More

    ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ

    ಮಂಗಳೂರು: ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ವಿತರಿಸುವ ಮೊಟ್ಟೆ ಕೊಳೆತು ಹೋಗಿರುವುದು ಬೆಳಕಿಗೆ ಬಂದಿದೆ.

    ಮಂಗಳೂರು ನಗರದ ಬೋಂದೆಲ್, ಮರಕಡ, ಕಾವೂರು, ಪುತ್ತೂರು, ಬಂಟ್ವಾಳ ಸಹಿತ ಹಲವು ಕಡೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳು ಕೊಳೆತು ಹೋಗಿದ್ದು, ಮಕ್ಕಳ ಪಾಲಕರು, ಫಲಾನುಭವಿಗಳು ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ನಿರ್ದೇಶನದಂತೆ ಇತ್ತೀಚೆಗೆ ಮೊಟ್ಟೆಗಳನ್ನು ಪೂರೈಕೆ ಮಾಡಲಾಗಿತ್ತು. ವಿಜಯಪುರ ಮೂಲದ ಗುತ್ತಿಗೆದಾರ ಬಸವೇಶ್ವರ ಮ್ಯಾನ್ ಪವರ್ ಏಜೆನ್ಸೀಸ್ ಸಂಸ್ಥೆಯವರು ಸರಬರಾಜು ಮಾಡಿದ್ದರು. ಆದರೆ ಮೊಟ್ಟೆಗಳನ್ನು ಬೇಯಿಸಿದಾಗ ಒಳಗಡೆ ಪೂರ್ತಿಯಾಗಿ ಕಪ್ಪಾಗಿರುವುದು ಕಂಡುಬಂದಿದೆ.

    ಮೇ ಆರಂಭದಲ್ಲಿ ನೀಡಿದ ಬಳಿಕ ಮೊಟ್ಟೆ ಪೂರೈಕೆ ಆಗಿರಲಿಲ್ಲ. ಜೂನ್ ತಿಂಗಳ ಮೊಟ್ಟೆಯನ್ನು ಈಗ ಜುಲೈ 11ರಂದು ನೀಡಿದ್ದಾರೆ. ತಿಂಗಳ ಹಿಂದೆ ದಾಸ್ತಾನು ಇಟ್ಟಿದ್ದ ಮೊಟ್ಟೆಯನ್ನು ಈಗ ನೀಡಿದ್ದರಿಂದ ಈ ರೀತಿ ಆಗಿರಬಹುದು. ಒಂದೊಂದು ಅಂಗನವಾಡಿಗೆ 400-500ರಷ್ಟು ಮೊಟ್ಟೆ ಪೂರೈಕೆ ಆಗುತ್ತದೆ. ಒಂದೆರಡು ಬಿಟ್ಟರೆ ಉಳಿದಂತೆ ಪೂರ್ತಿಯಾಗಿ ಮೊಟ್ಟೆಗಳು ಹಾಳಾಗಿವೆ. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದರೂ ಬದಲಿ ಮೊಟ್ಟೆಗಳನ್ನು ನೀಡುವ ಯತ್ನ ಆಗಿಲ್ಲ ಎಂಬುವುದು ಫಲಾನುಭವಿಗಳ ಆರೋಪ.

    ಬದಲಿ ಮೊಟ್ಟೆ ವಿತರಣೆಗೆ ಕ್ರಮ

    ಬೆಳ್ತಂಗಡಿ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಿಗೆ ಬಸವೇಶ್ವರ ಮ್ಯಾನ್ ಪವರ್ ಏಜನ್ಸೀಸ್ ಮೊಟ್ಟೆ ವಿತರಣೆ ಗುತ್ತಿಗೆ ಪಡೆದಿದೆ. ಮಳೆಗಾಲವಾಗಿದ್ದರಿಂದ ಮೊಟ್ಟೆ ವಿತರಿಸುವ ಸಂದರ್ಭ ಹಾಳಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ಪೂರೈಕೆದಾರ ಸಂಸ್ಥೆಗೆ ಮಾಹಿತಿ ನೀಡಲಾಗಿದೆ. ಹಾಳಾದ ಮೊಟ್ಟೆಗೆ ಬದಲಿ ಮೊಟ್ಟೆ ವಿತರಣೆ ಮಾಡುವ ಬಗ್ಗೆ ಗುತ್ತಿಗೆದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಇತರ ಜಿಲ್ಲೆಗಳಲ್ಲೂ ಇಂಥದ್ದೇ ಘಟನೆಗಳು ನಡೆದಿದ್ದು, ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವ ಎಚ್ಚರಿಕೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದರು.

    ಪುತ್ತೂರಿನಿಂದಲೂ ದೂರು

    ಭಕ್ತಕೋಡಿ(ಬಡಕೋಡಿ) ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಬಗ್ಗೆ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದೂರು ನೀಡಲಾಗಿದೆ. ಮೊಟ್ಟೆ ಪೂರೈಕೆ ಟೆಂಡರ್ ಪ್ರಕ್ರಿಯೆ ಜಿಲ್ಲಾಮಟ್ಟದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ 375 ಅಂಗನವಾಡಿ ಕೇಂದ್ರಗಳ ಪೈಕಿ ಕೆಲವೊಂದು ಕಡೆ ಕೊಳೆತ ಮೊಟ್ಟೆ ಪತ್ತೆಯಾಗಿದೆ. ಟೆಂಡರ್ ಪಡೆದವರು ಹಾಳಾದ ಮೊಟ್ಟೆಗಳನ್ನು ಹಿಂದಕ್ಕೆ ಪಡೆದು ಬದಲಿ ಮೊಟ್ಟೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ತಿಳಿಸಿದ್ದಾರೆ.

    ಹವಾಮಾನದ ವೈಪರೀತ್ಯದ ಪರಿಣಾಮ ಮೊಟ್ಟೆ ಸಾಗಾಟದ ವೇಳೆ ಹಾಳಾಗಿರುವುದು ಬೆಳಕಿಗೆ ಬಂದಿದ್ದು, ಇದೇ ಮೊಟ್ಟೆ ವಿತರಣೆಯಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಫಲಾನುಭವಿಗಳಿಗೆ ಬದಲಿ ಮೊಟ್ಟೆ ವಿತರಿಸಲು ಸೂಚನೆ ನೀಡಿದ್ದು, ಇದಕ್ಕೆ ಮೊಟ್ಟೆಗಳನ್ನು ಪೂರೈಕೆ ಮಾಡುವ ಸಂಸ್ಥೆ ಒಪ್ಪಿಗೆ ಸೂಚಿಸಿದೆ.
    – ಶ್ರೀಲತಾ, ಸಿಡಿಪಿಒ, ದಕ್ಷಿಣ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts