More

    ಸಮಾಜದರ್ಪಣದಲ್ಲಿ ಜೀವನದ ಪ್ರತಿಬಿಂಬ…: ಸ್ವಾಮಿ ವೀರೇಶಾನಂದ ಸರಸ್ವತೀ ಅವರ ವಿವೇಕಧಾರೆ ಅಂಕಣ

    ‘ಬಡವರನ್ನು ಮರೆಯಬೇಡ, ನಿನ್ನ ಮೋಕ್ಷಕ್ಕಾಗಿಯಷ್ಟೇ ಪ್ರಯತ್ನ ಮಾಡಿದರೆ ನೀನು ನರಕಕ್ಕೆ ಹೋಗುವೆ, ಮತ್ತೊಬ್ಬರ ಮುಕ್ತಿಗಾಗಿ ಪ್ರಯತ್ನಿಸಿದಾಗಷ್ಟೇ ನಿನಗೆ ಮೋಕ್ಷ! ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ’ ಎಂಬ ಸ್ವಾಮಿ ವಿವೇಕಾನಂದರ ಉಕ್ತಿ ಸದಾ ಸ್ಮರಣಾರ್ಹ.

    ಸಮಾಜದರ್ಪಣದಲ್ಲಿ ಜೀವನದ ಪ್ರತಿಬಿಂಬ...: ಸ್ವಾಮಿ ವೀರೇಶಾನಂದ ಸರಸ್ವತೀ ಅವರ ವಿವೇಕಧಾರೆ ಅಂಕಣಇದೊಂದು ಆತ್ಮನಿವೇದನ ಲೇಖನ. ನನ್ನ ಆಧ್ಯಾತ್ಮಿಕ ಜೀವನದ ಮೂರು ದಶಕಗಳ ಆತ್ಮಾವಲೋಕನವೇ ಲೇಖನದ ತಿರುಳು. ಬದುಕಿನಲ್ಲಿ ಸಾಗುತ್ತಾ ಹೋದಂತೆ ಜೀವನಾನುಭವವು ಅನುಗ್ರಹಿಸಿದ ಸತ್ಯದರ್ಶನವೆಂದರೆ ಜಗತ್ತು ಸದ್ಗುಣಿ ಅಲ್ಲದಿದ್ದರೂ ಅದು ಸದ್ಗುಣವನ್ನು ಗೌರವಿಸುವಂಥದ್ದು. ಸ್ವಾಮಿ ವಿವೇಕಾನಂದರೆನ್ನುವಂತೆ ‘ಈ ಜಗತ್ತೆಂಬುದೊಂದು ಗರಡಿಮನೆ, ಇಲ್ಲಿ ನಾವು ಬಲಿಷ್ಠರಾಗಬೇಕಿದೆ!’ ವಿಶ್ವಕವಿ ರವೀಂದ್ರರು ಹೇಳಿದಂತೆ ‘ಪ್ರಪಂಚದೊಡನೆ ನಮಗಿರುವ ಸಂಬಂಧವನ್ನು ನಾವು ಅರಿತುಕೊಳ್ಳದಿದ್ದರೆ ನಾವು ವಾಸಿಸುವ ಸ್ಥಳವೂ ಸೆರೆಮನೆಯಾಗುತ್ತದೆ!’ ಡಿವಿಜಿಯವರು, ‘ಜೀವನವು ಹಳೆಯದಾದರೂ ಹಳಸದಂತೆ ನೋಡಿಕೊ… ಇರುವ ಭಾಗ್ಯವ ನೆನೆ, ಬಾರದೆಂಬುದನ್ನು ಕುರಿತು ಪರಿತಪಿಸಬೇಡ! ಇದುವೆ ಹರುಷಕೆ ಹೆದ್ದಾರಿ!’ ಎಂದಿದ್ದಾರೆ. ಆದ್ದರಿಂದ ಬದುಕುವ ಪಥದಲ್ಲಿ ಕುಟುಂಬ, ಸಮಾಜಗಳು ನಮ್ಮ ಜೀವನದಲ್ಲಿ ‘ತಾಯಿ’ ಆಗುತ್ತವೆಯೇ ವಿನಾ ಮಲತಾಯಿ ಅಲ್ಲ! ಜೀವನದ ಹೆಜ್ಜೆಗುರುತುಗಳನ್ನು ಸಮಾಜದರ್ಪಣವು ನಿಷ್ಪಕ್ಷಪಾತವಾಗಿ ದಾಖಲಿಸುತ್ತದೆ.

    ಮನೆತನದ ಘನತೆ: ಜನ್ಮಸ್ಥಳ ಕೋಲಾರ, ಜೀವನವನ್ನು ಕಟ್ಟಿಕೊಟ್ಟಿದ್ದು ಬೆಂಗಳೂರು, ಚಿಕ್ಕಮಗಳೂರು ಮತ್ತು ಮುಖ್ಯವಾಗಿ ತುಮಕೂರು ಜಿಲ್ಲೆ.

    ತಾಯಿ ಲಲಿತಮ್ಮ ನನ್ನ ವ್ಯಕ್ತಿತ್ವದಲ್ಲಿ ಭಾವಪ್ರಪಂಚಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಪ್ರೇರೇಪಿಸುತ್ತಾ ಬಂದ ದೈವ. ಅವರ ತವರು ಮನೆತನ ಶ್ರೀಧರಂ ಕುರಿತು ಡಿವಿಜಿ ತಮ್ಮ ‘ಜ್ಞಾಪಕ ಚಿತ್ರಶಾಲೆ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನನ್ನಮ್ಮ ತನ್ನ ಮಕ್ಕಳನ್ನು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿರೆಂದಷ್ಟೇ ಪ್ರೇರೇಪಿಸಿದವರಲ್ಲ, ನಮ್ಮಲ್ಲಿ ಸಜ್ಜನಿಕೆ, ಪರೋಪಕಾರವೇ ಮೊದಲಾದ ಗುಣಗಳನ್ನು ಬೆಳೆಸಿದರು! ನಮ್ಮನ್ನು ತ್ಯಾಗ-ವೈರಾಗ್ಯದ ಆದರ್ಶಪ್ರಪಂಚಕ್ಕೆ ಕೊಡುಗೆಯಾಗಿತ್ತರು! ರಾಮಕೃಷ್ಣ ಮಹಾಸಂಘದ ಪರಮಪೂಜ್ಯ ಸ್ವಾಮಿ ಪುರುಷೋತ್ತಮಾನಂದರು, ‘ಲಲಿತಮ್ಮ, ನಿಮ್ಮ ನಾಲ್ಕು ಗಂಡುಮಕ್ಕಳನ್ನು ಆಧ್ಯಾತ್ಮಿಕ ಜೀವನ ನಡೆಸಲು ಕರೆದೊಯ್ಯಬೇಕೆಂದಿದ್ದೇನೆ’ ಎಂದಾಗ, ಲಲಿತಮ್ಮ ಹೇಳಿದ್ದು, ‘ಸ್ವಾಮೀಜಿ, ನನ್ನ ಐದೂ ಗಂಡುಮಕ್ಕಳನ್ನು ನಿಮ್ಮ ಪಾದಗಳಿಗೆ ಅರ್ಪಿಸಿ ಬಹಳ ವರ್ಷಗಳೇ ಆದವು!’ ಆದರೆ ಕೌಟುಂಬಿಕ ಜವಾಬ್ದಾರಿಗೆ ಓರ್ವ ಮಗ ಹೊರತುಪಡಿಸಿ ಇನ್ನು ನಾಲ್ವರು ಸ್ವಾಮೀಜಿಯವರ ಆಶೀರ್ವಾದ ಪಡೆದು ಸ್ವಾಮಿ ನಿರ್ಭಯಾನಂದ, ಸ್ವಾಮಿ ವೀರೇಶಾನಂದ, ಸ್ವಾಮಿ ಬ್ರಹ್ಮನಿಷ್ಠಾನಂದ ಮತ್ತು ಸ್ವಾಮಿ ಧೀರಾನಂದ ಎಂಬ ಯೋಗಪಟ್ಟದೊಂದಿಗೆ ಲೋಕಾರ್ಪಣಗೊಂಡದ್ದು ಇತಿಹಾಸ.

    ಪೂಜ್ಯ ತಂದೆ ಸಾತವಲ್ಲಿ ನಾಗಭೂಷಣ ಅವರು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದಂತೆ, ಕಲಿಯುಗದಲ್ಲಿ ‘ಧಿಕ್ ಕ್ಷತ್ರಿಯ ಬಲಂ, ಬ್ರಹ್ಮತೇಜೋ ಬಲಂಬಲಂ’ ಎನ್ನುವುದಕ್ಕಿಂತ ಬ್ರಹ್ಮತೇಜ ಮತ್ತು ಕ್ಷಾತ್ರವೀರ್ಯಗಳೆರಡನ್ನೂ ಗೌರವಿಸಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂಬ ತತ್ತ್ವಕ್ಕೆ ಶರಣಾದವರು. ನನ್ನ ಜೀವನದ ಪ್ರಥಮ ಗುರುವಾದ ಅವರು, ‘ವೈಫಲ್ಯ ಎದುರಿಸುವ ಸಾಮರ್ಥ್ಯವಿರುವವನಿಗಷ್ಟೇ ಸಾಫಲ್ಯ ಗಳಿಸುವ ಯೋಗ್ಯತೆ ದೊರೆಯುವುದು. ಮಾತು ಬುದ್ಧಿವಂತಿಕೆಯದಾಗಿದ್ದು ವ್ಯವಹಾರ ಹೇಡಿತನದ್ದಾಗಿರಬಾರದು. ನಮ್ಮ ದೋಷದ ಅರಿವೇ ಪ್ರಗತಿರಥದ ಮೊದಲ ಹೆಜ್ಜೆ! ಸೋಲು ಎಂದಿಗೂ ಅವಮಾನಕರವಲ್ಲ. ಱಉಡಛ್ಞಿ ಜ್ಛಿ ಢಟ್ಠ ಚ್ಟಛಿ ಛಛ್ಛಿಛಿಚಠಿಛಿಛ, ್ಝಠಿ ಜಿಠಿ ಚಿಛಿ ಚ ಜಟ್ಞಟ್ಟಚಚ್ಝಿಛಿ ಛಛ್ಛಿಛಿಚಠಿ!’ ಎನ್ನುತ್ತಿದ್ದರು. ಸ್ವಾಮಿ ಪುರುಷೋತ್ತಮಾನಂದರು ತಮ್ಮ ದೇವದುರ್ಲಭ ಕಂಠದಿಂದ ಆಕಾಶವಾಣಿಯಲ್ಲಿ ‘ಮೂಡಲ್ ಕುಣ್ಗಲ್ ಕೆರೆ ನೋಡೋಕ್ ಒಂದ್ ವೈಭೋಗ…’ ಎಂಬ ಜಾನಪದ ಗೀತೆಯನ್ನು ಹಾಡಿದವರಾದರೆ ನನ್ನ ತಂದೆ ಐತಿಹಾಸಿಕ ಕುಣಿಗಲ್ ಕೆರೆಯನ್ನು ಈಜಿದ ಸಾಹಸಿಗರು! ತಂದೆಯವರು ಸಾಗರದೋಪಾದಿಯ ಕೆರೆಯನ್ನು ಈಜಿದವರಾದರೆ ಸ್ವಾಮೀಜಿಯವರು ಅಧ್ಯಾತ್ಮವನ್ನು ಜೀವನದಿಯಾಗಿಸಿ ಭವಸಾಗರವನ್ನು ದಾಟುವ ಬಗೆ ಕುರಿತು ಶಿಕ್ಷಣವಿತ್ತವರು!

    ಶಿಕ್ಷಣ ಕ್ಷೇತ್ರ: ವರ್ಣಮಾಲೆ ಕಲಿಸಿದ ಶಿಕ್ಷಕಿ ವೆಂಕಟಲಕ್ಷ್ಮಮ್ಮನವರಿಂದ ಮೊದಲ್ಗೊಂಡು ಇಂಜಿನಿಯರಿಂಗ್ ಪದವಿಪತ್ರವಿತ್ತು ಹರಸಿ ಬೀಳ್ಗೊಟ್ಟ ಪ್ರಾಂಶುಪಾಲ ಪೊ›. ಎಸ್.ಟಿ.ನಾಗರಾಜ್​ರವರೆಗೂ ಬದುಕಿನುದ್ದಕ್ಕೂ ನನ್ನನ್ನು ತಿದ್ದಿ ಮುನ್ನಡೆಸಿದ ನೂರಾರು ಶಿಕ್ಷಕರು ಎಂದೆಂದೂ ಪ್ರಾತಃಸ್ಮರಣೀಯರು. ಶ್ರೀ ಸಿದ್ಧಾರ್ಥ ಶಿಕ್ಷಣಸಂಸ್ಥೆಯ ಸಂಸ್ಥಾಪಕರಾದ ಹೆಚ್.ಎಂ.ಗಂಗಾಧರಯ್ಯನವರು ಇದೇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ನನ್ನ ಶೈಕ್ಷಣಿಕ ಜೀವನಕಿತ್ತ ಸಹಕಾರ ಅವಿಸ್ಮರಣೀಯವಾದದ್ದು.

    ಆಧ್ಯಾತ್ಮಿಕ ಕ್ಷೇತ್ರ: ಕಾಲೇಜು ಶಿಕ್ಷಣದ ದಿನಗಳಲ್ಲಿ ಬೆಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ವಾಸ್ತವ್ಯ ಪ್ರಾಪ್ತವಾಯಿತು. ಪೂಜ್ಯ ಸ್ವಾಮಿ ಪುರುಷೋತ್ತಮಾನಂದರೇ ನನ್ನ ಪೋಷಕ, ಸಂರಕ್ಷಕರಾದರು!

    ಪೂಜ್ಯರು ರಾಮಕೃಷ್ಣ ಮಹಾಪರಂಪರೆ ದಾಖಲಿಸಿದ ಶ್ರೇಷ್ಠ ಸಂತರಲ್ಲೊಬ್ಬರು. ತಮ್ಮ ಬದುಕು, ಭಜನೆ, ಬರವಣಿಗೆಯ ಮೂಲಕ ಯಶಸ್ವೀ ಸಂಘಟಕರಾಗಿದ್ದರು. ಲೌಕಿಕ ಶಿಕ್ಷಣದ ಜೊತೆಜೊತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತಾ ಬಂದರು. ಅವರ ಅದ್ಭುತ ವ್ಯಕ್ತಿತ್ವಕ್ಕೆ ಮಾರುಹೋಗದವರಿಲ್ಲ. ಲಕ್ಷಾಂತರ ಯುವಕರು ಪೂಜ್ಯರ ಮಾತು ಮತ್ತು ಬರಹದಿಂದ ಬದುಕನ್ನು ಸರಿದಾರಿಗೆ ತಂದುಕೊಂಡರು. ನೂರಕ್ಕೂ ಅಧಿಕ ಯುವಕ ಯುವತಿಯರು ಅವರಿಂದ ಪ್ರೇರೇಪಿತರಾಗಿ, ಸಂನ್ಯಾಸಾಶ್ರಮ ಸ್ವೀಕರಿಸಿ ಸಾಧನಾ ನಿರತರಾಗಿದ್ದಾರೆ. ಸ್ವಾಮೀಜಿಯವರ ಬಹುಮುಖ ವ್ಯಕ್ತಿತ್ವವನ್ನು ಅಂದಿನ ಸರ್ಕಾರವಾಗಲಿ, ಸಾಹಿತ್ಯ ಸಂಸ್ಥೆಗಳಾಗಲೀ ಗುರ್ತಿಸದೇ ಹೋದದ್ದು ವಿಪರ್ಯಾಸ!

    ಲೋಕಾರ್ಪಣೆ: 1988ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ನನಗೆ ಆಧ್ಯಾತ್ಮಿಕ ಜೀವನಕ್ಕೆ ಅತ್ಯಾಸಕ್ತಿ ಮೂಡಿತು. ಅಕ್ಷರ ರೂಪದಲ್ಲಿ ಭಗವಾನ್ ಶ್ರೀರಾಮಕೃಷ್ಣರ, ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳು ಲಭ್ಯವಿದ್ದರೆ ಅವುಗಳನ್ನು ಸಾಕ್ಷಾತ್ತಾಗಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಸ್ವಾಮಿ ಪುರುಷೋತ್ತಮಾನಂದರೇ ಎದುರಿಗಿದ್ದಾರೆ! ಆಧ್ಯಾತ್ಮಿಕ ಜೀವನಕ್ಕೆ ಪದಾರ್ಪಣೆಗೈಯಲು ಚಾತಕಪಕ್ಷಿಯಂತೆ ಕಾಯುತ್ತಿದ್ದ ನನಗೆ ಪರಮಪೂಜ್ಯರ ಆಶೀರ್ವಾದವೂ ದೊರೆಯಿತು. ವಿದ್ಯಾರ್ಥಿದೆಸೆಯಿಂದಲೂ ಸ್ವಾಮಿ ವಿವೇಕಾನಂದರ ದಿವ್ಯ ನುಡಿಗಳು: ‘ಬಡವರನ್ನು ಮರೆಯಬೇಡ, ನಿನ್ನ ಮೋಕ್ಷಕ್ಕಾಗಿಯಷ್ಟೇ ಪ್ರಯತ್ನ ಮಾಡಿದರೆ ನೀನು ನರಕಕ್ಕೆ ಹೋಗುವೆ, ಮತ್ತೊಬ್ಬರ ಮುಕ್ತಿಗಾಗಿ ಪ್ರಯತ್ನಿಸಿದಾಗಷ್ಟೇ ನಿನಗೆ ಮೋಕ್ಷ! ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ! ನಿನ್ನ ಹತ್ತಾರು ಹಿಂದಿನ ಜನ್ಮಗಳನ್ನು ನಿನ್ನ ಸುಖಕ್ಕಾಗಿ ವಿನಿಯೋಗಿಸಿರುವೆ. ಈ ಜನ್ಮವನ್ನು ಮಾತೃಭೂಮಿಗಾಗಿ, ದೇಶಬಾಂಧವರಿಗಾಗಿ ವಿನಿಯೋಗಿಸುವ ಧೀರ ನೀನಾಗು. ನನ್ನ ಧ್ಯೇಯ ಹೊತ್ತು ಹೋರಾಡುವವರಿಗೆ ನಾನು ಬೆಂಗಾವಲಾಗಿ ನಿಂತು ಕಾಪಾಡುತ್ತೇನೆ…’ ಮುಂತಾದ ಮಾತುಗಳು ಅದಾಗಲೇ ನನ್ನ ನಿದ್ದೆಗೆಡಿಸಿ ಹಲವು ವರ್ಷಗಳೇ ಆಗಿದ್ದವು!

    ಪೂಜ್ಯ ಸ್ವಾಮೀಜಿಯವರ ಪತ್ರ ಬಂತು: ‘ಪ್ರಿಯ ಶಂಕರ, ನೀನು ತುಮಕೂರನ್ನು ಕಾರ್ಯಕ್ಷೇತ್ರವಾಗಿಸಿಕೊ. ಅಲ್ಲಿ ಆಪ್ತರಾದ ಶಿಕ್ಷಕ ಅರೆಯೂರು ನರಸಿಂಹಮೂರ್ತಿಯವರು ನಿನಗೆ ಹಲವು ರೀತಿಯಲ್ಲಿ ನೆರವಾಗಬಲ್ಲರು. ಬಾಡಿಗೆ ಮನೆ ಹುಡುಕು. ನನ್ನ ‘ವಿದ್ಯಾರ್ಥಿಗೊಂದು ಪತ್ರ’ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸು (ಬೆಲೆಗೆ ಅಥವಾ ಅರ್ಧ ಬೆಲೆಗೆ), ಕಡುಬಡವರಿಗೆ ಉಚಿತವಾಗಿ ವಿತರಿಸು…’

    1993ರ ಏಪ್ರಿಲ್ 22ರಂದು ನಾನು ಮತ್ತು ಶಿವಕುಮಾರ್ ಅವರು ಸಂನ್ಯಾಸ ಸ್ವೀಕರಿಸಿ ತುಮಕೂರಿಗೆ ಬಂದಾಗ ಪೂಜ್ಯ ಸ್ವಾಮೀಜಿಯವರು ಪತ್ರಮುಖೇನ ಹರಸಿದ್ದು ಹೀಗೆ: ‘ನೂತನ ಯತಿವರ್ಯರಾದ ಸ್ವಾಮಿ ನಿರ್ಭಯಾನಂದರು ಮತ್ತು ಸ್ವಾಮಿ ವೀರೇಶಾನಂದರು, ಜಗತ್ತಿಗೆ ಹಿತವನ್ನು ಸಾಧಿಸುತ್ತ ಆತ್ಮಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಿ ಎಂಬ ಸ್ವಾಮಿ ವಿವೇಕಾನಂದರ ಮಹಾನ್ ಆದರ್ಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ತುಮಕೂರಿನ ಪುಣ್ಯಧಾಮದೊಳಿಂದು ಪ್ರವೇಶಿಸುತ್ತಿದ್ದಾರೆ. ಇಲ್ಲಿಂದ ಇನ್ನು ಮುಂದೆ ಸಮಸ್ತ ಕರ್ನಾಟಕದಲ್ಲಿ ಸಂಚರಿಸುತ್ತಾ ಸಕಲ ಅವತಾರಪುರುಷರು ಮತ್ತು ದಿವ್ಯತ್ರಯರು ತಮ್ಮ ಜೀವನದಲ್ಲಿ ಆಚರಿಸಿ ತೋರಿಸಿದ ಹಿಂದೂಧರ್ಮ-ಸಂಸ್ಕೃತಿಗಳ ಪ್ರಭೆಯನ್ನು ಪಸರಿಸುವ ಪವಿತ್ರ ಕಾರ್ಯದಲ್ಲಿ ನಿರತರಾಗಲಿ…’

    ಆಶ್ರಮ ಸ್ಥಾಪನೆಗೊಂಡು ಇಪ್ಪತ್ತೆಂಟು ವರ್ಷಗಳು ಸಂದಿವೆ. ವಿದ್ಯಾರ್ಥಿಗಳಿಗೆ, ಯುವಕರಿಗೆ, ಶಿಕ್ಷಕರಿಗೆ, ಸಾರ್ವಜನಿಕರಿಗೆ ಮತ್ತು ದುರ್ಬಲರಿಗೆ ಮಾರ್ಗದರ್ಶನ ನೀಡುತ್ತಿದೆ. ‘ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮದಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ರಮಗಳು, ‘ಆಚಾರ್ಯ ದೇವೋಭವ’ ಕಾರ್ಯಕ್ರಮದಡಿಯಲ್ಲಿ ಸಹಸ್ರಾರು ಶಿಕ್ಷಕರಿಗೆ ಮಾರ್ಗದರ್ಶನ, ‘ದೀನದೇವೋಭವ’ ಕಾರ್ಯಕ್ರಮದಡಿಯಲ್ಲಿ ಜೀವಂತ ದುರ್ಗಾಪೂಜೆ ಎಂಬ ಶೀರ್ಷಿಕೆಯಲ್ಲಿ ಕೊಳೆಗೇರಿಗಳಲ್ಲಿ ವಾಸಿಸುವ, ರಸ್ತೆಗಳಲ್ಲಿ ಭಿಕ್ಷೆ ಬೇಡುವ ಅಶಕ್ತ ತಾಯಂದಿರನ್ನು ಪೂರ್ಣಕುಂಭ ವೇದಘೊಷದೊಂದಿಗೆ ಆಶ್ರಮಕ್ಕೆ ಆಹ್ವಾನಿಸಿ, ಅವರುಗಳನ್ನು ಸಾಕ್ಷಾತ್ ಶ್ರೀಮಾತೆ ಶ್ರೀಶಾರದಾದೇವಿ ಎಂದೇ ಪೂಜಿಸಿ ಅನ್ನದಾನ, ಧಾನ್ಯದಾನ, ವಸ್ತ್ರದಾನಗಳಿಂದ ಸತ್ಕರಿಸಲಾಗುತ್ತಿದೆ.

    ಮಾತೆಯರಿಗಾಗಿ ಸತ್ಸಂಗ ಕೇಂದ್ರಗಳು, ಮಕ್ಕಳಿಗಾಗಿ ಮಕ್ಕಳ ಬಳಗ, ಯುವಕರಿಗಾಗಿ ವಿವೇಕಾನಂದ ಯುವಕ ಸಂಘ, ಯುವತಿಯರಿಗಾಗಿ ನಿವೇದಿತಾ ನಿಕೇತನ, ಸಂಗೀತಾಸಕ್ತರಿಗೆ ಶಾರದಾ ಮಾಧುರ್ಯ, ಶಿಕ್ಷಕರಿಗೆ ವಿವೇಕಾನಂದ ಧ್ಯೇಯನಿಷ್ಠ ಶಿಕ್ಷಕಸಂಘ, ಬರಹಗಾರರಿಗಾಗಿ ವಿವೇಕಪ್ರವಹನ ವೇದಿಕೆ ಮತ್ತು ವಿವೇಕದೀಪ್ತಿ ದ್ವೈಮಾಸಿಕ ಪತ್ರಿಕೆ ಶ್ರಮಿಸುತ್ತಿದೆ.

    ಆಶ್ರಮವು ಭಕ್ತರಿಗೆ, ವೈದ್ಯರಿಗೆ, ಸಾಹಿತಿಗಳಿಗೆ, ಮಕ್ಕಳಿಗೆ, ಮಾತೆಯರಿಗೆ, ವಾಹನ ಚಾಲಕರಿಗೆ, ಜನಪ್ರತಿನಿಧಿಗಳಿಗೆ, ಸರ್ಕಾರದ ಆಡಳಿತಗಾರರು… ಮುಂತಾದವರಿಗೆ ರಾಜ್ಯಮಟ್ಟದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನೆರವೇರಿಸಿದೆ.

    2018ರ ಮಾರ್ಚ್ 4ರಂದು ಪ್ರಧಾನಿ ನರೇಂದ್ರ ಮೋದಿಯವರು ಯುವಸಮ್ಮೇಳನದಲ್ಲಿ 25 ಸಹಸ್ರ ಯುವಕರನ್ನು ಉದ್ದೇಶಿಸಿ ಲೈವ್ ಆನ್​ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಯತಿಗಳು, ನ್ಯಾಯಮೂರ್ತಿಗಳು, ರಾಜ್ಯಪಾಲರು, ಮಂತ್ರಿಮಹೋದಯರು, ಸುಖ್ಯಾತ ಸಮಾಜಸೇವಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

    ಜೀವಂತ ದುರ್ಗಾಪೂಜೆಯನ್ನು ಶ್ಲಾಘಿಸುತ್ತಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು, ‘ನನ್ನ ಜೀವನದಲ್ಲಿ ಕಂಡರಿಯದ, ಕೇಳರಿಯದ ಕಾರ್ಯಕ್ರಮಕ್ಕಿಂದು ನಾನು ಸಾಕ್ಷಿಯಾದೆ. ಈ ಕಾರ್ಯಕ್ರಮವು ಎಲ್ಲ ಮಠಗಳಿಗೂ ಮಾದರಿ’ ಎಂದಿದ್ದಾರೆ. ವಿಚಾರವಾದಿ ಜ.ಹೊ.ನಾರಾಯಣಸ್ವಾಮಿ, ‘ವಿಶ್ವದ ವಿದ್ಯಮಾನಗಳನ್ನು ಮನವರಿಕೆ ಮಾಡಿಕೊಡುತ್ತಲೇ ನಿಜವಾದ ಭಾರತೀಯ ಸಂಸ್ಕೃತಿಯನ್ನು, ಅದರ ವೈಶಿಷ್ಟ್ಯದ ಅರಿವನ್ನು ಮೂಡಿಸಿದ ನಿಮ್ಮ ವಿಷಯ ಮಂಡನೆಯ ರೀತಿ ವಿವೇಕದ ಕಣ್ಣು ತೆರೆಸುತ್ತದೆ. ಬದುಕು ಬೆಳಕಿನೆಡೆಗೆ ಮೊಗಮಾಡುವ ಪ್ರೇರಣೆ ನೀಡುತ್ತದೆ, ಯುವಜನತೆಗಂತೂ ಸ್ಪೂರ್ತಿದಾಯಕ ಮತ್ತು ಆಕರ್ಷಣೀಯ…’ ಎಂದಿದ್ದಾರೆ.

    ಸ್ವಾಮಿ ಜಗದಾತ್ಮಾನಂದಜೀ, ಸ್ವಾಮಿ ಹರ್ಷಾನಂದಜೀ, ಸ್ವಾಮಿ ನಿರ್ಭಯಾನಂದಜೀ ಮೊದಲಾದ ಯತಿಗಳಿತ್ತ ಸಹಕಾರ ಮಾರ್ಗದರ್ಶನಗಳನ್ನು ನಾನು ಕೃತಜ್ಞತೆಯಿಂದ ಸ್ಮರಿಸುವೆ. ನನ್ನ ಭಾವಪ್ರಪಂಚದ ಅವಿಭಾಜ್ಯ ಅಂಗಗಳೇ ಆಗಿರುವ ಸ್ವಾಮಿ ಪ್ರಣವಾನಂದಜೀ, ಸ್ವಾಮಿ ಧೀರಾನಂದಜೀ ಮತ್ತು ಸ್ವಾಮಿ ಪರಮಾನಂದಜೀ ಅವರ ಅವಿರತ ಶ್ರಮ ಹಾಗೂ ಆಶ್ರಮದ ಸಮಸ್ತ ಭಕ್ತರ ನಿರಂತರ ಸಹಕಾರಗಳು ಈ ಎಲ್ಲ ಕಾರ್ಯಗಳ ಯಶಸ್ಸಿಗೆ ಕಾರಣವಾಗಿದೆ.

    ಉಪಸಂಹಾರ: ಸಮಾಜ, ಜಗತ್ತು ನಮಗೆ ಎಲ್ಲವನ್ನೂ ನೀಡಿ ಪೋಷಿಸಿದೆ. ಕೃತಜ್ಞತೆ ಎಂಬ ಮೌಲ್ಯವು ಮಾನವನಿಗೆ ಅತ್ಯಂತ ಶೋಭೆ ತರುವಂಥದ್ದು. ಸಮಾಜವು ನನಗೆ ಎಲ್ಲವನ್ನೂ ನೀಡಿ ಹರಸಿದೆ. ಅದು ನನಗಿತ್ತ ಪ್ರಮಾಣದ ಮುಂದೆ ಸಮಾಜಕ್ಕೆ ನಾನು ಎಷ್ಟನ್ನು ಹಿಂದಿರುಗಿಸಬಹುದು? ಎಂಬುದೊಂದು ಯಕ್ಷಪ್ರಶ್ನೆ! ಕಬೀರನ ದೋಹೆಯೊಂದೇ ಈ ಪ್ರಶ್ನೆಗೆ ಉತ್ತರ! ‘ನನ್ನದೆಂಬುದೇನಿಲ್ಲ, ಇರುವುದು ನಿನ್ನದೇ ಎಲ್ಲ. ನಿನ್ನದ ನಿನಗೇ ಅರ್ಪಿಸುತಲಿ, ನೆಮ್ಮದಿಯಿಂದಿರುವೆ!’

    (ಲೇಖಕರು ತುಮಕೂರಿನ ರಾಮಕೃಷ್ಣ -ವಿವೇಕಾನಂದ ಆಶ್ರಮದ ಅಧ್ಯಕ್ಷರು) 

    ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

    06

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts