More

    ಘನತ್ಯಾಜ್ಯ ನಿರ್ವಹಣೆ ಅಸಮರ್ಪಕ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿದೆ. ಮನೆಗಳಲ್ಲಿ ತ್ಯಾಜ್ಯ ವಿಂಗಡಣೆಯಾದರೂ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಸಂಸ್ಥೆ ಸರಿಯಾಗಿ ಸಂಗ್ರಹ ಕೆಲಸ ನಡೆಸುತ್ತಿಲ್ಲ ಎಂದು ಪಾಲಿಕೆ ಪ್ರತಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಮನಪಾದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಭಾಸ್ಕರ ಕೆ. 2018ರಲ್ಲಿ ಮಂಗಳೂರು ನಗರಕ್ಕೆ ಸ್ವಚ್ಛತೆಯಲ್ಲಿ ಪ್ರಥಮ ಪ್ರಶಸ್ತಿ ಲಭಿಸಿತ್ತು. ಆದರೆ ಈಗ ಆ್ಯಂಟನಿ ಸಂಸ್ಥೆಯಿಂದ ಸಮಸ್ಯೆಯಾಗುತ್ತಿದೆ. ಸಮರ್ಪಕ ಕಸ ವಿಲೇ ಮಾಡುತ್ತಿಲ್ಲ ಎಂದು ದೂರಿದರು. ಧ್ವನಿಗೂಡಿಸಿದ ಸದಸ್ಯ ಪ್ರವೀಣ್‌ಚಂದ್ರ ಆಳ್ವ 2012-13ರಲ್ಲಿದ್ದ ಕಸದ ಸಮಸ್ಯೆ 2022ರ ವೇಳೆಗೆ ಮರುಕಳಿಸುವಂತಾಗಿದೆ. ರಸ್ತೆ ಬದಿ ಕಸದ ರಾಶಿ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಆಡಳಿತ ಪಕ್ಷದ ಕೆಲ ಸದಸ್ಯರು ತಮ್ಮ ವಾರ್ಡ್‌ನಲ್ಲಿ ಕಸ ವಿಲೇ ಸಮರ್ಪಕವಾಗಿದೆ ಎಂದಾಗ ನಿಮಗೆ ಪ್ರಭಾವ ಇರಬೇಕು ಎಂದು ಪ್ರತಿಪಕ್ಷ ಸದಸ್ಯರು ಆಕ್ಷೇಪಿಸಿದರು. ಈ ವಿಷಯದಲ್ಲಿ ಕೆಲ ಹೊತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು.

    ಶೇ.70ರಷ್ಟು ಯಶಸ್ಸು: ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ ಮನೆಗಳಿಂದ ತ್ಯಾಜ್ಯ ವಿಂಗಡಣೆಯಲ್ಲಿ ಶೇ.70ರಷ್ಟು ಯಶಸ್ಸು ಸಾಧಿಸಲಾಗಿದೆ. ಪಚ್ಚನಾಡಿಯಲ್ಲಿ ಹೈಕೋರ್ಟ್ ನಿರ್ದೇಶನದಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. 7 ಮೀ. ಎತ್ತರದ ತಡೆಗೋಡೆ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ತ್ಯಾಜ್ಯ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ಆರು ತಿಂಗಳಲ್ಲಿ ಮುಗಿಯಲಿದ್ದು, ಮುಂದೆ ವೈಜ್ಞಾನಿಕ ಮಾದರಿ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ವಹಿಸಲಾಗುವುದು ಎಂದರು. ಆ್ಯಂಟನಿ ಸಂಸ್ಥೆಯ ಗುತ್ತಿಗೆ ಅವಧಿ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಯೋಜನೆ ಸಂಬಂಧಿಸಿ 15 ದಿನದೊಳಗೆ ವಿಸ್ತೃತ ಯೋಜನಾ ವರದಿ ಸಿದ್ಧ್ದಪಡಿಸಲಾಗುವುದು. ಆಗಸ್ಟ್ ಅಂತ್ಯದೊಳಗೆ ಹೊಸ ಟೆಂಡರ್ ಕರೆಯಲಾಗುವುದೆಂದು ಆಯುಕ್ತ ಅಕ್ಷಿ ಶ್ರೀಧರ್ ತಿಳಿಸಿದರು.

    ತುಳು ಸ್ಥಾನಮಾನ ಸರ್ಕಾರಕ್ಕೆ ಪ್ರಸ್ತಾವನೆ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ, ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಟ್ವಿಟರ್ ಅಭಿಯಾನ ನಡೆದಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ ಸರ್ಕಾರವನ್ನು ಒತ್ತಾಯಿಸಬೇಕೆಂದು ಆಡಳಿತ ಪಕ್ಷದ ವರುಣ್ ಚೌಟ ಮನವಿ ಮಾಡಿದರು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರ್ತಸ್ತಾವನೆ ಸಲ್ಲಿಸಲಾಗುವುದೆಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

    ವೃತ್ತಕ್ಕೆ ನಾರಾಯಣ ಗುರು ಹೆಸರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಸರ್ಕಾರದ ಅನುಮೋದನೆ ಕೋರಲು ಪಾಲಿಕೆ ನಿರ್ಧರಿಸಿದೆ. ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಾಮಕರಣ ಮಾಡುವಂತೆ ಸದಸ್ಯೆ ಸಂಧ್ಯಾ ಮೋಹನ್, ಫ್ರೆಂಡ್ಸ್ ಬಳ್ಳಾಲ್‌ಬಾಗ್, ಬಿರುವೆರ್ ಕುಡ್ಲ ಸಂಘಟನೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಮನಪಾ ಆಕ್ಷೇಪಣಾ ಅರ್ಜಿ ಸ್ವೀಕರಿಸಿದೆ. ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಿ ಸರ್ಕಾರದ ಅನುಮೋದನೆ ಕೋರುವ ನಿರ್ಣಯ ಕೈಗೊಂಡಿದೆ.

    ಐಟಿ ಪಾರ್ಕ್‌ಗೆ ಜಾಗ ಕಾನೂನು ಬಾಹಿರ: ಐಟಿ ಪಾರ್ಕ್ ನಿರ್ಮಾಣ ಸಲುಬಾಗಿ ಬೋಂದೆಲ್ ಬಳಿ 9.4 ಎಕರೆ ಖಾಸಗಿ ಜಮೀನನ್ನು ಟಿಡಿಆರ್ ನೀಡಿ ಪಾಲಿಕೆ ಪಡೆಯಲು ಮುಂದಾಗಿರುವುದು ಕಾನೂನು ಬಾಹಿರ. ಈ ಜಮೀನಿನಲ್ಲಿ ಐಟಿ ಪಾರ್ಕ್ ಕಾರ್ಯಸಾಧ್ಯತೆ (ಫಿಸಿಬಿಲಿಟಿ) ವರದಿಯನ್ನು ತಿಳಿಸಲಾಗಿಲ್ಲ. ಐಟಿ ಪಾರ್ಕ್ ಮಾಡಬೇಕಾದರೆ ಸರ್ಕಾರ ಭೂಮಿಯನ್ನು ನೋಟಿಫೈ ಮಾಡಿ ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ನ ಎ.ಸಿ.ವಿನಯರಾಜ್ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚೆ ವಾಗ್ವಾದ ನಡೆದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ, ಯಾವುದೇ ನಿರ್ದಿಷ್ಟ ಜಾಗವನ್ನು ಟಿಡಿಆರ್ ಮೂಲಕ ಭೂಸ್ವಾಧೀನ ಮಾಡಲಾಗುವುದಿಲ್ಲ ಎಂದರು. ಅಕ್ಷಿ ಶ್ರೀಧರ್ ಪ್ರತಿಕ್ರಿಯಿಸಿ, ಪ್ರಸಕ್ತ ತಿಳಿಸಿರುವ ಜಾಗದಲ್ಲೇ ಐಟಿ ಪಾರ್ಕ್ ನಿರ್ಮಾಣಕ್ಕೆ ನಿರ್ಣಯ ಮಾಡಲಾಗುತ್ತಿಲ್ಲ. ಜಾಗ ಕೊಡಲು ಮುಂದಾಗುವವರಿಗೆ ಟಿಡಿಆರ್ ಮೂಲಕ ಭೂಮಿ ಪಡೆಯಲು ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಮಾತ್ರ ಸಲ್ಲಿಸಲಾಗುತ್ತಿದೆ ಎಂದರು.

    ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಮರುವಿನ್ಯಾಸ: ಪ್ರತಿಪಕ್ಷದ ಕೇಶವ ಮಾತನಾಡಿ, ಪಂಪ್‌ವೆಲ್ ಬಳಿ ಬಸ್ ನಿಲ್ದಾಣಕ್ಕೆ ಜಾಗ ಸ್ವಾಧೀನಪಡಿಸಿ ಅನೇಕ ತಿಂಗಳು ಕಳೆದರೂ ಕೆಲಸ ಆರಂಭವಾಗದೆ ಆ ಪ್ರದೇಶ ಡಂಪಿಂಗ್ ಯಾರ್ಡ್ ಆಗಿದೆ ಎಂದರು. ಆಯುಕ್ತರು ಪ್ರತಿಕ್ರಿಯಿಸಿ, ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್ ವಹಿಸಲು ಯಾರೂ ಮುಂದೆ ಬಂದಿಲ್ಲ. ಮರುವಿನ್ಯಾಸ ಮಾಡಲು ನಿರ್ಧರಿಸಿದ್ದು, ಮತ್ತೆ ಟೆಂಡರ್ ಕರೆಯುತ್ತೇವೆ ಎಂದರು.

    ಟೈಗರ್ ಕಾರ್ಯಾಚರಣೆ: ಬಿಜೆಪಿಯ ಪೂರ್ಣಿಮಾ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ರಸ್ತೆ ಬದಿ ಆಕ್ರಮಿಸಿಕೊಳ್ಳುತ್ತಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಪಾಲಿಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಧ್ವನಿಗೂಡಿಸಿದರು. ಮೇಯರ್ ಪ್ರತಿಕ್ರಿಯಿಸಿ, ಅನಧಿಕೃತ ಗೂಡಂಗಡಿ ಸೇರಿದಂತೆ ರಸ್ತೆ ಅಕ್ರಮಿಸುವವರ ವಿರುದ್ಧ ಸದ್ಯದಲ್ಲೇ ಟೈಗರ್ ಕಾರ್ಯಾಚರಣೆ ನಡೆಸಿ ಅಂಗಡಿ ತೆರವು ಮಾಡಲಾಗುವುದು ಎಂದರು.

    ಉಪಮೇಯರ್ ಸುಮಂಗಲಾ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್ ಗರೋಡಿ, ಶೋಭಾ ರಾಜೇಶ್, ಲೀಲಾವತಿ ಮೊದಲಾದವರು ಸಭೆಯಲ್ಲಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts