More

    ವಿಂಟೇಜ್ ವಾಹನಗಳ ಮೂಲಕ ಮತದಾನ ಜಾಗೃತಿ

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಹಾಗೂ ಮತ ಚಲಾವಣೆ ಪ್ರಮಾಣ ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಭಾನುವಾರ ವಿಂಟೇಜ್ ಕಾರ್ ಹಾಗೂ ಬೈಕ್ ರಾಲಿ ಗಮನ ಸೆಳೆಯಿತು.

    ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಭಾನುವಾರ ಬೆಳಗ್ಗೆ ಸಿಂಗರಿಸಿದ ಹಳೆಯ ಕಾರುಗಳು ಹಾಗೂ ಬೈಕ್ ವಾಹನಗಳನ್ನು ವೀಕ್ಷಿಸಲು ನಾಗರಿಕರು ಮುಗಿಬಿದ್ದರು. ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಆಕರ್ಷಕವಾಗಿದ್ದ ಈ ವಾಹನಗಳನ್ನು ಬಳಸಿಕೊಂಡೇ ಮತ ಜಾಗೃತಿಯನ್ನು ಕೈಗೊಳ್ಳಲಾಯಿತು. ರಾಲಿಗೆ ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.

    ವಿಧಾನಸೌಧ ಮೆಟ್ಟಿಲುಗಳ ಬಳಿ ಪ್ರಾರಂಭವಾದ ರಾಲಿಯು ಇನ್ಫೆಂಟ್ರಿ ರಸ್ತೆ, ಎಂ.ಜಿ.ರಸ್ತೆ (ಚಿನ್ನಸ್ವಾಮಿ ಕ್ರೀಡಾಂಗಣ), ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆ ಮೂಲಕ ಕಂಠೀರವ ಕ್ರೀಡಾಂಗಣದ ಬಳಿ ಮುಕ್ತಾಯ ಕಂಡಿತು.

    ಜನಜಾಗೃತಿಗೆ ಆದ್ಯತೆ:

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತುಷಾರ್ ಗಿರಿನಾಥ್, ಬೆಂಗಳೂರಿನಲ್ಲಿ ಮತದಾನವು ಇದೇ ತಿಂಗಳ 26ರಂದು ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿಂಟೇಜ್ ಕಾರು ಹಾಗೂ ದ್ವಿಚಕ್ರ ವಾಹನಗಳು ರಾಲಿ ಮಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗಿದೆ ಎಂದರು.

    ಇತ್ತೀಚಿನ ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶೇಕಡವಾರು ಮತದಾನ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ತಳಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿಕೊಂಡು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

    ಈ ವೇಳೆ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಕಾಂತರಾಜು, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ ಸೇರಿ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಪ್ರತಿಜ್ಞಾ ವಿಧಿ ಸ್ವೀಕಾರ:

    ಲೋಕಸಭಾ ಚುನಾವಣೆ ಹಿನ್ನೆಲೆ ವಿಂಟೇಜ್ ಕಾರ್ ರಾಲಿ ವೇಳೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರತಿಜ್ಙಾ ವಿಧಿಯನ್ನು ಬೋಧಿಸಿದರು. ಸ್ಥಳದಲ್ಲಿ ನೆರೆದಿದ್ದ ಅಧಿಕಾರಿಗಳು ಹಾಗೂ ನಾಗರಿಕರು ಪ್ರತಿಜ್ಙಾ ವಿಧಿಯನ್ನು ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts