More

    ಮಹಿಷ ವಿರೋಧಿಗಳಿಗೆ ನಾವು ಹೆದರಲ್ಲ

    ಎಚ್.ಡಿ.ಕೋಟೆ: ಮಹಿಷಾಸುರ ರಾಕ್ಷಸ ಅಲ್ಲ, ಅವನೊಬ್ಬ ಮಹಾರಾಜ. ಮಹಿಷಾಸುರ ವಿರೋಧಿಗಳಿಗೆ ಮಹಿಷ ಯಾರೆಂಬುದನ್ನು ತಿಳಿಸುವ ಕೆಲಸ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಆದಿಕರ್ನಾಟಕ ಸಮುದಾಯ ವತಿಯಿಂದ ಗುರುವಾರ ಆಯೋಜಿಸಿದ್ದ ಮಹಿಷಾಸುರ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಚಾಮುಂಡಿ ಬೆಟ್ಟ ಹೋಗಿ ಬೌದ್ಧ ಬೆಟ್ಟ ಆಗುತ್ತದೆ ಎಂಬ ಆತಂಕ ಮಹಿಷಾಸುರ ವಿರೋಧಿಗಳಲ್ಲಿ ಮನೆ ಮಾಡಿರುವ ಕಾರಣ ಮಹಿಷಾಸುರ ದಸರಾ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಅವರವರ ಪೂಜೆ-ಪುನಸ್ಕಾರ ಅವರ ಭಾವನೆಗಳಿಗೆ ಬಿಟ್ಟಿದ್ದು ಎಂದು ಜಿಲ್ಲಾಡಳಿತ ಹೇಳಿದೆ. ಆದರೂ ವಿರೋಧಿಗಳು ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಎರಡು ಸಾವಿರ ವರ್ಷಗಳಿಂದ ಮಾಡಿಕೊಂಡು ಬಂದ ಗುಲಾಮಗಿರಿಯನ್ನು ಇನ್ನೂ ಮುಂದುವರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದು ಇನ್ನು ನಡೆಯುವುದಿಲ್ಲ ಎಂದರು.

    ಸಂಬಂಧ ಇಲ್ಲದವನು ಮಹಿಷಾಸುರ ದಸರಾ ಕಾರ್ಯಕ್ರಮಕ್ಕೆ ತಡೆಯೊಡ್ಡುತ್ತೇನೆ ಎಂದರೆ ನಾವು ಬಿಡಲು ಸಾಧ್ಯವೇ. ನಾವು ಹೆದರುವ ವಂಶಸ್ಥರಲ್ಲ. ಕಾನೂನಾತ್ಮಕವಾಗಿ ನಾವು ಎಲ್ಲ ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು.

    ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮೈಸೂರು ಮತ್ತು ನಮ್ಮ ಅಸ್ಮಿತೆಗಾಗಿ ಮಹಿಷಾಸುರ ಜಯಂತಿ ಮಾಡಬೇಕು. ಹೋರಾಟದ ಶಕ್ತಿಯನ್ನು ಇಂದಿಗೂ ಉಳಿಸಿಕೊಂಡು ಬರುತ್ತಿರುವುದು ಎಚ್.ಡಿ.ಕೋಟೆ. ಮಹಿಷಾಸುರ ಯಾರು ಎಂಬುದನ್ನು ಈಗಾಗಲೇ ಅಧ್ಯಯನ ಮಾಡಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಮಹಿಷಾ ರಕ್ಷಕನೇ ಹೊರತು ರಾಕ್ಷಸ ಅಲ್ಲ. ಒಬ್ಬ ನಾಯಕನಿಗೆ ಇರಬೇಕಾದ ಎಲ್ಲ ಗುಣಗಳು ಮಹಿಷಾಸುರನಲ್ಲಿ ಇತ್ತು. ಮೈಸೂರಿಗೆ ಹೆಸರು ಬರಲು ಮಹಿಷಾಸುರ ಕಾರಣ. ದೇವತೆ ರೂಪದಲ್ಲಿ ಬಂದು ಮಹಿಷಾಸುರನನ್ನು ಸಂಹರಿಸಿದ ಯಾವುದೇ ಪುರಾವೆ ಇಲ್ಲ. ಆದರೆ ನಮ್ಮ ಅಸ್ಮಿತೆ ಎಲ್ಲ ನಾಶವಾಗುತ್ತಿದೆ ಎಂದರು.

    ಮಹಿಷಾಸುರನ ಹೆಸರಿನಲ್ಲಿ ದೊಡ್ಡ ಚರ್ಚೆ ಆಗುತ್ತದೆ. ಒಂದು ಪಕ್ಷ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿದೆ. ನೀಲಿ ಮೇಲೆ ಕೇಸರಿ ಸವಾರಿ ಮಾಡುತ್ತಿದೆ. ನೀಲಿ ಸಮಾನತೆ ಸಂಕೇತ. ಅದನ್ನು ಸದೆ ಬಡಿಯಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿಗಳು ಪುಂಡಪೋಕರಿಗಳನ್ನು ಕಟ್ಟಿಕೊಂಡು ಚಾಮುಂಡಿ ಚಲೋ ಹಮ್ಮಿಕೊಂಡಿದ್ದಾರೆ. ನಾವು ಚಾಮುಂಡೇಶ್ವರಿ ವಿರೋಧಿಗಳು ಅಲ್ಲ. ನಮಗೆ ಸವಾಲು ಹಾಕಿರುವವರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಚಾಮುಂಡಿ ಚಲೋ ಹೋರಾಟಕ್ಕೆ ನಾವು ಕೂಡ ಬರುತ್ತೇವೆ. ಮಹಿಷ ಎಂಬ ಮಾತು ಅಸಹ್ಯ ಎಂದು ಹೇಳುವ ಮೂಲಕ ನಮ್ಮನ್ನು ಕೆಣಕುವ ಕೆಲಸ ಮಾಡಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂಬ ಎಚ್ಚರಿಕೆ ಸಂದೇಶ ನೀಡಬೇಕಿದೆ ಎಂದರು.

    ಆದಿಕರ್ನಾಟಕ ಸಮುದಾಯದ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಎಂ.ಡಿ.ಮಂಚಯ್ಯ, ಚಾ.ನಂಜುಂಡಮೂರ್ತಿ, ಮಲಾರ ಪುಟ್ಟಯ್ಯ, ವೆಂಕಟಸ್ವಾಮಿ, ಹೈರಿಗೆ ಶಿವರಾಜು, ಮುದ್ದಮಲ್ಲಯ್ಯ, ಸೋಗಹಳ್ಳಿ ಶಿವಣ್ಣ, ಸಣ್ಣಕುಮಾರ್,ಚೌಡಹಳ್ಳಿ ಜವರಯ್ಯ, ಜಕ್ಕಹಳ್ಳಿ ಮಲ್ಲೇಶ, ವನಸಿರಿ ಶಂಕರ, ಪ್ರಕಾಶ ಬುದ್ಧ, ಸದಾಶಿವ, ಮಂಜು ಮುಳ್ಳೂರು, ಆನಂದ ಕೆ.ಜಿ.ಹಳ್ಳಿ ಇದ್ದರು.

    13ರಂದು ಚಾ.ಬೆಟ್ಟಕ್ಕೆ ಬೈಕ್ ರ‌್ಯಾಲಿ
    ಮೈಸೂರು ಮತ್ತು ನಮ್ಮ ಅಸ್ಮಿತೆಗಾಗಿ ಅ.13ರಂದು ಮಹಿಷ ದಸರಾ ಹಮ್ಮಿಕೊಂಡಿದ್ದೇವೆ. ಆದರೆ ಅಂದು ವಿರೋಧಿಗಳು ಚಾಮುಂಡಿ ಚಲೋ ಹಮ್ಮಿಕೊಂಡಿದ್ದು, ನಾವು ಕೂಡ ಚಾಮುಂಡಿ ಬೆಟ್ಟಕ್ಕೆ ಬೈಕ್ ರ‌್ಯಾಲಿ ಹಮ್ಮಿಕೊಂಡಿದ್ದೇವೆ. ಅಂದು ನಗರದ ಅಶೋಕಪುರಂನಿಂದ ಬೈಕ್‌ಗಳ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಂತರ ಬೆಟ್ಟದ ಕೆಳಗೆ ತಾವರೆಕಟ್ಟೆಯಿಂದ ವೇದಿಕೆ ಕಾರ್ಯಕ್ರಮ ಆಯೋಜಿಸಿರುವ ಟೌನ್‌ಹಾಲ್ಗೆ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆಯಲ್ಲಿ ತೆರಳಲಾಗುವುದು. ತಾಲೂಕಿನ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts