More

    ಬಿಸಿಸಿಐ ಜತೆಗಿನ ಜಟಾಪಟಿ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಮುಳುವಾಯಿತೇ?

    ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟೆಸ್ಟ್ ಗೆದ್ದರೂ, ಸರಣಿ ಗೆಲುವಿನ ಅಪೂರ್ವ ಅವಕಾಶ ಕೈಚೆಲ್ಲಿದ ಭಾರತ ತಂಡಕ್ಕೆ ಶನಿವಾರ ಸಂಜೆ ಮತ್ತೊಂದು ಆಘಾತ ಎದುರಾಯಿತು. ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವ ಮೂಲಕ ಕ್ರಿಕೆಟ್ ವಲಯದಲ್ಲಿ ಅಚ್ಚರಿ-ಆಘಾತ ಮೂಡಿಸಿದ್ದಾರೆ. ಟೆಸ್ಟ್ ನಾಯಕರಾಗಿ ಇನ್ನಷ್ಟು ಸಮಯ ಮುಂದುವರಿಯುವ ಒಲವು ಹೊಂದಿದ್ದ 33 ವರ್ಷದ ಕೊಹ್ಲಿ ಅವರ ಈ ದಿಢೀರ್ ನಿರ್ಧಾರದ ಹಿಂದಿನ ಕಾರಣ ಏನಿರಬಹುದು ಎಂಬ ಗೊಂದಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

    ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬಳಿಕ ಸೀಮಿತ ಓವರ್ ತಂಡಕ್ಕೆ ಒಬ್ಬನೇ ನಾಯಕನಿರಲಿ ಎಂದು ಬಿಸಿಸಿಐ ರೋಹಿತ್ ಶರ್ಮರನ್ನು ನೇಮಿಸಿತು. ಆದರೆ ಈ ಬಗ್ಗೆ ತಮಗೆ ಬಿಸಿಸಿಐ ಅಥವಾ ಆಯ್ಕೆಗಾರರು ಮೊದಲೇ ಮಾಹಿತಿ ನೀಡಿರಲಿಲ್ಲ ನೀಡಿರಲಿಲ್ಲ ಎಂದು ಕೊಹ್ಲಿ, ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿಗೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಭಾರಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದರು.

    ಈ ನಡುವೆ ಸೀಮಿತ ಓವರ್ ತಂಡದ ನಾಯಕ ರೋಹಿತ್ ಶರ್ಮ ಜತೆ ಮನಸ್ತಾಪ ಮೂಡಿರುವ ಬಗ್ಗೆಯೂ ವರದಿಯಾಯಿತು. ಇದನ್ನು ಕೊಹ್ಲಿ ನಿರಾಕರಿಸಿದರೂ, ರೋಹಿತ್ ಫಿಟ್ನೆಸ್ ನೆಪ ನೀಡಿ ಕೊನೇಕ್ಷಣದಲ್ಲಿ ಪ್ರವಾಸ ತಪ್ಪಿಸಿದ್ದು ಮತ್ತಷ್ಟು ಅನುಮಾನ ಮೂಡಿಸಿತ್ತು. ಇದಲ್ಲದೆ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಕೂಡ ಗಂಗೂಲಿ ಪರವಾಗಿ ಮಾತನಾಡಿ, ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿಕೊಂಡಿದ್ದೆವು ಎಂದಿದ್ದರು. ಇದರಿಂದ ಸಾಕಷ್ಟು ಇರಿಸುಮುರಿಸು ಎದುರಿಸಿದ್ದ ಕೊಹ್ಲಿ, ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

    ದಕ್ಷಿಣ ಆಫ್ರಿಕಾ ಪ್ರವಾಸ ಮೊದಲಿನ ಸ್ಫೋಟಕ ಸುದ್ದಿಗೋಷ್ಠಿ ಪ್ರಕರಣದಲ್ಲಿ ಕೊಹ್ಲಿ ಶಿಸ್ತುಕ್ರಮದಿಂದ ಪಾರಾಗಿದ್ದರೂ, ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಇದನ್ನು ಅರಿತು ಕೊಹ್ಲಿ ಸ್ವತಃ ಪದತ್ಯಾಗದ ಮೂಲಕ ಮುಖ ಉಳಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಇನ್ನು ಬ್ಯಾಟಿಂಗ್‌ನತ್ತ ಗಮನ
    ಕೊಹ್ಲಿ ನಾಯಕತ್ವ ತ್ಯಜಿಸಿದ್ದರಿಂದ ಇನ್ನು ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವ ಅವಕಾಶ ಪಡೆದಿದ್ದಾರೆ. ಕಳೆದ 2 ವರ್ಷಗಳಿಂದ ಶತಕಗಳ ಬರ ಎದುರಿಸುತ್ತಿರುವ ಅವರು ಇನ್ನೀಗ ಅದನ್ನು ನೀಗಿಸಿಕೊಂಡು, ಸಚಿನ್ ತೆಂಡುಲ್ಕರ್‌ರ ಶತ ಶತಕಗಳ ದಾಖಲೆಯತ್ತ ಮುನ್ನಡೆಯುವ ಅವಕಾಶ ಪಡೆದಿದ್ದಾರೆ. ನಾಯಕತ್ವದ ಭಾರವಿಲ್ಲದೆ ಕೇವಲ ಬ್ಯಾಟರ್ ಆಗಿ ಕೊಹ್ಲಿ ಇನ್ನಷ್ಟು ಅಪಾಯಕಾರಿಯಾಗುವ ನಿರೀಕ್ಷೆ ಇದೆ.

    ಯಾರು ಹೊಸ ನಾಯಕ?
    ಈಗಾಗಲೆ ಟಿ20 ಮತ್ತು ಏಕದಿನ ತಂಡದಲ್ಲಿ ಕೊಹ್ಲಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ರೋಹಿತ್ ಶರ್ಮ ಅವರೇ ಟೆಸ್ಟ್ ತಂಡಕ್ಕೂ ನಾಯಕರಾಗುವ ಸಾಧ್ಯತೆಗಳಿವೆ. ಆದರೆ ರೋಹಿತ್ ಕಾರ್ಯದೊತ್ತಡ ತಗ್ಗಿಸಲು ಟೆಸ್ಟ್‌ಗೆ ಬೇರೆ ನಾಯಕರನ್ನು ನೇಮಿಸಲು ಆಯ್ಕೆಗಾರರು ಮುಂದಾದರೆ, ಕನ್ನಡಿಗ ಕೆಎಲ್ ರಾಹುಲ್‌ಗೆ ಟೆಸ್ಟ್ ನಾಯಕತ್ವ ಒಲಿಯಬಹುದು. ರಾಹುಲ್ ಈಗಾಗಲೆ ಜೊಹಾನ್ಸ್‌ಬರ್ಗ್‌ನಲ್ಲಿ ಕೊಹ್ಲಿ ಬೆನ್ನುನೋವಿನಿಂದ ಬಳಲಿದಾಗ ನಾಯಕತ್ವ ನಿರ್ವಹಿಸಿದ್ದು, ಮುಂಬರುವ ಏಕದಿನ ಸರಣಿಯಲ್ಲೂ ಹಂಗಾಮಿ ನಾಯಕರಾಗಿ ಆಡಲಿದ್ದಾರೆ. ರಿಷಭ್ ಪಂತ್ ಮತ್ತು ಜಸ್‌ಪ್ರೀತ್ ಬುಮ್ರಾ ಕೂಡ ಟೆಸ್ಟ್ ಸಾರಥ್ಯದ ರೇಸ್‌ನಲ್ಲಿ ಕಾಣಿಸಿಕೊಂಡರೆ ಅಚ್ಚರಿ ಇಲ್ಲ.

    ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲಿನ ಮರುದಿನ ಟೆಸ್ಟ್ ನಾಯಕತ್ವಕ್ಕೂ ಕೊಹ್ಲಿ ಗುಡ್‌ಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts