More

    ದೇವಾಲಯಗಳ ಅಭಿವೃದ್ಧಿಗೆ ‘ವಿಷನ್ ಗ್ರೂಪ್’

    ಬೆಂಗಳೂರು: ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ 34 ಸಾವಿರ ದೇವಾಲಯಗಳ ಮೇಲ್ವಿಚಾರಣೆ ಮಾಡುತ್ತಿರುವ ಮುಜರಾಯಿ ಇಲಾಖೆ, ತನ್ನ ವ್ಯಾಪ್ತಿಯ ದೇವಾಲಯಗಳ ಅಭಿವೃದ್ಧಿಗಾಗಿ ‘ವಿಷನ್ ಗ್ರೂಪ್’ ಹಾಗೂ ಸಾರ್ವಜನಿಕರಿಗೆ ದೇಗುಲಗಳ ಮಾಹಿತಿ ಒದಗಿಸಲು ‘ಕಾಲ್ ಸೆಂಟರ್’ ಆರಂಭಕ್ಕೆ ಮುಂದಾಗಿದೆ.

    ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದನ್ನು ವಿಷನ್ ಗ್ರೂಪ್ ಕೇಂದ್ರೀಕರಿಸಲಿದ್ದು, ದೇಗುಲಗಳ ಜೀರ್ಣೋದ್ಧಾರ ಹಾಗೂ ಸ್ಥಳ ಅಭಿವೃದ್ಧಿಗೆ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್)ನಿಧಿ ಹೊಂದಿಸುವ ದಾರಿಯನ್ನು ಸುಗಮಗೊಳಿಸಲಿದೆ. ಈ ಸಂಬಂಧ 10 – 12 ಸದಸ್ಯರನ್ನು ಒಳಗೊಂಡ ವಿಷನ್ ಗ್ರೂಪ್‌ನ ರೂಪುರೇಷೆ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಇಲಾಖೆ ತೊಡಗಿಕೊಂಡಿದೆ.

    ಪ್ರಸ್ತುತ ದೇವಾಲಯಗಳಿಗೆ ನೀಡುವ ಅನುದಾನದ ಪ್ರಮಾಣ ಹೆಚ್ಚಿದ್ದು, ಅದನ್ನು ಸರಿಯಾಗಿ ಬಳಸಲಾಗುತ್ತಿದೆಯೇ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದೇವಾಲಯಗಳಿಗೆ ನೀಡುತ್ತಿರುವ ಅನುದಾನ ಹಾಗೂ ಅದನ್ನು ಯಾವ ರೀತಿ, ಯಾವುದಕ್ಕೆ ಬಳಸಬೇಕು ಎಂದು ನಿರ್ಣಯಿಸಲು ವಿಷನ್ ಗ್ರೂಪ್ ನೆರವಾಗಲಿದೆ.

    ಸದಸ್ಯರ ನೇಮಕ: ವಿಷನ್ ಗ್ರೂಪ್‌ನ ಸದಸ್ಯರನ್ನಾಗಿ ನೇಮಿಸಲು ಇನ್‌ೆಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಆರ್ಟ್ ಆ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸೇರಿ ಪ್ರಮುಖರನ್ನು ಸಂಪರ್ಕಿಸಲು ಸರ್ಕಾರ ಮುಂದಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲ್‌ಸೆಂಟರ್: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ನೆರವಾಗಲು ಕಾಲ್‌ಸೆಂಟರ್ ಪ್ರಾರಂಭಿಸಲಾಗುತ್ತಿದೆ. ಈ ಸೆಂಟರ್ ದೇವಾಲಯಗಳ ಎಲ್ಲ ಸಂಭಾವ್ಯ ಮೂಲ ವಿವರಗಳನ್ನು ಒದಗಿಸುತ್ತದೆ. ಉದಾಹರಣೆಗೆ ದೇವಾಲಯದ ದರ್ಶನದ ಸಮಯ, ಅಭಿಷೇಕ, ವಿಶೇಷ ಪೂಜೆ ಮತ್ತು ಅಲಂಕಾರ, ಅಮಾವಾಸ್ಯೆ ಹಾಗೂ ಪೌರ್ಣಮಿಯ ವಿಶೇಷತೆಗಳು ಇತ್ಯಾದಿ ಕುರಿತು ಮಾಹಿತಿ ಪಡೆಯಲು ಭಕ್ತರು ಕಾಲ್ ಸೆಂಟರ್ ಸಂಪರ್ಕಿಸಬಹುದಾಗಿದೆ. ಇದರಿಂದ ದೇವಾಲಯಕ್ಕೆ ಭೇಟಿ ನೀಡಲು ಭಕ್ತರು ಪೂರ್ವನಿಯೋಜಿತವಾಗಿ ಯೋಜಿಸಲು ಅನುಕೂಲವಾಗಲಿದೆ.

    ಸ್‌ಟಾವೇರ್ ಸಿದ್ಧತೆ: ಕಾಲ್‌ಸೆಂಟರ್‌ನಲ್ಲಿ 10 ಮಂದಿ ನಿಯೋಜಿಸಲು ನಿರ್ಧರಿಸಲಾಗಿತ್ತು. ಇದನ್ನು ಹೊರಗುತ್ತಿಗೆ ಅಥವಾ ಕಿಯೋನಿಕ್ಸ್ ಇಲ್ಲವೆ ರಾಜ್ಯದ ಐಟಿ ಏಜೆನ್ಸಿಯೊಂದಕ್ಕೆ ನೀಡಲು ಯೋಚಿಸಲಾಗಿದೆ. ಪ್ರತಿ ದೇವಾಲಯದಲ್ಲಿ ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೆ ವಿವರಗಳನ್ನು ಸಂಗ್ರಹಿಸಿ ಕೇಂದ್ರ ಕಚೇರಿಗೆ ಕಳುಹಿಸಿದ್ದಾರೆ. ಪ್ರಸ್ತುತ ಸ್‌ಟಾವೇರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಇಲಾಖೆ ಆಯುಕ್ತ ಎಚ್. ಬಸವರಾಜೇಂದ್ರ ತಿಳಿಸಿದರು.

    ಯಾವ ಮಾಹಿತಿ ಲಭ್ಯ? ಕಾಲ್ಸೆಂಟರ್ ಉದ್ಯೋಗಿಗಳು ಕರೆ ಮಾಡುವ ಭಕ್ತರಿಗೆ ದೇವಾಲಯಗಳ ವಿಳಾಸ, ಅಲ್ಲಿಗೆ ತಲುಪಲು ಮಾರ್ಗ ನಕ್ಷೆ, ಹತ್ತಿರದ ಬಸ್ ಅಥವಾ ರೈಲು ನಿಲ್ದಾಣ ಸೇರಿ ಸಾರಿಗೆ ಸಂಪರ್ಕ ಮಾಹಿತಿಯನ್ನು ಒದಗಿಸಲಿದ್ದಾರೆ. ಜತೆಗೆ ದೇವಾಲಯಗಳಲ್ಲಿ ವಿಶೇಷ ದಿನಗಳಲ್ಲಿ ನಡೆಯುವ ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ. ಕಾಲ್‌ಸೆಂಟರ್‌ನ ಸಂಪೂರ್ಣ ಪ್ರಕ್ರಿಯೆ 45 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts