More

    ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ ವಿಡಿಯೋ!

    ನವದೆಹಲಿ: ಕ್ರಿಕೆಟ್​ನಲ್ಲಿ ಒಂದು ತಂಡದ ಯಶಸ್ಸಿಗೆ ಡ್ರೆಸ್ಸಿಂಗ್​ ರೂಮ್​ ವಾತಾವರಣ ಸಹ ತುಂಬಾ ಮುಖ್ಯವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸ್ನೇಹಪರ ವಾತಾವರಣ ವಾತಾವರಣ ಇದ್ದಲ್ಲಿ ಒಳ್ಳೆಯ ಆಟವಾಡಲು ಉತ್ತೇಜನ ಮತ್ತು ಉತ್ಸಾಹ ಇರುತ್ತದೆ. ಒಂದು ವೇಳೆ ಆಟಗಾರರ ನಡುವಿನ ಮನಸ್ತಾಪ, ಡ್ರೆಸ್ಸಿಂಗ್​ ರೂಮ್​ ವಾತಾವರಣವನ್ನು ಕೆಡಿಸಿದರೆ, ಅದು ಪಂದ್ಯದ ಮೇಲಿನ ಫಲಿತಾಂಶ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಅಜೇಯ ಓಟದೊಂದಿಗೆ ಪ್ರಸಕ್ತ ವಿಶ್ವಕಪ್​ ಫೈನಲ್​ನಲ್ಲಿ ಲಗ್ಗೆ ಇಟ್ಟಿರುವ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ ವಾತಾವರಣ ಯಾವ ರೀತಿ ಇದೆ ಎಂಬ ನೋಡುವ ಕುತೂಹಲ ನಿಮ್ಮಲ್ಲಿದ್ದರೆ ಈ ವಿಡಿಯೋ ನಿಮಗಾಗಿ.

    ಬುಧವಾರ (ನ.15) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಸಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ, ಭಾರತ ಫೈನಲ್​ ಪ್ರವೇಶ ಮಾಡಿದೆ. ನಿನ್ನೆ (ನ.16) ನಡೆದ ಎರಡನೇ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಫೈನಲ್​ನಲ್ಲಿ ಭಾರತದ ಜತೆ ಟ್ರೋಫಿಗಾಗಿ ಸೆಣಸಾಡಲಿದೆ. ನ್ಯೂಜಿಲೆಂಡ್​ ವಿರುದ್ಧ ಗೆದ್ದು ಫೈನಲ್​ಗೇರಿದ ಖುಷಿಯಲ್ಲಿ ಇಂಡಿಯನ್​ ಕ್ರಿಕೆಟ್​ ಟೀಮ್​ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದು, ಅದರಲ್ಲಿ ಭಾರತ ತಂಡದ ಡ್ರೆಸ್ಸಿಂಗ್​ ರೂಮ್​ ವಾತಾವರಣವನ್ನು ಅನಾವರಣ ಮಾಡಲಾಗಿದೆ.

    ಕೊಹ್ಲಿ ಮತ್ತು ರೋಹಿತ್​ ನಡುವೆ ಮನಸ್ತಾಪ ಇದೆ ಎಂದು ಈ ಹಿಂದೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು ಮತ್ತು ಈಗಲೂ ಆಗಾಗ ವದಂತಿಗಳು ಕೇಳಿಬರುತ್ತಿವೆ. ಆದರೆ, ಇಬ್ಬರ ನಡುವಿನ ಸ್ನೇಹ ಹೇಗಿದೆ ಎಂಬುದಕ್ಕೆ ಈ ವಿಡಿಯೋ ಉತ್ತರ ನೀಡಿದ್ದು, ವದಂತಿಗಳಿಗೆ ತೆರೆ ಎಳೆದಿದೆ. ಕಿವೀಸ್ ವಿರುದ್ಧದ​ ವಿಜಯೋತ್ಸವದ ಬಳಿಕ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಆಟಗಾರರನ್ನು ಭೇಟಿಯಾಗುವಾಗ ಡ್ರೆಸ್ಸಿಂಗ್​ ರೂಮ್​ನಲ್ಲಿ ಎಲ್ಲ ಆಟಗಾರರು ನಗುತ್ತಿರುವುದು ಮತ್ತು ಕುಲದೀಪ್ ಯಾದವ್ ಹಾಗೂ ಶುಭಮನ್ ಗಿಲ್ ಅವರನ್ನು ಡ್ರಾವಿಡ್​ ಅಪ್ಪಿಕೊಳ್ಳುತ್ತಿರುವುದು ವಿಡಿಯೋದಲ್ಲಿದೆ.

    50ನೇ ಶತಕದೊಂದಿಗೆ ವಿಶೇಷ ದಾಖಲೆ ಬರೆದ ವಿರಾಟ್​ ಕೊಹ್ಲಿ ಅವರನ್ನು ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋಡ್​ ಅಪ್ಪಿಕೊಂಡು ಅಭಿನಂದಿಸಿರುವುದು, 7 ವಿಕೆಟ್​ ಪಡೆಯುವುದರೊಂದಿಗೆ ಕಿವೀಸ್​ ಬ್ಯಾಟರ್​ಗಳಿಗೆ ಪೆವಿಲಿಯನ್​ ಹಾದಿ ತೋರಿದ ಮೊಹಮ್ಮದ್​ ಶಮಿ ಅವರ ಕೈಗೆ ರವಿಚಂದ್ರನ್​ ಅಶ್ವಿನ್​ ಮುತ್ತು ನೀಡುತ್ತಿರುವ ದೃಶ್ಯವು ವಿಡಿಯೋದಲ್ಲಿದೆ. ಅಲ್ಲದೆ, ಶಮಿ ಬ್ಯಾಟ್​ಗಳಿಗೆ ಸಹಿ ಮಾಡುತ್ತಿರುವುದು, ಯಜುವೇಂದ್ರ ಚಹಾಲ್​ ಡ್ರೆಸ್ಸಿಂಗ್​ ರೂಮ್​ಗೆ ಭೇಟಿ ನೀಡಿ ಆಟಗಾರರಿಗೆ ಅಭಿನಂದನೆ ಸಲ್ಲಿಸುತ್ತಿರುವುದು, ವಿರಾಟ್​ ಕೊಹ್ಲಿ, ಜಸ್​ಪ್ರಿತ್​ ಬೂಮ್ರಾ ಮತ್ತು ಇಶಾನ್​ ಕಿಶಾನ್​ರನ್ನು ಅಪ್ಪಿಕೊಂಡಿರುವ ಅತ್ಯುತ್ತಮ ಕ್ಷಣ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ನ.15) ನಡೆದ ವಿಶ್ವಕಪ್​ ಟೂರ್ನಿಯ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳ ಅಬ್ಬರ ಮತ್ತು ಮೊಹಮ್ಮದ್​ ಶಮಿ (7/10) ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಸೋಲಿನ ಕಹಿ ಅನುಭವಿಸುವುದರೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮುಗಿಸಿತು. 2019ರ ವಿಶ್ವಕಪ್​ ಸೆಮೀಸ್​​ನಲ್ಲಿ ಕಿವೀಸ್​ ವಿರುದ್ಧ ಸೋತು ಮುಖಭಂಗ ಅನುಭವಿಸಿದ್ದ ಟೀಮ್​ ಇಂಡಿಯಾ, ಅದೇ ತಂಡವನ್ನು ಮಣಿಸಿ ಸೇಡು ತೀರಿಸಿಕೊಳ್ಳುವುದರೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದೆ. ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿಯಲು ಇನ್ನೂ ಒಂದೇ ಹೆಜ್ಜೆ ಬಾಕಿ ಇದೆ.

    ನ.19ಕ್ಕೆ ಫೈನಲ್​
    ಫೈನಲ್​ಗೆ ಲಗ್ಗೆ ಇಟ್ಟಿರುವ ಭಾರತ ಮತ್ತು ಆಸ್ಟ್ರೇಲಿಯಾ ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಏಕದಿನ ವಿಶ್ವಕಪ್​ ಫಿನಾಲೆ; ಟೀಂ ಇಂಡಿಯಾ ಗೆಲುವು ಫಿಕ್ಸ್​ ಎಂದು ಭವಿಷ್ಯ ನುಡಿದ ರಜಿನಿಕಾಂತ್

    ಭಾರತ vs ಆಸ್ಟ್ರೇಲಿಯಾ: ಉದ್ಘಾಟನಾ ಸಮಾರಂಭ, ಸೆಲೆಬ್ರೆಟಿಗಳು ಯಾರೆಲ್ಲಾ ಇರಲಿದ್ದಾರೆ? ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts