More

    ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲಿನ ಮರುದಿನ ಟೆಸ್ಟ್ ನಾಯಕತ್ವಕ್ಕೂ ಕೊಹ್ಲಿ ಗುಡ್‌ಬೈ

    ನವದೆಹಲಿ: ಟೀಮ್ ಇಂಡಿಯಾ ಕಂಡ ಅತ್ಯಂತ ಆಕ್ರಮಣಕಾರಿ ನಾಯಕರೆನಿಸಿದ ವಿರಾಟ್ ಕೊಹ್ಲಿ ಅವರ ನಾಯಕತ್ವ ಯುಗ ಮುಕ್ತಾಯಗೊಂಡಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿ ಸೋಲಿನ ಮರುದಿನವಾದ ಶನಿವಾರ ಸಂಜೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ್ದ ಕೊಹ್ಲಿ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಏಕದಿನ ತಂಡದ ನಾಯಕತ್ವದಿಂದ ವಜಾಗೊಂಡಿದ್ದರು. ಇದೀಗ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವುದರೊಂದಿಗೆ ಟೀಮ್ ಇಂಡಿಯಾದಲ್ಲಿ ಕಳೆದ 7 ವರ್ಷಗಳ ವಿರಾಟ್ ಕೊಹ್ಲಿ ನಾಯಕತ್ವ ಅಧ್ಯಾಯಕ್ಕೆ ಸಂಪೂರ್ಣ ತೆರೆಬಿದ್ದಂತಾಗಿದೆ.

    33 ವರ್ಷದ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪದತ್ಯಾಗದ ನಿರ್ಧಾರವನ್ನು ಪ್ರಕಟಿಸಿದ್ದು, ಅವರಿಗೆ ಧನ್ಯವಾದ ಹೇಳುವ ಮೂಲಕ ಬಿಸಿಸಿಐ ಕೂಡ ಅದನ್ನು ಅಂಗೀಕರಿಸಿದೆ. ಬಿಸಿಸಿಐ ಜತೆಗಿನ ತಮ್ಮ ಸಂಬಂಧ ಹಳಸಿರುವ ಸಮಯದಲ್ಲೇ ಕೊಹ್ಲಿ ಈ ದಿಢೀರ್ ನಿರ್ಧಾರ ಪ್ರಕಟಿಸಿರುವುದು ಹಲವಾರು ಅನುಮಾನ ಮತ್ತು ಗೊಂದಲಗಳಿಗೂ ಕಾರಣವಾಗಿದೆ.

    ‘ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಕಳೆದ 7 ವರ್ಷಗಳಿಂದ ಪ್ರತಿದಿನ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿರುವೆ. ಸಂಪೂರ್ಣ ಪ್ರಾಮಾಣಿಕತೆಯಿಂದ ನನ್ನ ಕೆಲಸವನ್ನು ನಿರ್ವಹಿಸಿರುವೆ. ಏನನ್ನೂ ಬಾಕಿ ಬಿಟ್ಟಿಲ್ಲ. ಎಲ್ಲವೂ ಒಂದಲ್ಲ ಒಂದು ಸಮಯದಲ್ಲಿ ಮುಕ್ತಾಯಗೊಳ್ಳಬೇಕು. ಭಾರತ ತಂಡದ ನನ್ನ ಟೆಸ್ಟ್ ನಾಯಕತ್ವಕ್ಕೂ ಈಗ ತೆರೆಎಳೆಯುತ್ತಿರುವೆ. ಈ ಪಯಣದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವೆ. ಆದರೆ ಎಂದೂ ನನ್ನ ಪ್ರಯತ್ನ ಅಥವಾ ನಂಬಿಕೆ ಕಡಿಮೆಯಾಗಿಲ್ಲ. ನನ್ನ ಎಲ್ಲ ಕೆಲಸದಲ್ಲೂ ಶೇ. 120 ನೀಡುವ ಬಗ್ಗೆ ಎಂದಿಗೂ ನಂಬಿರುವವನು ನಾನು. ಅದು ಸಾಧ್ಯವಾಗದಿದ್ದರೆ ಅದನ್ನು ಮಾಡುವುದು ಸರಿಯಲ್ಲ ಎಂಬುದು ನನಗೆ ಗೊತ್ತಿದೆ. ನನ್ನ ಹೃದಯದಲ್ಲಿ ನಾನು ಸಂಪೂರ್ಣ ಸ್ಪಷ್ಟವಾಗಿರುವೆ ಮತ್ತು ನನ್ನ ತಂಡಕ್ಕೆ ಅಪ್ರಾಮಾಣಿಕ ಆಗಿರಲಾರೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    *ಕೊಹ್ಲಿ ಟೆಸ್ಟ್ ನಾಯಕತ್ವ
    ಟೆಸ್ಟ್: 68
    ಜಯ: 40
    ಸೋಲು: 17
    ಡ್ರಾ: 11
    *ಕೊಹ್ಲಿ ನಾಯಕತ್ವ
    ಏಕದಿನ: 95
    ಜಯ: 65
    ಸೋಲು: 27
    ಟೈ: 1
    ರದ್ದು: 2
    ಟಿ20: 50
    ಜಯ: 30
    ಸೋಲು: 16
    ಟೈ: 2
    ರದ್ದು: 2

    ಭಾರತ ಕಂಡ ಯಶಸ್ವಿ ಟೆಸ್ಟ್ ನಾಯಕ
    2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಬಾರಿಗೆ ಟೆಸ್ಟ್ ತಂಡದ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದ ಕೊಹ್ಲಿ, ಅದೇ ಸರಣಿಯಲ್ಲಿ ಧೋನಿ ನಿವೃತ್ತಿ ಪ್ರಕಟಿಸಿದ ಬಳಿಕ ಪೂರ್ಣ ಪ್ರಮಾಣದ ನಾಯಕರಾಗಿದ್ದರು. ಭಾರತವನ್ನು ಅತ್ಯಧಿಕ ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ ಮತ್ತು ಅತ್ಯಧಿಕ ಗೆಲುವು ತಂದ ನಾಯಕರೆಂಬ ಹೆಗ್ಗಳಿಕೆಯೂ ಅವರದಾಗಿದೆ. ಎಂಎಸ್ ಧೋನಿ (60 ಟೆಸ್ಟ್, 27 ಜಯ, 18 ಸೋಲು, 15 ಡ್ರಾ) ನಂತರದಲ್ಲಿದ್ದಾರೆ.

    ಧೋನಿಗೆ ವಿಶೇಷ ಧನ್ಯವಾದ
    ತಮ್ಮ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಭಾರತೀಯ ಕ್ರಿಕೆಟ್‌ಅನ್ನು ಮುಂದಕ್ಕೆ ಕೊಂಡೊಯ್ಯುವ ವ್ಯಕ್ತಿಯಾಗಿ ತಮ್ಮನ್ನು ಗುರುತಿಸಿದ್ದಕ್ಕೆ ಎಂಎಸ್ ಧೋನಿಗೆ ದೊಡ್ಡ ಧನ್ಯವಾದ ಹೇಳುವುದಾಗಿ ಕೊಹ್ಲಿ ಕೊನೆಯಲ್ಲಿ ಬರೆದುಕೊಂಡಿದ್ದಾರೆ. ಇಷ್ಟು ದೀರ್ಘಕಾಲ ದೇಶವನ್ನು ಮುನ್ನಡೆಸುವ ಅವಕಾಶ ಕಲ್ಪಿಸಿದ್ದಕ್ಕಾಗಿ ಬಿಸಿಸಿಐಗೂ ಧನ್ಯವಾದ ಹೇಳಿದ್ಧಾರೆ. ಜತೆಗೆ ಎಂದಿಗೂ ಬಿಟ್ಟುಕೊಡದ ತಮ್ಮ ಛಾತಿಯನ್ನು ಮೈಗೂಡಿಸಿದ್ದಕ್ಕಾಗಿ ಸಹ-ಆಟಗಾರರಿಗೂ ಧನ್ಯವಾದ ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ನಿರ್ವಹಣೆಯೊಂದಿಗೆ ತಂಡವನ್ನು ಮುನ್ನಡೆಸಲು ನೆರವಾದ ಮಾಜಿ ಕೋಚ್ ರವಿಶಾಸ್ತ್ರಿ ಮತ್ತು ಇತರ ತರಬೇತಿ ಸಿಬ್ಬಂದಿಗೂ ಧನ್ಯವಾದ ಹೇಳಿದ್ದಾರೆ.

    ಟೆಸ್ಟ್ ನಾಯಕತ್ವದ ಅಮೋಘ ಅವಧಿಗಾಗಿ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ತವರು ಮತ್ತು ವಿದೇಶ ಎರಡರಲ್ಲೂ ಅತ್ಯುತ್ತಮ ನಿರ್ವಹಣೆ ತೋರುವ ನಿರ್ದಯ ತಂಡವನ್ನು ಅವರು ರೂಪಿಸಿದ್ದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಕಂಡ ಟೆಸ್ಟ್ ಗೆಲುವುಗಳು ವಿಶೇಷವಾದವುಗಳು.
    | ಜಯ್ ಷಾ, ಬಿಸಿಸಿಐ ಕಾರ್ಯದರ್ಶಿ

    ವಿಶ್ವದ ಅತ್ಯುತ್ತಮ ನಾಯಕರಲ್ಲೊಬ್ಬರು
    ಕೊಹ್ಲಿ ಭಾರತ ಕಂಡ ಅತ್ಯುತ್ತಮ ಟೆಸ್ಟ್ ನಾಯಕರಲ್ಲದೆ, ವಿಶ್ವದ ಅತ್ಯುತ್ತಮ ಟೆಸ್ಟ್ ನಾಯಕರಲ್ಲೂ ಒಬ್ಬರೆನಿಸಿದ್ದಾರೆ. 20ಕ್ಕಿಂತ ಹೆಚ್ಚು ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದವರಲ್ಲಿ ಸ್ಟೀವ್ ವಾ (57ರಲ್ಲಿ 41 ಜಯ) ಮತ್ತು ರಿಕಿ ಪಾಂಟಿಂಗ್ (77ರಲ್ಲಿ 48 ಜಯ) ನಂತರದಲ್ಲಿದ್ದಾರೆ. ಅತ್ಯಧಿಕ ಟೆಸ್ಟ್ ಗೆದ್ದ ನಾಯಕರಲ್ಲೂ ಗ್ರೇಮ್ ಸ್ಮಿತ್ (53), ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ನಂತರದಲ್ಲಿದ್ದಾರೆ.

    *ಅಂತಾರಾಷ್ಟ್ರೀಯ ನಾಯಕತ್ವ
    ಪಂದ್ಯ: 213
    ಜಯ: 135
    ರನ್: 12,883
    ಶತಕ: 41
    ಸರಾಸರಿ: 59.92

    ನ್ಯೂಲ್ಯಾಂಡ್ಸ್‌ನಲ್ಲಿ ನಡೆಯದ ಮ್ಯಾಜಿಕ್ ; ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿ ಸೋತ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts