More

    ಕುಡಿಯುವ ನೀರಿಗಾಗಿ ಕಾಲುವೆಗಳಿಂದ ಕೆರೆ ತುಂಬಿಸಿ

    ಆಲಮಟ್ಟಿ: ಲಾಲ್ ಬಹಾದುರ್ ಶಾಸಿ ಜಲಾಶಯ ವ್ಯಾಪ್ತಿಯ ಅಖಂಡ ವಿಜಯಪುರ ಜಿಲ್ಲೆಯ ಜನರ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆ ತುಂಬಿಸಬೇಕು ಎಂದು ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ ಹೇಳಿದರು.

    ಆಲಮಟ್ಟಿಯಲ್ಲಿರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಎಸ್‌ಬಿಐ ಬ್ಯಾಂಕ್ ಮಾರ್ಗವಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಕಚೇರಿಗೆ ಶನಿವಾರ ತೆರಳಿ ಉಪ ಮುಖ್ಯ ಇಂಜಿನಿಯರ್ ಸುರೇಶ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಲಕ್ಷಾಂತರ ಎಕರೆ ಜಮೀನು, ನೂರಾರು ಊರುಗಳು ಮುಳುಗಡೆಯಾಗಿವೆ. ಲಕ್ಷಾಂತರ ಕುಟುಂಬಗಳು ಸಂತ್ರಸ್ತರಾಗಿರುವ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತೆ ಮಾಡಲು ಅಧಿಕಾರಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು-ಹಿಂಗಾರು ಮಳೆಗಳು ಸಮರ್ಪಕವಾಗಿ ಸುರಿಯದಿದ್ದರೂ ಕೃಷ್ಣೆಯ ಉಗಮಸ್ಥಾನ ಮಹಾಬಲೇಶ್ವರ ಮತ್ತು ಕೃಷ್ಣೆಯ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ಕೃಷ್ಣೆಗೆ ನೀರು ಹರಿದುಬಂದು ಜನತೆಯ ದಾಹ ನೀಗಿಸುವಂತಾಗಿದೆ ಎಂದರು.

    ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಜಲಾಶಯ ನಿರ್ಮಿಸಿ ನೂರಾರು ಟಿಎಂಸಿ ನೀರು ಸಂಗ್ರಹ ಮಾಡಿಕೊಂಡಿದ್ದರೂ ಜಿಲ್ಲೆಯ ಜನರಿಗೆ ನೀರು ಕೊಡಲು ಮಾತ್ರ ಮೀನ-ಮೇಷ ಎಣಿಸುವದೇಕೆ? ಆಲಮಟ್ಟಿ ಜಲಾಶಯದ ಸಹೋದರ ಜಲಾಶಯವಾಗಿರುವ ಬಸವಸಾಗರ ಜಲಾಶಯ ವ್ಯಾಪ್ತಿಯ ರೈತರು ನೀರು ಕೇಳಿದಾಗ ನೀರು ಕೊಡುವ ನೀವು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಜಿಲ್ಲೆಯ ಜನರಿಗೆ ನೀರು ಕೊಡಲು ಸಬೂಬು ಹೇಳುವುದಾದರೂ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಉಪ ಮುಖ್ಯ ಇಂಜಿನಿಯರ್ ಸುರೇಶ ಅವರಿಗೆ ರೈತ ಸಂಘಟನೆಯ ಪದಾಧಿಕಾರಿಗಳು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಇದಕ್ಕೆ ಉತ್ತರಿಸಿದ ಉಪಮುಖ್ಯ ಇಂಜಿನಿಯರ್, ಇತ್ತೀಚೆಗಷ್ಟೇ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲಾಗಿದೆ ಎಂದರು. ಇದಕ್ಕೆ ಆಕ್ರೋಶಗೊಂಡ ರೈತರು ನಮ್ಮೊಂದಿಗೆ ನಡೆಯಿರಿ ಕಿರಿಶ್ಯಾಳ, ಶೀಕಳವಾಡಿ ಕೆರೆಗಳು ಹಾಗೂ ಅವಳಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿಯಾಗುತ್ತಿವೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

    ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಐ.ಎಲ್.ಕಳಸಾ ಹಾಗೂ ನಿಡಗುಂದಿ ತಾಲೂಕು ರಾಜ್ಯ ರೈತ ಸಂಘ- ಹಸಿರು ಸೇನೆ ಅಧ್ಯಕ್ಷ ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ವೆಂಕಟೇಶ ವಡ್ಡರ, ರವಿಶಂಕರ ಕೋತಿನ್, ರಮೇಶ ವಡ್ಡರ, ಪೀರಸಾಬ ನದಾಫ್, ಶಶಿಕಾಂತ ಪಾಟೀಲ, ರಾಯವ್ವ ಮೇಟಿ, ಪಾರುಬಾಯಿ ಲಮಾಣಿ, ಶಾಂತವ್ವ ಮಡಿವಾಳರ, ಸುಭಾಸ ಚೋಪಡೆ, ಸಂಗಮೇಶ ಹೊನಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts