More

    ಮಂಗೇನಕೊಪ್ಪದಲ್ಲಿ ವಾಲಿಬಾಲ್ ಹವಾ!

    ಖಾನಾಪುರ: ಕ್ರಿಕೆಟ್ ಹಾಗೂ ಇತರೆ ಕ್ರೀಡೆಗಳಿಗೆ ಸಿಗುವಷ್ಟು ಪ್ರಾಮುಖ್ಯತೆ ಸಿಗದಿದ್ದರೂ ವಾಲಿಬಾಲ್ ಪಂದ್ಯಾವಳಿ ಇಂದಿಗೂ ಕ್ರೇಜ್ ಉಳಿಸಿಕೊಂಡಿರುವ ಕ್ರೀಡೆ. ಶಾಲಾ-ಕಾಲೇಜು ಕ್ರೀಡಾಕೂಟಗಳಲ್ಲಿ ಇಂದಿಗೂ ವಾಲಿಬಾಲ್‌ಗೆ ಪ್ರಮುಖ ಸ್ಥಾನವಿದೆ. ಅಂಥ ಕ್ರೀಡೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಿರತ ಸಾಧನೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಆ ಪೈಕಿ ಖಾನಾಪುರ ತಾಲೂಕಿನ ಮಂಗೇನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಸ್ಪರ್ಧೆಯಲ್ಲಿ ಮಿಂಚುತ್ತಿರುವುದು ಕ್ರೀಡಾಪ್ರೇಮಿಗಳ ಗಮನ ಸೆಳೆದಿದೆ.

    ಸತತ ಪರಿಶ್ರಮದ ಫಲ: ಇಲ್ಲಿನ ಪ್ರೌಢಶಾಲೆಯ ಬಾಲಕಿಯರು ಕಳೆದ ಮೂರು ವರ್ಷಗಳಿಂದ ಸತತವಾಗಿ ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಮಂಗೇನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರು ಹಲವು ವರ್ಷಗಳಿಂದ ವಾಲಿಬಾಲ್ ಕ್ರೀಡೆಯಲ್ಲಿ ವಿಶೇಷವಾಗಿ ಪಳಗಿದ್ದಾರೆ. ಎರಡೂ ಶಾಲೆಗಳ ಕ್ರೀಡಾ ಶಿಕ್ಷಕರ ಮಾರ್ಗದರ್ಶನ, ಗ್ರಾಮಸ್ಥರ, ಪಾಲಕರ ಪ್ರೋತ್ಸಾಹ ಮತ್ತು ಸತತ ಅಭ್ಯಾಸ, ಪರಿಶ್ರಮ ಮತ್ತು ಏನನ್ನಾದರೂ ಸಾಧಿಸಬೇಕೆಂಬ ಛಲದ ಲವಾಗಿ ಪ್ರತಿ ವರ್ಷ ವಾಲಿಬಾಲ್ನಲ್ಲಿ ಉತ್ಸಾಹದಿಂದ ಭಾಗವಹಿಸುವ ಎರಡೂ ಶಾಲೆಗಳ ತಂಡ ಜಿಲ್ಲಾಮಟ್ಟದಲ್ಲಿ ಸುಲಭವಾಗಿ ಗೆಲುವು ಸಾಧಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ಮಾಡುತ್ತಿದೆ.

    ಬಾಲಕಿಯರ ಸಾಧನೆ: 2019ರ ಜ.26ರಂದು ಗಣರಾಜ್ಯೋತ್ಸವ ಅಂಗವಾಗಿ ತಾಲೂಕಿನ ತೋರಾಳಿ ಗ್ರಾಮದ ಬಳಿ ಇರುವ ಕೇಂದ್ರ ಮೀಸಲು ಭದ್ರತಾ ಪಡೆಗೆ ಸೇರಿದ ಕೋಬ್ರಾ ಟ್ರೇನಿಂಗ್ ಶಾಲೆಯಲ್ಲಿ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಆಯೋಜಿಸಲಾಗಿದ್ದ ಅಂತರ್-ಶಾಲಾ ವಾಲಿಬಾಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ಮಂಗೇನಕೊಪ್ಪ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕಿಯರ ತಂಡ ಎದುರಾಳಿ ತಂಡಕ್ಕೆ ಬಿರುಸಿನ ಪೈಪೋಟಿ ನೀಡುವ ಮೂಲಕ ಕ್ರಮೇಣ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ. ಮೀಸಲು ಪಡೆಯ ಐಜಿಪಿ ಟಿ.ಶೇಖರ್ ಅವರಿಂದ ಪ್ರಮಾಣ ಪತ್ರ, ನಗದು ಬಹುಮಾನ, ಪದಕ, ಟೀ-ಶರ್ಟ್ ಪಡೆದು ಸಂಭ್ರಮಿಸಿವೆ.

    ಮಂಗೇನಕೊಪ್ಪ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣದಲ್ಲಿ ವಾಲಿಬಾಲ್ ಕ್ರೀಡೆಗೆ ಅವಶ್ಯವಿರುವ ಮೈದಾನವನ್ನು ಚೊಕ್ಕದಾಗಿ ಅಣಿಗೊಳಿಸಲಾಗಿದೆ. ಗ್ರಾಮದ ಎರಡೂ ಶಾಲೆಗಳ ತಂಡಗಳು ಕಳೆದ ಒಂದು ದಶಕದಿಂದ ವಿವಿಧ ಹಂತದ ವಾಲಿಬಾಲ್ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತ ಬಂದಿವೆ.

    ಹೀಗಾಗಿ ಶಾಲೆಯ ಕ್ರೀಡಾ ಶಿಕ್ಷಕರ ಜತೆಗೆ ಮಾಜಿ ವಿದ್ಯಾರ್ಥಿಗಳು, ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ, ಶಿಕ್ಷಕರು ಮತ್ತು ಪಾಲಕರು ಸ್ಪರ್ಧೆಗಳಿಗೆ ಬೇಕಾದ ಸವಲತ್ತು ಒದಗಿಸುತ್ತಿದ್ದಾರೆ. ಹೀಗಾಗಿ ಮಂಗೇನಕೊಪ್ಪದ ಎರಡೂ ಸರ್ಕಾರಿ ಶಾಲೆಗಳು ವಾಲಿಬಾಲ್ ಕ್ರೀಡಾಕೂಟದಲ್ಲಿ ವಿಶಿಷ್ಟ ಛಾಪು ಮೂಡಿಸುತ್ತಿವೆ ಎಂದು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಮೇದಾರ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಳಪ್ಪ ಬಸರಗಿ ಅಭಿಪ್ರಾಯಪಟ್ಟಿದ್ದಾರೆ.

    ರಾಷ್ಟ್ರಮಟ್ಟದಲ್ಲಿ ಮಿಂಚು

    ತಾಲೂಕಿನ ಮಂಗೇನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಕ್ರೀಡಾಕೂಟದಲ್ಲಿ ವಿಶಿಷ್ಟ ಛಾಪು ಮೂಡಿಸುವ ಮೂಲಕ ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟ ಪ್ರತಿನಿಧಿಸಿದ್ದಾರೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 2015-16ರಲ್ಲಿ ಜಿಲ್ಲಾಮಟ್ಟ, ವಿಭಾಗ ಮಟ್ಟ ಮತ್ತು ರಾಜ್ಯಮಟ್ಟದ 14 ವರ್ಷದ ಒಳಗಿನ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದಲ್ಲಿ ರಾಜ್ಯ ಪ್ರತಿನಿಧಿಸಿದ್ದರು.

    ಮಂಗ್ಯಾನಕೊಪ್ಪ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಮ್ಮದೆ ಆದ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಇಲಾಖೆಯಿಂದ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುತ್ತಿದೆ.
    | ಲಕ್ಷ್ಮಣರಾವ ಯಕ್ಕುಂಡಿ ಬಿಇಒ ಖಾನಾಪುರ

    ನಮ್ಮ ಊರಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲಿ ಸಾಧನೆ ಮಾಡುತ್ತಿರುವುದು ಸಂತಸದ ವಿಚಾರ. ಸ್ಥಳೀಯ ಆಡಳಿತದಿಂದ ಕ್ರೀಡಾಸಾಧಕರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಲಾಗುವುದು.
    | ಶಿವಾನಂದ ಚಲವಾದಿ ತಾಪಂ ಸದಸ್ಯ ಮಂಗೇನಕೊಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts