More

    ವಾಟ್ಸ್​ಆ್ಯಪ್​ ಮೆಸೇಜ್​ ನಂಬೋ ಮುನ್ನ ಎಚ್ಚರ: 100 ರೂ. ಆಸೆಗೆ ಬಿದ್ದು 5.42 ಲಕ್ಷ ರೂ. ಕಳೆದುಕೊಂಡ ಮಹಿಳೆ!

    ಬೀದರ್​: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸೈಬರ್​ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದೀಗ ಇಂಥದ್ದೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಮೀಪದ ವಿಶಾಲಾಕ್ಷಿ ನಗರದಲ್ಲಿ ವರದಿಯಾಗಿದೆ.

    ಆನ್​ಲೈನ್​ನಲ್ಲಿ ಅಮಾಯಕರನ್ನು ಟಾರ್ಗೆಟ್​ ಮಾಡುವ ಒಂದು ಗುಂಪಿದ್ದು, ಅವರ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. 100 ರೂಪಾಯಿ ಆಸೆಗೆ ಬಿದ್ದ ಮಹಿಳೆಯೊಬ್ಬಳು ಬರೋಬ್ಬರಿ 5.42 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಳೆ. ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್​ ನಂಬಿದ ಮಹಿಳೆ ಪಂಗನಾಮ ಹಾಕಿಕೊಂಡಿದ್ದಾಳೆ.

    ವಿವರಣೆಗೆ ಬರುವುದಾದರೆ, ವಿಶಾಲಾಕ್ಷಿ ನಗರದ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ, ವಾಟ್ಸ್​ಆ್ಯಪ್​ ಮೆಸೇಜ್​ ಒಂದನ್ನು ಸ್ವೀಕರಿಸುತ್ತಾಳೆ. ಅದರಲ್ಲಿ ಮನೆಯಲ್ಲೇ ಕುಳಿತು ಪಾರ್ಟ್​ ಟೈಂ ಜಾಬ್​ ಮಾಡಬಹುದು ಮತ್ತು ಒಳ್ಳೆಯ ಹಣ ಗಳಿಸಬಹುದು ಎಂಬ ಸಂದೇಶ ಇರುತ್ತದೆ. ಆರಂಭದಲ್ಲಿ ಮಹಿಳೆ ಇದನ್ನು ನಂಬುವುದಿಲ್ಲ. ಆದರೆ, ನಂತರದಲ್ಲಿ ಮತ್ತೆ ಸಂದೇಶ ಕಳುಹಿಸುವ ಸೈಬರ್​ ವಂಚಕರು ಆಕೆಯನ್ನು ನಂಬಿಕೆ ಎಂಬ ಬಲೆಗೆ ಬೀಳಿಸಿಕೊಳ್ಳುತ್ತಾರೆ.

    ನಾವು ಕಳುಹಿಸುವ ವಿಡಿಯೋ ಲಿಂಕ್​ ಓಪನ್​ ಮಾಡಿ ಲೈಕ್​ ಮತ್ತು ಸಬ್​ಸ್ಕ್ರೈಬ್​ ಮಾಡಿದರೆ ಒಂದು ವಿಡಿಯೋಗೆ 100 ರೂಪಾಯಿ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಆರಂಭದಲ್ಲಿ ನಾಲ್ಕು ವಿಡಿಯೋಗೆ ಮಹಿಳೆ ಲೈಕ್​ ಮಾಡುತ್ತಾಳೆ. ಇದಾದ ತಕ್ಷಣ ಆಕೆಯ ಬ್ಯಾಂಕ್​ ಖಾತೆಗೆ 400 ರೂ. ಜಮಾ ಆಗುತ್ತದೆ. ಇದರಿಂದ ಆಕೆಯ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ. ಇದಾದ ಬಳಿಕ ಸೈಬರ್​ ವಂಚಕರ ಪ್ಲಾನ್​ ಟೆಲಿಗ್ರಾಮ್​ಗೆ ಸ್ಥಳಾಂತರವಾಗುತ್ತದೆ.

    ಈ ಬಾರಿ ನಾವು ಹೇಳಿದ ಕೆಲಸ ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಎನ್ನುತ್ತಾರೆ. ನಾವು ಹೇಳಿದ ಖಾತೆಗೆ 54 ಸಾವಿರ ರೂ. ಹಣ ಹಾಕಿದರೆ, ನಿಮಗೆ 72 ಸಾವಿರ ರೂ. ವಾಪಸ್​ ಬರುತ್ತದೆ ಎಂದು ನಂಬಿಸುತ್ತಾರೆ. ಅವರು ಹೇಳಿದಂತೆ 54 ಸಾವಿರ ರೂ. ಹಣವನ್ನು ಬ್ಯಾಂಕ್​ ಖಾತೆಗೆ ಮಹಿಳೆ ಜಮಾ ಮಾಡುತ್ತಾಳೆ. ಆಕೆಯ ನಂಬಿಕೆಯನ್ನು ಗಳಿಸುವ ಸಲುವಾಗಿ ಸೈಬರ್​ ವಂಚಕರು ವಾಪಸ್​ ಆಕೆಯ ಖಾತೆಗೆ 72 ಸಾವಿರ ರೂ. ಹಣವನ್ನು ಕ್ರೆಡಿಟ್​ ಮಾಡುತ್ತಾರೆ.

    ಯಾವಾಗ ತನ್ನ 72 ಸಾವಿರ ರೂ. ಹಣ ಬಂತೋ ಮಹಿಳೆ ನಂಬಿಕೆ ಮುಗಿಲು ಮುಟ್ಟಿರುತ್ತದೆ. ಆದರೆ, ನಂತರದಲ್ಲಿ ನಡೆದಿದ್ದೆಲ್ಲ ಅದಕ್ಕೆ ವಿರುದ್ಧವಾಗಿದೆ. ಇನ್ನಷ್ಟು ಟಾಸ್ಕ್​ಗಳು ಅಂತಾ ಹೇಳಿ, ಮಹಿಳೆಯಿಂದ ಸುಮಾರು 5.42 ಲಕ್ಷ ರೂ. ಹಣವನ್ನು ಸೈಬರ್​ ವಂಚಕರು ಡೆಪಾಸಿಟ್​ ಮಾಡಿಸಿಕೊಳ್ಳುತ್ತಾರೆ. ಇದಾದ ಬಳಿಕ ಖದೀಮರು ಮಹಿಳೆಗೆ ಯಾವುದೇ ಮೆಸೇಜ್​ ಕಳುಹಿಸುವುದೇ ಇಲ್ಲ. ಆಕೆಯ ಮೆಸೇಜ್​ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಇದರಿಂದ ಅನುಮಾನಗೊಂಡು ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಸಂತ್ರಸ್ತ ಮಹಿಳೆ ಸೈಬರ್​ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.

    ಸದ್ಯ ಈ ಸೈಬರ್ ವಂಚನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್​ಗಳು ಉದ್ಯೋಗದ ಹೆಸರಿನಲ್ಲಿ ವಂಚನೆ ಎಸಗುತ್ತಿದ್ದು, ಎಲ್ಲರೂ ಜಾಗೃತರಾಗಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂತಹ ಸಂದೇಶಗಳು ಬಂದರೆ ದೂರು ದಾಖಲಿಸುವಂತೆ ಸೂಚಿಸಲಾಗಿದೆ. ನಂಬಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ತುನಿವು ಸಿನಿಮಾ ಬಿಡುಗಡೆ ಸಂಭ್ರಮ: ಟ್ರಕ್​ನಿಂದ ಕೆಳಗೆ ಬಿದ್ದು ಅಜಿತ್​ ಅಭಿಮಾನಿ ದುರಂತ ಸಾವು!

    ತುನಿವು ಸಿನಿಮಾ ಬಿಡುಗಡೆ ಸಂಭ್ರಮ: ಟ್ರಕ್​ನಿಂದ ಕೆಳಗೆ ಬಿದ್ದು ಅಜಿತ್​ ಅಭಿಮಾನಿ ದುರಂತ ಸಾವು!

    ಬೈಕ್​ ಹಿಂಬದಿ ಸೀಟ್​ನಲ್ಲಿ ಪತ್ನಿ ಕೂರಿಸಿಕೊಂಡು ಅಪಾಯಕಾರಿ ಸಾಹಸ ಮಾಡಿದ ಗಂಡ: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts