More

    ಬೀದಿಬದಿ ವ್ಯಾಪಾರಕ್ಕೆ ಹೈಕೋರ್ಟ್ ನಿಗಾ ಸಾಧ್ಯವಿಲ್ಲ

    ಬೆಂಗಳೂರು : ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಲಾಗಿದೆಯೇ? ಅಥವಾ ಇಲ್ಲವೇ? ಯಾವ ತರಕಾರಿಯನ್ನು, ಯಾರಿಗೆ ಮಾರಾಟ ಮಾಡಲಾಗಿದೆ? ಎಂಬ ವಿಚಾರವನ್ನು ನ್ಯಾಯಪೀಠ ಹೇಗೆ ಮೇಲ್ವಿಚಾರಣೆ ನಡೆಸಲು ಸಾಧ್ಯ ಎಂದು ಹೈಕೋರ್ಟ್ ವಕೀಲರೊಬ್ಬರನ್ನು ಪ್ರಶ್ನಿಸಿತು.


    ನಗರದ ಕೆ.ಆರ್. ಮಾರುಕಟ್ಟೆ, ಅವೆನ್ಯೂ ಮತ್ತು ಎಸ್‌ಜೆಪಿ ರಸ್ತೆಗಳ ಪಾದಚಾರಿ ಮಾರ್ಗ, ರಸ್ತೆಯ ಎರಡೂ ಬದಿಯಲ್ಲಿ ಬೀದಿಬದಿ ವ್ಯಾಪಾರಿಗಳು ಹಣ್ಣು ಮತ್ತು ಹೂ ಮಾರಾಟವನ್ನು ಶಾಶ್ವತವಾಗಿ ನಿರ್ಬಂಧಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ನಗರದ ಎನ್.ಎಸ್. ಪಾಳ್ಯ ನಿವಾಸಿ ಬಿ. ಸುನೀಲ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.


    ಬೀದಿಬದಿ ವ್ಯಾಪಾರಿಗಳು ಕೆ.ಆರ್. ಮಾರುಕಟ್ಟೆ, ಅವೆನ್ಯೂ ರೆಸ್ತೆ ಮತ್ತು ಎಸ್‌ಜೆಪಿ ರಸ್ತೆಯಲ್ಲಿ ಪಾದಚಾರಿ ಮಾರ್ಗ, ರಸ್ತೆಯ ಎರಡೂ ಬದಿಯಲ್ಲಿ ಹಣ್ಣು ಮತ್ತು ಹೂ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.


    ಈ ರಸ್ತೆಗಳ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಹೂ ಮಾರಾಟವನ್ನು ಶಾಶ್ವತವಾಗಿ ನಿರ್ಬಂಧಿಸಲು ಮನವಿ ಮಾಡಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ 2023ರ ಸೆ.22ರಂದು ಮನವಿ ಪತ್ರ ಸಲ್ಲಿಸಲಾಗಿದೆ. ಅದನ್ನು ಈವರೆಗೆ ಪರಿಗಣಿಸಿಲ್ಲ. ಹೀಗಾಗಿ ಮನವಿ ಪರಿಗಣಿಸಲು ನಿರ್ದೇಶಿಸುವಂತೆ ಮನವಿ ಮಾಡಿದರು.


    ತರಕಾರಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗಿದೆಯೇ? ಅಥವಾ ನಡೆಸಲಾಗುತ್ತಿದೆಯೇ? ಯಾರಿಗೆ ಯಾವ ತರಕಾರಿ ಮಾರಾಟ ಮಾಡಲಾಗಿದೆ? ಎಂಬ ವಿಚಾರಗಳನ್ನು ಹೈಕೋರ್ಟ್ ಹೇಗೆ ಪರಿಶೀಲನೆ ಅಥವಾ ಮೇಲ್ವಿಚಾರಣೆ ನಡೆಸಲು ಸಾಧ್ಯವಿದೆ? ನೀವು ಬೇಕಾದರೆ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರಿಗೆ ಮನವಿ ಮಾಡಬಹುದು. ಒಮ್ಮೆ ಲೋಕಾಯುಕ್ತ ಕಾಯ್ದೆಯನ್ನು ಓದಿ. ಲೋಕಾಯುಕ ಸಂಸ್ಥೆಯಲ್ಲಿ ಜನರ ಕುಂದುಕೊರತೆಗಳಿಗೆ ಪರಿಹಾರ ಘಟಕವಿದೆ. ಅದಕ್ಕೆ ನೀವು ಮನವಿ ಸಲ್ಲಿಸಿ. ಆದರೆ, ನೀವು ಆಕ್ಷೇಪ ಎತ್ತಿರುವ ವಿಚಾರಗಳನ್ನು ಹೈಕೋರ್ಟ್ ಮೇಲ್ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತು. ಈ ಬಗ್ಗೆ ಪರಿಹಾರಕ್ಕಾಗಿ ಲೋಕಾಯುಕ್ತ ಮೊರೆ ಹೋಗಲು ಸ್ವತಂತ್ರವಾಗಿದ್ದಾರೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts