More

    ಚಿತ್ರ ವಿಮರ್ಶೆ: ವಿರಾಗಿಯ ವಿರಾಟ ದರ್ಶನ

    ಚಿತ್ರ: ವಿರಾಟಪುರ ವಿರಾಗಿ
    ನಿರ್ದೇಶನ : ಬಿ.ಎಸ್. ಲಿಂಗದೇವರು
    ನಿರ್ಮಾಣ : ಸಮಾಧಾನ
    ತಾರಾಬಳಗ : ಸುಚೇಂದ್ರ ಪ್ರಸಾದ್, ಮೌನತಪಸ್ವಿ ಶಾಂತಲಿಂಗೇಶ್ವರ ಸ್ವಾಮೀಜಿ ಮುಂತಾದವರು

    ಈ ವಾರ ತೆರೆಕಂಡ ‘ವಿರಾಟಪುರದ ವಿರಾಗಿ’ ಚಿತ್ರವು ಹಾನಗಲ್​ ಕುಮಾರ ಶಿವಯೋಗಿಗಳ ಜೀವನವನ್ನಾಧರಿಸಿದ ಚಿತ್ರ. ಶಿವಯೋಗಿಗಳ ಜೀವನವಷ್ಟೇ ಅಲ್ಲ, ಆಗಿನ ಕಾಲಘಟ್ಟದ ಹಲವು ಮಹತ್ವದ ವಿಷಯಗಳ ಕುರಿತು ಗೊತ್ತಿಲ್ಲದ ಈಗಿನ ತಲೆಮಾರಿನವರಿಗೆ ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ಬಿ.ಎಸ್​. ಲಿಂಗದೇವರು.

    ಇದನ್ನೂ ಓದಿ: ಜಗದಲ್ಲಿ ರೈತನೆಂಬ ಬ್ರಹ್ಮ … ಸಂಕ್ರಾಂತಿಗೆ ಬಂತೊಂದು ರೈತ ಗೀತೆ

    ಹಾನಗಲ್​ ಕುಮಾರಸ್ವಾಮಿಗಳ ಜೀವನದ ಕುರಿತು ಹಲವರಿಗೆ ಗೊತ್ತಿರಲಿಕ್ಕಿಲ್ಲ. 19ನೇ ಶತಮಾನದ ಆರಂಭದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರಮಿಸುವುದರ ಜತೆಗೆ ವೀರಶೈವ ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದವರು ಅವರು. ಸಮಾಜವನ್ನು ಸಂಘಟಿಸಿದವರು ಅವರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ಜಾತಿ ಪದ್ಧತಿ ನಿರ್ಮೂಲನೆಗೆ ಮಹತ್ವದ ಪಾತ್ರ ವಹಿಸಿದವರು ಅವರು. ಅವರ ಕೆಲಸ ಮತ್ತು ಜೀವನಗಾಥೆ ಲೋಕಕ್ಕೆ ಮಾದರಿಯಾಗುವಂತದ್ದು.

    ಶ್ರೀ ಕುಮಾರ ಶಿವಯೋಗಿಗಳ ಬಾಲ್ಯ, ಓದು, ಆತ್ಮಲಿಂಗದ ಕಡೆಗಿನ ಒಲವು, ಸನ್ಯಾಸ, ಸಮಾಜ ಪರ ಕೆಲಸಗಳನ್ನು ದೃಶ್ಯಕಾವ್ಯದ ಮೂಲಕ ತೋರಿಸಲಾಗಿದೆ. ಅವರ ಜೀವನಗಾಥೆ ಮತ್ತು ಸಾಧನೆಗಳನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ಹಿಡಿದಿಡುವುದು ಅಷ್ಟು ಸುಲಭವಲ್ಲ. ಆದರೂ ಲಿಂಗದೇವರು ಅವರು ಶಿವಯೋಗಿಗಳ ಜೀವನದ ಮಹತ್ವದ ಘಟ್ಟಗಳು ಸಾಕಷ್ಟು ಅಧ್ಯಯನ ನಡೆಸಿ, ಅದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
    ಶಿವಯೋಗಿಗಳು ನಡೆದು ಬಂದ ಹಾದಿಯನ್ನು ಹಾಗೆಯೇ ತೋರಿಸಿದ್ದರೆ, ಅದೊಂದು ಸಾಕ್ಷ್ಯಚಿತ್ರವಾಗುವ ಅಪಾಯವಿತ್ತು. ಆದರೆ, ಲಿಂಗದೇವರು ಇಡೀ ಚಿತ್ರಕ್ಕೆ ಒಂದು ಎಮೋಷನಲ್​ ಸ್ಪರ್ಶ ನೀಡುತ್ತಾ ಹೋಗಿದ್ದಾರೆ. ಭೀಕರ ಬರಗಾಲದಲ್ಲಿ ಹಲವು ಕಷ್ಟಗಳ ನಡುವೆಯೂ ಅನ್ನದಾಸೋಹ ಮುಂದುವರೆಸುವ, ಸಾಂಕ್ರಾಮಿಕ ರೋಗ ಊರನ್ನು ಆವರಿಸಿದಾಗ ಹಲವು ಜನರನ್ನು ಆರೈಕೆ ಮಾಡುವ … ಮುಂತಾದ ಹಲವು ದೃಶ್ಯಗಳ ಮೂಲಕ ಅವರು ಚಿತ್ರ ಕಟ್ಟಿಕೊಡುತ್ತಾ ಹೋಗುತ್ತಾರೆ. ಇಂಥ ದೃಶ್ಯಗಳು ಶ್ರೀಗಳ ಹಿರಿಮೆಯನ್ನು ತೋರಿಸುವುದರ ಜತೆಗೆ, ಪ್ರೇಕ್ಷಕರ ಮನ ತಟ್ಟುತ್ತವೆ.

    ಇದನ್ನೂ ಓದಿ: ಹೆಸರು ಮಾತ್ರ ನೆಗೆಟಿವ್, ಸಿನಿಮಾ ಪಾಸಿಟಿವ್; ’13’ ಮುಕ್ತಾಯ

    ಚಿತ್ರದ ಹೈಲೈಟ್​ ಎಂದರೆ, ಸುಚೇಂದ್ರ ಪ್ರಸಾದ್​ ಅವರ ನಟನೆ ಮತ್ತು ಮಣಿಕಾಂತ್​ ಕದ್ರಿ ಅವರ ಸಂಗೀತ. ಸುಚೇಂದ್ರ ಪ್ರಸಾದ್​ ಅವರ ಚಿತ್ರಜೀವನದಲ್ಲೇ ಇದು ಅವರ ಅತ್ಯುತ್ತಮ ನಟನೆ ಎಂದರೆ ತಪ್ಪಿಲ್ಲ. ಶಿವಯೋಗಿಗಳ ಪಾತ್ರದಲ್ಲಿ ಪ್ರಸಾದ್​ ಬಹಳ ತನ್ಮಯರಾಗಿ ನಟಿಸಿದ್ದಾರೆ ಮತ್ತು ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಅವರ ಗುರುಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೌನತಪಸ್ವಿ ಶಾಂತಲಿಂಗೇಶ್ವರ ಸ್ವಾಮೀಜಿ ಎಲ್ಲರಿಗೂ ಇಷ್ಟವಾಗುತ್ತಾರೆ. ಮಿಕ್ಕಂತೆ ಈ ಚಿತ್ರದಲ್ಲಿ ಬಹಳಷ್ಟು ಹೊಸಬರಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿಯ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

    ಮಣಿಕಾಂತ್​ ಕದ್ರಿ ಸಂಗೀತದಲ್ಲಿ ಎಲ್ಲಾ ಹಾಡುಗಳು ಕೇಳುಗರನ್ನು ಹಿಡಿದಿಡುತ್ತದೆ. ಅಶೋಕ್​ ರಾಮನ್​ ಛಾಯಾಗ್ರಹಣ, ಡಾ, ಶರಣು ಹಲ್ಲೂರು ಅವರ ಸಂಭಾಷಣೆ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುತ್ತದೆ.

    ಸಿಂಹ, ಹರಿಪ್ರಿಯಾ ನಡುವೆ ಮೊದಲು ಪ್ರಪೋಸ್​ ಮಾಡಿದ್ದು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts