More

    ವೃಕ್ಷದೇವೋಭವ, ಮರಗಳನ್ನು ಬೆಳೆಸೋಣ, ಕರೊನಾ ಗೆಲ್ಲೋಣ

    (ಈಗಾಗಲೇ ನಾವು ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವ… ಎಂದೆಲ್ಲ ಹಿರಿಯರ ನುಡಿಗಳನ್ನು ಕೇಳಿದ್ದೇವೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ವೃಕ್ಷದೇವೋಭವ ಎಂಬ ಮಾತನ್ನು ತಪ್ಪದೇ ಪರಿಪಾಲಿಸಬೇಕಾಗಿದೆ. ಜಗುಲಿಯ ಮೇಲಿನ ದೇವರನ್ನು ಭಕ್ತಿಯಿಂದ ಪೂಜಿಸುವಂತೆ ಮನೆಯ ಪರಿಸರದಲ್ಲಿ ಒಂದೆರಡು ಗಿಡಗಳನ್ನು ನೆಟ್ಟು ಅವುಗಳನ್ನೂ ದೇವರೆಂತಲೇ ಭಾವಿಸಿ ಪ್ರೀತಿಯಿಂದ, ಭಕ್ತಿಯಿಂದ ಬೆಳೆಸಿದರೆ ಅವೇ ನಮ್ಮ ಮನೆಯವರೆಲ್ಲರನ್ನೂ ರಕ್ಷಿಸುತ್ತವೆ.))

    ಲೇಖನ: ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು

    ಕಾಶಿ ಜ್ಞಾನ ಪೀಠ, ವಾರಣಾಸಿ, ಉತ್ತರಪ್ರದೇಶ

    ವೃಕ್ಷದೇವೋಭವ, ಮರಗಳನ್ನು ಬೆಳೆಸೋಣ, ಕರೊನಾ ಗೆಲ್ಲೋಣ

    ಮನುಕುಲದ ಜೀವನ ವಿಧಾನ ವಿಚಿತ್ರವಾದ ದಿಕ್ಕುಗಳಲ್ಲಿ ಹಂಚಿಕೆಯಾಗಿರುವುದರಿಂದ ಮನುಷ್ಯರು ಸದೃಢವಾದ ಆರೋಗ್ಯಪೂರ್ಣ ದೈಹಿಕ ಸಂಪತ್ತನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ನಮ್ಮೊಳಗಿನ ರೋಗ ನಿರೋಧಕ ಶಕ್ತಿ ಸಂಚಯವನ್ನು ಅಧಿಕಗೊಳಿಸಿಕೊಳ್ಳುವಲ್ಲಿ ಎಡವಿದ್ದರಿಂದಲೇ ಮಾರಕ ಕರೊನಾ ಈಗ ತನ್ನ ದೈತ್ಯ ಶಕ್ತಿಯನ್ನು ಮೆರೆದು ಜನರ ಜೀವಹರಣ ಮಾಡುತ್ತಿದೆ. ಭಾರತದೆಲ್ಲೆಡೆ ಈಗ ಮರಣಮೃದಂಗಕ್ಕೆ ಕಾರಣವಾಗಿರುವ ಕರೊನಾ ಎರಡನೇ ಹಂತದ ಅಲೆ ದಟ್ಟವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ವ್ಯಾಪಕವಾಗಿ ಕೇಳಿ ಬಂದದ್ದು ಪ್ರಾಣವಾಯು ಅಂದರೆ ಆಮ್ಲಜನಕದ ಕೊರತೆ. ಇದಕ್ಕೆಲ್ಲ ಪ್ರಮುಖ ಕಾರಣ ನಾವು ಸಸ್ಯ ಸಂಪತ್ತಿನ ಹಸಿರು ಐಸಿರಿಯನ್ನು ಉಳಿಸಿಕೊಳ್ಳಲು ವಿಫಲವಾದದ್ದು.

    ಮನುಷ್ಯನ ಬದುಕಿಗೆ ಅನ್ನ, ನೀರು ಮತ್ತು ಪ್ರಾಣವಾಯು ಈ ಮೂರು ವಸ್ತುಗಳ ಅವಶ್ಯಕತೆ ಇದೆ. ಒಬ್ಬ ಮನುಷ್ಯ ಒಂದು ಹೊತ್ತಿಗೆ ಕಾಲು ಇಲ್ಲವೇ ಅರ್ಧ ಕೆಜಿ ಆಹಾರವನ್ನು ಸೇವಿಸುತ್ತಾನೆ. ಒಂದು ದಿನಕ್ಕೆ 3ರಿಂದ 6 ಲೀಟರ್ ನೀರನ್ನು ಕುಡಿಯುತ್ತಾನೆ. ಆದರೆ ಪ್ರತಿಯೊಬ್ಬ ಮನುಷ್ಯನು ಒಂದು ದಿವಸಕ್ಕೆ 21,600 ಸಲ ಶ್ವಾಸೋಚ್ಛಾಸವನ್ನು ಮಾಡುವುದರಿಂದ ಅವನಿಗೆ ಒಂದು ದಿವಸಕ್ಕೆ 550 ಲೀಟರ್ ಪ್ರಾಣವಾಯು ಬೇಕಾಗುತ್ತದೆ. ಜಗತ್ತಿನ ಎಲ್ಲ ಜೀವರಾಶಿಗಳು ಪ್ರಾಣವಾಯುವನ್ನು ತೆಗೆದುಕೊಂಡು ಅಂಗಾರಾಮ್ಲ (ಇಂಗಾಲದ ಡೈ ಆಕ್ಸೈಡ್) ವಾಯುವನ್ನು ಹೊರಗೆ ಹಾಕುತ್ತವೆ. ಆದರೆ ಸಕಲ ಜೀವರಾಶಿಗಳು ತ್ಯಜಿಸಿದ ಅಂಗಾರಾಮ್ಲ ವಾಯುವನ್ನು ಸ್ವೀಕರಿಸಿ ಪ್ರಾಣವಾಯುವನ್ನು ಕೊಡುವ ಒಂದೇ ಒಂದು ಜೀವಿ ಎಂದರೆ ಅದು ಸಸ್ಯ (ವನಸ್ಪತಿ) ಮಾತ್ರ. ಅಂತೆಯೇ ಸೃಷ್ಟಿಕರ್ತನಾದ ಶಿವನು ಪ್ರಕೃತಿಯಲ್ಲಿ ವೃಕ್ಷಗಳನ್ನು ಸೃಷ್ಟಿಸಿ ಅವುಗಳಿಂದ ಸಹಜವಾಗಿ ಎಲ್ಲ ಪ್ರಾಣಿಗಳಿಗೆ ಹೇರಳವಾಗಿ ಪ್ರಾಣವಾಯು ಸಿಗುವಂತೆ ಮಾಡಿದ್ದಾನೆ.

    ವೈಜ್ಞಾನಿಕರ ವಿಚಾರದಂತೆ ಒಂದು ಬೆಳೆದು ನಿಂತ ಗಿಡವು ಒಂದು ದಿವಸಕ್ಕೆ ಎರಡು ನೂರು ಜನರಿಗೆ ಬೇಕಾಗುವಷ್ಟು ಪ್ರಾಣವಾಯುವನ್ನು ಉತ್ಪಾದಿಸುತ್ತದೆ. ಅಂದರೆ ಒಂದು ವೃಕ್ಷವು ಒಂದು ದಿವಸಕ್ಕೆ 1,10,000 ಲೀಟರ್ ಪ್ರಾಣವಾಯುವನ್ನು ಉತ್ಪಾದಿಸುತ್ತದೆ. ಅಂದಾಗ ಇಂತಹ ವೃಕ್ಷಕ್ಕೆ ಬೆಲೆ ಕಟ್ಟಲಾಗುತ್ತದೆಯೇ? ಆ ವೃಕ್ಷವನ್ನು ನಾವು ಕಡಿಯದೆ ಜೋಪಾನ ಮಾಡಿದರೆ ಅದು ನಿರಂತರ 200 ವರ್ಷಗಳವರೆಗೆ ಪ್ರಾಣವಾಯುವನ್ನು ಕೊಡುತ್ತಲೇ ಇರುತ್ತದೆ. ಕಾರಣ ಪ್ರತಿಯೊಬ್ಬರೂ ತಮ್ಮ ಮನೆಯ ಹಿತ್ತಲಲ್ಲಿ ಇಲ್ಲವೇ ಮುಂಭಾಗದಲ್ಲಿ ಸ್ಥಳವಿದ್ದರೆ ವೃಕ್ಷವನ್ನು ಅವಶ್ಯವಾಗಿ ಬೆಳೆಸಲೇಬೇಕು. ಜಗುಲಿಯ ಮೇಲಿನ ದೇವರನ್ನು ಭಕ್ತಿಯಿಂದ ಪೂಜಿಸುವಂತೆ ಮನೆಯ ಪರಿಸರದಲ್ಲಿ ಒಂದೆರಡು ಗಿಡಗಳನ್ನು ನೆಟ್ಟು ಅವುಗಳನ್ನೂ ಸಹ ದೇವರೆಂತಲೇ ಭಾವಿಸಿ ಪ್ರೀತಿಯಿಂದ(ಭಕ್ತಿಯಿಂದ) ಬೆಳೆಸಿದರೆ ಅವೇ ನಮ್ಮ ಮನೆಯವರೆಲ್ಲರನ್ನೂ ರಕ್ಷಿಸುತ್ತವೆ. ಅಂತೆಯೇ ಪ್ರಸ್ತುತ ವೃಕ್ಷದೇವೋಭವ ಎಂಬ ಉಕ್ತಿಯನ್ನು ಪ್ರತಿಯೊಬ್ಬರೂ ಪರಿಪಾಲಿಸುವುದು ಇಂದು ಅನಿವಾರ್ಯವಾಗಿದೆ.

    ಮನೆಯಲ್ಲಿಯ ದೇವರನ್ನು ಪೂಜಿಸಲು ಶುದ್ಧ ಮತ್ತು ಪವಿತ್ರವಾದ ನೀರಿನ ಅವಶ್ಯಕತೆ ಇರುತ್ತದೆ. ಆದರೆ ವೃಕ್ಷ ದೇವರಿಗೆ ನೀವು ಸ್ನಾನ ಮಾಡಿದ, ಬಟ್ಟೆ ತೊಳೆದ, ಪಾತ್ರೆಗಳನ್ನು ಸ್ವಚ್ಛ ಮಾಡಿದ ನೀರನ್ನೇ ಹಾಕಿದರೂ ಅವು ಪ್ರಸನ್ನತೆಯಿಂದ ಬೆಳೆದು ನಮ್ಮ ಪ್ರಾಣಗಳನ್ನು ರಕ್ಷಿಸುತ್ತವೆ. ಆದ್ದರಿಂದ ಗಿಡಗಳನ್ನು ಪೂಜಿಸುವುದು ಮೂಢನಂಬಿಕೆಯಲ್ಲ. ಅದರ ಹಿಂದಿನ ವೈಜ್ಞಾನಿಕತೆಯನ್ನು ಇಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಗಿಡಗಳು ಕೊಡುತ್ತಿರುವ ಶುದ್ಧ ಪ್ರಾಣವಾಯುವನ್ನು ಇಂದು ನಾವು ಬಳಸುವ ನಮ್ಮ ವಾಹನಗಳ ಹೊಗೆಯ ಮೂಲಕ ಮಲಿನಗೊಳಿಸಿದ್ದರ ಪರಿಣಾಮವಾಗಿ ಕರೊನಾದಂತಹ ವಿಕಟ ಪರಿಸ್ಥಿತಿಯಲ್ಲಿ ಪ್ರಾಣವಾಯುವಿನ ಕೊರತೆಯಿಂದ ಅನೇಕ ರೋಗಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಮಾನ, ರೈಲು ಮತ್ತು ಟ್ರಕ್ಕುಗಳ ಮೂಲಕ ಇಡೀ ದೇಶಕ್ಕೆ ಪ್ರಾಣವಾಯುವನ್ನು ತಲುಪಿಸುವುದು ಸಾಧ್ಯವೇ? ನಿಸರ್ಗದಲ್ಲಿಯ ಗಿಡಗಳೇ ಪ್ರಾಣವಾಯುವಿನ ಉತ್ಪಾದಕರು. ಇನ್ನು ಮೇಲಾದರೂ ಅವುಗಳನ್ನು ಬೆಳೆಸಿ ರಕ್ಷಿಸಿದರೆ ಅವು ಜಗತ್ತನ್ನು ರಕ್ಷಿಸುತ್ತವೆ. ಧಮೋ ರಕ್ಷತಿ ರಕ್ಷಿತಃ ಎನ್ನುವಂತೆ ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಹೊಸ ಪಾಠವನ್ನು ನಾವೆಲ್ಲ ಅಭ್ಯಾಸ ಮಾಡಬೇಕಾಗಿದೆ. ಆವಾಗಲೇ ಕರೊನಾದಂತಹ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಹಾರ, ನೀರನ್ನು ಪ್ರಸನ್ನತೆಯಿಂದ ಕುಳಿತು ಸೇವಿಸುವಂತೆ ಇಂದು ಪ್ರತಿಯೊಬ್ಬರೂ ಪ್ರಾತಃಕಾಲದ ಪರಿಶುದ್ಧ ವಾತಾವರಣದಲ್ಲಿ ಅನುಲೋಮ-ವಿಲೋಮ ಮುಂತಾದ ಸಹಜ ಪ್ರಾಣಾಯಾಮವನ್ನು ದೀರ್ಘಕಾಲದವರೆಗೆ ಮಾಡುವ ಅಭ್ಯಾಸವನ್ನು ಇಟ್ಟುಕೊಂಡು ತಮ್ಮ ದೇಹದ ಪ್ರಾಣವಾಯುವಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು.

    ಕರೊನಾ ಕಾಣಿಸಿಕೊಂಡರೆ ಭಯ ಬೇಡ

    ನಮ್ಮ ದೇಹದೊಳಗೆ ಕರೊನಾ ವೈರಸ್ ಪ್ರವೇಶಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಪಾಲಿಸೋಣ. ಯಾರಿಗೇ ಆಗಲಿ ಕರೊನಾ ಪಾಸಿಟಿವ್ ಎಂದಾಕ್ಷಣ ಸಂಪೂರ್ಣ ಕುಸಿದು ನೆಲಕಚ್ಚಿ ನಲುಗಿ ಹೋಗುವುದು ಬೇಡ. ಇಲ್ಲಿ ಧೈರ್ಯಂ ಸರ್ವತ್ರ ಸಾಧನಂ ಎಂಬ ಉಕ್ತಿ ಹೆಚ್ಚು ಹತ್ತಿರವಾದದ್ದು. ವೈದ್ಯಕೀಯ ಚಿಕಿತ್ಸೆಯ ವಿಧಾನಗಳಿಗೆ ತೆರೆದುಕೊಳ್ಳುವ ಮೂಲಕ ಆತ್ಮಸ್ಥೈರ್ಯವನ್ನು ವರ್ಧಿಸಿಕೊಂಡು ಎದೆಗುಂದದೆ ರೋಗದಿಂದ ಮುಕ್ತವಾಗುವಲ್ಲಿ ಎಲ್ಲರೂ ಮುನ್ಹೆಜ್ಜೆ ಇಡಬೇಕಾಗುತ್ತದೆ.

    ಆಯುರ್ವೇದದಿಂದಲೂ ಲಾಭ

    ಕರೊನಾ ನಿವಾರಣೆಗೆ ಅಲೋಪಥಿಕ್ ಚಿಕಿತ್ಸಾ ವಿಧಾನದ ಜತೆಗೆ ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯೂ ಅನೇಕ ಸಲಹೆಗಳನ್ನು ನೀಡಿದೆ. ನಿತ್ಯವೂ ಲಿಂಬೆ ಹಣ್ಣು ಸೇರಿದಂತೆ ಸಿ ವಿಟಮಿನ್ ಯುಕ್ತವಾದ ವಿಭಿನ್ನ ಹಣ್ಣುಗಳನ್ನು ಸೇವಿಸುವುದು. ಬಿಸಿನೀರಿನ ಹಬೆಯನ್ನು ಆಸ್ವಾದಿಸುವ ಕ್ರಮ ಕರೊನಾ ನಿವಾರಿಸುವಲ್ಲಿ ಸುಲಭ ಸಾಧ್ಯವಾದದ್ದು. ರಾತ್ರಿ ಮಲಗುವ ಮುನ್ನ ಬಿಸಿ ಹಾಲಿನಲ್ಲಿ ಶ್ರೇಷ್ಠ ದರ್ಜೆಯ ಅರಿಷಿಣ ಪುಡಿಯನ್ನು ಸೇರಿಸಿ ಸೇವಿಸುವುದು. ಜತೆಗೆ ಬೆಳ್ಳುಳ್ಳಿ, ಕಾಳುಮೆಣಸು, ಹಸಿಶುಂಠಿ ಮುಂತಾದವುಗಳನ್ನು ನಿತ್ಯವೂ ಆಹಾರದಲ್ಲಿ ಮರೆಯದೆ ಬಳಸುವುದು ಅತ್ಯಂತ ಕಡಿಮೆ ವೆಚ್ಚದ ಚಿಕಿತ್ಸಾ ವಿಧಾನವೂ ಆಗಿದೆ. ಶ್ರೀಸಾಮಾನ್ಯರೂ ಸಹ ಕರೊನಾ ಪ್ರಹಾರದಿಂದ ರಕ್ಷಣೆ ಪಡೆಯಲು ಇದರಿಂದ ಸಾಧ್ಯವಾಗುತ್ತದೆ. ಕರೊನಾ ವೈರಸ್ ನಾಶಕ್ಕೆ ಶಕ್ತಿ ಪ್ರಾಪ್ತಿಯಾಗುತ್ತದೆ ಎನ್ನುವುದು ನಮ್ಮ ಆಯುರ್ವೇದ ವಿದ್ವಾಂಸರ ಸ್ಪಷ್ಟ ಅಭಿಪ್ರಾಯವಾಗಿದೆ.

    ಸ್ವರಕ್ಷಣೆಗಾಗಿ ಇಷ್ಟನ್ನು ಪಾಲಿಸಿ

    ನಿತ್ಯವೂ ಪ್ರಾಣಾಯಾಮ, ಕಪಾಲಭಾತಿ ಮತ್ತಿತರ ಯೋಗಾಭ್ಯಾಸದ ಪಾಠಕ್ರಮಗಳ ಮೂಲಕ ಅತಿ ಹೆಚ್ಚು ಆಮ್ಲಜನಕವನ್ನು ಸೇವಿಸುವಲ್ಲಿ ಪ್ರಾತಃಕಾಲ ಮತ್ತು ಸಂಧ್ಯಾಕಾಲದ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿತ್ಯವೂ ಬಿಸಿನೀರನ್ನೇ ಕುಡಿಯಲು ಬಳಸಬೇಕು. ಸದ್ಯಕ್ಕೆ ಉಪವಾಸ ಕ್ರಮಗಳನ್ನು ಕೈಬಿಟ್ಟು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ ಖಾಲಿ ಹೊಟ್ಟೆಯಿಂದ ಇರದಂತೆ ಎಚ್ಚರಿಕೆ ವಹಿಸಬೇಕು. ದೇಹವು ಹೆಚ್ಚೆಚ್ಚು ರೋಗನಿರೋಧಕ ಶಕ್ತಿ ಹೊಂದುವಂತಹ ಪೂರಕ ಆಹಾರ ಪದಾರ್ಥಗಳನ್ನು ಬಳಸಬೇಕು. ಕನಿಷ್ಠ ದಿನಕ್ಕೆರಡು ಬಾರಿ ಕಷಾಯದಂತಹ ಪಾನೀಯ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇದರ ಜತೆಗೆ ಮುಖಕ್ಕೆ ಮಾಸ್ಕ್ ಧರಿಸುವ, ಸಾಮಾಜಿಕ ಅಂತರವನ್ನು ಪರಿಪಾಲಿಸುವ, ಕೈಯನ್ನು ಯಾವಾಗಲೂ ತೊಳೆದು ಶುಚಿಯಾಗಿಟ್ಟುಕೊಳ್ಳುವ ಹಾಗೂ ಧೈರ್ಯಗೆಡದೆ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವ ಸಾಮಾನ್ಯ ನಿಯಮಗಳನ್ನು ಬದ್ಧತೆಯಿಂದ ಪಾಲಿಸಬೇಕು. ಇದರೊಟ್ಟಿಗೇ ವೃಕ್ಷದೇವೋಭವ, ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಮಾತುಗಳತ್ತ ತೀವ್ರ ಗಮನಹರಿಸಿ ನಿರಂತರ ಭವಿಷ್ಯತ್ತಿನಲ್ಲಿ ಜಾಗೃತರಾಗೋಣ; ಕರೊನಾದಂತಹ ಮಾರಕ ರೋಗಗಳನ್ನು ಗೆಲ್ಲೋಣ.

    *************

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts