More

    ಮಲೆನಾಡಲ್ಲಿ ವರುಣನ ಅಬ್ಬರ

    ಬಸವರಾಜ ಖಂಡೇನಹಳ್ಳಿ ಹಿರಿಯೂರು
    ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದು ಬಯಲುಸೀಮೆಗೆ ವರವಾಗಿ ಪರಿಣಿಮಿಸಿದ್ದು, ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು 998 ಕ್ಯೂಸೆಕ್‌ಗೆ ಏರಿಕೆಯಾಗಿದೆ.

    ಮಳೆ ಹೀಗೇ ಆರ್ಭಟಿಸಿದರೆ 89 ವರ್ಷದ ಬಳಿಕ ಸತತ ಎರಡನೇ ಬಾರಿ ಜಲಾಶಯ ಭರ್ತಿ ಆಗಲಿದೆ.

    ವಿವಿ ಸಾಗರ ಜಲಾಶಯದ ಸಂಗ್ರಹ ಸಾಮರ್ಥ್ಯ 30 ಟಿಎಂಸಿ ಅಡಿ ಇದ್ದು, ಕಳೆದ ವರ್ಷ ವರುಣನ ಕೃಪೆಯಿಂದ ಜಲಾಶಯ ಗರಿಷ್ಠ ಮಟ್ಟ ತಲುಪಿ ಕೋಡಿ ಬಿದ್ದಿತ್ತು.

    ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಈ ವರ್ಷವೂ ಜಲಾಶಯ ಭರ್ತಿ ಆಗುವ ನಿರೀಕ್ಷೆ ಮೂಡಿಸಿದೆ.
    ಪ್ರಸ್ತುತ ಜಲಾಶಯದಲ್ಲಿ 24.7 ಟಿಎಂಸಿ ಅಡಿ ನೀರು ಸಂಗ್ರಹವಿದೆ.

    ಇನ್ನು 5.3 ಟಿಎಂಸಿ ಅಡಿ ಬಂದರೆ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ರೈತರ ಕನಸು ನನಸಾಗಲಿದೆ. ಹಾಗಾಗಲೆಂದು ರೈತ ಸಮೂಹ ಪ್ರಾರ್ಥಿಸುತ್ತಿದೆ.

    ಪ್ರಸಕ್ತ ವರ್ಷ ಫೆಬ್ರವರಿ-ಮೇ ಕೊನೆಯವರೆಗೆ 3 ಬಾರಿ ಅಚ್ಚುಕಟ್ಟು ಭಾಗದ ಜಮೀನಿಗೆ ನೀರು ಹರಿಸಲಾಗಿದೆ.

    ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಕುದಾಪುರ ಬಳಿಯ ಡಿಆರ್‌ಡಿಒ-ಭಾರತೀಯ ವಿಜ್ಞಾನ ಸಂಸ್ಥೆಗೆ ನೀರು ಪೂರೈಕೆ ಮಾಡಲಾಗುತ್ತದೆ.

    ಅಪ್ಪರ್ ಭದ್ರಾ ನೀರು ವಿವಿ ಸಾಗರ ಒಡಲು ಸೇರಿದ ನಂತರ ಜಲಾಶಯಕ್ಕೆ ಶುಕ್ರದೆಸೆ ಬಂದಿದೆ. ಕಳೆದ ಮೂರು ವರ್ಷದಿಂದ ಜನ-ಜಾನುವಾರುಗಳ ಕುಡಿವ ನೀರಿನ ಹಾಹಾಕಾರ ದೂರವಾಗಿದೆ.

    ಗದ್ದೆ, ತೋಟಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿವೆ. ತೋಟಗಾರಿಕೆ ಕ್ಷೇತ್ರ ವಿಸ್ತರಣೆಯಾಗಿದೆ. ಅಂತರ್ಜಲ ವೃದ್ಧಿಯಾಗಿ ವರ್ಷ ಪೂರ್ತಿ ಕೃಷಿ ಚಟುವಟಿಕೆಗೆ ಬಲ ತುಂಬಿದೆ.

    ಜಲವೈಭವ ವೀಕ್ಷಿಸಲು ಜನಸಾಗರ: ಶತಮಾನದ ಇತಿಹಾಸವಿರುವ ವಿವಿ ಸಾಗರ ಜಲಾಶಯದ ಸುರಕ್ಷತೆ ಬಗ್ಗೆ ಇತ್ತೀಚೆಗೆ ತಜ್ಞರು ಜಲಾಂತರ್ಗಾಮಿ ಡ್ರೋನ್ ಮೂಲಕ ಪರಿಶೀಲಿಸಿ ಡ್ಯಾಂ ಸುರಕ್ಷಿತವಾಗಿದೆ ಎಂದು ವರದಿ ನೀಡಿದ್ದಾರೆ.

    ಜಲ ವೈಭವ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ. ಜಲಾಶಯದ ಸುತ್ತಮುತ್ತಲಿನ ಪರಿಸರ, ಬೆಟ್ಟ-ಗುಡ್ಡಗಳು ಹಸಿರಿನಿಂದ ನಳನಳಿಸುತ್ತಿವೆ.

    ಗಂಟೆಗೆ ನಾಲ್ಕೈದು ಬಾರಿ ವರುಣನ ಸಿಂಚನ, ಮಲೆನಾಡಿನ ವಾತಾವರಣ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಪ್ರವಾಸೋದ್ಯಮಕ್ಕೆ ಅಭಿವೃದ್ಧಿಯ ಸ್ಪರ್ಶ ಸಿಕ್ಕರೆ ಪ್ರವಾಸಿಗರ ಸ್ವರ್ಗವಾಗಲಿದೆ.

    ಕುಡಿಯವ ನೀರಿನ ಹಂಚಿಕೆ: ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಡಿಆರ್‌ಡಿಒಗೆ 0.980 ಟಿಎಂಸಿ, ಚಳ್ಳಕೆರೆ ತಾಲೂಕಿಗೆ ವೇದಾವತಿ ನದಿ ಮೂಲಕ 0.25, ಐಮಂಗಲ ಹೋಬಳಿಯ 37 ಹಳ್ಳಿಗಳಿಗೆ 0.15,

    ಜಲ ಜೀವನ್ ಮಿಷನ್ ಯೋಜನೆಯಡಿ ಚಿತ್ರದುರ್ಗ-ಹೊಳಲ್ಕೆರೆ ತಾಲೂಕಿನ 198 ಹಳ್ಳಿಗಳಿಗೆ 0.357,

    ಹಿರಿಯೂರು ತಾಲೂಕಿನ 131 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ 0.220, ಚಿತ್ರದುರ್ಗ-ಹಿರಿಯೂರಿನ 300 ಜನವಸತಿ ಪ್ರದೇಶಕ್ಕೆ ವಾರ್ಷಿಕ 0.369 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದೆ.

    ವೇದಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು 998 ಕ್ಯೂಸೆಕ್ ತಲುಪಿದೆ. ಮಳೆ ಮುಂದುವರಿದರೆ ಒಳ ಹರಿವು ಇನ್ನಷ್ಟು ಹೆಚ್ಚಳವಾಗಲಿದೆ.
    ವಿಜಯಕುಮಾರ್, ನೀರಾವರಿ ಇಲಾಖೆ, ಹಿರಿಯೂರು

    ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಯೋಜನೆ ಜಾರಿಗಾಗಿ ನಿರಂತರ ಹೋರಾಟ ನಡೆಸಿದ್ದು ಹಾಗೂ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಮೀಸಲಿಟ್ಟು, ಕಾಮಗಾರಿಗೆ ವೇಗ ನೀಡಿದ್ದರ ಫಲವಾಗಿ, ಭದ್ರೆ ವಿವಿ ಸಾಗರದ ಒಡಲು ಸೇರಿದೆ. ಕಾಮಗಾರಿ ತ್ವರಿತ ಪೂರ್ಣಗೊಳಿಸಿ, ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ.
    ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts