More

    ಬಗ್ಗುಂಡಿ ಕೆರೆಗೆ ಕೊಳಚೆ ನೀರು

    ಸುರತ್ಕಲ್: ಇಲ್ಲಿನ ಕುಳಾಯಿ ನಡುಲಚ್ಚಿಲ್ ಎಂಬಲ್ಲಿ ಕಲುಷಿತ ನೀರು ತೆರೆದ ತೋಡಿನ ಮೂಲಕ ಹರಿದು ಬಗ್ಗುಂಡಿ ಕೆರೆ ಸೇರುತ್ತಿದ್ದು ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಕುಳಾಯಿ ವೆಟ್‌ವೆಲ್‌ನಿಂದ ಕೊಳಚೆ ನೀರು ಉಕ್ಕಿ ಹೊರಬರುತ್ತಿದೆ.

    ಇಲ್ಲಿ ಸುಮಾರು 4 -5 ವರ್ಷಗಳಿಂದ ಚರಂಡಿ ನೀರು ಬಯಲು ಗದ್ದೆ ಹಾಗೂ ಬಗ್ಗುಂಡಿ ಕೆರೆಗೆ ಹರಿಯುತ್ತಿದೆ. ಪ್ರಸಕ್ತ ಮೂರು ತಿಂಗಳಿಂದ ಇಲ್ಲಿನ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ವೆಟ್‌ವೆಲ್‌ನಿಂದ ಹೊರಬರುತ್ತಿರುವ ನೀರು ಎಲ್ಲೆಂದರಲ್ಲಿ ಹರಿದು ಕೆರೆ ಹಾಗೂ ಕುಡಿಯುವ ಬಾವಿಯ ನೀರು ಕೂಡ ಕಲುಷಿತವಾಗಿದೆ. ಪರಿಸರದಲ್ಲಿ ಹಲವಾರು ಮನೆಗಳ ಬಾವಿಗೆ ಈ ಕೊಳಚೆ ನೀರು ಇಂಗುತ್ತಿದ್ದು ಯಾವುದಕ್ಕೂ ನೀರು ಉಪಯೋಗಿಸದಷ್ಟು ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಕೊಳಚೆ ನೀರಿನ ದುರ್ವಾಸನೆಯೂ ಪರಿಸರದಲ್ಲಿ ಹಬ್ಬುತ್ತಿದ್ದು, ಸೊಳ್ಳೆಗಳ ಕಾಟವೂ ಹೆಚ್ಚುತ್ತಿದೆ. ಜನನಿಬಿಡ ಪ್ರದೇಶವಾಗಿದ್ದು ಸೊಳ್ಳೆ ಕಾಟದಿಂದ ಡೆಂೆ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳೂ ಹರಡುವ ಭೀತಿ ಉಂಟಾಗಿದ್ದು ಪರಿಸರದ ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಆಯುಧ ಪೂಜೆಯ ಬಳಿಕ ಇಲ್ಲಿ ಒಂದೇ ಸಮನೆ ನೀರು ಹರಿದುಬರುತ್ತಿದ್ದು ಸುಮಾರು ಎರಡೂವರೆ ತಿಂಗಳಲ್ಲಿ ಕೆರೆಗೆ ಹರಿದಿರುವ ನೀರೆಷ್ಟಾಗಬಹುದು ಎನ್ನುತ್ತಾರೆ ಸ್ಥಳೀಯರು. ಇಲ್ಲಿ ವಾಸ್ತವ ಸ್ಥಿತಿಯ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಪೊರೇಟರ್ ಗಮನಕ್ಕೆ ತಂದಿದ್ದರೂ ಸಮಸ್ಯೆ ಪರಿಹಾರದ ಸ್ಥಿತಿಗೆ ತಲುಪಿಲ್ಲ.

    ಸಮಸ್ಯೆಗೇನು ಕಾರಣ?: ಇಲ್ಲಿನ ಸಮಸ್ಯೆಗೆ ಕಾರಣವಾಗಿರುವುದು ವೆಟ್‌ವೆಲ್‌ನಿಂದ ಹೊರಬರುವ ನೀರು. ಇಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರೂ ಪಂಪ್ ಕೆಟ್ಟಿರುವುದರಿಂದ ಸಮಸ್ಯೆಯಾಗಿದೆ. ಪಂಪ್ ಸರಿಪಡಿಸುವ ಗೋಜಿಗೆ ಹೋಗದ ಕಾರಣ ನೀರು ದೊಡ್ಡ ಪ್ರಮಾಣದಲ್ಲಿ ಹರಿದುಬಂದಿದೆ. ಈ ಬಗ್ಗೆ ವಾಟ್ಸಾೃಪ್‌ನಲ್ಲಿ ಸ್ಥಳೀಯರು ವಿಡಿಯೋ ಮಾಡಿ ಗಮನ ಸೆಳೆದ ಬಳಿಕ ಒಂದು ಪಂಪ್ ಸರಿ ಮಾಡಿದ್ದರೂ ಮತ್ತೆ ಹಾಳಾಗಿದೆ. ಇದರಿಂದ ಶುಕ್ರವಾರವೂ ನೀರು ತೋಡಿನ ಮೂಲಕ ಹರಿದು ಬಂದಿದೆ. ಇನ್ನೊಂದು ಮುಖ್ಯ ಸಮಸ್ಯೆ ಎಂದರೆ ಪವರ್ ಕಟ್ ಆದ ದಿನ ಇಲ್ಲಿ ಪಂಪ್ ಕಾರ್ಯಾಚರಿಸುವುದಿಲ್ಲ. ಜನರೇಟರ್ ಯಾವತ್ತೋ ಹಾಳಾಗಿದ್ದು ಅದನ್ನು ರಿಪೇರಿ ಮಾಡುವ ಗೋಜಿಗೂ ಹೋಗಿಲ್ಲ.

    ಪರಿಹಾರ ಹೀಗೆ ಮಾಡಬಹುದು: ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಸಮಸ್ಯೆ ಪರಿಹರಿಸಬಹುದು. ಕುಳಾಯಿಯಿಂದ ವೆಟ್‌ವೆಲ್ ಸಂಪರ್ಕ ಹೊಸಬೆಟ್ಟುಗೆ ಕೊಡಬೇಕು. ಇಲ್ಲಿರುವ ಮೂರು ಪಂಪ್‌ಗಳ ಪೈಕಿ ಕನಿಷ್ಠ ಎರಡನ್ನಾದರೂ ಸನ್ನದ್ಧ ಸ್ಥಿತಿಯಲ್ಲಿಡಬೇಕು, ಜತೆಗೆ ಜನರೇಟರ್ ಸರಿಪಡಿಸಬೇಕು. ಪ್ರತಿದಿನವೂ ಕೊಳಚೆ ನೀರು ಪಂಪ್ ಮಾಡಿದರೆ ಇಲ್ಲಿನ ತೋಡಿಗೆ ನೀರು ಹರಿಯುವುದು ನಿಲ್ಲಬಹುದು.

    ಆರೋಗ್ಯ ಅಧಿಕಾರಿಗಳು ಎಲ್ಲಿ?: ಒಂದೆಡೆ ಕೋವಿಡ್, ಒಮಿಕ್ರಾನ್‌ನಂಥ ರೋಗಗಳ ವಿರುದ್ಧ ಜನರ ಆತಂಕ ಇನ್ನೂ ಇರುವಾಗಲೇ ಇಲ್ಲಿ ಕೊಳಚೆ ನೀರು ಹರಿದು ಸೊಳ್ಳೆಗಳು ಸೃಷ್ಟಿಯಾಗುತ್ತಿರುವುದು ಹೊಸ ಆತಂಕ ತಂದೊಡ್ಡಿದೆ. ಪರಿಸರ ಸ್ವಚ್ಛವಾಗಿಡಿ, ರೋಗ ಮುಕ್ತವಾಗಿರಿ ಎಂದು ಪಾಠ ಮಾಡಲು ಬರುವ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲೇಕೆ ಅಧಿಕಾರಿಗಳ ಮಟ್ಟದಿಂದಲೇ ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಕೇವಲ ಬಾಯಿಮಾತಿನಲ್ಲಿ ಜಾಗೃತಿ ಮೂಡಿಸುವ ಬದಲು ಅಧಿಕಾರಿಗಳಿಂದಲೇ ಆಗುತ್ತಿರುವ ಎಡವಟ್ಟುಗಳ ಬಗ್ಗೆಯೂ ಗಮನ ಹರಿಸಲಿ ಎಂಬುದು ಇಲ್ಲಿನವರ ಸಲಹೆ.

    ಕುಳಾಯಿ ನಡುಲಚ್ಚಿಲ್ ಎಂಬಲ್ಲಿ ಕಲುಷಿತ ನೀರು ಆಸುಪಾಸಿನ ಜಲಮೂಲಗಳನ್ನು ಮಲಿನಗೊಳಿಸುತ್ತಿದೆ ಎಂದು ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು ಶೀಘ್ರದಲ್ಲೇ ಬಗೆಹರಿಸಲಾಗುವುದು.

    ಅಕ್ಷಿ ಶ್ರೀಧರ್ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts