More

    ಎನ್​ಸಿ, ಪಿಡಿಪಿಗೆ 370 ರದ್ದತಿಯೇ ಬ್ರಹ್ಮಾಸ್ತ್ರ

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಜಮ್ಮು-ಕಾಶ್ಮೀರದಲ್ಲಿ ಒಟ್ಟು 5 ಲೋಕಸಭೆ ಕ್ಷೇತ್ರಗಳಿದ್ದು, ಉಧಮ್ುರ ಮತ್ತು ಜಮ್ಮು ಕ್ಷೇತ್ರಗಳಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 26ರಂದು ಮತದಾನ ನಡೆದಿದೆ. ಉಳಿದಿರುವ ಶ್ರೀನಗರದಲ್ಲಿ ಮೇ 13, ಅನಂತ್​ನಾಗ್-ರಜೌರಿ, ಬಾರಾಮುಲ್ಲಾದಲ್ಲಿ ಮೇ 25ಕ್ಕೆ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಉಧಮ್ುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ, ಕಾಶ್ಮೀರದ ವ್ಯಾಪ್ತಿಯಲ್ಲಿರುವ ಉಳಿದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ, ಸಣ್ಣ ಪ್ರಾದೇಶಿಕ ಪಕ್ಷಗಳಾದ ಪೀಪಲ್ಸ್ ಕಾನ್ಪರೆನ್ಸ್, ಜೆ-ಕೆ ಅಪ್ನಿ ಪಾರ್ಟಿಯ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ವನಿಸಿದೆ. ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ ಕೂಡ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.

    2019ರ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ (ಸಂವಿಧಾನದ ಆರ್ಟಿಕಲ್ 370) ರದ್ದುಗೊಳಿಸಿದ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದ್ದು, ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಪರೆನ್ಸ್ (ಎನ್​ಸಿ), ಮೆಹಬೂಬಾ ಮುಫ್ತಿ ಸಾರಥ್ಯದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಬಿಜೆಪಿಯನ್ನೇ ನೇರ ಗುರಿಯನ್ನಾಗಿಸಿ ಮತ ಯಾಚನೆ ಮಾಡುತ್ತಿವೆ. ಕಳೆದೈದು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜಮ್ಮು-ಕಾಶ್ಮೀರದ ಹೃದಯವನ್ನೇ ಬಗೆದುಬಿಟ್ಟಿದೆ. ಯುವಕರನ್ನು ನಿರುದ್ಯೋಗಕ್ಕೆ ತಳ್ಳಿದೆ ಮತ್ತು ಕಾಶ್ಮೀರದಲ್ಲಿ ತನ್ನ ರಾಜಕೀಯ ಅಸ್ತಿತ್ವ ಸ್ಥಾಪಿಸಲು ಹೊರಟಿದೆ. ಇದಕ್ಕೆ ನೀವು ಕಡಿವಾಣ ಹಾಕಲೇಬೇಕು ಎಂದು ಪ್ರಚಾರ ಮಾಡುತ್ತಿದ್ದಾರೆ. ಮೇಲಾಗಿ, ಜಮ್ಮು ಮತ್ತು ಉಧಮ್ುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಎನ್​ಸಿ, ಪಿಡಿಪಿ ಮುಂದಾಗಿದ್ದು, ಬಿಜೆಪಿಯನ್ನೇ ಟಾರ್ಗೆಟ್ ಮಾಡಿವೆ.

    2014 ಮತ್ತು 2019ರಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈ ಬಾರಿ ಉಧಮ್ುರದಿಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಜಮ್ಮುವಿನಿಂದ ಹಾಲಿ ಸಂಸದ ಜುಗಲ್ ಕಿಶೋರ್ ಶರ್ಮ ಸ್ಪರ್ಧಿಸಿದ್ದಾರೆ. ನ್ಯಾಶನಲ್ ಕಾನ್ಪರೆನ್ಸ್ ಮತ್ತು ಪಿಡಿಪಿಗೆ ಜಮ್ಮುವಿನಲ್ಲಿ ಬಹುತೇಕ ಅಸ್ತಿತ್ವ ಇಲ್ಲದಿರುವುದರಿಂದ ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧದ ರಾಜಕೀಯ ನಿರೂಪಣೆಗಳನ್ನೂ ಎರಡೂ ಪಕ್ಷಗಳು ಬಿರುಸುಗೊಳಿಸಿವೆ. ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಎನ್​ಸಿ ಮತ್ತು ಪಿಡಿಪಿ ಪಕ್ಷಗಳು ಸ್ಪರ್ಧೆಯಲ್ಲಿದ್ದರೂ, ಪರಸ್ಪರ ಆರೋಪಗಳನ್ನು ಮಾಡುತ್ತಿಲ್ಲ. ಬದಲಿಗೆ, ನವದೆಹಲಿಗೆ ಕಠಿಣ ಸಂದೇಶ ರವಾನಿಸಬೇಕು ಎನ್ನುತ್ತ ಬಿಜೆಪಿಯನ್ನೇ ಪ್ರಮುಖ ಎದುರಾಳಿ ಎಂದು ಪರಿಗಣಿಸಿವೆ. ಜನರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಶತ್ರುಭಾವನೆ ಮೂಡಿಸುವ ರೀತಿಯಲ್ಲೇ ಪ್ರಚಾರ ಕಾರ್ಯತಂತ್ರಗಳನ್ನು ಅನುಸರಿಸಲಾಗುತ್ತಿದ್ದು, ಒಂದರ್ಥದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ತಮ್ಮ ರಾಜಕೀಯ ನೆಲೆಯನ್ನು ಮತ್ತಷ್ಟು ಬಿಗಿಗೊಳಿಸುವ ಯತ್ನದಲ್ಲಿವೆ.

    ಓಮರ್ ಅಬ್ದುಲ್ಲಾ VS ಸಾಜದ್ ಲೋನ್

    ಉತ್ತರ ಕಾಶ್ಮೀರದ ಬಂಡಿಪೊರಾ, ಕುಪ್ವಾರಾ ಜಿಲ್ಲೆಗಳನ್ನು ಒಳಗೊಂಡಿರುವ ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಎನ್​ಸಿ ಮುಖ್ಯಸ್ಥ ಓಮರ್ ಅಬ್ದುಲ್ಲಾ, ಪೀಪಲ್ಸ್ ಕಾನ್ಪರೆನ್ಸ್ ಪಕ್ಷದ ನಾಯಕ ಸಾಜದ್ ಲೋನ್ ಮಧ್ಯೆ ಚುನಾವಣಾ ಕದನ ಏರ್ಪಟ್ಟಿದೆ. ‘ನಾನು ಸಾಜದ್ ಲೋನ್ ವಿರುದ್ಧ ಹೋರಾಡುತ್ತಿಲ್ಲ. ಬದಲಿಗೆ, ಲೋನ್ ಹಿಂದೆ ನಿಂತಿರುವ ಶಕ್ತಿಗಳನ್ನು (ಬಿಜೆಪಿ) ಮಣಿಸಲು ಕಣಕ್ಕಿಳಿದಿದ್ದೇನೆ’ ಎನ್ನುತ್ತಿದ್ದಾರೆ. ಲೋನ್ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಜಮ್ಮು-ಕಾಶ್ಮೀರ ಮರುವಿಂಗಡಣೆ ಬಳಿಕ ಬಾರಾಮುಲ್ಲಾ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳ ಸಂಖ್ಯೆ 15ರಿಂದ 18ಕ್ಕೆ ಏರಿಕೆಯಾಗಿದೆ. ಈ 18ರಲ್ಲಿ ಪಿಡಿಪಿ 7 ಕ್ಷೇತ್ರಗಳನ್ನು 2014ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದುಕೊಂಡಿತ್ತು. ಎನ್​ಸಿ 4 ಮತ್ತು ಪೀಪಲ್ಸ್ ಕಾನ್ಪರೆನ್ಸ್​ಗೆ ಇಲ್ಲಿ 2 ಶಾಸಕ ಸ್ಥಾನಗಳಿವೆ. ಬಾರಾ ಮುಲ್ಲಾದಲ್ಲಿ ಪಹಾಡಿ ಸಮುದಾಯದ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಸಮುದಾಯದ ಬೆಂಬಲ ಗಳಿಸಲು ಲೋನ್ ಯತ್ನಿಸಿದ್ದಾರೆ. ಪಹಾಡಿ ಸಮುದಾಯಕ್ಕೆ ಬುಡಕಟ್ಟು ಸಮುದಾಯದ ಸ್ಥಾನವನ್ನು ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ನೀಡಿತ್ತು ಎನ್ನುವುದು ಉಲ್ಲೇಖಾರ್ಹ.

    ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ

    ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಆರ್ಟಿಕಲ್ 370 ರದ್ದುಗೊಳಿಸಿದರೂ, ಕಾಶ್ಮೀರ ಭಾಗದಲ್ಲಿ ಬಿಜೆಪಿ ಬಗ್ಗೆ ಜನರಲ್ಲಿ ಇನ್ನೂ ಸದಭಿಪ್ರಾಯ ಮೂಡಿಲ್ಲ ಎನ್ನುವುದು ವಾಸ್ತವ. ಹೀಗಾಗಿಯೇ, ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರ ವ್ಯಾಪ್ತಿಯ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಹಿನ್ನಡೆ ಅನುಭವಿಸುವ ಬದಲು, ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವ ತೀರ್ವನವನ್ನು ವರಿಷ್ಠರು ಕೈಗೊಂಡಿದ್ದಾರೆ. ಎನ್​ಸಿ ಮತ್ತು ಪಿಡಿಪಿಯ ‘ಸುಳ್ಳು ರಾಜಕೀಯ ನಿರೂಪಣೆ’ಗಳಿಗೆ ಉತ್ತರ ನೀಡುವ ಬದಲು, ಪ್ರಾದೇಶಿಕ ಪಕ್ಷಗಳ ಸ್ಥಳೀಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ವಿಧಾನಸಭೆ ಚುನಾವಣೆಗೂ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲು ಇದು ಸಹಕಾರಿಯಾಗಲಿದೆ ಎಂದು ಬಿಜೆಪಿ ನಂಬಿದೆ.

    ಸದ್ದು ಮಾಡುತ್ತಿರುವ ಮೆಹಬೂಬಾ

    ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ಅನಂತ್​ನಾಗ್-ರಜೌರಿ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹೂಬೂಬಾ ಮುಫ್ತಿಗೆ ಎನ್​ಸಿಯ ಮಿಯಾನ್ ಅಲ್ತಾಫ್ ನೇರ ಎದುರಾಳಿಯಾಗಿದ್ದಾರೆ. ಒಟ್ಟು ಮೂರು ಲೋಕಸಭೆ ಚುನಾವಣೆ ಸ್ಪರ್ಧಿಸಿರುವ ಮೆಹಬೂಬಾ ಮುಫ್ತಿ, 2004 ಮತ್ತು 2014ರಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು. 2014ರ ಚುನಾವಣೆಯಲ್ಲಿ ಕಾಶ್ಮೀರದ ಮೂರೂ ಸೀಟುಗಳನ್ನು ಪಿಡಿಪಿ ಗೆದ್ದುಕೊಂಡಿತ್ತು.

    ಅನಂತ್​ನಾಗ್-ರಜೌರಿಗೆ ಮೇ 7ರಂದು ಮತದಾನ ನಿಗದಿಯಾಗಿತ್ತು. ಆದರೆ, ಮತದಾನ ದಿನಾಂಕವನ್ನು ಮುಂದೂಡುವಂತೆ ಇತರ ಪ್ರಾದೇಶಿಕ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಮೇ 25ಕ್ಕೆ ದಿನಾಂಕ ನಿಗದಿ ಮಾಡಿದೆ. ಆಯೋಗದ ಕ್ರಮವನ್ನು ಟೀಕಿಸಿರುವ ಮೆಹಬೂಬಾ, ‘ಮತ್ತಷ್ಟು ದಿನಗಳ ಪ್ರಚಾರ ಮಾಡುವ ಸವಾಲನ್ನು ನಮ್ಮ ಮುಂದಿಟ್ಟಿದ್ದಾರೆ. ಬಿಜೆಪಿಗೆ ನಾವೆಲ್ಲರೂ ಬುದ್ಧಿ ಕಲಿಸಬೇಕಿದೆ. 2019ರಲ್ಲಿ ಮಾಡಿದ ಅನ್ಯಾಯದಿಂದಾಗಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದರು. ಜನಾಶಯಕ್ಕೆ ವಿರುದ್ಧವಾದ ತೀರ್ಮಾನ ಇದು ಎಂಬ ಸಂದೇಶ ರವಾನಿಸುವುದು ಮತದಾರರಾದ ನಿಮ್ಮೆಲ್ಲರ ಕರ್ತವ್ಯ. ನಮ್ಮ ಗುರುತು, ಭೂಮಿ, ಉದ್ಯೋಗ, ಮಣ್ಣು ಎಲ್ಲವನ್ನೂ ಕಿತ್ತುಕೊಳ್ಳುವುದು ಅವರ (ಬಿಜೆಪಿ) ಉದ್ದೇಶ. ಇದಕ್ಕೆ ನಾವು ಬಿಡಬಾರದು’ ಎಂದಿದ್ದಾರೆ.

    ಕಾಂಗ್ರೆಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts