More

    ವೃತ್ತಿಕೌಶಲವಿದ್ದರೆ ವಿಪುಲ ಉದ್ಯೋಗಾವಕಾಶ

    ಬೆಳಗಾವಿ: ತಂತ್ರಜ್ಞಾನದ ಬೆಳವಣಿಗೆ, ಅಂತರ್ಜಾಲ ಸೌಲಭ್ಯ ಹಾಗೂ ಬದಲಾಗಿರುವ ಜಗತ್ತಿನಲ್ಲಿ ಪತ್ರಿಕೋದ್ಯಮದ ಸ್ವರೂಪವೂ ಬದಲಾಗಿದೆ. ಆದರೆ, ಮೂಲತತ್ತ್ವ ಹಾಗೇ ಉಳಿದುಕೊಂಡಿದೆ. ಇದರಿಂದ ಬರವಣಿಗೆಯ ತುಡಿತ ಹೊಂದಿದವರಿಗೆ ಪತ್ರಿಕೋದ್ಯಮದಲ್ಲಿ ವಿಪುಲ ಅವಕಾಶಗಳಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಹೇಳಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಸಂವಹನ ಕೂಟ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಮತ್ತು 2019-20ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.

    ಸಾಮಾಜಿಕ ಜಾಲತಾಣಗಳಿಂದಾಗಿ ಬರೆಯುವ ಅವಕಾಶ ಹೆಚ್ಚಾಗಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ವೃತ್ತಿಜೀವನ ರೂಪಿಸಿಕೊಳ್ಳಬಹುದು. ನೌಕರಿಗಾಗಿ ಶಿಕ್ಷಣ ಎಂಬ ಪರಿಸ್ಥಿತಿ ಈಗ ಉಳಿದಿಲ್ಲ. ಹೀಗಾಗಿ ವೃತ್ತಿ ಕೌಶಲ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ವಿನೋದ ಗಾಯಕವಾಡ ಮಾತನಾಡಿ, ಬರವಣಿಗೆ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಪತ್ರಿಕೋದ್ಯಮ ಅದ್ಭುತವಾದ ಪದವಿಯಾಗಿದೆ. ಪತ್ರಕರ್ತರಿಗೆ ಎಂತಹುದೇ ಸಂದರ್ಭದಲ್ಲಿ ಕೆಲವೇ ಕ್ಷಣಗಳಲ್ಲಿ ಸುದ್ದಿ ಬರೆಯುವ ಸಾಮರ್ಥ್ಯವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಬೆಳೆಸಿಕೊಳ್ಳಬೇಕು. ಆಗಮಾತ್ರ ಒಬ್ಬ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ವಿಭಾಗದ ಉಪನ್ಯಾಸಕಿ ವಿದ್ಯಾಶ್ರೀ ಹಲಕೇರಿಮಠ, ಸುನೀತಾ ದಾಸರ, ವಿದ್ಯಾರ್ಥಿ ಪ್ರತಿನಿಧಿಗಳಾದ ಕಿರಣ ಕಾಂಬಳೆ, ಪೂರ್ಣಿಮಾ ಹುಡೇದ, ಪ್ರದೀಪ ಪಾಟೀಲ ಸೇರಿ ಇತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಜಯ ಚವ್ಹಾಣ ಸ್ವಾಗತಿಸಿದರು. ಪ್ರವೀಣ ಗೌಡರ ವಂದಿಸಿದರು. ಸಹನಾ ಭಜಂತ್ರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts