More

    ವಿಟ್ಲ ಠಾಣೆಗಿಲ್ಲ ಮೇಲ್ದರ್ಜೆ ಭಾಗ್ಯ

    ನಿಶಾಂತ್ ಬಿಲ್ಲಂಪದವು ವಿಟ್ಲ
    ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಗಸ್ತು ವ್ಯಾಪ್ತಿ ಹೊಂದಿರುವ ಠಾಣೆಗಳಲ್ಲಿ ಒಂದಾಗಿರುವ ವಿಟ್ಲ ಠಾಣೆಯ ಭಾಗದ ಸುಮಾರು 9 ಗ್ರಾಮಗಳು ಕೇರಳದ ಗಡಿಯನ್ನು ತಾಗಿಕೊಂಡಿದ್ದು, ಹೆಚ್ಚಿನ ಅಪರಾಧ ಪ್ರಕರಣಗಳು ನಡೆಯುವ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಆದರೂ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಇಲಾಖೆ ಇನ್ನೂ ಮಾಡಿಲ್ಲ.

    ಸ್ವಾತಂತ್ರೃ ಪೂರ್ವದಿಂದಲೇ ವಿಟ್ಲ ಠಾಣೆ ಕಾರ್ಯನಿರ್ವಹಿಸುತ್ತಿದ್ದು, ಸ್ವಾತಂತ್ರೃ ಬಳಿಕ ಜನಸಂಖ್ಯೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಸದ್ಯ ಠಾಣೆ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾದರೂ, ಗ್ರಾಮ ಪಂಚಾಯಿತಿ ಪಟ್ಟಣವಾಗಿ ಮೇಲ್ದರ್ಜೆಗೆ ಏರಿದರೂ ಠಾಣೆಯಲ್ಲಿ ಮಾತ್ರ ಸಿಬ್ಬಂದಿ ಹೆಚ್ಚಳದ ಕಾರ್ಯಕ್ಕೆ ಇಲಾಖೆ ಕ್ರಮಕೈಗೊಂಡಿಲ್ಲ.
    ವಿಟ್ಲ ಠಾಣೆ ವ್ಯಾಪ್ತಿಗೆ 20 ಗ್ರಾಮಗಳು ಬರುತ್ತಿದ್ದು, ಇದರಲ್ಲಿ 9 ಗ್ರಾಮಗಳು ಕೇರಳದ ಗಡಿಭಾಗದಲ್ಲೇ ಇವೆ. ಇಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ನಡೆದು ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಕನ್ಯಾನದಲ್ಲಿ ಹೊರಠಾಣೆ ಸ್ಥಾಪನೆಗೆ ಮುಂದಾಗಿದ್ದ ಇಲಾಖೆ ಸದ್ಯ ಅದನ್ನು ಕೈಬಿಟ್ಟ ಹಾಗಿದೆ.

    ಎರಡೇ ಗಡಿ ರಸ್ತೆಯನ್ನು ಹೊಂದಿರುವ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 45ಕ್ಕೂ ಅಧಿಕ ಸಿಬ್ಬಂದಿ ಇದ್ದರೆ, 5ಕ್ಕೂ ಅಧಿಕ ಗಡಿ ರಸ್ತೆಯನ್ನು ಹೊಂದಿರುವ ವಿಟ್ಲ ಠಾಣೆಯಲ್ಲಿ ಇರುವುದು 30 ಸಿಬ್ಬಂದಿ ಮಾತ್ರ. ಬಂಟ್ವಾಳ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಹಾಗೂ ಫರಂಗಿಪೇಟೆ ಅಥವಾ ಕಲ್ಲಡ್ಕದಲ್ಲಿ ಹೊಸ ಠಾಣೆಯನ್ನು ಮಾಡಬೇಕೆಂಬ ಪ್ರಸ್ತಾಪವಿದೆ. ಆದರೆ ಅತೀ ಅಗತ್ಯವಿರುವ ವಿಟ್ಲ ಮಾತ್ರ ಎಲ್ಲದರಲ್ಲೂ ನಿರ್ಲಕ್ಷೃಕ್ಕೆ ಒಳಗಾಗುತ್ತಲೇ ಇದೆ.

    ಗಡಿಯಲ್ಲಿ ಘಟನೆ
    ಸಾಲೆತ್ತೂರು, ಪೆರುವಾಯಿ ಭಾಗದಲ್ಲಿ ದನ ಅಕ್ರಮ ಸಾಗಾಟ ದೊಡ್ಡ ಸಮಸ್ಯೆಯಾಗಿದೆ. ಕನ್ಯಾನ ಭಾಗದಲ್ಲಿ ಕೊಲೆ ಯತ್ನ, ತಲವಾರು ಕಾಳಗಗಳು ನಡೆದರೆ, ಸಾರಡ್ಕ ಭಾಗದಲ್ಲಿ ದರೋಡೆ ಘಟನೆಗಳು ನಡೆಯುತ್ತ ಬಂದಿವೆ. ಸಾರಡ್ಕದಲ್ಲಿ ಶಾಶ್ವತ ಹಾಗೂ ನೆಲ್ಲಿಕಟ್ಟೆ, ಸಾಲೆತ್ತೂರು ಭಾಗದಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳು ಇದ್ದರೂ ಗಡಿಭಾಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿಯೇ ನಡೆಯುತ್ತಿವೆ. ಈ ಕಾರಣದಿಂದ ವಿಟ್ಲ ಠಾಣೆ ಮೇಲ್ದರ್ಜೆಗೇರುವ ಅನಿವಾರ್ಯತೆ ಇದೆ.

    ಗಡಿ ಬಂದೋಬಸ್ತಿಗೆ ಹೊರಗಿನ ಸಿಬ್ಬಂದಿ
    ಕರ್ನಾಟಕ ಕೇರಳ ಗಡಿಭಾಗ ಸೇರಿ ಸೂಕ್ಷ್ಮ ಸಮಯಗಳಲ್ಲಿ ಬಂದೋಬಸ್ತ್ ಏರ್ಪಡಿಸಲು ಜಿಲ್ಲೆಯ ಬೇರೆ ಠಾಣೆಗಳ ಸಿಬ್ಬಂದಿ ಆಗಮಿಸಬೇಕಾದ ಪರಿಸ್ಥಿತಿ ಇದೆ. ಈ ಸಂದರ್ಭ ಹೊರಗಿನಿಂದ ಬಂದವರಿಗೆ ಸ್ಥಳೀಯರ ಮಾಹಿತಿ ಕೊರತೆ ಕಾಣಿಸಿ ಅಪರಾಧ ನಡೆಸುವವರು ಸುಲಭವಾಗಿ ತಪ್ಪಿಸಿಕೊಳ್ಳಲು ಕಾರಣವಾಗುತ್ತಿದೆ.

    ಕನ್ಯಾನ ಹೊರಠಾಣೆ ನನೆಗುದಿಗೆ?
    ಕನ್ಯಾನ ಹಾಗೂ ಕರೋಪಾಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿ ಪಂಚಾಯಿತಿ ಅಧ್ಯಕ್ಷರ ಕೊಲೆ ನಡೆದ ಸಮಯದಲ್ಲಿ ಆಗಿದ್ದ ಸರ್ಕಾರ ಹೊರಠಾಣೆ ಸ್ಥಾಪನೆ ಆಗಿಯೇ ಹೋಯಿತು ಎನ್ನುವ ರೀತಿಯಲ್ಲಿ ಹೇಳಿಕೊಂಡಿತ್ತು. ಆದರೆ ಇಂದಿಗೂ ಅಲ್ಲಿ ಹೊರಠಾಣೆ ಸ್ಥಾಪನೆ ಆಗಿಲ್ಲ. ಆಗಿನ ಪ್ರಸ್ತಾಪವೂ ನನೆಗುದಿಗೆ ಬೀಳುವಂತಾಗಿದೆ.

    ಇಲಾಖೆಯ ಬೇಡಿಕೆಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಲಾಗುತ್ತದೆ. ವಿಟ್ಲ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಪ್ರಸ್ತಾವನೆ ಅಂಗೀಕರಿಸಿದಾಗ ಸಿಬ್ಬಂದಿಯ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತದೆ.
    ಲಕ್ಷ್ಮೀಪ್ರಸಾದ್ ದ.ಕ. ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts