ಆರಂಭದಿಂದಲೇ ದಾಖಲೆಯ ಕೆಲವೇ ವಾರಗಳಲ್ಲಿ ದೇಶದಲ್ಲಿದ್ದ 900 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಉತ್ಪಾದನೆಯನ್ನು 9000 ಮೆಟ್ರಿಕ್ ಟನ್​ಗೆ ಹೆಚ್ಚಿಸಲು ಸಾಧ್ಯವಾಯಿ ತೆಂಬುದನ್ನು ದೇಶದ ಹೆಸರಾಂತ ವೈದ್ಯಕೀಯ ತಜ್ಞರೇ ಶ್ಲಾಘಿಸಿದ್ದಾರೆ. ಇದು ಸಾಧ್ಯವಾಗಿದ್ದು ಟಾಟಾ, ಅಂಬಾನಿ, ಅದಾನಿ, ಜಿಂದಾಲ್ ಹಾಗೂ ವೇದಾಂತದಂಥ ಕಾರ್ಪೆರೇಟ್ ಕಂಪನಿಗಳ ಸಹಕಾರದಿಂದ. ದಾಖಲೆ ಉತ್ಪಾದನೆ ಒಂದೆಡೆಯಾದರೆ ಅದನ್ನು ದೇಶದ ಮೂಲೆ-ಮೂಲೆಗಳಿಗೆ ತಲುಪಿಸುವುದು ದೊಡ್ಡ ಸವಾಲು. ಅನವಶ್ಯಕ ವಿಳಂಬ ತಪ್ಪಿಸಲು ರೈಲ್ವೇ ಮೂಲಕ ಆಕ್ಸಿಜನ್ ಟ್ಯಾಂಕರ್​ಗಳನ್ನು ಸಾಗಿಸಲಾಯಿತು. ಗ್ರೀನ್ ಕಾರಿಡಾರ್ ಮೂಲಕ ಈಗಾಗಲೇ 105ಕ್ಕೂ ಹೆಚ್ಚು ರೈಲುಗಳಲ್ಲಿ ಆಕ್ಸಿಜನ್ ಟ್ಯಾಂಕರ್ ರವಾನಿಸಲಾಗಿದೆ. ಅಂತಹ 120 ಮೆ.ಟನ್ ಸಾಮರ್ಥ್ಯದ 5 ರೈಲುಗಳು ನಮ್ಮ ರಾಜ್ಯಕ್ಕೂ ಬಂದಿವೆ. ಹಾಗೆಯೇ ವಾಯುಮಾರ್ಗದ ಮೂಲಕ 230 ಟ್ಯಾಂಕರ್ ರವಾನಿಸಲಾಗಿದೆ.

    ಯುಪಿಎ ಒಟ್ಟು ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅನುದಾನಕ್ಕಿಂತ ಎರಡು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಮೋದಿ ಸರ್ಕಾರ ನೀಡಿ ಅಗತ್ಯ ಮೂಲಭೂತ ಸೌಲಭ್ಯ ಸೃಜಿಸುತ್ತಿದೆ. 2015ರಿಂದ 2020ರವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರ ಅರೋಗ್ಯ ಕ್ಷೇತ್ರಕ್ಕೆ ನೀಡಿದ ಮೊತ್ತ 231867 ಕೋಟಿ ರೂ.ಗೂ ಹೆಚ್ಚು. ಅಷ್ಟೇ ಏಕೆ 2021ರ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದು ಕಳೆದ ವರ್ಷದ ಬಜೆಟ್​ಗೆ (97 ಸಾವಿರ ಕೋಟಿ) ಹೋಲಿಸಿದಲ್ಲಿ ಶೇಕಡ 137 ಹೆಚ್ಚಳ ಮಾಡಿದಂತಾಗಿದೆ. ಹಾಗೆಯೇ ಕೋವಿಡ್ ಲಸಿಕೆಗಾಗಿಯೇ -ಠಿ; 35 ಸಾವಿರ ಕೋಟಿ ಮೀಸಲಿಡಲಾಗಿದೆ.

    ಗಮನೀಯ ಅಂಶವೆಂದರೆ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಮನಮೋಹನ ಸಿಂಗ್ ಅವರ ಒಟ್ಟು 48 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ 2 ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್್ಸ) ನೀಡಿದ್ದರೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ 6 ಹಾಗು ಮೋದಿಯವರ 7 ವರ್ಷದ ಅವಧಿಯಲ್ಲಿ 14, ಹೀಗೆ ಒಟ್ಟು 20 ಏಮ್್ಸ ಸಂಸ್ಥೆ ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಲಾಗಿದೆ. ಅಲ್ಲದೆ, 2014ರಲ್ಲಿ ದೇಶದಲ್ಲಿ 381 ವೈದ್ಯಕೀಯ ಕಾಲೇಜುಗಳಿದ್ದರೆ, ಕಳೆದ 6 ವರ್ಷಗಳಲ್ಲಿ ಈ ಸಂಖ್ಯೆ 562ಕ್ಕೆ ಏರಿದೆ. ಅಲ್ಲದೆ ಎಂಬಿಬಿಎಸ್ ಸೀಟುಗಳ ಸಂಖ್ಯೆ 54,348 ರಿಂದ 80,317ಕ್ಕೆ ಏರಿದ್ದು ಪಿ.ಜಿ. ಸೀಟುಗಳ ಸಂಖ್ಯೆ 18704ಕ್ಕೆ ಏರಿಕೆಯಾಗಿದೆ. ಇದು ಕ್ರಮವಾಗಿ ಕಾಲೇಜುಗಳ ಸಂಖ್ಯೆಯಲ್ಲಿ ಶೇ.48, ಪದವೀಧರ ಸೀಟುಗಳಲ್ಲಿ ಶೇ.56 ಹಾಗೂ ಪಿಜಿ ಸೀಟುಗಳ ಸಂಖ್ಯೆಯಲ್ಲಿ ಶೇ.80ರಷ್ಟು ಬೆಳವಣಿಗೆಯ ಅಭೂತಪೂರ್ವ ಕೊಡುಗೆ. ಈ ವಾಸ್ತವಗಳನ್ನು ಪ್ರತಿಪಕ್ಷಗಳು ಗಮನಿಸಿ, ಅರ್ಥೈಸಿಕೊಳ್ಳಬೇಕು.

    ಕರೊನಾದಂಥ ಗಂಡಾಂತರದಿಂದ ಜನರನ್ನು ರಕ್ಷಿಸಲು ಟೀಕೆ ಮಾಡುತ್ತ ಕುಳಿತರೆ ಪ್ರಯೋಜನವಾಗದು. ಬಾಹ್ಯ ಹಾಗೂ ಆಂತರಿಕ ಗಂಡಾಂತರ ಎದುರಾದಲ್ಲಿ ದೇಶ ಒಂದಾಗಿ ಎದುರಿಸುವ ಅವಶ್ಯಕತೆಯಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಮಹತ್ವ ಸರ್ಕಾರದಷ್ಟೇ ಮಹತ್ವದ್ದಾಗಿದೆ. ಇದನ್ನು ಪ್ರತಿಪಕ್ಷಗಳು ಅರ್ಥೈಸಿಕೊಂಡು, ರಚನಾತ್ಮಕವಾಗಿ ಕಾರ್ಯನಿರ್ವಹಿಸಲಿ.

    (ಲೇಖಕರು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts