More

    ಈ ರೀತಿ ಮಾಡ್ಬೇಡಿ… ಮುಂಬೈ ಕ್ರೀಡಾಭಿಮಾನಿಗಳಿಗೆ ಬುದ್ಧಿಮಾತು ಹೇಳಿ ಕ್ರೀಡಾಸ್ಫೂರ್ತಿ ಮೆರೆದ ಕೊಹ್ಲಿ

    ಮುಂಬೈ: ಹಾರ್ದಿಕ್​ ಪಾಂಡ್ಯರನ್ನು ಅಪಹಾಸ್ಯ ಮಾಡುವ ಅಭಿಮಾನಿಗಳ ನಡೆಯನ್ನು ಖಂಡಿಸಿರುವ ವಿರಾಟ್​ ಕೊಹ್ಲಿ, ಹಾರ್ದಿಕ್​ ಪರ ಧ್ವನಿ ಎತ್ತುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ.

    ರೋಹಿತ್​ ಶರ್ಮರಿಂದ ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಹಾರ್ದಿಕ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳು ನಡೆಯುತ್ತಲೇ ಇದೆ. ಸದ್ಯಕ್ಕೆ ಇದು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಗುಜರಾತ್​ ಟೈಟಾನ್​ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ನಾಯಿ ನುಗ್ಗಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಬಹುತೇಕರು ಹಾರ್ದಿಕ್​ ಹೆಸರನ್ನು ಕೂಗುವ ಮೂಲಕ ಅವಮಾನ ಮಾಡಿದ್ದರು. ಅಲ್ಲದೆ, ಎಲ್​ಇಡಿ ಪರದೆ ಮೇಲೆ ಹಾರ್ದಿಕ್​ ಬಂದಾಗಲೆಲ್ಲ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು. ಸನ್​​ ರೈಸರ್ಸ್​ ಹೈದರಾಬಾದ್​ ಪಂದ್ಯದಲ್ಲೂ ಇದು ಮರುಕಳಿಸಿತ್ತು. ಇದನೆಲ್ಲ ರೋಹಿತ್​ ಅಭಿಮಾನಿಗಳು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ರೋಹಿತ್​ ಕೂಡ ಮಧ್ಯಪ್ರವೇಶ ಮಾಡಿ ಈ ರೀತಿ ಅಪಹಾಸ್ಯ ಮಾಡಬೇಡಿ ಎಂದು ಮನವಿ ಮಾಡಿದ್ದರು.

    ಯಾರೂ ಎಷ್ಟೇ ಹೇಳಿದರೂ ಮುಂಬೈ ತಂಡದ ಅಭಿಮಾನಿಗಳು ಮಾತ್ರ ಹಾರ್ದಿಕ್​ರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸುತ್ತಿಲ್ಲ. ನಿನ್ನೆ (ಏಪ್ರಿಲ್​ 11) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲೂ ಹಾರ್ದಿಕ್​ರನ್ನು ಅಪಹಾಸ್ಯ ಮಾಡಲಾಯಿತು. ಈ ಬಾರಿ ಹಾರ್ದಿಕ್​ ಪರ ವಿರಾಟ್​ ಕೊಹ್ಲಿ ಧ್ವನಿಗೂಡಿಸಿದರು.

    ಅಭಿಮಾನಿಗಳಿಗೆ ಕೊಹ್ಲಿ ಪಾಠ
    ಕೊಹ್ಲಿ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್​ ಮಾಡುವಾಗ ಹಾರ್ದಿಕ್​ ಪಾಂಡ್ಯ ಬಾಟ್​ ಮಾಡಲು ಕ್ರೀಸ್​ಗೆ ಆಗಮಿಸಿದ್ದರು. ಈ ವೇಳೆ ಹಾರ್ದಿಕ್​ರನ್ನು ನೋಡಿ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡಿದರು. ಇದನ್ನು ಗಮನಿಸಿದ ಕೊಹ್ಲಿ ತುಂಬಾ ಬೇಸರ ವ್ಯಕ್ತಪಡಿಸಿದರು. ಹಾರ್ದಿಕ್​ರನ್ನು ಅಪಹಾಸ್ಯ ಮಾಡಬೇಡಿ. ಈ ರೀತಿ ಮಾಡುವ ಬದಲು ಚಪ್ಪಾಳೆ ತಟ್ಟಿ ಹುರಿದುಂಬಿಸಿ, ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಬೆಂಬಲಿಸಿ ಎಂದು ಕೈ ಸನ್ನೆಯ ಮೂಲಕ ಅಭಿಮಾನಿಗಳ ಬಳಿ ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೊಹ್ಲಿ ಅವರ ಕ್ರೀಡಾಸ್ಫೂರ್ತಿಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

    ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಪರ ನಾಯಕ ಫಾಪ್​ ಡು ಪ್ಲೆಸಿಸ್​ (61 ರನ್, 40 ಎಸೆತ, 4 ಬೌಡಂರಿ, 3 ಸಿಕ್ಸರ್), ರಜತ್​ ಪಾಟಿದಾರ್​ (50 ರನ್, 26 ಎಸೆತ, 3 ಬೌಂಡರಿ, 4 ಸಿಕ್ಸರ್), ದಿನೇಶ್​ ಕಾರ್ತಿಕ್ (53 ರನ್, 23 ಎಸೆತ, 5 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 196 ರನ್​ ಪೇರಿಸಿತ್ತು.

    197 ರನ್​ ಗಳ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​ ತಂಡವು ಅರಂಭಿಕ ಇಶಾನ್​ ಕಿಶನ್​ (69 ರನ್, 34 ಎಸೆತ, 7 ಬೌಂಡರಿ, 5 ಸಿಕ್ಸರ್), ಸೂರ್ಯಕುಮಾರ್​ ಯಾದವ್​ (52 ರನ್, 19 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಫೋಟಕ ಅರ್ಧಶತಕಗಳ ಫಲವಾಗಿ 15.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 199 ರನ್​ ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್​)

    ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ್ದ ಇಶಾನ್​-ಸೂರ್ಯಕುಮಾರ್​; ಮುಂಬೈಗೆ 7 ವಿಕೆಟ್​ಗಳ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts