More

    ಯಾವುದೇ ಸನ್ನಿವೇಶಕ್ಕೂ ನಾವು ರೆಡಿ: ಇರಾನ್​ ಡ್ರೋನ್​​ ದಾಳಿ ಬೆನ್ನಲ್ಲೇ ಗುಡುಗಿದ ಇಸ್ರೇಲ್​ ಪ್ರಧಾನಿ

    ಜೆರುಸಲೇಮ್​: ಇರಾನ್​ನಿಂದ ನಡೆದ ಡ್ರೋನ್ಸ್​ ದಾಳಿಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತುನ್ಯಾಹು ಯಾವುದೇ ಸನ್ನಿವೇಶಕ್ಕೂ ನಾವು ತಯಾರಿದ್ದೇವೆ ಎಂದು ಹೇಳಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಮತ್ತು ವಿಶೇಷವಾಗಿ ಇತ್ತೀಚಿನ ವಾರಗಳಲ್ಲಿ ಇಸ್ರೇಲ್ ಇರಾನ್‌ನಿಂದ ನೇರ ದಾಳಿಗೆ ತಯಾರಿ ನಡೆಸುತ್ತಿದೆ. ನಮ್ಮ ರಕ್ಷಣಾತ್ಮಕ ವ್ಯವಸ್ಥೆಗಳನ್ನು ನಾವು ನಿಯೋಜಿಸಿದ್ದೇವೆ. ರಕ್ಷಣಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ನಾವು ಯಾವುದೇ ಸನ್ನಿವೇಶಕ್ಕೂ ಸಿದ್ಧರಿದ್ದೇವೆ. ಇಸ್ರೇಲ್ ಪ್ರಬಲವಾಗಿದೆ ಮತ್ತು ಇಸ್ರೇಲ್​ ರಕ್ಷಣಾ ಪಡೆ (IDF) ಬಲಿಷ್ಠವಾಗಿದೆ. ಅಷ್ಟೇ ಯಾಕೆ ನಮ್ಮ ಸಾರ್ವಜನಿಕರು ಕೂಡ ಬಲಿಷ್ಠರಾಗಿದ್ದಾರೆ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತುನ್ಯಾಹು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

    ಸ್ಪಷ್ಟ ತತ್ವವನ್ನು ಇಸ್ರೇಲ್ ಅನುಸರಿಸುತ್ತಿದೆ
    ನಾವು ಸ್ಪಷ್ಟ ತತ್ವವನ್ನು ಹೊಂದಿದ್ದೇವೆ. ಯಾರು ನಮಗೆ ಹಾನಿ ಮಾಡುತ್ತಾರೋ ನಾವು ಅವರಿಗೆ ಹಾನಿ ಮಾಡುತ್ತೇವೆ. ನಾವು ಯಾವುದೇ ಬೆದರಿಕೆ ಅಥವಾ ಅಪಾಯದ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ ಮತ್ತು ಅದನ್ನು ದೃಢವಾಗಿ ಹಾಗೂ ನಿರ್ಣಯದೊಂದಿಗೆ ಮಾಡುತ್ತೇವೆ. ಇಸ್ರೇಲ್‌ನ ಪ್ರಜೆಗಳೇ, ನೀವೂ ಕೂಡ ಸಮಬಲರು ಎಂಬುದು ನನಗೆ ಗೊತ್ತಿದೆ. ಐಡಿಎಫ್​ ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನು ಅನುಸರಿಸಲು ನಾನು ನಿಮಗೆ ಕರೆ ನೀಡುತ್ತೇನೆ. ನಾವು ಒಟ್ಟಾಗಿ ನಿಲ್ಲುತ್ತೇವೆ ಮತ್ತು ದೇವರ ಸಹಾಯದಿಂದ ನಾವು ನಮ್ಮ ಎಲ್ಲಾ ಶತ್ರುಗಳನ್ನು ಜಯಿಸುತ್ತೇವೆ ಎಂದು ನೇತುನ್ಯಾಹು ಹೇಳಿದ್ದಾರೆ.

    ಶನಿವಾರ ತಡರಾತ್ರಿ ಸುಮಾರು 100ಕ್ಕೂ ಅಧಿಕ ಡ್ರೋನ್​ಗಳನ್ನು ಇರಾನ್ ಹಾರಿಸಿರುವುದಾಗಿ ಇಸ್ರೇಲ್​ ಮಿಲಿಟರಿ ಪಡೆ ಹೇಳಿದೆ. ಅಲ್ಲದೆ, ಡಜನ್​ಗಟ್ಟಲೆ ಡ್ರೋನ್​ಗಳು ಹಾದು ಹೋದವು ಎಂದು ಇರಾಕ್​ ಮತ್ತು ಜೋರ್ಡಾನ್​ ರಕ್ಷಣಾ ಪಡೆಗಳು ಸಹ ತಿಳಿಸಿವೆ. ಇಸ್ರೇಲ್ ಕಡೆಗೆ ಹೋಗುತ್ತಿದ್ದ ಇರಾನಿನ ಡ್ರೋನ್ ವಿಮಾನವನ್ನು ಯುಎಸ್ ಮಿಲಿಟರಿ ಪಡೆ ಹೊಡೆದುರುಳಿಸಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಿತ್ರ ರಾಷ್ಟ್ರ ಇಸ್ರೇಲ್​ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದೆ. ಆದರೆ, ಈ ಘರ್ಷಣೆಯಿಂದ ದೂರ ಉಳಿಯಿರಿ ಎಂದು ಇರಾನ್​ ಅಮೆರಿಕಕ್ಕೆ ಎಚ್ಚರಿಸಿದೆ. ಇದರ ನಡುವರೆಯೂ ಅಮೆರಿಕ ಮಾತ್ರ ತನ್ನ ಮಿತ್ರನನ್ನು ಬಿಟ್ಟುಕೊಟ್ಟಿಲ್ಲ. ಈ ದಾಳಿಯಿಂದ ಮತ್ತೊಂದು ಭೀಕರ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ ನಡುವೆ ನಡೆಯುತ್ತಿರುವ ಯುದ್ಧವೇ ಅಂತ್ಯವಾಗಿಲ್ಲ. ಇನ್ನೊಂದೆಡೆ ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧವೂ ಸಹ ಮುಂದುವರಿದಿದೆ. ಇದರ ನಡುವೆ ಇದೀಗ ಇಸ್ರೇಲ್​ ಮತ್ತು ಇರಾನ್​ ನಡುವಿನ ಸಂಘರ್ಷ ಜಗತ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

    ದಾಳಿಗೆ ಕಾರಣವೇನು?
    ಕಳೆದ ಸೋಮವಾರ ಶಂಕಿತ ಇಸ್ರೇಲಿ ಯುದ್ಧವಿಮಾನಗಳು ಸಿರಿಯಾದಲ್ಲಿರುವ ಇರಾನ್​ ರಾಯಭಾರ ಕಚೇರಿಯ ಮೇಲೆ ಬಾಂಬ್​ ದಾಳಿ ನಡೆಸಿದ ಪ್ರತೀಕಾರವಾಗಿ ಇರಾನ್​ನಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಇಸ್ರೇಲ್​ ನಡೆಸಿದ ದಾಳಿಯಲ್ಲಿ ಮೂವರು ಹಿರಿಯ ಕಮಾಂಡರ್​ಗಳು ಸೇರಿದಂತೆ ಏಳು ಮಿಲಿಟರಿ ಸಲಹೆಗಾರರನ್ನು ಇಸ್ರೇಲ್​ ಕೊಂದಿದೆ ಎಂದು ಇರಾನ್​ ಆರೋಪ ಮಾಡಿದೆ. ಈ ಘಟನೆಯೇ ಇಸ್ರೇಲ್​ ಮೇಲಿನ ದಾಳಿಗೆ ಪ್ರಚೋದನೆಯಾಗಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ಇಸ್ರೇಲ್​​​ ಮೇಲೆ ಇರಾನ್​ನಿಂದ 100ಕ್ಕೂ ಅಧಿಕ ಡ್ರೋನ್​ಗಳಿಂದ ದಾಳಿ: ಮತ್ತೊಂದು ಭೀಕರ ಯುದ್ಧದ ಭೀತಿ

    ಬಾಗಲಕೋಟೆಯಲ್ಲಿ ಹಳೇ ಬೇರು ಹೊಸ ಚಿಗುರು ಕದಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts