More

    ಡಿಆರ್‌ಎಸ್ ವಿವಾದದಲ್ಲಿ ಐಸಿಸಿ ಕೆಂಗಣ್ಣಿನಿಂದ ಪಾರಾದ ಕೊಹ್ಲಿ, ರಾಹುಲ್, ಅಶ್ವಿನ್

    ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯದ ವೇಳೆ ಡಿಆರ್‌ಎಸ್ ವಿರುದ್ಧ ಸ್ಟಂಪ್ ಮೈಕ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ-ಆಟಗಾರರು ಶಿಕ್ಷೆಯಿಂದ ಪಾರಾಗಿದ್ದಾರೆ. ಪಂದ್ಯದ ಐಸಿಸಿ ಅಧಿಕಾರಿಗಳು ಭಾರತ ತಂಡದ ಯಾವುದೇ ಆಟಗಾರನ ವಿರುದ್ಧ ಅಧಿಕೃತವಾಗಿ ಯಾವುದೇ ರೀತಿಯ ದೂರುಗಳನ್ನು ದಾಖಲಿಸಿಕೊಂಡಿಲ್ಲ. ಬದಲಾಗಿ ಟೀಮ್ ಮ್ಯಾನೇಜ್‌ಮೆಂಟ್ ಜತೆಗೆ ಈ ಸಂಬಂಧ ಅನೌಪಚಾರಿಕವಾಗಿ ಮಾತನಾಡಿದ್ದು, ಆಟಗಾರರಿಗೆ ಕೇವಲ ಎಚ್ಚರಿಕೆಯನ್ನು ಮಾತ್ರ ನೀಡಿ ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸಿದ್ದಾರೆ ಎನ್ನಲಾಗಿದೆ.

    ಐಸಿಸಿ ನೀತಿ ಸಂಹಿತೆಯ ಅನ್ವಯ ಭಾರತ ತಂಡದ ಆಟಗಾರರ ವಿರುದ್ಧ ಐಸಿಸಿ ಮ್ಯಾಚ್ ರೆಫ್ರಿ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಈ ನಡುವೆ ಕೊಹ್ಲಿ ಪಂದ್ಯದ ಬಳಿಕ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡು, ‘ಮೈದಾನದಲ್ಲಿ ಏನಾಯಿತೆಂದು ಆಟಗಾರರಿಗಷ್ಟೇ ಗೊತ್ತಿರುತ್ತದೆ. ಹೊರಗಿನವರಿಗೆ ನಿಖರವಾಗಿ ಏನಾಯಿತೆಂದು ಗೊತ್ತಿರುವುದಿಲ್ಲ. ಇದನ್ನು ವಿವಾದವಾಗಿಸಬೇಕಿಲ್ಲ’ ಎಂದಿದ್ದರು. ಅಲ್ಲದೆ ಆ ಘಟನೆಯಿಂದಲೇ ತಂಡ ಸೋತಿತು ಎಂಬುದನ್ನೂ ಒಪ್ಪಿಕೊಳ್ಳಲಿಲ್ಲ ಮತ್ತು ಎದುರಾಳಿ ಮೇಲೆ ಸಾಕಷ್ಟು ಒತ್ತಡ ಹೇರದಿದ್ದುದೇ ಸೋಲಿಗೆ ಕಾರಣ ಎಂದಿದ್ದರು.

    ಏನಿದು ಪ್ರಕರಣ
    ಕೇಪ್‌ಟೌನ್ ಟೆಸ್ಟ್ ಪಂದ್ಯದ 3ನೇ ದಿನ ದಕ್ಷಿಣ ಆಫ್ರಿಕಾ ಇನಿಂಗ್ಸ್‌ನ 21ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಎದುರಾಳಿ ನಾಯಕ ಡೀನ್ ಎಲ್ಗರ್ ವಿರುದ್ಧ ಎಲ್‌ಬಿಡಬ್ಲ್ಯು ಮನವಿ ಸಲ್ಲಿಸಿದಾಗ ಅಂಪೈರ್ ಅದನ್ನು ಪುರಸ್ಕರಿಸಿದ್ದರು. ಆದರೆ ಇದರ ವಿರುದ್ಧ ಎಲ್ಗರ್ ಡಿಆರ್‌ಎಸ್ ಮೊರೆ ಹೋದಾಗ ‘ನಾಟೌಟ್’ ಆಗಿದ್ದರು. ಯಾಕೆಂದರೆ ಹ್ವಾಕ್-ಐ ಪ್ರೊಜೆಕ್ಷನ್‌ನಲ್ಲಿ ಚೆಂಡು ವಿಕೆಟ್ ಮೇಲಿನಿಂದ ಹಾದು ಹೋಗುವಂತೆ ಕಂಡಿತ್ತು. ಇದರಿಂದ ಸಿಟ್ಟಾದ ಭಾರತ ತಂಡದ ಆಟಗಾರರು, ದಕ್ಷಿಣ ಆಫ್ರಿಕಾದ ನೇರಪ್ರಸಾರ ವಾಹಿನಿ ‘ಸೂಪರ್‌ಸ್ಪೋರ್ಟ್’ ವಿರುದ್ಧ ಸ್ಟಂಪ್ಸ್ ಮೈಕ್ ಬಳಿ ಬಂದು ಟೀಕೆಗಳನ್ನು ಮಾಡಿದ್ದರು. ‘11 ಆಟಗಾರರ ವಿರುದ್ಧ ಇಡೀ ದೇಶವೇ ನಿಂತಿದೆ’ ಎಂದು ಕನ್ನಡಿಗ ಕೆಎಲ್ ರಾಹುಲ್ ದೂರಿದ್ದರು. ಗೆಲುವಿಗೆ ಬೇರೆ ರೀತಿಯ ದಾರಿ ಕಂಡುಕೊಳ್ಳಿ ಎಂದು ಅಶ್ವಿನ್ ಟೀಕಿಸಿದ್ದರು. ‘ಎದುರಾಳಿ ಮೇಲೆ ಮಾತ್ರವಲ್ಲ, ನಿಮ್ಮ ತಂಡದ ಮೇಲೆಯೂ ಗಮನವಿರಲಿ’ ಎಂದು ಕೊಹ್ಲಿ ಪ್ರಸಾರಕರನ್ನು ಛೇಡಿಸಿದ್ದರು. ಈ ಘಟನೆಯ ಬಗ್ಗೆ ಗೌತಮ್ ಗಂಭೀರ್, ಸಂಜಯ್ ಮಂಜ್ರೇಕರ್ ಸಹಿತ ಭಾರತದ ಕೆಲ ಮಾಜಿ ಆಟಗಾರರೂ ಕೊಹ್ಲಿ ಬಳಗವನ್ನು ದೂರಿದ್ದರು.

    ಗೆಲುವಿಗೆ ನೆರವಾಯಿತು ಎಂದ ಎಲ್ಗರ್
    ಡಿಆರ್‌ಎಸ್ ವಿವಾದ ತಮ್ಮ ತಂಡಕ್ಕೆ ಗೆಲುವಿನತ್ತ ಮುನ್ನಡೆಯಲು ನೆರವಾಯಿತು. ಯಾಕೆಂದರೆ ಅದರಿಂದ ಎದುರಾಳಿ ಭಾರತ ತಂಡ ಏಕಾಗ್ರತೆ ಕಳೆದುಕೊಂಡಿತ್ತು. ಆ ಘಟನೆಯ ಬಳಿಕ ಭಾರತ ತಂಡದ ಆಟಗಾರರು ಪಂದ್ಯವನ್ನು ಮರೆತು, ಸಾಕಷ್ಟು ಭಾವುಕರಾಗಿದ್ದರು. ಅದೇ ವೇಳೆ ನಾವು ನಮ್ಮ ಎದುರಿದ್ದ ಸವಾಲಿನತ್ತ ಗಮನಹರಿಸಿದೆವು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಹೇಳಿದ್ದಾರೆ. ಡಿಆರ್‌ಎಸ್‌ನಲ್ಲಿ ಎಲ್ಗರ್ ಬಚಾವ್ ಆದಾಗ 22 ರನ್ ಗಳಿಸಿದ್ದರು ಮತ್ತು ದಕ್ಷಿಣ ಆಫ್ರಿಕಾ 1 ವಿಕೆಟ್‌ಗೆ 60 ರನ್ ಗಳಿಸಿತ್ತು. ಬಳಿಕ ಎಲ್ಗರ್ ದಿನದಂತ್ಯಕ್ಕೆ ಔಟಾದಾಗ 30 ರನ್ ಗಳಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡ ಕ್ಷಿಪ್ರವಾಗಿ ಮತ್ತೆ 41 ರನ್ ಪೇರಿಸಿತ್ತು.

    ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲಿನ ಮರುದಿನ ಟೆಸ್ಟ್ ನಾಯಕತ್ವಕ್ಕೂ ಕೊಹ್ಲಿ ಗುಡ್‌ಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts