More

    ತ್ಯಾಜ್ಯ ನಿರ್ವಹಣೆ ಯೋಜನೆ ಕೆಲಸ ಆರಂಭ

    ಪುತ್ತೂರು: ಪುತ್ತೂರಿನಲ್ಲಿ ನಗರದ ತ್ಯಾಜ್ಯ ನಿರ್ವಹಣೆ ವೈಜ್ಞಾಕವಾಗಿ ನಿರ್ವಹಿಸಲು 4.5 ಕೋಟಿ ರೂ.ಗಳ ಮೆಗಾ ಯೋಜನೆಯ ಕಾರ್ಯ ಆರಂಭಗೊಂಡಿದೆ.
    ಈ ಬೃಹತ್ ಯೋಜನೆಗೆ 4.49 ಕೋಟಿ ರೂ. ಯೋಜನಾ ವೆಚ್ಚದಲ್ಲಿ 35 ಶೇಕಡಾವನ್ನು ಕೇಂದ್ರ ಸರ್ಕಾರ 1.57 ಕೋಟಿ ರೂ., 23.30 ಶೇ.(1.04 ಕೋಟಿ) ರಾಜ್ಯ ಸರ್ಕಾರ, 41.70 ಶೇ. (1.87 ಕೋಟಿ) ನಗರಸಭೆ ) ಭರಿಸಲಿದೆ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಯೋಜನೆಗೆ 1.19 ಕೋಟಿ ರೂ., ಸಂಸ್ಕರಣೆ ಮತ್ತು ನಿರ್ವಹಣೆಗೆ 3.30 ಕೋಟಿ ರೂ. ನಿಗದಿ ಮಾಡಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಸಂಸ್ಥೆ ಮೂಲಕ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು, ನಗರಸಭೆಯ ಕೌನ್ಸಿಲ್ ಮೀಟಿಂಗ್ 1 ವರ್ಷದ ಹಿಂದೆ ಅಂಗೀಕರಿಸಿತ್ತು. ಜಿಲ್ಲಾಧಿಕಾರಿ ಮುದ್ರೆ ಒತ್ತಿದ ಬಳಿಕ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ನಗರಸಭೆಗಳ ಚುನಾವಣೆ ಘೋಷಣೆಗೆ ಮುನ್ನವೇ ರಾಜ್ಯ ಪೌರಾಡಳಿತ ಇಲಾಖೆ ನಿರ್ದೇಶಕರು ಮಂಜೂರಾತಿ ನೀಡಿದ್ದು, ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ.

    ಬನ್ನೂರಿನಲ್ಲಿ ಕಾಮಗಾರಿ ಆರಂಭ
    ಈ ಮೆಗಾ ಯೋಜನೆಯಿಂದ ಬನ್ನೂರು ಡಂಪಿಂಗ್ ಯಾರ್ಡ್‌ನ ಆವರಣಗೋಡೆ ಎತ್ತರಿಸಿ ವಿದ್ಯುತ್ ಕಾಮಗಾರಿ ಕಾರ್ಯ ನಡೆಯುತ್ತಿದೆ. ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಯಾರ್ಡ್ ನಿರ್ಮಾಣಕ್ಕಾಗಿ ನಾನಾ ಕಾಮಗಾರಿ, ಯಂತ್ರಗಳ ಖರೀದಿ ಸೇರಿದಂತೆ ಹತ್ತಾರು ಬಗೆಯ ಸಲಕರಣೆಗಳ ಖರೀದಿಗೆ ಸಿದ್ಧತೆ ನಡೆದಿದೆ. ಬನ್ನೂರಿನ ಲ್ಯಾಂಡ್‌ಫಿಲ್ ಸೈಟಿನಲ್ಲಿ ಘನ, ಹಸಿ, ಒಣ ತ್ಯಾಜ್ಯಗಳ ವೈಜ್ಞಾನಿಕ ವಿಂಗಡಣೆಗೆ ಬೇಕಾದ ಯಂತ್ರಗಳ ಜೋಡನೆಗೆ ಬೇಕಾದ ಸ್ಥಳ, ಬೆಡ್ಡಿಂಗ್ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ಶೆಡ್‌ಗಳ ನಿರ್ಮಾಣ, ಕಸ ಸಂಗ್ರಹ, ಸಾಗಾಟಗಳಿಗೆ ಬೇಕಾದ ವಾಹನಗಳ ವ್ಯವಸ್ಥೆ, ಕಾರ್ಮಿಕರು, ತಂತ್ರಜ್ಞರು, ಮೇಲ್ವಿಚಾರಕರು, ಕಾವಲು ಸಿಬ್ಬಂದಿಯ ವ್ಯವಸ್ಥೆಗೆ ನಗರಸಭೆಯ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. 75 ಕಾರ್ಮಿಕರು, ಸಿಬ್ಬಂದಿ ನೇಮಿಸಿಕೊಳ್ಳುವ, 15 ವಾಹನ ಬಳಸಿಕೊಳ್ಳುವ ಯೋಜನೆಯ ಟೆಂಡರ್ ಹಂತ ಮುಗಿದಿದೆ.

    ವೈಜ್ಞಾನಿಕವಾಗಿಲ್ಲದ ಲ್ಯಾಂಡ್‌ಫಿಲ್ ಸೈಟ್
    ಬನ್ನೂರಿನ ನೆಕ್ಕಿಲು ಎಂಬಲ್ಲಿರುವ ಲ್ಯಾಂಡ್‌ಫಿಲ್ ಸೈಟ್ (ಡಂಪಿಂಗ್ ಯಾರ್ಡ್)ನಲ್ಲಿ ಈಗ ಇಡೀ ಪುತ್ತೂರಿನ ತ್ಯಾಜ್ಯ ಸುರಿಯಲಾಗುತ್ತಿದೆ. ಯಾರ್ಡ್ ವೈಜ್ಞಾನಿಕವಾಗಿ ಇಲ್ಲದ ಕಾರಣ ಹತ್ತಾರು ಸಮಸ್ಯೆಗಳು ಕಾಣಿಸುತ್ತಲೇ ಇವೆ. ಇಲ್ಲಿ ವೈಜ್ಞಾನಿಕವಾಗಿ ಕಸ ವಿಂಗಡಣೆಯಾಗುತ್ತಿಲ್ಲ. ಘನ ತ್ಯಾಜ್ಯ, ಹಸಿ ತ್ಯಾಜ್ಯ, ಒಣ ತ್ಯಾಜ್ಯಗಳ ವಿಂಗಡಣೆ ಸಮರ್ಪಕವಾಗಿಲ್ಲ. ಎರೆಗೊಬ್ಬರ ಘಟಕ ವ್ಯರ್ಥವಾಗಿದೆ. ಎಲ್ಲ ಬಗೆಯ ತ್ಯಾಜ್ಯಗಳೂ ಒಟ್ಟಿಗೆ ರಾಶಿ ಬೀಳುವ ಕಾರಣ ಹತ್ತಾರು ಸಮಸ್ಯೆಗಳು ಕಾಣಿಸಿಕೊಂಡಿವೆ. ಪರಿಸರದ ಗ್ರಾಮಸ್ಥರು ನಿರಂತರವಾಗಿ ಯಾರ್ಡ್ ವಿರುದ್ಧ ಹೋರಾಡುತ್ತಲೇ ಇದ್ದಾರೆ. 2017ರ ಮಾರ್ಚ್‌ನಲ್ಲಿ ಯಾರ್ಡ್‌ಗೆ ಬೆಂಕಿ ಬಿದ್ದು ದೊಡ್ಡ ಸಮಸ್ಯೆ ಉಂಟಾಗಿತ್ತು.

    ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆಗೆ 4.5 ಕೋ. ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಮುಂದಿನ 6 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಪುತ್ತೂರಿನ ತ್ಯಾಜ್ಯ ನಿರ್ವಹಣಾ ಕಾರ್ಯ ವೈಜ್ಞಾನಿಕವಾಗಿ ಹಾಗೂ ಯಶಸ್ವಿಯಾಗಿ ನಡೆಯಲಿದೆ.
    ರೂಪಾ ಶೆಟ್ಟಿ, ಪುತ್ತೂರು ನಗರಸಭೆ ಪೌರಾಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts