More

    ವಾರಿಯರ್‌ನ ಓಬವ್ವ ‘ನೂರ್‌ಜಹಾನ್’

    ಬೆಳಗಾವಿ: ಪತಿ ಊಟಕ್ಕೆ ಕುಳಿತಾಗ ಚಿತ್ರದುರ್ಗದ ಕೋಟೆಯೊಳಗೆ ನುಸುಳುತ್ತಿದ್ದ ಶತ್ರುಗಳ ಸಂಹಾರಕ್ಕಾಗಿ ಸ್ವತಃ ತಾನೇ ಹೋರಾಟಕ್ಕಿಳಿದ ದಿಟ್ಟ ಮಹಿಳೆ ಒನಕೆ ಓಬವ್ವಳ ಇತಿಹಾಸ ಚಿರಪರಿಚಿತ. ಅದರಂತೆ ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕರೊನಾ ಸೇನಾನಿ, ತನ್ನ ಪತಿಯ ಹೋರಾಟಕ್ಕೆ ಮಿಡಿದ ಮಡದಿಯ ಕಹಾನಿ ಇಲ್ಲಿದೆ.

    ಆಧುನಿಕ ಓಬವ್ವಳಾದ ‘ನೂರ್‌ಜಹಾನ್’, ಕಾಲ್ನಡಿಗೆಯಿಂದಲೇ 6 ಕಿ.ಮೀ. ದೂರ ಕ್ರಮಿಸಿ ಕರೊನಾ ಹೋರಾಟದಲ್ಲಿರುವ ತನ್ನ ಪತಿ ಅಕ್ಬರ್ ಅಲಿಖಾನ್‌ಗೆ ಆಹಾರ ನೀಡುವ ಮೂಲಕ ಗಮನ ಸೆಳೆದಿದ್ದಾಳೆ.

    ಕರೊನಾ ಹರಡುವಿಕೆ ತಡೆಯಲು ಜಾರಿಗೊಳಿಸಿರುವ ‘ಸಂಡೇ ಲಾಕ್‌ಡೌನ್’ನಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು, ನಗರದಲ್ಲಿ ಹೋಟೆಲ್ ಸಹ ಬಂದ್ ಆಗಿದೆ. ಹೀಗಾಗಿ ಕರ್ತವ್ಯದಲ್ಲಿರುವ ತನ್ನ ಪತಿಗೆ ಆಹಾರ ಸಿಗದೆ ಹಸಿವಿನಿಂದ ಬಳಲಬಹುದೆಂದು ನೂರ್‌ಜಹಾನ್ ಒಬ್ಬಂಟಿಯಾಗಿ ತೆರಳಿ ಆಹಾರ ನೀಡಿದ್ದಾಳೆ. ಆ ಮೂಲಕ ಪತಿಯ ಆರೋಗ್ಯದ ಬಗ್ಗೆ ಕಾಳಜಿ ಮೆರೆದಿದ್ದಾಳೆ.

    ಜನರ ಮೆಚ್ಚುಗೆ: ಕೋವಿಡ್-19 ಭೀತಿಯ ನಡುವೆಯೂ ತನ್ನ ಇಬ್ಬರು ಕಂದಮ್ಮಗಳನ್ನು ಮನೆಯಲ್ಲೇ ಬಿಟ್ಟು, ಸೋಂಕು ತಗಲುವ ಆತಂಕದ ನಡುವೆಯೂ ಉಪಾಹಾರದ ಬ್ಯಾಗ್‌ನೊಂದಿಗೆ ಪತ್ನಿ ನೂರ್‌ಜಹಾನ್ ಪತಿಯಿರುವ ಕಡೆ ಹೆಜ್ಜೆ ಹಾಕಿದಳು. ಈ ದಂಪತಿಯ ಅನ್ಯೋನ್ಯತೆ ಹಾಗೂ ಕಾಳಜಿಗೆ ಅಪಾರ ಜನಮೆಚ್ಚುಗೆ ವ್ಯಕ್ತವಾಗಿದೆ.

    ಉಪಾಹಾರ ತರುತ್ತಾಳೆಂದು ಭಾವಿಸಿರಲಿಲ್ಲ: ಪತ್ನಿ ನೀಡಿದ ಆಹಾರ ಸೇವಿಸಿ ಮತ್ತೆ ಕರ್ತವ್ಯ ಮುಂದುವರಿಸಿದ ಬೆಳಗಾವಿ ಉತ್ತರ ಸಂಚಾರಿ ಠಾಣೆ ಪೇದೆ ಅಕ್ಬರ್ ಅಲಿಖಾನ್ ಮಾತನಾಡಿ, ಪತ್ನಿ ಉಪಾಹಾರ ತರುತ್ತಾಳೆ ಎಂದು ಭಾವಿಸಿರಲಿಲ್ಲ. ಬೆಳಗ್ಗೆ ಕರೆ ಮಾಡಿದಾಗ ‘ಮಕ್ಕಳು ನಾಷ್ಟಾ ಮಾಡಿದ್ರು. ನಿಮ್ಮದು ಆಯ್ತ. ಎಲ್ಲಿದ್ದೀರೀ?’ ಎಂದು ವಿಚಾರಿಸಿದ್ದಳು. ‘ಇಲ್ಲಿ, ಯಾವುದೇ ಹೋಟೆಲ್ ತೆರೆದಿಲ್ಲ.

    ಡ್ಯೂಟಿ ಮುಗಿಸಿ ಮನೆಗೆ ಬರುತ್ತೇನೆ ಎಂದಷ್ಟೇ ಹೇಳಿದ್ದೆ. ಮತ್ತೆ ಫೋನ್ ಮಾಡಿ, ‘ನಾನೇ ಬರುತ್ತಿದ್ದೇನೆ ಡ್ಯೂಟಿಯ ಜಾಗ ಹೇಳಿ’ ಎಂದು ನಡೆದುಕೊಂಡೇ ಬಂದು ಅವಲಕ್ಕಿ ನೀಡಿದ್ದಾಳೆ. ‘ಮನೆಯಲ್ಲಿ ಚಿಕ್ಕ ಮಕ್ಕಳಿಬ್ಬರೇ ಇರುವುದರಿಂದ ಬೇಗ ಅವಲಕ್ಕಿ ತಿಂದು ಆಕೆಯನ್ನು ಮನೆಗೆ ಕಳುಹಿಸಿದೆ ಎನ್ನುತ್ತಲೇ ಅಲಿಖಾನ್ ವಿಸಿಲ್ ಹಾಕುತ್ತಾ ಬ್ಯಾರಿಕೇಡ್ ಬಳಿ ನಿಂತು ಕರ್ತವ್ಯ ಮುಂದುವರಿಸಿದರು.

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts