More

    ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ: ವಿದ್ಯಾರ್ಥಿಗಳಿಗೆ ತುಷಾರ್ ಗಿರಿನಾಥ್ ಮನವಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮತಚಲಾಯಿಸಬೇಕು ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

    ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ನಗರದ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಸಭಾಂಗದಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕೆವೈಸಿ ತಂತ್ರಾಂಶದ ಮೂಲಕ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ತಿಳಿದುಕೊಂಡು ಮತದಾನ ಮಾಡಬಹುದು. ನಿಮಗೆ ಯಾವುದೇ ಅಭ್ಯರ್ಥಿಗೆ ಮತದಾನ ಮಾಡಲು ಇಷ್ಟವಿಲ್ಲದಿದ್ದಲ್ಲಿ ನೋಟಾಗೆ ಮತ ಚಲಾಯಿಸುವ ಅವಕಾಶ ಇದೆ. ನಮ್ಮ ಒಂದು ಮತದಿಂದ ಏನೂ ಬದಲಾವಣೆ ಆಗದು ಎಂಬ ಮನೋಭಾವವನ್ನು ತೆಗೆದುಹಾಕಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಬೇಕು ಎಂದು ಯುವ ಮತದಾರರನ್ನು ಪ್ರೇರೇಪಿಸಿದರು.

    ಪ್ರಜಾಪ್ರಭುತ್ವದಲ್ಲಿ ಚುನಾವಣೆ ಆತ್ಮಇದ್ದಂತೆ:

    ಚುನಾವಣಾ ರಾಯಭಾರಿ ನೀತು ವನಜಾಕ್ಷಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಆತ್ಮವಿದ್ದಂತೆ. ಮತಗಳು ಉಸಿರಿದ್ದಂತೆ, ಅದಕ್ಕೆ ಜೀವ ಬರಬೇಕಾದರೆ ನೀವೆಲ್ಲರೂ (ವಿದ್ಯಾರ್ಥಿ ಸಮೂಹ) ತಪ್ಪದೆ ಮತದಾನ ಮಾಡಬೇಕು ಎಂದು ವಿನಂತಿಸಿದರು.

    ಇದೇ ವೇಳೆ ವಿದ್ಯಾರ್ಥಿಗಳು ಚುನಾವಣಾ ಸಂಬಂಧಿತ ಪ್ರಶ್ನೆಗಳನ್ನು ಕೇಳಿದ್ದಕ್ಕೆ, ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಉತ್ತರ ಒದಗಿಸಿದರು.

    ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಕಾಂತರಾಜು, ವಲಯ ಆಯುಕ್ತ ಡಾ. ಆರ್.ಎಲ್ ದೀಪಕ್, ಸ್ನೇಹಲ್, ರಾಮಯ್ಯ ಅನ್ವಯಿಕ ವಿಜ್ಞಾನ ವಿವಿಯ ಕುಲಪತಿ ಕೆ.ಕೆ ರೈನಾ, ಗೋಕುಲ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಶ್ರೀನಿವಾಸಮೂರ್ತಿ, ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ವೇಣುಗೋಪಾಲ್ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    2 ಸಾವಿರ ವಿದ್ಯಾರ್ಥಿಗಳು ಭಾಗಿ:

    ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಅಭಿಯಾನದಲ್ಲಿ ವೈದ್ಯಕೀಯ, ಕಾನೂನು, ವಾಣಿಜ್ಯ, ಮ್ಯಾನೇಜ್ಮೆಂಟ್ ಸೇರಿ 13 ವಿಭಾಗಗಳ ಸುಮಾರು 2,000 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರೂ ತಪ್ಪದೆ ಮತದಾನ ಮಾಡುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts