More

    ಕರೊನಾ ಭೀತಿ ನೀರಿನ ಬಳಕೆ ಹೆಚ್ಚಳ

    ಅವಿನ್ ಶೆಟ್ಟಿ ಉಡುಪಿ
    ಕರೋನಾ ಲಾಕ್‌ಡೌನ್‌ನಿಂದ ಈ ಬಾರಿ ನೀರಿಗೆ ಸಮಸ್ಯೆಯಾಗದು ಎಂಬ ಲೆಕ್ಕ್ಕಾಚಾರ ಉಲ್ಟಾ ಹೊಡೆದಿದೆ. ಹೊಟೇಲ್ , ಕೈಗಾರಿಕೆಗಳು ಮುಚ್ಚಿದ್ದರೂ ಬಳಕೆ ಹೆಚ್ಚಿದ್ದು , ಉಡುಪಿಯಲ್ಲಿ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

    ಮಂಗಳೂರು ನಗರ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ನೀರಿನ ಅಭಾವ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರೂ , ಸೆಕೆ ಪ್ರಮಾಣ ಅಧಿಕವಾಗುತ್ತಿರುವ ಕಾರಣ ಯಾವುದನ್ನೂ ಖಚಿತವಾಗಿ ಊಹಿಸುವುದು ಕಷ್ಟಕರ. ಆದರೆ ಸದ್ಯ ‘ಸೇಫ್’ .

    ಉಡುಪಿಯಲ್ಲಿ ನೀರಿನ ಬಳಕೆ ಹೆಚ್ಚುತ್ತಿದ್ದು, ಸಾಮಾನ್ಯ ದಿನಗಳಿಗಿಂತ 7 ಎಂಎಲ್‌ಡಿ ಬಳಕೆ ಹೆಚ್ಚಾಗಿದೆ. ಹೋಟೆಲ್, ವಸತಿಗೃಹಗಳು, ಶಾಲೆ, ಕಾಲೇಜು, ಧಾರ್ಮಿಕ ಸಂಸ್ಥೆ, ಕೈಗಾರಿಕೆ, ಬೃಹತ್ ವಾಣಿಜ್ಯ ಮಳಿಗೆಗಳು ಬಂದ್ ಇದ್ದು, ದೊಡ್ಡ ಪ್ರಮಾಣದಲ್ಲಿ ನೀರು ಉಳಿಕೆಯಾಗುತ್ತಿದೆ. ಹೀಗೆ ನೀರು ಉಳಿತಾಯವಾದರೂ ಜನ ಬಳಸುವ ಪ್ರಮಾಣ ಇಳಿಕೆಯಾಗಿಲ್ಲ. ಈ ಪರಿಸ್ಥಿತಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಒಂದು ದಿನಕ್ಕೆ ಬೇಕಿರುವುದು 15 ಎಂಎಲ್‌ಡಿ ನೀರು. ಆದರೆ ಬಳಕೆಯಾಗುತ್ತಿರುವ ಪ್ರಮಾಣ 22 ಎಂಎಲ್‌ಡಿ. ದಿನಕ್ಕೆ ಏಳು ಎಂಎಲ್‌ಡಿ ನೀರು ಹೆಚ್ಚುವರಿ ಬಳಕೆಯಾಗುತ್ತಿದೆ. ಮಾರ್ಚ್ 1ರಿಂದ ನಗರಸಭೆಯ 35 ವಾರ್ಡ್‌ಗಳನ್ನು ಮೂರು ವಲಯಗಳಾಗಿ ವಿಂಗಡಿಸಿ ನೀರಿನ ವಿತರಣೆ ಆರಂಭಿಸಲಾಗಿದೆ. ಈ ಎಲ್ಲ ವಲಯಗಳಿಗೆ ಪ್ರತಿದಿನ ತಲಾ 6 ಗಂಟೆ ನೀರು ಪೂರೈಸಲಾಗುತ್ತಿದೆ. ನಗರಸಭೆ ಸುತ್ತಮುತ್ತ ಗ್ರಾಮ ಪಂಚಾಯಿತಿ ಮತ್ತು ಮಣಿಪಾಲ ಸಂಸ್ಥೆಗೆ 24 ಗಂಟೆ ಬದಲು 6 ಗಂಟೆ ನೀರು ಒದಗಿಸಲಾಗುತ್ತಿದೆ. ಪರಿಣಾಮ 1.5 ಎಂಎಲ್‌ಡಿ ನೀರು ಉಳಿಕೆಯಾಗುತ್ತಿದೆ.

    ಹೆಚ್ಚು ಬಳಕೆಗೆ ಕಾರಣವೇನು?
    ಕರೊನಾ ವೈರಸ್ ಭೀತಿಯಿಂದ ಜನರು ಶುಚಿತ್ವಕ್ಕೆ ಆದ್ಯತೆ ನೀಡುತಿದ್ದಾರೆ. ಮನೆಯಲ್ಲಿ ಉಳಿದುಕೊಂಡಿರುವುದರಿಂದ ದಿನಕ್ಕೆ ಎರಡು ಮೂರು ಬಾರಿ ಸ್ನಾನ, ಕೈ ತೊಳೆಯುವುದು ಸೇರಿದಂತೆ ಸ್ವಚ್ಛವಾಗಿರಲು ಹೆಚ್ಚು ನೀರು ಬಳಕೆ ಮಾಡುತ್ತಿದ್ದಾರೆ. ಅಲ್ಲದೆ ವಾಹನಗಳನ್ನು ತೊಳೆಯುವುದು, ತೋಟಕ್ಕೆ ನೀರು ಬಿಡುವುದೂ ಇದಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.

    ಬಜೆಯಲ್ಲಿದೆ 40 ದಿನಕ್ಕೆ ನೀರು
    ಹಿರಿಯಡ್ಕ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ಪ್ರಸ್ತುತ 4.98 ಮೀಟರ್ ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ಸಮಯದಲ್ಲಿ 3.88 ಮೀಟರ್ ನೀರು ಇತ್ತು. ಇದನ್ನು ಹೋಲಿಸಿದರೆ ಕಳೆದ ವರ್ಷಕ್ಕಿಂತ 1.1 ಮೀಟರ್ ಹೆಚ್ಚು ಸಂಗ್ರಹ ಇದೆ ನಿಜ. ಈಗಿರುವ ನೀರಿನ ಸಂಗ್ರಹ 40ರಿಂದ 42 ದಿನಗಳವರೆಗೆ ಸಾಕಾಗಲಿದ್ದು, ಮುಂಗಾರು ಪೂರ್ವ ಮಳೆ ಬಾರದಿದ್ದರೆ ಮೇ 2ನೇ ವಾರವೇ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮೋಹನ್‌ರಾಜ್ ತಿಳಿಸಿದ್ದಾರೆ.

    ಮನೆಯಲ್ಲಿದ್ದವರು ಅನವಶ್ಯಕ ನೀರಿನ ಬಳಕೆ ಮಾಡಬಾರದು. ಮಿತವಾಗಿ ನೀರು ಬಳಸಿದರೆ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಜನನ್ನು ಕಾಡದು. ಈ ಪರಿಸ್ಥಿತಿ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು. ಕಳೆದ ವರ್ಷ ಈ ಸಮಸ್ಯೆ ನಮ್ಮನ್ನು ಗಂಭೀರವಾಗಿ ಕಾಡಿತ್ತು. ದಿನಕ್ಕೆ ಒಬ್ಬ ವ್ಯಕ್ತಿಗೆ 130 ಲೀಟರ್ ನೀರು ಅವಶ್ಯವಿದೆ. ಉಡುಪಿಯ ಈಗಿನ ಜನಸಂಖ್ಯೆಗಿಂತ ಹೆಚ್ಚು ಅಂದರೆ 2 ಕೋಟಿ ಲೀಟರ್ ನೀರು ಬಳಸಲಾಗುತ್ತಿದೆ.
    ಮೋಹನ್‌ರಾಜ್, ಎಇಇ, ಉಡುಪಿ ನಗರಸಭೆ

    ದ.ಕ. ಜಿಲ್ಲೆಯಲ್ಲಿ ಇಲ್ಲ ಸಮಸ್ಯೆ
    ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಬಳಿಕ ಗೃಹಬಳಕೆ ನೀರಿನ ಪ್ರಮಾಣದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವಾಗಿದ್ದರೂ, ಮಾಲ್, ಹೋಟೆಲ್‌ಗಳು, ಕೆಲವು ಕೈಗಾರಿಕೆಗಳು ಸ್ಥಗಿತಗೊಂಡಿರುವುದರಿಂದ ನೀರಿನ ಅಭಾವ ಉಂಟಾಗದು ಎಂದು ಪಾಲಿಕೆ ಆಯಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
    ಈ ಮೊದಲೇ ಮಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಾಗದು ಎಂದು ಅವಲೋಕಿಸಿ ತಿಳಿಸಲಾಗಿತ್ತು. ಕರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಆಗಾಗ ಕೈ ತೊಳೆಯುತ್ತಿರಬೇಕು ಎಂದು ಸೂಚಿಸಿದ್ದರೂ, ಮಿತವಾಗಿ ನೀರು ಬಳಸುವಂತೆ ವಿನಂತಿಸಲಾಗಿದೆ. ಈ ಬಾರಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
    ಜಿಲ್ಲೆಯಲ್ಲೂ ಈ ಬಾರಿ ಇದುವರೆಗೆ ಕುಡಿಯವ ನೀರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಕಳೆದ ಬಾರಿ ಈ ವೇಳೆಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿತ್ತು. ನದಿಗಳಲ್ಲೂ ನೀರಿನ ಹರಿವಿದ್ದು, ತೋಡುಗಳಿಗೆ ಕಟ್ಟಿರುವ ಕಟ್ಟಗಳಲ್ಲಿ ನೀರು ನಿಂತಿದ್ದು, ಕೃಷಿಗೆ ಬಳಸಲಾಗುತ್ತಿದೆ. ಕರೊನಾ ಲಾಕ್‌ಡೌನ್‌ಗೂ-ಗ್ರಾಮೀಣ ಪ್ರದೇಶದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸೆಲ್ವಮಣಿ ಆರ್.ತಿಳಿಸಿದ್ದಾರೆ.

    ಮಂಗಳೂರು ನಗರಕ್ಕೆ ಈಗ ಪ್ರತಿನಿತ್ಯ ತುಂಬೆ ಅಣೆಕಟ್ಟಿನಿಂದ 160 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಉದ್ಯಮಗಳು ಸ್ಥಗಿತಗೊಂಡಿದ್ದರೂ ಎಂದಿನಂತೆ 160 ಎಂಎಲ್‌ಡಿ ನೀರು ಸರಬರಾಜು ಆಗುತ್ತಿರುವುದು ನೋಡಿದರೆ ಗೃಹ ಬಳಕೆಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದೆ ಎನ್ನುವುದು ಸ್ಪಷ್ಟ.

    ಉಡುಪಿ ಜಿಲ್ಲೆಯ ಪರಿಸ್ಥಿತಿ ಏನಿದೆ ?
    ಎಲ್ಲರೂ ಮನೆಯಲ್ಲೆ ಇರುವುದರಿಂದ, ದೂರದ ಊರಿನಿಂದಲೂ ಮನೆಗೆ ಮರಳಿರುವುದರಿಂದ ಗ್ರಾಮೀಣ ಭಾಗಗಳಲ್ಲೂ ಸದ್ಯ ನೀರಿನ ಬಳಕೆ ಪ್ರಮಾಣ ಹೆಚ್ಚಳವಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ 15ರಿಂದ 20 ದಿನಗಳ ಮಟ್ಟಿಗೆ ನೀರಿನ ಸಮಸ್ಯೆ ನಿಭಾಯಿಸಬಹುದು. ಬಹುತೇಕ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಟೆಂಡರ್‌ಗೆ ತಯಾರಿ ಮಾಡಿಕೊಂಡು ಪರ್ಯಾಯ ನೀರು ಪೂರೈಸುವ ವ್ಯವಸ್ಥೆ ಬಗ್ಗೆ ಸೂಚನೆ ನೀಡಲಾಗಿದೆ. ಕಾರ್ಕಳ, ಕುಂದಾಪುರ, ಸಾಲಿಗ್ರಾಮ ವ್ಯಾಪ್ತಿಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಮೇ ತಿಂಗಳ ಮೊದಲ ವಾರದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ. ಕುಂದಾಪುರದ ಜಪ್ತಿಯಲ್ಲಿ ನೀರು ಸಮ ಪ್ರಮಾಣದಲ್ಲಿ ಇರುವುದರಿಂದ ಸದ್ಯಕ್ಕೆ ಸಮಸ್ಯೆ ಇಲ್ಲ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts