More

    ಹಿಂದು ಧರ್ಮದ ಶೌರ್ಯ ಪರಾಕ್ರಮ ಯುವ ಪೀಳಿಗೆಗೆ ತಿಳಿಸಿ; ಪುಂಡಲಿಕ್ ದಳವಾಯಿ

    ರಾಣೆಬೆನ್ನೂರ: ಸನಾತನ ಹಿಂದು ಧರ್ಮ ಕುರಿತು ದೇಶದ ಯುವ ಜನತೆಗೆ ತಿಳಿಸುವ ಮೂಲಕ ಹಿಂದು ಜಾಗೃತಿಗೊಳಿಸಬೇಕು ಎಂಬ ಉದ್ದೇಶದಿಂದ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಹಿಂದು ಧರ್ಮದ ಶೌರ್ಯ ಪರಾಕ್ರಮ ಯುವ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಬಜರಂಗದಳದ ಉತ್ತರ ಪ್ರಾಂತ ಸಂಯೋಜಕ ಪುಂಡಲಿಕ್ ದಳವಾಯಿ ಹೇಳಿದರು.
    ನಗರದ ಮುನ್ಸಿಪಲ್ ಮೈದಾನದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶೌರ್ಯ ಜಾಗರಣ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
    ಸೈನಿಕರ ಮತ್ತು ಪೊಲೀಸರ ಮೇಲೆ ಹಿಂದುಗಳು ಯಾವತ್ತೂ ಕಲ್ಲು ಎಸೆಯುವಂತಹ ಹೇಯ ಕೃತ್ಯ ಮಾಡಿಲ್ಲ. ಏಕೆಂದರೆ ಸನಾತನ ಧರ್ಮ ನಮಗೆ ಅದನ್ನು ಕಲಿಸಿಕೊಟ್ಟಿಲ್ಲ. ಭಾರತ ದೇಶವನ್ನು ವಿಶ್ವದಲ್ಲಿಯೆ ಎತ್ತರಕ್ಕೆ ಕೊಂಡೊಯ್ಯಬೇಕು ಎಂಬುದೇ ರಥಯಾತ್ರೆಯ ಉದ್ದೇಶವಾಗಿದ್ದು ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲ. ಅಂದಿನ ರಾಮ ಜಾನಕಿ ರಥಯಾತ್ರೆಯಿಂದ ಇಂದು ಶೌರ್ಯರಥಯಾತ್ರೆಗೆ ಬಂದಿದೆ.
    ಸ್ವಾಮೀಜಿಗಳ ನೇತೃತ್ವ ಹಾಗೂ ಆಶೀರ್ವಾದದಿಂದ ವಿಶ್ವ ಹಿಂದು ಪರಿಷತ್ ನಡೆಯುತ್ತಿದೆಯೇ ಹೊರತು ರಾಜಕಾರಣಗಳಿಂದಲ್ಲ. ಬಜರಂಗದಳ ಯಾವ ಮುಸ್ಲಿಂಮರಿಗೂ ಹೆದರುವುದಿಲ್ಲ. ಬಜರಂಗದಳ ಇರುವವರೆಗೂ ಮತಾಂತರ, ಲವ್ ಜಿಹಾದ್ ನಡೆಯಲು ಬಿಡಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತಿದ್ದೇವೆ. ತಾಕತ್ತಿದ್ದರೆ ಮುಸ್ಲಿಮರು ಬಂದು ತಡೆಯಲಿ ನೋಡೋಣ ಎಂದು ಸವಾಲು ಹಾಕಿದರು.
    ಸ್ಥಳೀಯ ವಿವೇಕಾನಂದ ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ಇಲ್ಲಿನ ಸಿದ್ಧೇಶ್ವರನಗರದ ಸಿದ್ಧೇಶ್ವರ ದೇವಸ್ಥಾನದ ಬಳಿಯಿಂದ ಪ್ರಾರಂಭವಾದ ಶೌರ್ಯ ಜಾಗರಣ ರಥಯಾತ್ರೆಯು ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಪೋಸ್ಟ್ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಕೋರ್ಟ್ ಸರ್ಕಲ್, ಹಲಗೇರಿ ಕ್ರಾಸ್ ಮೂಲಕ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.
    ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲ, ತಾಲೂಕು ಅಧ್ಯಕ್ಷ ವಿನಾಯಕ ಬಾಳನಗೌಡ್ರ, ಪ್ರಮುಖರಾದ ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts