More

    ರಕ್ತ ಕೊಟ್ಟಾದರೂ ನೀರು ಪಡೆಯುತ್ತೇವೆ

    ಕೊಡೇಕಲ್: ಮೆಣಸಿನಕಾಯಿ ಬೆಳೆಗೆ ಸದ್ಯ ನೀರು ಬೇಕಿದ್ದು, ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದಡಿ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ನೂರಾರು ರೈತರು ಶುಕ್ರವಾರ ಜಲಾಶಯಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

    ಬೆಳಗ್ಗೆ ೪೦ಕ್ಕೂ ಹೆಚ್ಚು ವಾಹನಗಳಲ್ಲಿ ನಾರಾಯಣಪುರಕ್ಕೆ ಆಗಮಿಸಿದ ರೈತರು ಚೆಕ್‌ಪೋಸ್ಟ್ನಿಂದ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಜಲಾಶಯದೊಳಗೆ ನುಗ್ಗಲು ಪ್ರಯತ್ನಿಸಿದರು. ಆದರೆ ಟೈಟ್ ಬಂದೋಬಸ್ತ್ ಮಾಡಿದ ಪೊಲೀಸರು ಅವಕಾಶ ನೀಡದ್ದರಿಂದ ಅಣೆಕಟ್ಟು ಎದುರೇ ಕುಳಿತು ಸರ್ಕಾರ ಮತ್ತು ನಿಗಮದ ಅಧಿಕಾರಿಗಳ ನಡೆ ವಿರುದ್ಧ ಕಿಡಿಕಾರಿದರು.

    ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಮದ್ದರಕಿ ಮಾತನಾಡಿ, ನಾವು ಸಾರಾಯಿ ಕುಡಿಯಲು, ಗಾಂಜಾ ಬೆಳೆಯಲು ನೀರು ಕೇಳುತ್ತಿಲ್ಲ. ನಮ್ಮ ರಕ್ತವನ್ನಾದರೂ ಕೊಟ್ಟು ಕಾಲುವೆಗೆ ನೀರು ಹರಿಸುವಂತೆ ಮಾಡುತ್ತೇವೆ. ಸಚಿವರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದ್ದರೂ ಸ್ಪಂದಿಸುತ್ತಿಲ್ಲ. ಜನವರಿಯಲ್ಲಿ ೧೦ ಮತ್ತು ಫೆಬ್ರವರಿಯಲ್ಲಿ ೧೦ ದಿನ ನೀರು ಹರಿಸಲೇಬೇಕು ಎಂದು ಗುಡುಗಿದರು.

    ಈಗಾಗಲೇ ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರಕ್ಕೆ ವಿಷಯದ ಗಂಭೀರತೆ ಅರ್ಥವಾಗುತ್ತಿಲ್ಲ. ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ, ಸರ್ಕಾರ ರೈತರನ್ನು ಉಗ್ರರಂತೆ ಕಾಣುತ್ತಿದೆ. ನಾವು ಅನ್ನ ನೀಡುವ ರೈತರು. ತಾಳ್ಮೆ ಪರೀಕ್ಷೆ ಮಾಡಬೇಡಿ. ಈಗಾಗಲೇ ಹಲವು ಬಾರಿ ಪ್ರತಿಭಟಿಸಿದ್ದೇವೆ. ರೈತರ ಸಂಯಮದ ಕಟ್ಟೆ ಒಡೆದರೆ ಸಂಭವನೀಯ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತ ಮುಖಂಡರಾದ ಎಸ್.ಎಸ್. ಸಲಗಾರ, ಮಹಾವೀರ ಲಿಂಗೇರಿ, ದೇವದುರ್ಗ ತಾಲೂಕಿನ ಅಧ್ಯಕ್ಷ ಮಹಾದೇವ ಯಾದವ್, ಶಿರವಾಳದ ರಾಜು ಕುಲಕರ್ಣಿ ಮಾತನಾಡಿದರು.

    ಸ್ಥಳಕ್ಕೆ ಆಗಮಿಸಿದ ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್‌ಎಲ್) ಮುಖ್ಯ ಅಭಿಯಂತರರಾದ ಆರ್. ಮಂಜುನಾಥ (ನಾರಾಯಣಪುರ), ಪ್ರೇಮಸಿಂಗ್ (ಭೀಮರಾಯನ ಗುಡಿ) ಮಾತನಾಡಿ, ಸಲಹಾ ಸಮಿತಿ ತೀರ್ಮಾನದಂತೆ ಮುಂಗಾರು ಬೆಳೆಗಳಿಗೆ ೧೩೧ ದಿನ ನೀರು ಹರಿಸಲಾಗಿದೆ. ಜಲಾಶಯದಲ್ಲಿ ೯.೯೧ ಟಿಎಂಸಿ ನೀರು ಲಭ್ಯವಿದ್ದು, ಕುಡಿಯಲು, ವಿದ್ಯುತ್, ಕೈಗಾರಿಕೆಗಳಿಗೆ ಕೊಡಬೇಕಿದ್ದರಿಂದ ಹಿಂಗಾರು ಬೆಳೆಗೆ ನೀರು ಹರಿಸಲು ಸಾಧ್ಯವಿಲ್ಲ. ನಿಮ್ಮ ಮನವಿಯನ್ನು ನಿಗಮದ ಎಂಡಿಗೆ ಕಳುಹಿಸಲಾಗುವುದು ಎಂದು ಹೇಳಿದರು.

    ಸಂಘಟನೆಗಳ ಪ್ರಮುಖರಾದ ಇಂದ್ರಜೀತ ಯಾದವ್, ಅಮೃತ ಸಾಹು ಕೋಟಿಖಾನಿ, ವಿಜಯರಾಜ ತಿಂಥಣಿ, ನಾಗರಾಜ ಗುಂಡಕನಾಳ, ವೆಂಕಟೇಶ ನಾಯಕ, ವೆಂಕಟೇಶ ಶಾರದಳ್ಳಿ, ದೇವಪ್ಪ ದೋರಿ, ಮಲ್ಲಿಕಾರ್ಜುನ, ರಾಯಪ್ಪಗೌಡ, ಮಲ್ಲಿಕಾರ್ಜುನ, ಗೌಡಪ್ಪ ದೊರೆ, ನಿಂಗಣ್ಣ ಕುಂಬಾರ, ಮಹೇಶ, ಯಲ್ಲಪ್ಪ, ಪರಶುರಾಮ ಮೊದಲಾದವರು ಪಾಲ್ಗೊಂಡಿದ್ದರು.

    ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಎಂಡಿ: ಸ್ಥಳಕ್ಕೆ ಆಗಮಿಸಿದ ನಿಗಮದ ಇಬ್ಬರು ಮುಖ್ಯ ಅಭಿಯಂತರರು ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪ್ರತಿಭಟನಾನಿರತ ರೈತರು ಸಮಾಧಾನಗೊಳ್ಳಲಿಲ್ಲ. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಸಿಇ ಪ್ರೇಮಸಿಂಗ್ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನರಾಜ್ ಜತೆ ವಿಡಿಯೋ ಕಾಲ್ ಮಾಡಿ ರೈತರೊಂದಿಗೆ ಮಾತನಾಡಿಸಿದರು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟದ ಬಗ್ಗೆ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ದೂರವಾಣಿಯಲ್ಲಿ ಮಾತನಾಡಿದ್ದು, ಸರ್ಕಾರಕ್ಕೆ ವಾಸ್ತವ ಸಂಗತಿ ತಿಳಿಸಲಾಗಿದೆ. ಸರ್ಕಾರದ ತೀರ್ಮಾನದಂತೆ ನಾವು ನಡೆದುಕೊಳ್ಳುವುದಾಗಿ ಮೋಹನರಾಜ್ ಹೇಳಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

    ಬಿಗಿ ಪೊಲೀಸ್ ಬಂದೋಬಸ್ತ್: ಬಸವಸಾಗರ ಜಲಾಶಯ ಮುಂದೆ ರೈತ ಸಂಘ ಮತ್ತು ರೈತ ಸೇನೆಯವರು ನಡೆಸಿದ ಪ್ರತಿಭಟನೆಯಲ್ಲಿ ವಿವಿಧೆಡೆಯ ರೈತರು ಪಾಲ್ಗೊಂಡಿದ್ದರಿAದ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಸ್ಥಳದಲ್ಲೇ ಹಾಜರಿದ್ದರು. ಪ್ರತಿಭಟನೆ ವಿಕೋಪಕ್ಕೆ ಹೋಗದಂತೆ ಜಲಾಶಯ ಮತ್ತು ನಿಗಮದ ಕಚೇರಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಮತ್ತು ವಿಜಯಪುರದ ಹೆಚ್ಚುವರಿ ಎಸ್‌ಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐ ಸೇರಿ ೩೦೦ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

    ಕಾಲುವೆಗೆ ಸಮರ್ಪಕ ನೀರು ಹರಿಸದ್ದರಿಂದ ಮೆಣಸಿನಕಾಯಿ ಬೆಳೆ ನಷ್ಟದತ್ತ ಸಾಗುತ್ತಿದೆ. ಜಿಲ್ಲೆಯ ರೈತರು ಲಕ್ಷಾಂತರ ರೂ. ಸಾಲ ಮಾಡಿ ೭೮ ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಫಸಲು ಕೈಗೆ ಬರುವ ವೇಳೆ ಕಾಲುವೆಗೆ ನೀರು ಹರಿಸುವಿಕೆ ಸ್ಥಗಿತಗೊಳಿಸಿದ್ದರಿಂದ ದಿಕ್ಕು ತೋಚದಂತಾಗಿದೆ.
    | ಲಕ್ಷ್ಮೀಕಾಂತ ಪಾಟೀಲ್ ಮದ್ದರಕಿ ರೈತ ಸೇನೆ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts