ಕೆರೂರ: ಮತದಾನ ಮಾಡುವುದು ಸಂವಿಧಾನಾತ್ಮಕ ಹಕ್ಕು. ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಮಗೆ ಸಂಬಂಧಿಸಿದ ಮತಗಟ್ಟೆಗೆ ತೆರಳಿ ತಪ್ಪದೇ ಮತ ಚಲಾಯಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ದುರಗೇಶ ರುದ್ರಾಕ್ಷಿ ಹೇಳಿದರು.
ಕೆರೂರಿನ ಪಪಂ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಸ್ವೀಪ್ ಸಮಿತಿ ಹಾಗೂ ತಾಲೂಕು ಆಡಳಿತ, ತಾಪಂ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಪಂ ಆಡಳಿತಾಧಿಕಾರಿ ಬಾದಾಮಿ ತಾಲೂಕು ದಂಡಾಧಿಕಾರಿಗಳಾದ ಜೆ.ಬಿ. ಮಜ್ಜಗಿ ಮತದಾನ ಜಾಗೃತಿ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯುವುದಕ್ಕಾಗಿ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕೆಂದರು.
ಪಪಂ ಮುಖ್ಯಾಧಿಕಾರಿ ಜಗದೀಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮತದಾನ ಜಾಗೃತಿ ಜಾಥಾ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಮತದಾನ ಜಾಗೃತಿಯ ಘೋಷಣೆ ಮೊಳಗಿದವು. ಜಾಥಾದಲ್ಲಿ ಕಂದಾಯ ನಿರೀಕ್ಷಕ ಎಂ.ಕೆ. ಮಲಕನವರ, ಗ್ರಾಮ ಲೆಕ್ಕಾಧಿಕಾರಿ ಸಿದಾರ್ಥ ಹಟ್ಟಿ, ಅಭಿಯಂತರ ಎಂ.ಐ. ಹೊಸಮನಿ, ಅರಣ್ಯಾಧಿಕಾರಿ ವೀರೇಶ, ಶ್ಯಾನಿಟರಿ ಇನ್‌ಸ್ಪೆಕ್ಟರ್ ನವೀನ ಮಹಾರಾಜನವರ, ಲೇಖಪಾಲಕ ಗೈಬುಸಾಬ, ಸಂಗಮೇಶ, ಕಪೀಲ ಪ್ಯಾಟಿ, ಪ್ರದೀಪ ತುಳಸಿಗೇರಿ, ಅಬ್ದುಲ್ ಡಾಲಾಯತ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.